ಸಹೃದಯಿ,ಸಮಾಜಮುಖಿ ಪತ್ರಕರ್ತ ವೆಂಕಟೇಶ್ ಅವರಿಗೆ ಅಂತಿಮ ವಿದಾಯ
ಸಂಬಂಧ ಆಳವಾಗಿದೆ ಎಂದರೆ ಅದು ಬಹಳ ದಿವಸಗಳನ್ನು ತೆಗೆದುಕೊಂಡಿದೆ ಎಂದು ಭಾವಿಸಬೇಕಿಲ್ಲ, ಪರಸ್ಪರ ನಂಬಿಕೆ, ಗೌರವ, ಪ್ರೀತಿ ಇದ್ದಾಗ ಅದು ಕಡಿಮೆ ದಿನಗಳದ್ದೂ ಆಗಿರಬಹುದು.
ಅಂತಹ ಭಾಂಧವ್ಯದಲ್ಲಿ ವಿಧಿ ಒಬ್ಬರನ್ನ ದೂರ ಮಾಡಿದಾಗ ಅಲ್ಲಿ ಮೂಡುವ ನೋವಿನ ನರಕ ತೀರಾ ಭಯಾನಕವಾಗಿರುವುದರಲ್ಲಿ ಸಂಶಯವಿಲ್ಲ.
ಇತ್ತೀಚಿನ ದಿನಗಳಲ್ಲಿ ಹೃದಯವ್ಯಾಧಿಯಿಂದ ಹಲವಾರು ಜನರು ದಿಢೀರ್ ಸಾವನ್ನು ಅಪ್ಪುತ್ತಿದ್ದಾರೆ. ವೈದ್ಯ ವಿಜ್ಞಾನ ಎಷ್ಟೆಲ್ಲಾ ಮುಂದುವರಿದರೂ ಮಾನವ ಸಾವನ್ನು ಮುಂದೂಡುವಲ್ಲಿ ವಿಫಲನಾಗುತ್ತಿದ್ದಾನೆ. ಒತ್ತಡ, ಆಹಾರ ಕ್ರಮ, ಪರಿಸರ ಅಪಸಮಾಯೋಜನೆ ಇತ್ಯಾದಿಗಳಿಂದ ಆಯುಷ್ಯ ಅಲ್ಪದರಲ್ಲಿ ಮುಗಿದು ಹೋಗುತ್ತಿದೆ.
ಅಚ್ಚಗನ್ನಡದ ಬಲುಶ್ರೇಷ್ಠ ನಿರೂಪಕಿ ಅಪರ್ಣಾ ಅವರ ಸಾವು ಕರುನಾಡನ್ನು ದುಃಖದ ಮಡುವಿಗೆ ದೂಡಿತ್ತು, ಸ್ಫುಟವಾಗಿ ಮಾತನಾಡುವ ಅವರ ಕನ್ನಡ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು.
ಅದೇ ದಿನ ಪತ್ರಕರ್ತರು ಮತ್ತು ಉತ್ತಮ ಬರಹಗಾರರಾದ ವೆಂಕಟೇಶ್ ಮಾನು ಅವರು ಹೃದಯಸ್ತಂಭನದಿಂದ ಸಾವನ್ನಪ್ಪಿದ ಸುದ್ದಿ ಮನಸ್ಸಿಗೆ ಘಾಸಿಯನ್ನು ಉಂಟು ಮಾಡಿತು.
ವೆಂಕಟೇಶ್ ಮಾನು ಅವರಿಗೆ ನನ್ನ ಪರಿಚಯ ಮಾಡಿಸಿದ್ದು ಶ್ರೀ ಡಿ ಎಂ ನದಾಫ್; ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಅಫಜಲಪುರ ಅವರು.
ವೆಂಕಟೇಶ್ ಮಾನು ಅವರು ಅಫಜಲ ಪೂರಕ್ಕೆ ಬಂದಾಗಲೆಲ್ಲಾ ಅವರ ಜೊತೆ ಇರುತ್ತಿದ್ದೆ.
ಒಂದು ಸಲ ಮಹಾಂತೇಶ್ವರ ಬಿ ಎಡ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಅವರು ಬಂದಾಗ ಪ್ರಶಿಕ್ಷಣಾರ್ಥಿಗಳಿಗೆ ತುಂಬಾನೇ ವಿಭಿನ್ನ ಶೈಲಿಯಲ್ಲಿ ಮನೋವಿಜ್ಞಾನ ಮತ್ತು ಮಕ್ಕಳ ಭಾವನಾತ್ಮಕ ಬೆಳವಣಿಗೆ ವಿಷಯವನ್ನು ಕುರಿತು ವಿದ್ಯಾರ್ಥಿ ಮನದಟ್ಟು ಮಾಡಿಸಿದರು.
