ಗತಕಥನ ಸಂಕೀರ್ಣ

ಗತಕಥನ ಸಂಕೀರ್ಣ

ಗತಕಥನ ಸಂಕೀರ್ಣ

ಗತಕಥನ ಸಂಕೀರ್ಣ' ಎಂಬ ಕಿರುಹೊತ್ತಿಗೆ ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿಯವರು ವಿವಿಧ ವಿಷಯ ವಸ್ತುಗಳನ್ನು ಇಟ್ಟುಕೊಂಡು ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳ ಗುಚ್ಛವಾಗಿದೆ. ಇದನ್ನು ೨೦೨೪ರಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿ. ಕಲಬುರಗಿ ಇವರು ಪ್ರಕಟಿಸಿದ್ದಾರೆ.

ಈ ಪುಸ್ತಕವು ಒಂಬತ್ತು ಲೇಖನಗಳನ್ನು ಒಳಗೊಂಡಿದ್ದು, ಎಲ್ಲ ಲೇಖನಗಳು ಚಾರಿತ್ರಿಕವಾಗಿ ಹೊಸ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ಮಾಡಿವೆ. ಲೇಖಕರು ವಿವಿಧ ಕಾರಣಗಳಿಗಾಗಿ ನಾಡನ್ನು ಸುತ್ತಾಡುವ ಸಂದರ್ಭದಲ್ಲಿ ಚರಿತ್ರೆ ಮತ್ತು ಸಂಸ್ಕೃತಿಯ ವಿಷಯಗಳಿಗೆ ಸಂಬಂಧಿಸಿದಂತೆ ಕಂಡು ಕೇಳಿರುವ ಅನುಭವಗಳನ್ನು ಲೇಖನಿಯ ಮೂಲಕ ಇಲ್ಲಿ ಹಂಚಿಕೊಂಡಿದ್ದಾರೆ. ಪ್ರತಿಯೊಂದು ಲೇಖನದ ವಿಷಯಗಳನ್ನು ವಿವಿಧ ಆಕರ ಸಾಮಾಗ್ರಿಗಳೊಂದಿಗೆ ಒರೆಗೆ ಹಚ್ಚಿ, ಚಿಂತನಾಶೈಲಿಯ ಮೂಲಕ ತಲಸ್ಪರ್ಷಿಯಾಗಿ ಅಧ್ಯಯನವನ್ನು ಕೈಗೊಂಡಿದ್ದಾರೆ.

ಗಾರಂಪಳ್ಳಿಯವರು ಮೂಲತಃ ಪತ್ರಾಗಾರ ಇಲಾಖೆಯ ಉಪನಿರ್ದೇಶಕರಾಗಿ ಕಲಬುರಗಿಯ ವಿಭಾಗೀಯ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆಡಳಿತಾತ್ಮಕ ಕರ್ತವ್ಯದ ಜೊತೆಗೆ ಸಂಶೋಧನೆಯಲ್ಲಿ ಆಸಕ್ತಿಯನ್ನು ಹೊಂದಿರುವ ಇವರು, ಹೈದರಾಬಾದ ಕರ್ನಾಟಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹುಡುಕುವ ಮತ್ತು ಅವುಗಳನ್ನು ಸಂಕಲಿಸಿ ಪ್ರಕಟಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಹೈದರಾಬಾದ ಸಂಸ್ಥಾನದ ದಾಖಲೆಗಳ ಮೇಲೆ ಈಗಾಗಲೇ ಎರಡು ಸಂಪುಟಗಳನ್ನು ಪ್ರಕಟಿಸಿದ್ದಾರೆ.

