ಜಾನಪದ ಲೋಕ ತ್ಯಜಿಸಿದ ಜಾನಪದ ತಜ್ಞ ಎಚ್ ಕಾಶಿನಾಥ್ ರೆಡ್ಡಿ
ಸಾಹಿತ್ಯ ಲೋಕ ತ್ಯಜಿಸಿದ ಜಾನಪದ ತಜ್ಞ ಎಚ್. ಕಾಶಿನಾಥರೆಡ್ಡಿ
ಬೀದರ ಜಿಲ್ಲೆಯ ಜಾನಪದ ಸಾಹಿತ್ಯ ಸಂಗ್ರಹ, ಪ್ರಕಟಣೆ, ಸಂಪಾದನೆ ಕಾರ್ಯ ಕೈಗೊಂಡವರು ಬೇರೆ ಕಡೆ ಬಂದವರು. ಮೈಸೂರು ವಿಶ್ವವಿದ್ಯಾಲಯದ ಟಿ.ಎಸ್. ರಾಜಪ್ಪ, ಕ್ಯಾತನಹಳ್ಳಿ ರಾಮಣ್ಣನವರು. ಅನಂತರದಲ್ಲಿ ಈ ಜಿಲ್ಲೆಯವರೇ ಆದ ಎಚ್. ಕಾಶಿನಾಥರೆಡ್ಡಿಯವರು ಡಾ. ಎಂ. ಎಸ್. ಲಡ್ಡೆ ಮತ್ತು ಡಾ. ಮಾಣಿಕರಾವ್ ಧನಾಶ್ರೀ ಅವರ ನೆರವಿನೊಂದಿಗೆ ಜಾನಪದ ಸಂಗ್ರಹ, ಸಂಪಾದನೆ, ಪ್ರಕಟಣೆಗೆ ಕೈಗೊಂಡರು. ಹೀಗಾಗಿ ಈ ಜಿಲ್ಲೆಯ ದೇಸಿ ಮಾರ್ಗದ ಮೂಲ ಜಾನಪದನು ಸಂಗ್ರಹಿಸಲು ಪ್ರಾರಂಭಿಸಿದ್ದು ರೆಡ್ಡಿಯವರೆಂದರೆ ತಪ್ಪಾಗಲಾರದು. ಜಾನಪದ ಕ್ಷೇತ್ರದ ಹಲವಾರು ಪ್ರಕಾರಗಳಲ್ಲಿ ದುಡಿದಿದ್ದಾರೆ. ಹೀಗಾಗಿ ಜಾನಪದ ವಿದ್ವಾಂಸರ ಸಾಲಿನಲ್ಲಿ ಸೇರಿದ್ದಾರೆ.
ಹುಮನಾಬಾದ ತಾಲೂಕಿನ ಹಣಕುಣಿ ಗ್ರಾಮದ ಶ್ರೀ ಗುಂಡಾರೆಡ್ಡಿ ಮತ್ತು ಶ್ರೀಮತಿ ನಾಗಮ್ಮರ ದಂಪತಿಗಳ ಮೂರನೆಯ ಮಗನಾಗಿ ಶ್ರೀ ಕಾಶಿನಾಥರೆಡ್ಡಿಯವರು ೧೫.೦೧.೧೯೪೭ರಂದು ಜನಿಸಿದರು. ಇಬ್ಬರು ಅಕ್ಕಂದಿರು ಇದ್ದು ಅವರು ಬಾಲ್ಯ ವಿವಾಹವಾಗಿ ಪತಿಮನೆ ಸೇರಿದರು. ಇವರ ತಂದೆ-ತಾಯಿ ಕೃಷಿ ಕೂಲಿ ಕಾರ್ಮಿಕರಾಗಿದ್ದರು. ಅವರಿಗೆ ಊರಲ್ಲಿ ಮನೆ ಇರಲಿಲ್ಲ. ಬೇರೆಯವರ ಚಪ್ಪರ ಮನೆಯಲ್ಲಿ ವಾಸ ಮಾಡುತ್ತಿದ್ದರು. ಕಾಶಿನಾಥರೆಡ್ಡಿಯವರು ಕೇವಲ ಐದು ವರ್ಷದವರಿದ್ದಾಗಲೇ ತಂದೆ ಗುಂಡಾರೆಡ್ಡಿ ತೀರಿಕೊಂಡರು. ಇವರ ಜವಾಬ್ದಾರಿ ತಾಯಿಯ ಮೇಲೆ ಇತ್ತು.
ತಾಯಿಯ ತವರು ಮನೆ-ಗಂಡನ ಮನೆ ಹಣಕುಣಿಯೇ ಆದ್ದರಿಂದ ನಾಗಮ್ಮ ಧೈರ್ಯವನ್ನು ಎದೆಗುಂದದೇ ಕೂಲಿ ನಾಲಿ ಕೆಲಸ ಮಾಡಲು ಪ್ರಾರಂಭಿಸಿದರು. ರೆಡ್ಡಿಯವರಿಗೆ ಸೋದರ ಮಾವಂದಿರ ಆಶ್ರಯವೂ ಸಿಕ್ಕಿತು. ರೆಡ್ಡಿಯವರಿಗೆ ಶಾಲೆಗೆ ಕಳಿಸಬೇಕೆಂಬ ಆದಮ್ಯ ಉತ್ಸಾಹ ತಾಯಿಯಲ್ಲಿತ್ತು. ಇವರು ಆರು ವರ್ಷವಾದಾಗಲೇ ಊರಿಗೆ
ಸರ್ಕಾರಿ ಶಾಲೆಯೂ ಬಂದಿತು. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಅದೇ ಎಂಬ ಗಾದೆಯಂತೆ ಇವರಿಗೆ ಶಾಲೆ ವರವಾಯಿತು. ಕೂಡಲೇ ಶಾಲೆಗೆ ಸೇರಿಸಿದರು. ಊರ ಕುಲಕರ್ಣಿ ಶಾಲೆಗೆ ಸೇರಿಸಿದ್ದು ಕಂಡು 'ಏ ನಾಗಮ್ಮ ನಿನ್ನ ಮಗನಿಗೆ ಸಾಲಿಗೆ ಕಳಿಸಿ ಏನ್ ಮಾಡಿ: ನಮ್ಮ ದನಕಾಯಲು ನೌಕರಿ ಇಡು' ಎಂದರಂತೆ ಆಗ ಸ್ವಾಭಿಮಾನಿಯಾದ ನಾಗಮ್ಮ 'ಏ ಹಾರು ಈ ಊರಿನಲ್ಲಿ ಯಾರು ಕಲಿಯದಷ್ಟು ಹೆಚ್ಚಿಗೆ ಸಾಲಿ ನನ್ನ ಮಗನಿಗೆ ಕಲಿಸ್ತೇನೆ ಎಂದಳಂತೆ. ಆಗ ಕುಲಕರ್ಣಿ ಕೆಲಸ್ತಿ ಕಲಸ್ತಿ ರಂಡ ಮುಂಡಿ ಮಗ ರಾಜಕುಮಾರಂತ ಎಂದು ವ್ಯಂಗ್ಯ ಮಾಡಿದರಂತೆ ಇದರಿಂದ ಎಚ್ಚತ್ತುಕೊಂಡ ಇವರ ತಾಯಿ ಜೀವನ ನಿರ್ವಹಣೆಗೆ ಒಂದು ಎಮ್ಮೆ ಕಟ್ಟಿದರು. ಮನೆಯಲ್ಲಿ ತಾಯಿ-ಮಗ ಇರುವುದರಿಂದ ಬಾಲ್ಯದಿಂದಲು ಹಾಲು ಕುಡಿಸಿದ ತಾಯಿ
ಇಂದಿಗೂ ರೆಡ್ಡಿಯವರು ಹಾಲು ಕುಡಿಯುತ್ತಲೇ ಇದ್ದಾರೆ. ಆಗಲೇ ತಾಯಿ ಕುಟ್ಟುವ, ಬೀಸುವ ಸಂದರ್ಭದಲ್ಲಿ ಹಾಡುವ ಹಾಡುಗಳು ಬಾಲಕ ರೆಡ್ಡಿಯವರ ಮೇಲೆ ಪ್ರಭಾವ ಬೀರಿದವು. ಜನಪದ ಕಲಾವಿದೆಯಾಗಿದ್ದರು. ಸಾಹಿತ್ಯದ ಕಣಜ ಆಕೆಯಲ್ಲಿತ್ತು. ತಾಯಿ ಹಾಡುವ ಹಾಡುಗಳನ್ನು ಸಂಗ್ರಹಿಸಿದರು. ಕತೆ, ಒಗಟು, ಗಾದೆ ಮಾತು ಆಚರಣೆಯ ಹಾಡುಗಳನ್ನು ಬರೆದು ಇಟ್ಟುಕೊಳ್ಳುತ್ತಿದ್ದರು. ಅವರ ಕಂಠದ ಸಿರಿಗೆ ಬೆರಗಾಗಿ ಹೋದರು. ತಾಯಿ ಹಾಡುವಾಗ ತಾವು ಗುನುಗುನುಗಿಸುತ್ತಲೇ ಹಾಡನ್ನು ಕಲಿತರು. ಪ್ರತಿಯೊಂದು ಹಾಡುಗಳನ್ನು ಗುನುಗುನಿಸುತ್ತಲೇ ತನ್ನ ಓದಿನ ಕಡೆ ವಿಶೇಷ ಆಸಕ್ತಿ ಹೊಂದಿ ಕಲಿಯುವುದರಲ್ಲಿ ಮಗ್ನರಾದರು. ಅಲ್ಲಿಂದಲೇ ಓದುತ್ತಲೇ ಜಾನಪದ ಹಾಡುಗಳ ಸಂಗ್ರಹದಲ್ಲಿ ನಿರತರಾಗಿದರು. ಕನ್ನಡ ಓದಲು ಬರೆಯಲು ಕಲಿತರು. ಹಿಂದಿ ಚೆನ್ನಾಗಿ ಕಲಿತರು. ಒಂದನೇ ತರಗತಿಯಿಂದ ನಾಲ್ಕನೆಯ ತರಗತಿಗೆಯವರೆಗೆ ಓದಿ ಪಾಸಾದರು. ಹುಮನಾಬಾದಿನಲ್ಲಿ ೫ನೇ ವರ್ಗಕ್ಕೆ ಬಂದು ಎಸ್.