ವೆಂಕಟೇಶ್ ಮಾನು ಮಾತುಗಳೆಂದರೆ ಅಲ್ಲಿ ಶಾಂತತೆ ತನ್ನಿಂದ ತಾನೇ ಸ್ಥಾನವನ್ನ ಆಕ್ರಮಿಸಿಕೊಳ್ಳುತ್ತಿತ್ತು.
ಅವರ ಪದ ಪ್ರಯೋಗ, ಆಳಜ್ಞಾನ ಎಲ್ಲರನ್ನು ಇನ್ನಿಲ್ಲದಂತೆ ಸೆಳೆದು ಬಿಡುತ್ತಿತ್ತು.
ಪತ್ರಿಕೋದ್ಯಮದ ಪಾವಿತ್ರತೆಯನ್ನ ಉಳಿಸಿ ಬಲು ಬೇಗನೆ ಅಕ್ಷರ ಲೋಕದಿಂದ ಮಾಯವಾದರು. ಅವರ ಸುದ್ದಿಗಳು, ಸಾಮಾಜಿಕ ಕಳಕಳಿ, ಮೃದು ಸ್ವಭಾವ ಜನ ಮಾನಸವನ್ನು ಕೆಣಕುತ್ತಲೇ ಇರುವವು.
ಭಾಷಣಕ್ಕೆಂದು ಮೈಕ್ ಹಿಡಿದರೆ ವಿದ್ವಾಂಸರಿಗೂ ಸವಾಲೊಡ್ಡುವ ವಾಗ್ಝರಿ ಇರುತ್ತಿತ್ತು, ಆದರೆ "ನಾನೆಂಬ" ಭಾವ ಸುಳಿಯುತ್ತಿರಲಿಲ್ಲ.
ನಮ್ಮ ಅಫಜಲಪುರ ತಾಲೂಕಿನ ಭೀಮಾ ದಡದ ಪುಟ್ಟ ಹಳ್ಳಿ ಕೆಕ್ಕರ ಸಾವಳಗಿ ಶಾಲಾ ಮಕ್ಕಳು ಕಥೆ ಬರೆದ ಮಾಹಿತಿ ಕೇಳಿ ಖುಷಿಗೊಂಡು ವೈಯಕ್ತಿಕವಾಗಿ ಫೋನ್ ಮೂಲಕ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿ ನಮ್ಮ ಪ್ರಯತ್ನಕ್ಕೆ ಬೆನ್ನು ಚಪ್ಪರಿಸಿದರು,
ನಂತರ ಆ ಕಥೆಗಳು ನನ್ನ ಸಂಪಾದಕತ್ವದಲ್ಲಿ "ಹಕ್ಕಿ ಹಿಂಡು" ಹೆಸರಿನಲ್ಲಿ ಬಿಡುಗಡೆ ಆಯಿತು. ಈ ಕಥಾಸಂಕಲನದ ಬಿಡುಗಡೆ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿ ಮಕ್ಕಳ ಅನನ್ಯ ಪ್ರತಿಭೆಯನ್ನು ಗುಣಗಾನ ಮಾಡಿದರು.
ಅಂದು ಅವರಾಡಿದ ಮಾತುಗಳು ಇಂದಿಗೂ ಮನದಲ್ಲಿ ಅಚ್ಚೊತ್ತಿವೆ. ಅವರ ಭಾಷಣವನ್ನು ಕೇಳಿದ ಗ್ರಾಮಸ್ಥರೆಲ್ಲ ತಲೆದೂಗಿ ಭೇಷ್ ಎಂದರು."ಬಾಲಕತೆಗಾರರಿಗೆ ಸನ್ಮಾನಿಸಿ ಸಂಭ್ರಮಿಸಿದ ಊರು!" ಎಂಬ ಶಿರ್ಷಿಕೆಯಡಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ದೊಡ್ಡ ಲೇಖನ ಒಂದು ಪ್ರಕಟಿಸಿ ಕೆಕ್ಕರಸಾವಳಗಿ ಶಾಲಾ ಮಕ್ಕಳ ವಿಶಿಷ್ಟ ಸಾಧನೆಯನ್ನ ಹೋರಲೋಕಕ್ಕೆ ಅನಾವರಣಗೊಳಿಸಿದರು. ಸರ್ಕಾರಿ ಶಾಲೆ, ಕನ್ನಡ ಶಾಲೆ ಎಂದರೆ ಅವರಿಗೆ ಎಲ್ಲಿಲ್ಲದ ಕಾಳಜಿ. ಎಲ್ಲೋ ಮೂಲೆಯಲ್ಲಿರುವ ನಮ್ಮ ಶಾಲೆಯ ಸಾಧನೆ ಮೇಲಕ್ಕೆ ಎತ್ತಲು ಬುನಾದಿಯಾಗಿ ಬಿಟ್ಟರು.