ಪ್ರಾಚೀನ ಕಾಲದ ಚರಿತ್ರೆಯ ಹುಡುಕಾಟದಲ್ಲಿ ಗತಿಸಿ ಹೋದ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ರಚಿಸವುದು ತುಂಬಾ ತ್ರಾಸದಾಯಕ ಕೆಲಸವೆನಿಸಿದೆ. ಕಾಲಘಟ್ಟಗಳಲ್ಲಿ ಘಟಿಸಿದ ಚರಿತ್ರಾರ್ಹ ಸಂಗತಿಗಳನ್ನು ಮತ್ತು ಅವುಗಳ ಬೇರೆ ಬೇರೆ ಆಯಾಮಗಳನ್ನು ಕುರಿತು ಒಂದು ಸ್ಪಷ್ಟವಾದ ಚಾರಿತ್ರಿಕ ನಿಲುವಿಗೆ ಒಳಪಡಿಸುವುದು ಈ ಹೊತ್ತಿನ ಅನಿವಾರ್ಯವಾಗಿದೆ. ಏಕೆಂದರೆ ಇತಿಹಾಸ ಕಟ್ಟುವ ಕೆಲಸ ಬಹಳ ಕಷ್ಟಕರವಾದುದ್ದು. ಈವರೆಗೂ ದೊಡ್ಡವರ, ದೊಡ್ಡ ಮನೆತನಗಳ ಚರಿತ್ರೆಗಳು ನಮ್ಮಲ್ಲಿ ಹೆಚ್ಚು ಮಾತನಾಡಿವೆ. ಆದರೆ ಅದರೊಂದಿಗೆ ಸಣ್ಣಪುಟ್ಟ ಮನೆತನಗಳ, ಸಾಮಂತರ, ಜನಸಾಮಾನ್ಯರ ಚರಿತ್ರೆಗಳನ್ನು ಆಲಕ್ಷಿಸಲಾಗಿದೆ. ಲೇಖಕರ ಈ ಎಲ್ಲ ಬರವಣಿಗೆಗಳು ಈ ಸ್ಪಷ್ಟತೆಯನ್ನು ಹೊಂದಿವೆ. ಕಾಲನಂತರದಲ್ಲಿ ಮರೆಯಾಗಬಹುದಾಗಿದ್ದ ಅನೇಕ ಸಂಗತಿಗಳನ್ನು ಅವರು ಇಲ್ಲಿ ದಾಖಲಿಸಿದ್ದಾರೆ. ಇಂತಹ ಅಲಕ್ಷಿತ ಸಮುದಾಯಗಳ ಕುರಿತು ಡಾ. ಅಮರೇಶ ಯತಗಲ್ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ; ಮಾಡುತ್ತಿದ್ದಾರೆ.