ಎಸ್.ಎಲ್.ಸಿ ಪ್ರಥಮ ಶ್ರೇಣಿಯಲ್ಲಿ ಪಾಸಾದರು. ಆರ್ಥಿಕ ತೊಂದರೆ ಹೆಚ್ಚಾಗಿ ಪಿಯುಸಿ ಓದಲು ಸಾಧ್ಯವಾಗದೇ ಹೋಯಿತು. ಹಣಕುಣಿ ಊರಲ್ಲಿ ತಾಯಿಯೊಂದಿಗೆ ಕೃಷಿ ಕೂಲಿ ಮಾಡತೊಡಗಿದರು. ಆಗ ಹತ್ತನೆಯ ತರಗತಿ ಪಾಸಾಗುವುದು ಕಷ್ಟವಾಗಿತ್ತು. ಆದರೂ ಪಾಸಾಗಿ ನೌಕರಿ ದೊರೆಯವುದು ದುರ್ಬಲವಾಗಿತ್ತು. ತನ್ನ ಗೆಳೆಯರ ಜೊತೆಗೂಡಿ ಮುಂಬಯಿ ನಗರಕ್ಕೆ ಹೋದರು. ಮಿಲಿಟ್ರಿ ತಾಡಪತ್ರಿ ಕಾರ್ಖಾನೆಯಲ್ಲಿ ದಿನಕ್ಕೆ ೫೦ ರೂಪಾಯಿ ಕೂಲಿಗೆ ಸೇರಿಕೊಂಡು ಆರು ತಿಂಗಳು ಕಾರ್ಯನಿರ್ವಹಿಸಿದರು. ಆಗಲೇ ಇರಿಗೆ ಸರಕಾರಿ ಶಾಲೆಯ ಶಿಕ್ಷಕ ಹುದ್ದೆ ಕರೆ ಬಂದಿದೆ. ಸಂದರ್ಶನವಿದೆಯೆಂದಾಗ ಮುಂಬಯಿಯಿಂದ ಬಂದು ನೇರ ಸಂದರ್ಶನಕ್ಕೆ ಹೋದರು. ಮುಸ್ತಾರಿಯ ಸರಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಕರೆಂದು ವೃತ್ತಿ ಕೈಗೊಂಡರು. ಬಸವಕಲ್ಯಾಣ ಸಸ್ತಾಪೂರದಲ್ಲಿ ವರ್ಗವಾಯಿತು. ಹೀಗೆ ಇರುವಾಗಲೇ ಬಾಹ್ಯವಾಗಿ ಪಿ.ಯು.ಸಿ., ಬಿ.ಎ., ಎಂ.ಎ., ಬಿ.ಇಡ್ ಪದವಿ ಪಡೆದುಕೊಂಡರು. ಎಂ.ಎ. ಇತಿಹಾಸ, ಎಂ.ಎ. ಕನ್ನಡ, ಎಂ.ಎ. ಸಮೂಹ ಮಾಧ್ಯಮ ಪೂರೈಸಿದ್ದು ಬಾಹ್ಯವಾಗಿಯೇ.
ಹೀಗಾಗಿ ಹೈಸ್ಕೂಲು ಮುಖ್ಯ ಗುರುಗಳಾಗಿ ರಾಜೇಶ್ವರದಲ್ಲಿ ಸೇವೆ. ಸರಕಾರಿ ನೀಲಾಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ನಿವೃತಿ ನಂತರ ಸರಕಾರಿ ಪದವಿ ಬಾಲಕರ ಕಾಲೇಜು ಹುಮನಾಬಾದ ಕೆಲ ವರ್ಷ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಕೋರಿಕೆ ಕವನ ಸಂಕಲನ. ಜೀವನ ಚರಿತೆ, ಲೇಖನಗಳ ಸಂಕಲನ, ಸಂಪಾದನೆ, ಅಭಿನಂದನ ಗ್ರಂಥ, ಸಂಪಾದನೆಗಳು ಸೇರಿಕೊಂಡು ಮೂವತ್ತೈದು ಕೃತಿ ಪ್ರಕಟಿಸಿದ್ದಾರೆ. ಜಾನಪದ ಕ್ಷೇತ್ರಕ್ಕೆ ಟಿ.ಎಸ್. ರಾಜಪ್ಪ, ಕ್ಯಾತನಹಳ್ಳಿ ರಾಮಣ್ಣ ಬಂದಾಗ ಬೀದರನ ಪತ್ರಕರ್ತ ಕ.ಸಾ.ಪ. ಅಧ್ಯಕ್ಷ ಹಣಮಂತಪ್ಪ ಪಾಟೀಲ ಇವರೊಂದಿಗೆ ಸೇರಿ ಹುಡಗಿ, ಸಿಂಧನಕೇರಾ, ಚಿಟಗುಪ್ಪಾ ಮುಂತಾದ ಹಳ್ಳಿ ಹಳ್ಳಿಗೆ ಅವರನ್ನು ಕರೆದುಕೊಂಡು ಹೋಗಿ ಆಣಿ ಪೀಣಿ ಹಾಡು, ಭೂತೇರ ಹಾಡು, ಮೊಹರಂ ಹಾಡು, ಬುಲಾಯಿ ಪದ, ಕೋಲಾಟದ ಪದ ಹೀಗೆ ಟೇಪರಿಕಾರ್ಡರ್ ಮೂಲಕ ಸಂಗ್ರಹಿಸಿಕೊಡಲು ನೆರವಾದರು.
ಗುಲಬರ್ಗಾ ವಿಶ್ವವಿದ್ಯಾಲಯ ಆದ ಮೇಲೆ ಡಾ. ಬಿ.ಬಿ.ಹೆಂಡಿ ಅವರು ಈ ಭಾಗದ ಜಾನಪದ ಸಂಗ್ರಹಕ್ಕೆ ಯೋಜನೆ ರೂಪಿಸಿದರು. ಡಾ. ಮ.ಗು. ಬಿರಾದರ, ಲಡ್ಡೆ ಜೊತೆಗೂಡಿದರು. ಡಾ. ಎಂ.ಎಸ್. ಲಡ್ಡೆಯವರ ಜೊತೆಗೂಡಿ ಕೆಲಸ ಮಾಡಿದರು. ಡಾ. ಲಡ್ಡೆಯವರ ಜಾನಪದ ಕವಿ ಚರಿತೆ ಭಾಗ-೧ ಮತ್ತು ಭಾಗ-೨ ಹೊರ ತರುವಾಗ ಬೀದರ ಜಿಲ್ಲೆಯ ಧುಮ್ಮನಸೂರ ಸಿದ್ಧಪ್ರಭು, ಮಾಣಿಕ ಪ್ರಭು, ನಿಡವಂಚಿ ವೀರಭದ್ರೇಶ್ವರ, ನನ್ನಾ ಸಾಹೇಬ ಮರಕಲ ಹಣಮಂತಪ್ಪ, ತಿಪ್ಪರೆಡ್ಡಿ ಮಾಸ್ತರ, ಕಲ್ಲಪ್ಪ, ಭೂತಾಳೆ, ಮರಕುಂದಿ ಬಸವಣ್ಣಪ್ಪ, ಕೋಹಿನೂರ ಹುಸೇನಸಾಬ, ಭಾಗಹಿಪ್ಪರಗಾದ ನಬಿಸಾಬ, ಬೊಳಗೈ ಬಸಯ್ಯ ಸ್ವಾಮಿ, ಹೆಡಗಾಪುರದ ಸಿದ್ಧರಾಮ, ಚಕ್ರಕೋಟಿ ಬಾಯಮ್ಮ, ಹಾರಕೂಡ, ಖೇಳಗಿ ಪೀರಪ್ಪ, ಪೀರಪ್ಪನ ಮಗ ಲಕ್ಷ್ಮಣ, ಚಂದನಕೇರಿ ಮಲ್ಕಪ್ಪ, ಕಂದಗೂಳದ ಮಡಿವಾಳಪ್ಪ, ಹೀಲಾಲಪುರ ಕಾಶೀನಾಥ, ಮೊದಲಾದ ಜಾನಪದ ಕವಿಗಳ ಪರಿಚಯವನ್ನು ಡಾ. ಎಂ. ಎಸ್. ಲಕ್ಷ್ಮಿಯವರಿಗೆ ಸಂಗ್ರಹಿಸಿಕೊಟ್ಟಿದ್ದಾರೆ. ಇದು ರೆಡ್ಡಿಯವರ ಜಾನಪದದ ಮೊದಲ ಹೆಜ್ಜೆಗಳಾವುವು.