ಪತ್ರಿಕಾ ಲೋಕದಲ್ಲಿ ತೀರಾ ಭಿನ್ನ ಆಲೋಚನೆಯೊಂದಿಗೆ ಸಾಗುವ ಅವರು ಹೊಸತನಕ್ಕೆ ಸದಾ ಹಾತೊರೆಯುತ್ತಿದ್ದರು.
ನಮ್ಮ ಶಾಲೆಯಲ್ಲಿ ಆಂಗ್ಲ ಭಾಷಾ ಮೇಳ ಮಾಡಿದಾಗ ಖುಷಿಯಿಂದ ಬರಲು ಒಪ್ಪಿಕೊಂಡು ಎಲ್ಲ ಮಕ್ಕಳ ಚಟುವಟಿಕೆಗಳನ್ನ ಆಲಿಸಿ ಮಕ್ಕಳಿಗೆ ಪ್ರೋತ್ಸಾಹಿಸಿದರು. ನಮ್ಮ ಗ್ರಾಮಸ್ಥರಿಗೆ ತುಂಬಾನೇ ಐಕಾನಿಕ್ ವ್ಯಕ್ತಿಯಾಗಿ ಚಿರಪರಿಚಿತರಾಗಿಬಿಟ್ಟಿದ್ದರು. ನಮ್ಮ ಶಾಲೆಯ ಮಕ್ಕಳಿಗಂತೂ ಅವರು ಇಷ್ಟದ ವ್ಯಕ್ತಿಯಾಗಿ ಬಿಟ್ಟಿದ್ದರು. "ಸಿರಿಗನ್ನಡಂ ಗೆಲ್ಗೆ ಗುಡ್ ಮಾರ್ನಿಂಗ್ ಮೈ ನೇಮ್ ಇಸ್"ಎಂಬ ಶೀರ್ಷಿಕೆಯಡಿ ಬಲು ದೊಡ್ಡ ಆರ್ಟಿಕಲ್ ಮಾಡಿದರು.
ಆಗ ಇಲಾಖೆ ಅಧಿಕಾರಿಗಳಿಂದ ಅಭಿನಂದನೆ ಮತ್ತು ಮೆಚ್ಚುಗೆಗಳ ಮಹಾಪೂರವೇ ನಮ್ಮ ಶಾಲೆಗೆ ಹರಿದು ಬಂತು. ಅವರ ಅಂದಿನ ಮೆಚ್ಚುಗೆ ಮತ್ತು ಬೆನ್ನು ತಟ್ಟುವಿಕೆಯಿಂದ ನಮ್ಮ ಉತ್ತಮ ಕೆಲಸಗಳು ಮತ್ತು ವಿಭಿನ್ನ ಪ್ರಯೋಗಗಳು ಇಂದಿಗೂ ಮುಂದುವರಿದಿವೆ.
ಅಂತಹ ಅಪರೂಪದ ವ್ಯಕ್ತಿತ್ವವುಳ್ಳ ಮನುಜ ನಮ್ಮೊಂದಿಗಿಲ್ಲ ಎನ್ನುವ ಕಹಿ ನಿತ್ಯ ಕಾಡುತ್ತಲೇ ಇರುವುದು ಅವರ ಸರಳತೆ, ನಡೆದ ವಿಭಿನ್ನ ದಾರಿ, ವಿಶಿಷ್ಟ ಆಲೋಚನಾ ಕ್ರಮ ನಮಗೆ ಎಂದೆಂದಿಗೂ ಮಾದರಿಯಾಗಿ ಉಳಿಯುವುವು.
"ಬುಕ್ ಬ್ರಹ್ಮ" ದಲ್ಲಿಯೂ ಕೂಡ ಹೆಸರುವಾಸಿಯಾಗಿ ಹೆಜ್ಜೆ ಗುರುತನ್ನ ಬಿಟ್ಟು ಹೋಗಿದ್ದಾರೆ. "ಪದಗಳೊಂದಿಗೆ ಒಂದು ರೀತಿಯಲ್ಲಿ ಅವರು ಪವಾಡಗಳನ್ನ ಸೃಷ್ಟಿಸುತ್ತಿದ್ದರು" ಆದರೆ ಇಂದು ಅವರು ವಿಧಿಯ ಕೈವಶವಾಗಿದ್ದಾರೆ.
ಅವರ ಗರಡಿಯಲ್ಲಿ ಬೆಳೆದ ಅನೇಕ ಯುವ ಪ್ರತಿಭೆಗಳು, ಸ್ನೇಹಿತರು, ಬಂಧು ಮಿತ್ರರು,ಕುಟುಂಬವರ್ಗ ಅನಾಥವಾಗಿದ್ದಾರೆ.
ಪರಮಾನಂದ ಸರಸಂಬಿ.
7022783643 ಕ್ಷಕರು ಅಫಜಲಪುರ.