ಹೆಚ್ಚು ಜನ ಸಂಶೋಧಕರು ನಾಗಾವಿಯನ್ನು ಈವರೆಗೂ ಘಟಿಕಸ್ಥಾನವಾಗಿ ಮಾತ್ರ ಗಮನಿಸಿದ್ದಾರೆ. ಆದರೆ ವೀರಶೆಟ್ಟಿಯವರು ಈ ಪುಸ್ತಕದಲ್ಲಿ ಈವರೆಗೂ ಬೆಳಕಿಗೆ ಬಾರದ ಕೆಲವು ಸೂಕ್ಷ್ಮ ಸಂಗತಿಗಳನ್ನು ಇಲ್ಲಿ ದಾಖಲಿಸಿದ್ದಾರೆ. ಚಿತ್ತಾಪುರಕ್ಕೆ ಈ ಹಿಂದೆ ʼಕಂಗಳಪುರಂ' ಎಂಬ ಹೆಸರಿತ್ತೆಂಬುದು ಅವುಗಳಲ್ಲಿ ಬಹಳ ಪ್ರಮುಖವಾದುದ್ದು. ನಾಗಾವಿ ಪರಿಸರ ಶೈವ, ವೈಷ್ಣವ, ಜೈನ, ಬೌದ್ಧ ಪರಂಪರೆ ಕುರುಹುಗಳನ್ನು ಹೊಂದಿದೆ ಎಂಬ ವಿವಿಧ ವಿಷಯಗಳನ್ನು ಇಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ. ನಾಗಾವಿಯಲ್ಲಾಗುವ ಪಟಗಾ ತಯಾರಿಕೆಗೂ, ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯಕ್ಕೂ ಇರುವ ಒಂದು ಚಾರಿತ್ರಿಕ ಸಂಬಂಧವನ್ನು ಅವರು ಇಲ್ಲಿ ಕಾಣಿಸುತ್ತಾರೆ. ಈ ಎರಡು ಊರುಗಳ ನಡುವಿನ ಈ ಸಾಂಸ್ಕೃತಿಕ ಸಂಬಂಧ ಈಗಲೂ ಮುಂದುವರಿದಿರುವ ಬಗ್ಗೆ ಅವರು ಇಲ್ಲಿ ಚರ್ಚಿಸುತ್ತಾರೆ. ನಾಗಾವಿಯ ಸ್ಮಾರಕಗಳು ಕಾಲಾನಂತರದಲ್ಲಿ ಅನ್ಯ ಸಂಸ್ಕೃತಿಗಳ ಪ್ರಭಾವಕ್ಕೆ ಒಳಗಾಗಿರುವುದರಿಂದ ಅವು ಮೂಲ ಸಂಸ್ಕೃತಿಯಿಂದ ಪರಿವರ್ತಿತವಾಗಿರುವುದನ್ನು ನಾವು ಕಾಣುತ್ತೇವೆ. ಸಮಗ್ರ ನಾಗಾವಿ ಪರಿಸರದ ಕುರುಹುಗಳು ಮತ್ತು ಅವಶೇಷಗಳನ್ನು ಹುಡುಕುವ ಸಂಶೂಧನೆಯ ಅಗತ್ಯವನ್ನು ಕುರಿತು ಅವರು ಈ ಲೇಖನದಲ್ಲಿ ಚರ್ಚಿಸಿದ್ದಾರೆ.

ಯಾವುದೇ ದೇವಾಲಯಗಳು ಸಮಕಾಲೀನ ಸಮಾಜದಲ್ಲಿ ಸಮಾಜೋ - ಧಾರ್ಮಿಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಿದ್ದವು ಎಂಬುದು ನಿರ್ವಿವಾದ. ದೇವಾಲಯಗಳು ಆ ಪ್ರದೇಶದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳೂ ಕೂಡ ಆಗಿರುತ್ತಿದ್ದವು; ಇವುಗಳೊಟ್ಟಿಗೆ ಅವು ಶೋಷಣೆಯ ಕೂಪಗಳಾಗಿಯೂ ಬದಲಾದವು. ದೇವಾಲಯಗಳನ್ನು ರಚಿಸುವ ಅಥವಾ ನಿರ್ಮಿಸುವ ಉದ್ದೇಶಗಳನ್ನು ನಾವು ಗಮನಿಸಿದರೆ ಈ ಮೇಲಿನ ಮಾತುಗಳ ಮಹತ್ವ ನಮಗೆ ಗೊತ್ತಾಗುತ್ತದೆ. ಹಾಗಾಗಿಯೇ ದೇವಾಲಯಗಳ ಅಧ್ಯಯನವೆಂದರೆ ಕೇವಲ ಕಲೆ ಮತ್ತು ವಾಸ್ತುಶಿಲ್ಪದ ಅಧ್ಯಯನ ಮಾತ್ರವಾಗಿರದೆ ಆಯಾ ಕಾಲದ ಸಾಮಾಜಿಕ - ಧಾರ್ಮಿಕ ಸಂಕಥನಗಳನ್ನು ಅವು ಸೂಚಿಸುತ್ತವೆ ಎಂದು ಚರಿತ್ರಾಕಾರರು ಹೇಳುವುದು. ಇವುಗಳ ನಿರ್ವಹಣೆಗಾಗಿ ಹೊರಡಿಸಿದ ಶಾಸನಗಳು ಅಲ್ಲಿನ ಸಮುದಾಯಗಳಿಗೆ ವಹಿಸಿದ ಜವಾಬ್ದಾರಿಗಳನ್ನು ಹಾಗೂ ರಾಜರು ದೇವಾಲಯಗಳ ಹೆಸರಿನಲ್ಲಿ ನೀಡುತ್ತಿದ್ದ ಭೂದಾನಗಳನ್ನು ವಿವರಿಸುತ್ತವೆ. ಅಂತೆಯೇ ಆಯಾ ಗ್ರಾಮದಲ್ಲಿದ್ದ ದೇವಾಲಯಗಳು ಆ ಪರಿಸರದ ಬಹುಮುಖ್ಯ ಕೇಂದ್ರಗಳಾಗಿರುತ್ತಿದ್ದವು. 