ಡಾ. ಎಂ. ಎಸ್. ಲಡ್ಡೆಯವರು ಧುಮ್ಮನಸೂರಿನ ಸಿದ್ದಪ್ರಭುಗಳ ಹಾಡು ಸಂಗ್ರಹಿಸಲು ಹೇಳಿದರಂತೆ ರೆಡ್ಡಿಯವರು ಸಸ್ತಾಪೂರದಲ್ಲಿ ಶಾಲಾ ಶಿಕ್ಷಕರಾದ್ದರಿಂದ ಶನಿವಾರ ಮತ್ತು ರವಿವಾರ ಹಾಗೂ ಶಾಲಾ ರಜೆಯ ದಿನಗಳನ್ನು ಸಂಪೂರ್ಣ ಒಂದು ವರ್ಷಗಳ ಕಾಲ ನಿರಂತರವಾಗಿ ಹಾಡುಗರನ್ನು ಕಲೆ ಹಾಕಿದರು. ಅವರ ಹಾಡನ್ನು ಟೇಪರಿಕಾರ್ಡನಲ್ಲಿ ಹಾಗೂ ಸ್ವತಃ ಹಾಡುತ್ತಿದ್ದಾರೆ. ಅವರನ್ನು ಬರೆದುಕೊಂಡು ಬಂದ ನಂತರ ಫೇರ ಮಾಡುವುದು ನಡೆಯುತ್ತಿತ್ತು. ಹೀಗಾಗಿ ಸಿದ್ಧಪ್ರಭುಗಳ ಕುರಿತು.
ಆರುನೂರು ಹಾಡುಗಳನ್ನು ಸಂಗ್ರಹಿಸಿದರು. ಅದರೊಂದಿಗೆ ಸಿದ್ದಪ್ರಭುಗಳ ಭೂ ಕೈಲಾಸ ಮತ್ತು ಚಂದ್ರಶಿರೋಮಣಿ ಎಂಬ ಎರಡು ಸಣ್ಣಾಟಗಳ ಹಸ್ತ ಪ್ರತಿ ದೊರೆತವು.
ಅವುಗಳನ್ನು ಸಂಗ್ರಹಿಸಿ ಡಾ. ಲಕ್ಷೆ ಸರ್ ಅವರಿಗೆ ತೋರಿಸಿದರು. ನಂತರ ಇರ್ವರ ಸಂಪಾದಕತ್ವದಲ್ಲಿ ಪ್ರಕಟವಾದವು. ಆಗ ಕನ್ನಡ ಮತ್ತು ಜಾನಪದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಆರಂಭವಾಗಿತ್ತು. ಎಂ.ಎ. ವಿದ್ಯಾರ್ಥಿಗಳಿಗೆ ಇದು ಪಠ್ಯಪುಸ್ತಕವಾಗಿತ್ತು. ಇಂತಹದೊಂದು ಸಣ್ಣಾಟ ಅಪರೂಪದ್ದು ದೊರೆತದ್ದು ಕಾಶೀನಾಥರೆಡ್ಡಿ ಅವರಿಂದ (೧೯೮೩) ಅದರ ಮೂಲಕವೇ ಜಾನದಪ ಸಂಗ್ರಹ ಮತ್ತೆ ಪ್ರಾರಂಭವಾಗಿ ನಿಜಲಿಂಗಭದ್ರೇಶ್ವರ ಅನುಭವ ಪದಗಳು, ಶಿಲ್ಲಪ್ಪ ಕವಿಯ ಬದುಕು ಬರಹ ಕೃತಿಗಳನ್ನು ಡಾ. ಲಡ್ಡೆಯವರೊಂದಿಗೆ ಸಹಕರಿಸಿ ಪ್ರಕಟಿಸಿದರು.
ಭೂ ಕೈಲಾಸ ಮತ್ತು ಚಂದ್ರಶಿರೋಮಣಿ (೧೯೮೩) ಸಿದ್ಧಪ್ರಭುಗಳು ನೂರು
ಸ್ಥಳಗಳಲ್ಲಿ ತಮ್ಮ ಜೀವಿತ ಅವಧಿಯಲ್ಲಿ ವಾಸವಾಗಿದ್ದರು. ಹುಮನಾಬಾದನ ಶಿವಪುರ ಬಡಾವಣೆಯಲ್ಲಿದ್ದಾಗ ಯುವಕರಿಗಾಗಿ ಈ ಸಣ್ಣಾಟ ರಚಿಸಿದ್ದಾರೆ. ಈ ಸಣ್ಣಾಟದ ವಸ್ತು ವಿಷಯಗಳು ವೈವಿಧ್ಯಮಯವಾಗಿ ನೆಲೆನಿಂತಿವೆ. ಉರ್ದು ಭಾಷೆ ಮಿಶ್ರಿತವಾದ ಭಾಷೆಯಲ್ಲಿ ಜನಪದರಿಗೆ ಹಳ್ಳಿಗಾಡಿನ ಜನರಿಗೆ ಸುಲಭವಾಗಿ ತಿಳಿಯುವಂತೆ ರಚಿಸಿದ್ದಾರೆ. ಮಾತುಗಳಿಗೆ ತಕ್ಕಂತೆ ಹಾಡುಗಳನ್ನು ರಚಿಸಿ ಸಣ್ಣಾಟಕ್ಕೆ ಹೊಸತನ ತಂದಿದ್ದಾರೆ. ಈ ಸಣ್ಣಾಟಗಳು ಅನೇಕ ಕಡೆ ಪ್ರಯೋಗಗೊಂಡು ಹೆಸರನ್ನು ತಂದವು. ಮುಂದೆ ಕನ್ನಡ ವಿಭಾಗದ ಜಾನಪದ ವಿಷಯಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿತ್ತು.
ನಿಜಲಿಂಗಭದ್ರೇಶ್ವರ ಅನುಭವ ಪದಗಳು (೧೯೮೭) ಈ ಕೃತಿಯಲ್ಲಿ
ನಿಜಲಿಂಗಭದ್ರೇಶ್ವರ ೧೩೩ ಅನುಭವ ಪದಗಳನ್ನು ಸಂಗ್ರಹಿಸಲಾಗಿದೆ. ಇವು ತತ್ವ ಪದಗಳ ಅನುಭವದ ಗಟ್ಟಿಯನ್ನು ಹೊಂದಿವೆ. ಈ ಕೃತಿಯಲ್ಲಿ ಭದ್ರೇಶ್ವರ ಜೀವನ ಪರಿಚಯವನ್ನು ಹೇಳುತ್ತಾ ಅವರು ಮಾಡಿದ ಹನ್ನೊಂದು ಪವಾಡಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಅದರೊಂದಿಗೆ ೧೩೩ ಪದಗಳನ್ನು ಅನುಕ್ರಮಣಿಕೆಯಲ್ಲಿ ಜೋಡಿಸಿ ಹೇಳಿದ್ದಾರೆ. ಬಹುಭಾಷಾ ಪಂಡಿತರಾಗಿದ್ದರು. ಕನ್ನಡ, ಹಿಂದಿ, ಉರ್ದು, ಮೋಡಿ, ಮರಾಠಿ ಭಾಷೆ ಬಲ್ಲವರಾಗಿದ್ದರು. ಮಠದ ಮುಂದೆ ಕುಳಿತಾಗ ಕಾವಿಬಟ್ಟಿ ಧರಿಸಿದ್ದರು. ತಲೆಗೆ ಹಸಿರು ರುಮಾಲು ಸುತ್ತಿಕೊಂಡು ಅವರ ಪ್ರತಿಯೊಂದು ಸಮವಸ್ತ್ರಗಳು ಏನನ್ನಾದರೂ ಸೂಚನೆ ಕೊಡುತ್ತವೆ. ಬಗದಲ್ ಗ್ರಾಮದ ತುರಾಬ ಸಾಹೇಬ ಕುದುರೆ ಮೇಲೆ ಕುಳಿತು ಹೋಗುತ್ತಿದ್ದರು. ಆಗ ನಿಡವಂಚಿ ಗ್ರಾಮದ ಮಠದ ಮುಂದಿನ ದಾರಿಯಲ್ಲಿ ಹೋಗುವಾಗ ಭದ್ರೇಶ್ವರ ಬಟ್ಟೆ ಕಂಡು ಆಶ್ಚರ್ಯವಾಗಿ ನಿಮ್ಮ ಜಾತಿಯಾವುದೆಂದು ಪ್ರಶ್ನಿಸಿದರು. ಆಗ ಭದ್ರೇಶ್ವರ ನಿಂತ ಸ್ಥಳದಲ್ಲಿ ಆಶುಕವಿಯಾಗಿ ಹಾಡು ಕಟ್ಟಿದ್ದಾರೆ.