ಚರಿತ್ರೆಗೆ ಶಾಸನಗಳು ಅಮೂಲ್ಯವಾದ ಆಧಾರ ಸ್ತಂಭಗಳಾಗಿವೆ. ಇವು ಅಂದಿನ ರಾಜರ ಸಾಧನೆಯನ್ನು ಜನಮಾನಸದಲ್ಲಿ ಅಚ್ಚಳಿಯದೆ ಉಳಿಸಿವೆ. ಇತಿಹಾಸಕಾರರು ಚಾರಿತ್ರಿಕ ಸಂಪತ್ತಾಗಿ ಇವುಗಳನ್ನು ಪರಿಗಣಿಸುತ್ತಾರೆ. ಆರನೇ ವಿಕ್ರಮಾದಿತ್ಯನ ಅವಧಿಯ ಏಕಕೂಟ ದೇವಾಲಯಗಳನ್ನು ಶಾಸನೋಕ್ತ ಹಿನ್ನೆಲೆಯಲ್ಲಿ ಇಲ್ಲಿಯ ಇನ್ನೊಂದು ಲೇಖನದಲ್ಲಿ ಚರ್ಚಿಸಿದ್ದಾರೆ. ಕಲ್ಯಾಣ ಕರ್ನಾಟಕದ ಭೌಗೋಳಿಕ ವ್ಯಾಪ್ತಿಯನ್ನಿಟ್ಟುಕೊಂಡು ಬೀದರ ಜಿಲ್ಲೆಯ ಬಸವಕಲ್ಯಾಣವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡಿರುವ ಕಲ್ಯಾಣ ಚಾಲುಕ್ಯರಲ್ಲಿ ಪ್ರಸಿದ್ಧ ಅರಸ, ಆರನೇ ವಿಕ್ರಮಾದಿತ್ಯ. ಈ ದೇವಾಲಯಗಳನ್ನು ಅನೇಕ ಸಾಮಂತರು, ದಂಡನಾಯಕರು, ರಾಣಿಯರು, ಅರಸರು ನಿರ್ಮಿಸಿರುವ ಬಗ್ಗೆ ಶಾಸನಗಳ ವಿವರಣೆಗಳ ಮೂಲಕ ದಾಖಲಿಸಿದ್ದಾರೆ. ಇವುಗಳ ಹಿನ್ನೆಲೆಯಲ್ಲಿ ಆಚಾರ್ಯ, ಪಂಡಿತ, ಗಾಣಿಗ, ಹೂಗಾರ ಮುಂತಾದ ವರ್ಗಗಳ ಕುರಿತು ಅಲ್ಲಲ್ಲಿ ವಿವರಣೆಗಳು ಬಂದಿವೆ. ಈ ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆ-ಪುನಸ್ಕಾರಗಳನ್ನು, ಸಂಪ್ರದಾಯಗಳನ್ನು ತಿಳಿಸಿದ್ದಾರೆ.