ಜಾತ ಜಂಗಮಕಿ ಬಾತ ಮುಸಲ್ಮಾನಕಿ
ಚಲನಾ ಚಾಂದ ಖರ್ಶಿದಕಿ
ರಹಿನಾ ಮುಕ್ಕಾಂ ಹಜಾರ ಕೊಠಡಿಯೊಂಕೆ ಅಂದರ್
ಮಜಾರ್ ಮಜೀದಮೆ ನವರಂಗಿ ನಿಜರಮೆ
ಗುಜರ್ ಕರ್ತೆ ಹೈ ಭದ್ರೋದ್ದೀನ್ ಪೀರ್
ಎಂದು ಈ ಹಾಡನ್ನು ಕಟ್ಟಿ ಹಾಡಿದ್ದನ್ನು ಕೇಳಿದ ತುರಾಬ ಸಾಹೇಬ ಪರಿವರ್ತನೆಗೊಂಡು ಭದ್ರೇಶ್ವರ ಪಾದಕ್ಕೆ ನಮಸ್ಕರಿಸಿದ ಇವರ ಹಾಡುಗಳು ಆಧ್ಯಾತ್ಮಿಕ ಸಾಮಾಜಿಕ ಚಿಂತನೆಯ ಹಾಡುಗಳು ಇರುವುದು ಕಂಡು ಬರುತ್ತದೆ.
ಶಿಲ್ಲಪ್ಪ ಕವಿಯ ಬದುಕ ಬರಹ (೧೯೮೭) ಶಿಲ್ಲಪ್ಪ ಕವಿ ಚಿಟಗುಪ್ಪಾದಲ್ಲಿರುವ
ಪ್ರಮುಖ ತತ್ವಪದಕಾರ. ಒಂದುನೂರಾ ಆರು ಹಾಡುಗಳು ಮತ್ತು ಚಿತ್ರಸೇನ ಎಂಬ ಡಪ್ಪಿನಾಟವು ಇವರಲ್ಲದೆ ಶಿಲ್ಲಪ್ಪ ಕವಿಯ ಜೀವನದ ಮೇಲೆ ಆತನ ಸಾಧನಗಳ ಮೇಲೆ ಬೆಳಕು ಚೆಲ್ಲುವ ಕೃತಿ ಜೊತೆ ಜೊತೆಗೆ ಆತನ ಸಮಗ್ರ ಬರಹಗಳನ್ನು ಒಂದೆಡೆ ಸಂಗ್ರಹಿಸಿದ್ದು ಬಹು ಮಹತ್ವದ ಕೆಲಸವಾಗಿದೆ. ಇವರಲ್ಲಿ ತತ್ವ ಭರಿತವಾದ ಅನೇಕ ಹಾಡುಗಳು ಇಲ್ಲಿವೆ. ಹಾಗೇ ಭಕ್ತಿಯ ಪರಿಪಕ್ವತೆ ಆಧ್ಯಾತ್ಮದ ಚಿಂತನೆ, ನೀತಿ ಪದಗಳು, ಸಮಾಜದ ಅನೇಕ ದೋಷ ನಿವಾರಣೆಯ ತತ್ವಪದಗಳು ಇದರಲ್ಲಿವೆ. ಈ ಭಾಗದ ಪ್ರಮುಖ ತತ್ವಪದಕಾರರ ಬದುಕು ಬರಹ ಇಲ್ಲಿ ದಾಖಲಿಸಿದ್ದಾರೆ.
ಮರಕುಂದಿ ಬಸವಣ್ಣನ ಭಜನೆ ಪದಗಳು (೧೯೯೫) ಮರಕುಂದಿಯ ಬಸವಣ್ಣಪ್ಪ
ಪ್ರಮುಖ ತತ್ವಪಾದಕಾರದು. ಪಂಚ ಅಧ್ಯಾಯಗಳಲ್ಲಿ ಮೂವತ್ತು ನಾಲ್ಕು ಅಭಂಗಗಳು ಅಲ್ಲದೇ ನಲವತ್ತಾರು ತತ್ವದಪಗಳು ಸೇರಿ ಎಂಬತ್ತು ಹಾಡುಗಳಿವೆ. ಅಭಂಗಗಳು ಮರಾಠಿ ಪ್ರಭಾವದಿಂದ ಇಲ್ಲಿ ಪ್ರಭಾವ ಬೀರಿ ರಚನೆಯಾಗಿವೆ. ತತ್ವಪದಕಾರನ ತತ್ವಪದಗಳು ಇಲ್ಲಿವೆ. ಬೀದರ ಜಿಲ್ಲೆಯ ಎಲ್ಲಾ ಊರುಗಳಲ್ಲಿ ಭಜನೆ ಹಾಡುಗಳಲ್ಲಿ ಹಾಡುತ್ತಾರೆ. ಹಲವಾರು ಹಾಡುಗಳು ವಿಶೇಷತೆಯಿಂದ ಕೂಡಿವೆ. ಇಂತಹ ಹಿರಿಯ ತತ್ವಪದಕಾರರು ಆಗಿದ್ದಾರೆ ಎಂಬುದನ್ನು ಬೆಳಕಿಗೆ ತಂದಿದ್ದಾರೆ.
ಕಲ್ಯಾಣ ನಾಡಿನ ಪರಂಜ್ಯೋತಿ ಇದೊಂದು ಬೃಹತ್ ಸಂಪಾದನೆ ಚೆನ್ನಬಸವ
ಶಿವಯೋಗಿಗಳ ಕುರಿತು ರಚನೆಗೊಂಡ ಆರು ನೂರಕ್ಕೆ ಹೆಚ್ಚು ಹಾಡುಗಳು ಇವರಲ್ಲಿ ಸಂಗ್ರಹವಾಗಿವೆ. ಈ ಹಾಡು ವಸ್ತು ಒಂದೇ ಆದರೆ ಚೆನ್ನಬಸವ ಶಿವಯೋಗಿಗಳು ಈ ಭಾಗದ ಆರಾಧ್ಯ ದೈವವಾಗಿದ್ದಾರೆ. ಅವರ ಸನಾತನಗಳ ಆಧ್ಯಾತ್ಮ ಧಾರ್ಮಿಕ ಚಿಂತನ ಕ್ರಮಗಳು ಇದರಲ್ಲಿವೆ. ಅನೇಕ ಕವಿಗಳು ಮುಕ್ತ ಕಂಠದಿಂದ ರಚಿಸಿದ ಹಾಡುಗಳನ್ನು ಸಂಗ್ರಹಿಸಿದ್ದಾರೆ. ವಿಭಾಗ ಕ್ರಮದಲ್ಲಿ ಹಾಡುಗಳನ್ನು ವರ್ಗೀಕರಿಸಿದ್ದಾರೆ. ಡಾ. ಎಂ.ಎಸ್.
ಲಡ್ಡೆ, ಮಲ್ಲಿನಾಥ ಹಿರೇಮಠರೊಂದಿಗೆ ಕಾಶೀನಾಥರೆಡ್ಡಿ ಅವರು ಸಂಪಾದಕರಾಗಿ ಮಹತ್ವದ ಕಾರ್ಯ ಮಾಡಿದ್ದಾರೆ.
ಆಚರಣೆಯ ಹಾಡುಗಳು (೨೦೦೯) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟವಾದ ಕೃತಿ ಇದರಲ್ಲಿ ಆಚರಣೆಗೆ ಸಂಬಂಧಪಟ್ಟ ವಿವಿಧ ಸಂಪ್ರದಾಯದ ಆಚರಣೆಗಳ ಸಮಗ್ರ ನೋಟವನ್ನು ಕೊಡಲಿದೆ. ಪ್ರಸ್ತಾವನೆಯಲ್ಲಿ ಆಚರಣೆಯ ಹಾಡುಗಳು ಮಹತ್ವ ಉದ್ದೇಶ ಹಾಗೂ ಅವುಗಳ ಬಗೆಗಳನ್ನು ಕಾಶೀನಾಥರೆಡ್ಡಿ ಅವರು ವಿವರಿಸಿದ್ದಾರೆ. ಇದು ಅವರ ಸ್ವತಂತ್ರವಾದ ಸಂಪಾದನೆಯಾಗಿದೆ. ಬೀದರ ಜಿಲ್ಲೆಯ ಭೂತೇರ ಹಾಡುಗಳು, ಬುಲಾಯಿ ಹಾಡುಗಳು ಸಹಿತ ಸೇರ್ಪಡೆಗೊಂಡಿರುವುದು ಹೆಚ್ಚಿನ ಮಹತ್ವವುಂಟಾಗಿದೆ. ಆಚರಣೆಯ ಹಾಡುಗಲು ಸಮಗ್ರ ಇದರಲ್ಲಿವೆ.