'ನಮ್ಮ ಗ್ರಾಮ ನಮ್ಮ ಹೆಮ್ಮೆ' ಎಂಬ ಮಾತಿನಂತೆ ಅವರ ಹುಟ್ಟೂರು ಸಾಲೇ ಬೀರನಹಳ್ಳಿಯ ಗ್ರಾಮದ ಚರಿತ್ರೆ ಮತ್ತು ಸಂಸ್ಕೃತಿ ಕುರಿತ ಲೇಖನವು ಒಂದೂರಿನ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿದೆ. ಗ್ರಾಮಗಳ ಬಗ್ಗೆ ಸೂಕ್ಷ್ಮ ಅಧ್ಯಯನಗಳನ್ನು ಕೈಗೊಳ್ಳದೆ ನಮ್ಮ ನಾಡಿನ ವಿಶಾಲ ಚರಿತ್ರೆಯನ್ನು ಕಟ್ಟಲು ನಮಗೆ ಸಾಧ್ಯವಿಲ್ಲ. ಈ ಭಾಗದ ಪ್ರತಿಯೊಂದು ಗ್ರಾಮಗಳ ಹೆಸರಿನ ಹಿಂದೆ ಚಾರಿತ್ರಿಕ ಸಂಗತಿಗಳ ಅಡಗಿರುತ್ತವೆ.‌ ಗ್ರಾಮ ರಕ್ಷಣೆಗಾಗಿ ಮಡಿದ ವೀರರ ಹೋರಾಟವನ್ನು ಸ್ಮರಿಸುವ ಸುಮಾರು ಎಂಟು ವೀರಗಲ್ಲುಗಳನ್ನು ಈ ಲೇಖನದ ಮೂಲಕ ಸಂಶೋಧಕರು ಪತ್ತೆ ಹಚ್ಚಿರುವುದು ಶ್ಲಾಲಘನೀಯ ಕಾರ್ಯವೆನಿಸಿದೆ. ಈ ವೀರಗಲ್ಲುಗಳನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ, ಅವುಗಳ ಸುತ್ತಲು ಹುಟ್ಟಿಕೊಂಡಿರುವ ಆಚರಣೆಗಳನ್ನು, ಅವು ಹೇಗೆ ದೈವಸ್ವರೂಪವನ್ನು ಪಡೆದುಕೊಂಡವು ಎಂಬುದರ ಬಗ್ಗೆ ಮಾರ್ಮಿಕವಾಗಿ ಚರ್ಚಿಸುತ್ತಾ ಹೋಗುತ್ತಾರೆ. ಈ ಭಾಗದಲ್ಲಿ ಶಾಸನ ಆಧಾರಿತವಾಗಿರುವ ವೀರಗಲ್ಲುಗಳು ಹೆಚ್ಚಾಗಿ ಕಂಡುಬರುವುದಿಲ್ಲ. ಮಧ್ಯಕಾಲೀನ ಕರ್ನಾಟಕದಲ್ಲಿ ಊರ ರಕ್ಷಣೆಗಾಗಿ ನಿರ್ಮಿಸಿಕೊಂಡ ಅಗಸಿ ಬಾಗಿಲುಗಳು, ಹೂಡೆಗಳ ಕುರಿತು ಕೂಡ ಇಲ್ಲಿ ಚರ್ಚಿಸಿದ್ದಾರೆ. ಆದರೆ ನಮ್ಮಲ್ಲಿ ಗ್ರಾಮಗಳ ರಕ್ಷಣಾ ವಾಸ್ತುಶಿಲ್ಪಗಳ ಬಗ್ಗೆ ಹೆಚ್ಚು ಸಂಶೋಧನೆಗಳಾಗಿರುವುದು ಬಹಳ ಕಡಿಮೆ.