ಕುಕ್ಕೇನ ಹೂ (೨೦೧೧) ಬೀದರ ಜಿಲ್ಲೆಯ ಹನ್ನೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರ ತಂದ ವಿಶೇಷ ಜಾನಪದ ಕೃತಿಯಾಗಿದೆ. ಇದರಲ್ಲಿ ಹದಿನೈದು ಲೇಖನಗಳಿವೆ. ಬೀದರ ಜಿಲ್ಲೆಯ ಸಾಹಿತ್ಯ ಹಾಗೂ ವಿದ್ವಾಂಸರ ಕುರಿತು ಡಾ. ಗವಿಸಿದ್ಧಪ್ಪ ಪಾಟೀಲರ ಲೇಖನ ಗಮನ ಸೆಳೆಯುತ್ತದೆ. ಒಂದು ಲೇಖನ ಬರೆದವರನ್ನು ಸಹ ಇಲ್ಲಿ ಗುರುತಿಸಿ ಸಂಶೋಧನೆ ಸಂಗ್ರಹ ಸಂಪಾದನೆಗಳು ಸಮಗ್ರವಾಗಿ ಕಟ್ಟಿಕೊಟ್ಟಿದ್ದಾರೆ. ಬುಲಾಯಿ ಹಾಡುಗಳು, ಜಾನಪದಕ್ಕೆ ಸಂಬಂಧಿಸಿದ ಹಲವಾರು ಜಾನಪದ ಲೇಖನಗಳು ಇದರಲ್ಲಿ ಸಂಗ್ರಹವಾಗಿವೆ. ಇದೊಂದು ಜಾನಪದ ಗಾದೆ. ಸಾಹಿತ್ಯ ಕೃತಿಗಳು ಕುರಿತಾದ ಕೃತಿಯಾಗಿದೆ.
ತ್ರಿಪದಿಗಳಲ್ಲಿ ಶಿವಶರಣರು (೨೦೧೫) ಶ್ರೀ ಚೆನ್ನಬಸವೇಶ್ವರ ಹಿರೇಮಠ ಸಂಸ್ಥಾನ ಹಾರಕೂಡದಿಂದ ಪ್ರಕಟವಾದ ಕೃತಿ. ಹದಿನೆಂಟು ಶಿವಶರಣರ ಕುರಿತಾದ ತ್ರಿಪದಿಗಳು ಇದರಲ್ಲಿ ಸಂಗ್ರಹವಾಗಿದೆ. ನಾಲ್ಕು ನೂರು ಪುಟದ ಕೃತಿಯಲ್ಲಿ ಜನಪದರು ಕಟ್ಟಿ ಹಾಡಿದ ತ್ರಿಪದಿಗಳು ಜನಮಾನಸದಲ್ಲಿ ಉಳಿದಿವೆ. ಇಲ್ಲಿಯ ತ್ರಿಪದಿಗಳಲ್ಲಿ ವಸ್ತು ವೈವಿಧ್ಯತೆಯಿದೆ. ಹನ್ನೆರಡನೆಯ ಶತಮಾನದ ವಚನಕಾರರ ಜೀವನ ಸಂದೇಶ ಸಾರುವ ತ್ರಿಪದಿಗಳು ಬಾಯಿಂದ ಬಾಯಿಗೆ ಬಂದ ಕಂಠಸ್ಥ ಹಾಡುಗಳು ಇಂತಹ ತ್ರಿಪದಿಗಳು ಶರಣರ ಜೀವನದ ಮೇಲೆ ಬೆಳಕು ಚೆಲ್ಲುತ್ತವೆ. ಕೃಷಿ ಪದ್ಧತಿ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಿಂತನೆಯ ಪ್ರಗತಿಪರವಾದ ಹಲವಾರು ಸತ್ಯಸಂಗತಿಗಳು ಇದರಲ್ಲಿವೆ. ತ್ರಿಪದಿಗಳ ಸಂಗ್ರಹದ ನೋಟಗಳು ಇಲ್ಲಿ ದಾಖಲಾಗಿವೆ.
ಮಂಗಲ ಮಂಗಲಾರುತಿ ಪದಗಳು (೨೦೧೯) ಇದು ಸಹಿತ ಹಾರಕೂಡ ಶ್ರೀ ಚೆನ್ನಬಸವೇಶ್ವರ ಹಿರೇಮಠ ಸಂಸ್ಥಾನದಿಂದ ಪ್ರಕಟಗೊಂಡಿದೆ. ಮಂಗಲಾರತಿ ಪದಗಳು ಇಂದು ಮಹತ್ವದ ಹಾಡುಗಳು ಯಾವುದೇ ಕೆಲಸ ಪ್ರಾರಂಭಿಸಲು ಮಂಗಲವಾಗಲೇ ಬೇಕು. ಅಂತಹ ಹಾಡುಗಳು ನಮಗೆ ದೊರಕುತ್ತವೆ. ನಾಲ್ಕು ನೂರಾ ಅರವತ್ತೊಂದು
ಮಂಗಳಾರತಿ ಪದಗಳು ಇಲ್ಲಿವೆ. ನಾಲ್ಕು ನೂರಾ ಇಪ್ಪತ್ತು ಪುಟಗಳ ವ್ಯಾಪ್ತಿಯಲ್ಲಿ ಗಣಪತಿ ಆರತಿ ಹಾಡುಗಳು (೧೧) ಸರಸ್ವತಿಗೆ ಆರತಿ (೦೬) ಲಕ್ಷ್ಮಿ ದೇವಿಗೆ ಆರತಿ ಕಾಶೀನಾಥರೆಡ್ಡಿ ಅವರು ಮತ್ತು ಮಲ್ಲಿನಾಥ ಹಿರೇಮಠರೊಂದಿಗೆ ಸೇರಿ ಸಂಪಾದಿಸಿದ್ದಾರೆ. (೧೬) ಪಾರ್ವತಿಗೆ ಆರತಿ (೨೬) ಶಿವನಿಗೆ ಆರತಿ (೫೫) ವೀರಭದನಿಗೆ (೧೨) ಶಿನಿದೇವಿ ಆರತಿ (೦೨) ಶ್ರೀರಾಮ ಆರತಿ (೬೧) ಆಂಜನೇಯ ಆರತಿ (೧೦) ಶ್ರೀ ಹರಿಯ ಆರತಿ (೧೩), ಶ್ರೀ ಕೃಷ್ಣನ ಆರತಿ (೧೨) ದತಾತ್ರೆಯ ಆರತಿ (೩) ಅಂಬಾಭವಾನಿಗೆ ಆರತಿ (೧೦) ರೇಣುಕಾಗೆ ಆರತಿ (೦೬) ಸಂಜಾಚಾರ್ಯ ಆರತಿ (೨೦) ಶಿವಶರಣರಿಗೆ ಆರತಿ (೫೩), ಗುಡ್ಡಾಪುರದ ದಾನವನ ಆರತಿ (೧೯) ಬನಶಂಕರಿ (೦೩) ಸಿದ್ದಪ್ರಭುರವರಿಗೆ ಆರತಿ (೧೪) ರೇವಪ್ಪಯ್ಯ ಶರಣ (೦೪), ಕರಬಸಪ್ಪ (೦೫) ಶರಣಬಸಪಾ ಹೀಗೆ ೩೫ ಭಾಗಗಳಲ್ಲಿ ೪೬೧ ಮಂಗಳಾರತಿ ಪದಗಳನ್ನು ಸಂಗ್ರಹಿಸಲಾಗಿದೆ. ಇದೊಂದು ಅಧ್ಯಯನಕ್ಕೆ ಪೂರಕವಾದ ಹಾಡುಗಳನ್ನು ಸಂಗ್ರಹಿಸಿದ್ದು ಮಾರ್ಗದರ್ಶಕವಾಗಿದೆ.