ಅರ್ಜುನವಾಡ ಶಾಸನ ಉಲ್ಲೇಖಿಸುವ ಹಾಲಬಸವಿದೇವ ನಾರಾಯಣಪುರದ ಹಾಲಬಸವಿದೇವನೇ ಎಂಬ ಶೀರ್ಷಿಕೆಯ ಇನ್ನೊಂದು ಲೇಖನದಲ್ಲಿ ೧೨ನೇ ಶತಮಾನದ ಚರಿತ್ರೆಯ ಸುತ್ತ ತಮ್ಮ ನೋಟವನ್ನು ತಿರುವಿ ಹಾಕಿದ್ದಾರೆ. ಶರಣರ ಸ್ಮಾರಕಗಳ ಕುರುಹುಗಳ ಐತಿಹಾಸಿಕತೆ ಬಗ್ಗೆ ನಾವು ಆರಂಭದಿಂದಲೂ ನಿರ್ಲಕ್ಷಿಸಿಕೊಂಡು ಬಂದಿದ್ದೇವೆ. ಎಷ್ಟೋ ಸ್ಥಳಗಳಲ್ಲಿರುವ ಶರಣ ಸ್ಮಾರಕಗಳು ಬೆಳಕಿಗೆ ಬಾರದೆ ಹೋಗಿವೆ. ಬಸವಕಲ್ಯಾಣದಿಂದ ನಾರಾಯಣಪುರಕ್ಕೆ ಹೋಗುವ ದಾರಿಯಲ್ಲಿ ಹಾಲಬಸವಿದೇವನ ಸ್ಮಾರಕವಿದೆ. ಇದನ್ನು ಈವರೆಗೆ ಹಾಲು ಮಾರುವ ಹೆಣ್ಣಿನ ಪುರಾಣ ಕಥೆಯೊಂದಿಗೆ ಮಾತ್ರ ನೋಡಲಾಗುತ್ತಿತ್ತು. ಆದರೆ ಅದಕ್ಕೊಂದು ಚಾರಿತ್ರಿಕ ದಾಖಲೆಯನ್ನು ಲೇಖಕರು ಈ ಲೇಖನದ ಮೂಲಕ ಒದಗಿಸಿದ್ದಾರೆ. ಇದು ಸಂಪೂರ್ಣವಾಗಿ ಹೊಸ ಶೋಧವೆನಿಸಿದೆ. ಅದು ಬಸವಣ್ಣನವರ ಸೋದರ ಸಂಬಂಧಿಯ ಮಗನ ಹೆಸರಿನಲ್ಲಿ ನಿರ್ಮಾಣವಾದ ಸ್ಮಾರಕ ಎಂಬುದನ್ನು ಲೇಖಕರು ಸಂಶೋಧಿಸಿದ್ದಾರೆ.

ನಮ್ಮಲ್ಲಿ 'ಶರಣರ ಚರಿತ್ರೆ ಸಾವಿನ ನಂತರ ನೋಡು' ಎಂಬ ಮಾತಿದೆ. ಶರಣರ ಅಜ್ಞಾತ ಸ್ಮಾರಕಗಳು ಎಂಬ ಲೇಖನದಲ್ಲಿ ಬೀದರ ಜಿಲ್ಲಾ ವ್ಯಾಪ್ತಿಯ ಅನೇಕ ಹೊಸ ಶರಣ ಸ್ಮಾರಕಗಳನ್ನು ದಾಖಲಿಸುತ್ತಾರೆ.‌ ಅವಗಳಲ್ಲಿ ಬೇಲೂರಿನ ಬಿಲ್ಲೇಶ ಬೊಮ್ಮಯ್ಯ, ಕಲ್ಯಾಣದ ಮಲ್ಲಿಕಾರ್ಜುನ ಪಿಂಡ, ಸಿದ್ದೇಶ್ವರ ಕಟ್ಟೆ, ಘಾಟಹಿಪ್ಪರಗಿಯ ಗವಿಗಳು, ಮುಂತಾದವುಗಳು ಬಹಳ ಪ್ರಮುಖವಾಗಿವೆ. ಈ ಸ್ಮಾರಕಗಳು ಅವಸಾನದ ಅಂಚಿನಲ್ಲಿರುವುದನ್ನು ಗುರುತಿಸುವ ಲೇಖಕರು, ಜನಪದರು ಅವುಗಳ ಸುತ್ತಲೂ ಬೇರೆ ಬೇರೆ ಕಥೆಗಳನ್ನು ಹೆಣದಿರುವ ಬಗ್ಗೆ ಗಮನ ಸೆಳೆಯುತ್ತಾರೆ.

ದಕ್ಷಿಣ ಭಾರತದ ಚರಿತ್ರೆಯಲ್ಲಿ ಧರ್ಮಗಳ ನಡುವಿನ ಸಂಘರ್ಷವನ್ನು ಈವರೆಗೂ ಚರಿತ್ರೆಯ ಬರವಣಿಗೆಯಲ್ಲಿ ಮುನ್ನೆಲೆಗೆ ತರಲಾಗಿದೆ. ಆದರೆ ಬಹುತೇಕ ರಾಜ್ಯಗಳು ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಹೋರಾಡಿವೆಯೇ ಹೊರತು ಧರ್ಮ ರಕ್ಷಣೆಗಾಗಿ ಅಲ್ಲ ಎಂಬುದನ್ನು ಇಲ್ಲಿನ ಬಹಮನಿ ಕಾಲದ ಧಾರ್ಮಿಕ ಪರಿಸರ ಎಂಬ ಲೇಖನ ದಾಖಲಿಸುತ್ತದೆ. ಕುಸುನೂರಿನ ಸಿದ್ದಪ್ಪ ಬಂದೇನವಾಜರಿಗೆ ಜಾಗವನ್ನು ನೀಡಿದ್ದು. ಸಾವಳಗಿ ಶಿವಲಿಂಗೇಶ್ವರ ಮತ್ತು ಬಂದೇ ನವಾಜರ ಭೇಟಿಯ ಸಂಧರ್ಭ, ಗಾಣಗಪುರದ ನರಸಿಂಹ ದತ್ತಪೀಠಕ್ಕೆ ಮುಸ್ಲಿಂ ರಾಜರು ಭಕ್ತರಾಗಿರುವುದನ್ನು ಇಲ್ಲಿ ವಿವರಿಸಲಾಗಿದೆ. ಗವಾನ ಮದ್ರಾಸದಲ್ಲಿ ವಚನಶಾಸ್ತ್ರ ಅಧ್ಯಯನ ನಡೆಯುತ್ತಿತ್ತು ಎಂಬುವುದು ಪೂರ್ಣ ಹೊಸ ವಿಷಯ. ಜನತೆಯ ನಡುವೆ ಸಹಿಷ್ಣುತೆ ಇಲ್ಲದಿದದ್ದರೆ ರಾಜಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂಬುದನ್ನು ಎಲ್ಲ ಅರಸರು ಚೆನ್ನಾಗಿ ಬಲ್ಲವರಾಗಿದ್ದರು ಎಂಬ ಅಂಶವನ್ನು ಈ ಲೇಖನ ವಿಷದವಾಗಿ ಚರ್ಚಿಸುತ್ತದೆ.