ಸಿದ್ಧಪ್ರಭು: ಸಿದ್ಧಪ್ರಭು ಧುಮ್ಮನಸೂರಿನ ಕವಿ ಅಜ್ಞಾತವಾಗಿ ಹೋಗಿದ್ದ ಆತನ
ಜೀವನ ಸಾಧನೆ ಆಧ್ಯಾತ್ಮದ ಪ್ರಭಾವ ಪ್ರೇರಣೆಗಳನ್ನು ಪಡೆದುಕೊಂಡು ಬಗೆ ಆಧ್ಯಾತ್ಮದ ನೆಲೆಗಳು ನೂರಾರು ಕಡೆ ವಾಸವಿದ್ದ ಸ್ಥಳ ಆತನ ಸಮಗ್ರವಾದ ವಿವರಗಳನ್ನು ಹೇಳುತ್ತಲೇ ತತ್ವಪದಗಳು ಅಭಂಗಗಳು ಹಾಗೂ ಸಣ್ಣಾಟ ರಚನೆ ಮಾಡಿದ ಸಮಗ್ರ ಜೀವನ ಸಾಧನೆಯನ್ನು ಪರಿಚಯಿಸುವ ಕೃತಿ. ಪ್ರಸಾರಾಂಗ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಕಟಿಸಿದೆ. ಇದು ಪ್ರಜಾರೋಪನ್ಯಾಸ ಮಾಲೆಯ ಅಡಿ ಪ್ರಕಟವಾಗಿದೆ. ಅವರ ಮೂವತ್ತು ನಾಲ್ಕು ಕೃತಿಗಳಲ್ಲಿ ಹತ್ತು ಕೃತಿಗಳು ಜಾನಪದದ ಬೇರೆ ಕ್ಷೇತ್ರದ ಪ್ರಕಾರಕ್ಕೆ ಸೇರಿದ ಕೃತಿಗಳಾಗಿವೆ. ಆದರೆ ಸಿದ್ದ ಪ್ರಭುವಿನ ಕುರಿತು ಅವರ ಜೀವನ ಚರಿತ್ರೆ ಸೇರಿಕೊಂಡು ಎಂಟು ಕೃತಿಗಳನ್ನು ಪ್ರಕಟಿಸಿದ್ದಾರೆ. ಅಂದರೆ ಒಬ್ಬ ಜನಪದ ಕವಿಯ ಹಲವಾರು ಹಾಡುಗಳನ್ನು ಸುಂದರವಾಗಿ ಇಲ್ಲಿ ದಾಖಲಿಸಿದಲ್ಲದೇ ಒಬ್ಬ ವ್ಯಕ್ತಿಯ ಕುರಿತು ಅನೇಕ ಬಗೆಯಲ್ಲಿ ಹೇಗೆ ಅಧ್ಯಯನ ಮಾಡಬಹುದೆಂಬ ದಾಖಲೆ ಸಿಗುತ್ತದೆ.
ಆರಾಧನೆ (೨೦೧೦) ಸಾವಧಾನ (೨೦೦೯) ತತ್ವಜ್ಞಾನ (೨೦೧೧), ಅಭಂಗಗಳು (೨೦೧೧) ಅನುಭಾವ (೨೦೧೩) ಸಂಕೀರ್ಣ (೨೦೧೪) ಬಹು ಭಾಷಾ ಕಾವ್ಯಧಾರೆ (೨೦೧೯) ಸಿದ್ಧಪ್ಪ ಪ್ರಭುಗಳು ತತ್ವಪದಗಳು (೨೦೧೭) ಹಾಗೂ ಸಿದ್ಧಪ್ರಭು (೧೯೯೬) ಒಂಬತ್ತು ಕೃತಿಗಳು ಹೊರತಂದಿದ್ದಾರೆ.
ಆರಾಧನೆ: ಸಿದ್ದಪ್ರಭುಗಳ ಹಾಡುಗಳ ಮೊದಲ ಸಂಪುಟ ೧೫೨ ಹಾಡುಗಳು ಇಲ್ಲಿ ಸಂಗ್ರಹಿಸಲಾಗಿದೆ. ಮೂವತ್ತೈದು ವರ್ಷಗಳ ಕಾಲ ಹಿಂದೆ ಪ್ರಕಟವಾಗಬೇಕಿದ್ದು ಹಾಡುಗಳನ್ನು ನಂತರ ಪ್ರಕಟಿಸಿದ್ದಾರೆ. ದೇವರನ್ನು ಕುರಿತು ಆರಾಧಿಸುವ ಬಗೆಗೆಯ
ಹಾಡುಗಳನ್ನು ಸಿದ್ಧಪ್ರಭು ಮಹಾರಾಜರು ಹಾಡು ಕಟ್ಟಿದ್ದಾರೆ. ಆರಾಧನೆಯಲ್ಲಿ ಅನೇಕ ಸಂಗ್ರಹಗಳು ಶಿವಶರಣರು, ಸಮಾಜವನ್ನು ಕುರಿತು ಟೀಕಿಸುವ ಬೋಧನೆ ಮಾಡುವ ಎಚ್ಚರಿಕೆಯ ಹಾಡುಗಳು ಇದರಲ್ಲಿವೆ.
ಸಾವಧಾನ: ಧುಮ್ಮನಸೂರಿನ ಸಿದ್ಧಪ್ರಭುಗಳು ದೇವರನ್ನು ಸ್ಮರಿಸಬೇಕಾದರೆ ಅವಸರದಲ್ಲಿರಬೇಕೆಂದು ಸಾವಧಾನ ಸಮಯಚಿತ್ತ ಸಾಧನೆಯ ಮೂಲಕ ಆರಾಧಿಸಬೇಕೆಂದು ಹೇಳುವ ಹಾಡುಗಳು ಇವಾಗಿವೆ. ಇದರಲ್ಲಿ ೧೩೩ ಹಾಡುಗಳನ್ನು ಸಂಗ್ರಹಿಸಿದ್ದಾರೆ.
ತತ್ವಜ್ಞಾನ: ೧೫೧ ಹಾಡುಗಳು ಸಿದ್ಧಪ್ರಭುಗಳು ರಚನೆಯ ಹಿಂದೆ ತಾತ್ವಿಕ
ಭಾಷೆಯಿದೆ. ಇಲ್ಲಿ ತತ್ವಜ್ಞಾನ ಅತ್ಯಂತ ಮುಖ್ಯವಾದದ್ದು ಎಂದು ಪ್ರತಿಪಾದಿಸುವ ಹಾಡುಗಳು ಇವಾಗಿವೆ. ಅಭಂಗಗಳೂ ೧೧೬ರಿದ್ದು. ಈ ಹಾಡುಗಳು ಮರಾಠಿಯಲ್ಲಿ ಅಭಂಗಗಳು ಎಂಬ ಸಾಹಿತ್ಯದಿಂದ ಬಂದಿವೆ. ಕವಿ ಅನೇಕ ಭಾಷೆಗಳ ಸಾಮರಸ್ಯ ಕಾಪಾಡಿದ್ದಾರೆ. ಅಭಂಗಗಳು ಇಲ್ಲಿ ಮೈದಾಳಿ ನಿಂತಿವೆ. ಮರಾಠಿ ಸಾಹಿತ್ಯದ ಹಲವಾರು ಭಿನ್ನಧೋರಣೆಯ ಈ ಹಾಡು ಕನ್ನಡದಲ್ಲಿ ಭಜನೆಗಳಲ್ಲಿ ಹಾಡಲಾಗುತ್ತಿದೆ. ಇಂತಹ ಅಭಂಗಗಳ ಇವಾಗಿವೆ. ಅನುಭಾವ ಎಂಬ ಕೃತಿಯಲ್ಲಿ ಅನುಭಾವದಿಂದ ಕೂಡಿದ ಸಾಮರಸ್ಯ ಬೆಸೆವ ಹಾಡುಗಳು ಮಾನವೀಯ ವಸ್ತು ವೈವಿಧ್ಯತೆಯಲ್ಲಿ ಹಲವಾರು ಭಿನ್ನದಾರಿಗಳು ಇವೆ. ಅವನ್ನು ಅಲ್ಲಿ ದಾಖಲಿಸಿದ್ದಾರೆ. ಸಂಕೀರ್ಣ ಪದಗಳು ಈಗಾಗಲೇ ಹೇಳಿದ ನಾಲೈದು ಭಾಗಗಳಲ್ಲಿ ಸೇರದೇ ಹೋದ ಜಾನಪದ ಸಾಹಿತ್ಯ ಮೂಲ ಹಾಡುಗಳಾದ ಮೊಹರಂ, ಬುಲಾಯಿ, ತೊಟ್ಟಿಲು ಹಾಡು, ಎಣ್ಣೆ ಹಚ್ಚುವ ಹಾಡುಗಳು ಇದರಲ್ಲಿ ಸೇರಿವೆ. ಈ ನಾಲೈದು ಪ್ರಕಾರದ ಹಾಡುಗಳು ವೈವಿಧ್ಯತೆ ಹೊಂದಿವೆ. ಇದರಲ್ಲಿ ಭಿನ್ನವಾದ ಆಲೋಚನೆ ಸಿದ್ಧಾಂತಗಳು ಕಂಡಿರುವುದು ಸಂಕೀರ್ಣ ಹಾಡುಗಳನ್ನು ಗುರುತಿಸಿದ್ದಾರೆ. ಇದರಲ್ಲಿ ೮೮ ಹಾಡುಗಳನ್ನು ವೈವಿಧ್ಯಮಯವಾದ ಹಾಡುಗಳ ಸಂಗ್ರಹವಾಗಿವೆ. ಬಹುಭಾಷಾ ಕಾವ್ಯಧಾರೆ ಎಂಬ ಕೃತಿಯಲ್ಲಿ ಸಿದ್ಧಪ್ರಭುಗಳ ಕನ್ನಡ, ಮರಾಠಿ, ತೆಲುಗು ಹಾಗೂ ಹಿಂದಿಯ ಹಾಡುಗಳು ಇಲ್ಲಿ ಸೇರಿವೆ. ಅಂದರೆ ಬಹುಭಾಷಾ ಪ್ರವೀಣರಾಗಿದ್ದರು.
ಸಿದ್ಧಪ್ರಭುಗಳು ಅವರ ಭಾಷಾ ಸಾಮರಸ್ಯ ಹಾಗು ಗಡಿಭಾಗಗಳ ನಡುವೆ ಸೌಹಾರ್ದತೆ ಬೆಸೆಯುವ ನಿಟ್ಟಿನಲ್ಲಿ ಇಲ್ಲಿನ ಹಾಡುಗಳು ದೊರೆತಿವೆ. ಈ ಹಾಡುಗಳು ಸಂಕಲನವಾದ ಚಿಂತನಧಾರೆ ಹೊಂದಿವೆ.
ಸಿದ್ಧಪ್ರಭುಗಳ ತತ್ವಪದಗಳು: ಎಂಬ ಸಂಪಾದನೆಯನ್ನು ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಪ್ರಕಟಿಸಿದೆ. ಸಮಗ್ರ ತತ್ವಪದ
ಸಂಕಲ್ಪ ಮಾಲೆಯ ೧೫ನೇ ಸಂಪುಟವಾಗಿದೆ. ಸಿದ್ದಪ್ರಭು ಒಬ್ಬ ಕವಿಯ ಕುರಿತು ಸಮಗ್ರವಾದ ಅಧ್ಯಯನ ಜಿಲ್ಲೆಯಲ್ಲಿ ನಡೆದಿದ್ದು ಇದೆ ಮೊದಲಾಗಿದೆ.
ಜಾನಪದ ವೈವಿಧ್ಯ: ಹದಿಮೂರು ಲೇಖನಗಳ ಸಂಕಲನ ಅವರು ಪ್ರಕಟಿಸುತ್ತಿದ್ದಾರೆ.
ಇವರಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಭಜನೆ ಹಾಡು ಆಚರಣೆ ಹಾಡುಗಳು, ಮೊಹರಂ, ಬಿದರಿಕಲೆ, ಅನುಭಾವಿಕವಿಗಳು ಹೀಗೆ ಹಲವಾರು ವಸ್ತು ವಿಷಯದ ಮೇಲೆ ಆಗಾಗ ಬರೆದ ಲೇಖನಗಳ ಸಂಕಲನವಾಗಿದೆ. ಇದರಲ್ಲಿ ಈ ಪ್ರದೇಶದ ಜಾನಪದ ವೈಶಿಷ್ಟ್ಯ, ಗುರುತಿಸಬಹುದಾದ ಲೇಖನಗಳು ಇವೆ. ಜಾನಪದಕ್ಕೆ ಸಂಬಂಧಿಸಿದ ಇಪ್ಪತ್ತು ಕೃತಿಗಳನ್ನು ಹೊರ ತಂದಿದ್ದಾರೆ. ಹೀಗಾಗಿ ಕಾಶೀನಾಥರೆಡ್ಡಿ ಅವರು ಜಾನಪದ ಕ್ಷೇತ್ರಗಳ ಸಂಗ್ರಹಕಾರರಾಗಿ ಜಿಲ್ಲೆಯ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ಜಾನಪದದ ಹಲವಾರು ಸಮ್ಮೇಳನ, ಅಕಾಡೆಮಿಗಳಲ್ಲಿ ಭಾಗವಹಿಸಿದ್ದಾರೆ. ಇತರೆ ಸೇವೆ ಅಮೋಘವಾಗಿದೆ. ಭೂತೇರು ಕುಣಿತವನ್ನು ರಾಜ್ಯಮಟ್ಟಕ್ಕೆ ತಲುಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ೧೯೮೭ರಲ್ಲಿ ಸ್ಥಾಪನೆಗೊಂಡಿತು. ಡಾ. ಎಚ್.ಎಲ್. ನಾಗೇಗೌಡರು ಅಧ್ಯಕ್ಷರಾದರು ಆಗ ೩೦.೦೭.೧೯೮೭ ರಿಂದ ೩೦.೦೭.೧೯೯೦ರ ವರೆಗೆ ಮೂರು ವರ್ಷಗಳ ಕಾಲ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮೂರು ವರ್ಷದ ಅವಧಿಯಲ್ಲಿ ಮೂರು ಜನ ಕಲಾವಿದರಿಗೆ ಪ್ರಶಸ್ತಿ ಜಿಲ್ಲೆಯವರಿಗೆ ಕೊಡಿಸಿದ್ದಾರೆ. ಹತ್ತು ಜನ ಜಾನಪದ ಕಲಾವಿದರಿಗೆ ಮಾಶಾಸನ ಕೊಡಿಸಿದ್ದಾರೆ. ೧೨ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಬೀದರ ಜಿಲ್ಲೆಯಿಂದ ಭೂತೇರ ಕುಣಿತ ತಂಡ ತೆಗೆದುಕೊಂಡು ಹೋಗಿ ಭಾಗವಹಿಸಿದ್ದರು. ಇಂದಿಗೂ ತಮ್ಮ ೭೪ನೇ ವಯಸ್ಸಿನಲ್ಲಿ ಜಾನಪದ ಹಾಡುಗಳನ್ನು ಹಾಡುತ್ತಾ ಎಲ್ಲೇ ಜಾನಪದ ಕಾರ್ಯಕ್ರಮವಿದ್ದರೆ ಹೋಗಿ ಭಾಗವಹಿಸಿ ಬರುತ್ತಿದ್ದಾರೆ.
ಜಾನಪದ ಜೊತೆ ಜೊತೆಯಲ್ಲಿ ಶಿಷ್ಟ ಸಾಹಿತ್ಯಕ್ಕೆ ಅವರ ಕೊಡುಗೆಯ ಕೋರಿಕೆ ಕವನ ಸಂಕಲನ (೧೯೯೪) ಇದರಲ್ಲಿ ೩೦ ಕವಿತೆಗಳಿವೆ. ಜನಸೇವಕನ ವಚನಗಳು (೧೯೮೭) ಹರ್ಡೇಕರ ಮಂಜಪ್ಪನವರ ಆಧುನಿಕ ವಚನಗಳನ್ನು ಸಂಗ್ರಹಿಸಿ ಮಾಣಿಕರಾವ ಧನಾಶ್ರೀ ಅವರೊಂದಿಗೆ ಪ್ರಕಟಿಸಿದ್ದಾರೆ. ಹುಮನಾಬಾದ ತಾಲೂಕಾ ಪರಿಚಯ, ಶ್ರೀ ವೀರಭದ್ರೇಶ್ವರ ಚರಿತ್ರೆ ಅನುವಾದ, ಸಾಹಿತ್ಯ ಸುಧಾ, ಸಾಹಿತ್ಯ ಸುರಭಿ, ಸಾಹಿತ್ಯ ಸುಮಾ, ಸಾಹಿತ್ಯ ಸಿಂಧು ಎಂಬ ನಾಲ್ಕು ಲೇಖನಗಳ ಸಂಕಲನ ಕೃತಿ. ವಚನಕಾಶಿ ಎಂಬ ಆಧುನಿಕ ವಚನಗಳ ಸಂಕಲನ ಬಸವಣ್ಣ ಅಂಕಿತದಲ್ಲಿ ತ್ರಿಪದಿಗಳಲ್ಲಿ ರಚಿಸಿದ್ದಾರೆ. ಶಿಶು ಶತಕ ಕಾವ್ಯ, ಮಕ್ಕಳ ನೂರು ಕವಿತೆಗಳು, ಬಸವಣ್ಣನವರ ವಚನಗಳು, ಕಾಯಕವೀರ ಮೋಳಿಗೆ ಮಾರಯ್ಯ ಕೃತಿಗಳಲ್ಲದೇ ವಿರೂಪಾಕ್ಷಪ ಅಗಡಿ ವಕೀಲರ ಸಮರಸ ಅಭಿನಂದನ ಗ್ರಂಥ, ಕಲ್ಯಾಣ ಕಲಾಶ್ರೀ, ಶೇಷಪ್ಪ ಗಟ್ಟೂರ ಸಂಗೀತಗಾರನಿಗೆ ರಾಜ್ಯೋತ್ಸವ