'ಕಿತಾಬ-ಎ-ನವರಸ' ಒಂದು ಸಾಂಸ್ಕೃತಿಕ ಅವಲೋಕನ ಎಂಬ ಲೇಖನ ಬಿಜಾಪುರದ ಆದಿಲ್ ಶಾಹಿಗಳ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ಸಂರಚನೆಯ ಜೊತೆಗೆ ಅರಸರ ರಾಜಕೀಯ ಮನೋಭೂಮಿಕೆಯನ್ನು ಅಭಿವ್ಯಕ್ತಿಸುತ್ತದೆ. ಮಧ್ಯಕಾಲಿನ ಇತಿಹಾಸದ ಪುಟಗಳಲ್ಲಿ ಅಜರಾಮರ ಎನಿಸಿಕೊಂಡ ಬಿಜಾಪುರದ ಸುಲ್ತಾನ ಎರಡನೇ ಇಬ್ರಾಹಿಂ ಅದಿಲ್ ಶಾಹನ ಸ್ವತಂತ್ರ ಸಮಾಜೋ - ಧಾರ್ಮಿಕ ವಿಚಾರಧಾರೆಗಳು ಹೇಗೆ ಒಂದು ಹೊಸ ಪರಂಪರೆಗೆ ನಾಂದಿ ಹಾಡಿತು ಎಂಬುದನ್ನು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಎರಡನೇ ಇಬ್ರಾಹಿಂ ಅದಿಲ್ ಶಾಹನ ವ್ಯಕ್ತಿತ್ವವನ್ನು ಈ ಲೇಖನದ ಮುಖಾಂತರ ನಾವು ಇಲ್ಲಿ ಕಾಣುತ್ತೇವೆ. ಈತನು ಹಿಂದೂ - ಮುಸ್ಲಿಂ ಧರ್ಮಗಳ ಸಾಂಸ್ಕೃತಿಕ ರಾಯಭಾರಿಯಂತೆ ಇಲ್ಲಿ ಬಿಂಬಿಸಲಾಗಿದೆ. ಇವನನ್ನು ಜಗದ್ಗುರು ಎಂದು ಸಮಕಾಲೀನ ದಾಖಲೆಗಳು ಬಣ್ಣಿಸುತ್ತವೆ. ಈತ ತನ್ನ ಕೃತಿಯನ್ನು 'ತಾಯಿ ಸರಸ್ವತಿ' ಈ ಇಬ್ರಾಹಿಮನ ಮೇಲೆ ನಿನ್ನ ಕೃಪೆ ಇರಲಿ ಎನ್ನುವಂತಹ ವಾಕ್ಯಗಳೊಂದಿಗೆ ರಚಿಸಿರುವುದು ಬಹಳ ವಿಶಿಷ್ಟವಾಗಿದೆ.

ಜಾತಿ ವ್ಯವಸ್ಥೆಯೇ ನಿರ್ಮೂಲನ ಸ್ಮಾರಕವಾಗಿ ಸುರಪುರದ ಸಪ್ಪಣ್ಣಪ್ಪನ ಬಾವಿ ಎಂಬ ಲೇಖನದ ವಿಷಯವಸ್ತು ಈವರೆಗೂ ಸಂಶೋಧನಾ ಬರವಣಿಗೆಗೆ ಸಿಗದ ವಿಷಯವಾಗಿದೆ.

ಶರಣರು, ಮಾನವರನ್ನು ಸಮಾನವಾಗಿ ಕಂಡರಲ್ಲದೆ, ಸಮಾಜದಲ್ಲಿನ ಮೇಲುಕೀಳು ಭಾವನೆಯನ್ನು ತೊಡೆದುಹಾಕುವ ಸರಳಮಾರ್ಗ ಬೋಧಿಸಿದರು; ಸ್ವತಃ ಅದನ್ನು ಅನುಸರಿಸಿದರು. ಯಾರು ಮೇಲಲ್ಲ ಯಾರೂ ಕೀಳಲ್ಲ. ಯಾವುದು ಅಪವಿತ್ರವಲ್ಲ, ಯಾವುದು ಮೈಲಿಗೆಯಲ್ಲ. ಇದೆಲ್ಲ ನಮ್ಮ ಮನಸ್ಸಿನ ಸ್ಥಿತಿಯೆಂದು ೧೬ನೇ ಶತಮಾನದ ಶರಣರ ಜೀವನಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ಸ್ಮರಿಸುತ್ತ ಶರಣರ ಮಹತ್ವವನ್ನು ತಿಳಿಸಿದ್ದಾರೆ.

- ಡಾ.ಬಸವರಾಜ ಬಾಗ