ಪ್ರಶಸ್ತಿ ಕಲ್ಯಾಣಕಲಾ ಶ್ರೀ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅಭಿನಂದನ ಗ್ರಂಥ, ಮಾತೆ ಮೈತ್ರಾದೇವಿ ಶರಣೆಯ ಮಾತೃಛಾಯೆ ಎಂಬ ಅಭಿನಂದನ ಗ್ರಂಥ ಮೂರು ಹೊರತಂದಿದ್ದಾರೆ. ಹೀಗೆ ಹನ್ನೆರಡು ಕೃತಿ ಪ್ರಕಟಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಿ. ನಾರಾಯಣ ಅವರು ಸರ್ವಜ್ಞನ ತ್ರಿಪದಿಗಳನ್ನು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಏರ್ಪಡಿಸಿದ್ದರು. ಆಗ ೧೧೧೧ ತ್ರಿಪದಿಗಳನ್ನು ಒಂದೇ ಸಾರಿ ಹೇಳಿ ಕಾಶಿನಾಥರೆಡ್ಡಿ ಪ್ರಥಮ ದಾಖಲೆ ಮಾಡಿದ್ದಾರೆ. ಇಂದಿಗೂ ಈ ದಾಖಲೆ ಯಾರು ಮುರಿದಿಲ್ಲ. ಅಂತಹ ಜ್ಞಾಪಕ ಶಕ್ತಿ ಅವರಲ್ಲಿದೆ. ಇಂದಿಗೂ ಅಧ್ಯಯನಶೀಲರು. ಉತ್ತಮ ವಾಗಿಗಳು ಹೌದು. ಚಿಟಗುಪ್ಪ ವಲಯದ ಪ್ರಥಮ ಮತ್ತು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು. ಹುಮನಾಬಾದ ತಾಲೂಕಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಹಾಗೂ ಬೀದರ ಜಿಲ್ಲಾ ಹನ್ನೆರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ ಹೊಂದಿ ಉತ್ತಮ ಭಾಷಣ ಮಾಡದ್ದಾರೆ. ಇವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಸುವರ್ಣ ಕನ್ನಡ ಪ್ರಶಸ್ತಿ, ಬೀದರ ಸುರಭಿ ಪ್ರಶಸ್ತಿ, ಧರಿನಾಡು ಸಿರಿ ಪ್ರಶಸ್ತಿ, ಚಾಲುಕ್ಯ ಪ್ರಶಸ್ತಿ, ಕನ್ನಡರತ್ನ ಪ್ರಶಸ್ತಿ, ಸಿದ್ಧರಾಮ ಜಂಬಲದಿನ್ನಿ ಅತ್ಯುತ್ತಮ ಲೇಖಕ ಪ್ರಶಸ್ತಿ, ಶ್ರೀ ಚೆನ್ನರತ್ನ ಪ್ರಶಸ್ತಿ, ಬಸವ ಸಾಹಿತ್ಯ ರತ್ನ ಪ್ರಶಸ್ತಿಗಳು ಲಭಿಸಿವೆ.
ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಟ್ರಸ್ಟ್ ಬೆಂಗಳೂರು, ಅಜೀವ ಸದಸ್ಯರಾಗಿ ರೋಟರಿಕ್ಲಬ್ ಸದಸ್ಯ ಕಾರ್ಯದರ್ಶಿ, ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಸಾಹಿತ್ಯ ಹಾಗೂ ಸಾಮಾಜಿಕ ಹಾಗೂ ಸಾಮಾಜಿಕ ಕೆಲಸ ಕಾರ್ಯಗಳನ್ನು ತಾಲೂಕಿನಲ್ಲಿ ಮಾಡಿದ್ದಾರೆ. ಪತ್ರಕರ್ತರಾಗಿ ಕನ್ನಡಪ್ರಭವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ತಾಲೂಕಾ ಕ.ಸಾ.ಪ. ಪತ್ರಕರ್ತರ ಸಂಘ, ಮಕ್ಕಳ ಸಾಹಿತ್ಯ ವೇದಿಕೆ, ಫಿಲಾಟಿಲ ಕ್ಲಬ್ ರೋಟರಿಕ್ಲಬ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳು ಸಂಶೋಧನೆ ಮಾಡಿದ್ದಾರೆ. ಇವರ ಎಪ್ಪತ್ತನಾಲ್ಕು ಸಂಭ್ರಮದ ನಿಮಿತ್ಯ ಜನಪದ ಕಾಶಿ ಎಂಬ ಅಭಿನಂದನ ಗ್ರಂಥ ಅರ್ಪಣೆಯನ್ನು ಮಾಡಲಾಗಿದೆ.
ಎಚ್. ಕಾಶಿನಾಥರೆಡ್ಡಿ ಅವರು ವರದಿಗಾರರಾಗಿ, ಲೇಖಕರಾಗಿ, ಕವಿಯಾಗಿ ಜೀವನ ಚರಿತ್ರೆಕಾರರಾಗಿ ಪುಸ್ತಕರಚನೆ, ಓದುವುದು ನಾಣ್ಯಗಳ ಸಂಗ್ರಹ ಅಂಚೆ ಚೀಟಿಗಳ ಸಂಗ್ರಹ ಪುಸ್ತಕಗಳ ಸಂಗ್ರಹ ಇವರ ಹವ್ಯಾಸ ಹಣಕುಣಿಯ ಕಾಶೀನಾಥರೆಡ್ಡಿ ಗುಂಡಾರೆಡಿ
ಪ್ರಕಟಣೆಯನ್ನು ಮಾಡಿದ ಜಿಲ್ಲೆಯ ಜಾನಪದ ವಿದ್ವಾಂಸರಲ್ಲಿ ಇವರು ಕೂಡಾ ಅವರ ಪೂರ್ಣ ಹೆಸರು ಇವೆಲ್ಲಕ್ಕೂ ಹೆಚ್ಚಾಗಿ ಜಾನಪದ ಸಂಗ್ರಹ ಸಂಪಾದನೆ ಮೊದಲಿಗರು.ಹಾರಕೂಡ
ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನದೊಂದಿಗೆ ಸಂಪರ್ಕ
ಹಾರಕೂಡ ಸುಕ್ಷೇತ್ರದ ಡಾ.ಚೆನ್ನವೀರ ಶಿವಾಚಾರ್ಯ ರರು
ಇವರ ಬಗ್ಗೆ ಅಭಿಮಾನ,ಪ್ರೀತಿ ಹೊಂದಿವರು. ಶ್ರೀಮಠದಿಂದ ಅವರ ಜಾನಪದ ಕಾಶಿ ಅಭಿನಂದನ ಗ್ರಂಥವನ್ನು ಡಾ.ಗವಿಸಿದ್ಧಪ್ಪ ಪಾಟೀಲರಿಂದ ಸಂಪಾದಿಸಿ ಪ್ರಕಟಿಸಿದ್ದಾರೆ. ಪದ್ಮಶ್ರೀ ಡಾ.ಮಂಜಮ್ಮ ಜೋಗತಿ ಅವರಿಂದ ಶ್ರೀಗಳು ಬಿಡುಗಡೆ ಮಾಡಿಸಿದರು.ಚನ್ನಶ್ರೀ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ, ಅಲ್ಲದೇ ಹಲವು ಸನ್ಮಾನ ಗೌರವ ನೀಡಿದ್ದಾರೆ.ಶ್ರೀಮಠದಿಂದ ನಾಲ್ಕು ಗ್ರಂಥ ಪ್ರಕಟ ಗೊಂಡಿವೆ.ಶ್ರೀ ಬಿ.ಕೆ.ಹಿರೇಮಠರ ಗೆಳೆಯರಾಗಿದ್ದರು.ಇದುವರೆಗೂ ,೪೦ ಕ್ಕೂ ಹೆಚ್ವು ಗ್ರಂಥ ಪ್ರಕಟಿಸಿದ್ದಾರೆ. ಇವರು ವಯೋ ಸಹಜ ಕಾಯಿಲೆಯಿಂದ ಬಳಲುತಗತಿದ್ದರು.ಇಂದು ಸೋಮವಾರ ಬೆಳ್ಳಗ್ಗೆ ದಿ:೦೮-೧೨-೨೦೨೫ ರಂದು ನಿಧನರಾದರು. ಅಪಾರ ಬಂಧು,ಬಳಗ,ಸಾಹಿತ್ಯ ಬಳಗ,ಮತ್ತು ಪತ್ನಿ,ಮಕ್ಕಳು, ಮೊಮ್ಮಕ್ಕಳನ್ನು ಅಗಲಿದ್ದಾರೆ.ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.
ಡಾ.ಗವಿಸಿದ್ಧಪ್ಪ ಎಚ್.ಪಾಟೀಲ
ಡಾ.ಜಯದೇವಿ ಗಾಯಕವಾಡ
ಸಾಹಿತಿಗಳು,ಕಲಬುರಗಿ
