ಕೃಷಿಕರಿಗೆ ಪ್ರೋತ್ಸಾಹ ಧನ ನೀಡಲು ಮನವಿ

ಕೃಷಿಕರಿಗೆ ಪ್ರೋತ್ಸಾಹ ಧನ ನೀಡಲು ಮನವಿ

ಕೃಷಿಕರಿಗೆ ಪ್ರೋತ್ಸಾಹ ಧನ ನೀಡಲು ಮನವಿ

ಕಲಬುರಗಿ: ಬಸವ ಸಂಸ್ಕೃತಿಯ ಕುರಿತು ಜನರಿಗೆ ಅರಿವು ಮೂಡಿಸಲು ರಾಜ್ಯ ಮಟ್ಟದ ಅಭಿಯಾನವನ್ನು ಸೆಪ್ಟೆಂಬರ್-1 ರಿಂದ ಅಕ್ಟೋಬರ್-1 ರವರೆಗೆ ಹಮ್ಮಿಕೊಂಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಕಾಳಗಿ ತಾಲೂಕ ಘಟಕ ವತಿಯಿಂದ ಸಂತಸ ವ್ಯಕ್ತಪಡಿಸಿದರು.

  ಈ ಕುರಿತು ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಅವರು,ಬಸವ ತತ್ವದ ಮೂಲ ಬೇರುಗಳಾಗಿ ಕೆಲಸ ನಿರ್ವಹಿಸುತ್ತಿರುವ ನಂದಿ ಕೃಷಿಕರು ಉಳಿದರೆ ಮಾತ್ರ ಬಸವ ಸಂಸ್ಕೃತಿ ಉಳಿಯಲು ಸಾಧ್ಯ ಎಂಬ ವಿಚಾರ ಇಂದಿನ ವೈಜ್ಞಾನಿಕ ಆವಿಷ್ಕಾರಗಳಿಂದ ಸ್ಪಷ್ಟವಾಗಿ ತಿಳಿಯುತ್ತಿರುವುದರಿಂದ ಜೋಡೆತ್ತಿನ ಕೃಷಿಕರು ಹಾಗೂ ಕೃಷಿ ಪದವೀಧರರು ಒಗ್ಗೂಡಿ ನಂದಿ ಕೃಷಿಕರ ಪುನಶ್ವೇತನದ ಉದ್ದೇಶದಿಂದ 'ನಂದಿ ಕೂಗು' ಅಭಿಯಾನ ಪ್ರಾರಂಭಿಸಿ ನಂದಿ ಸಂತತಿ ಹೆಚ್ಚಿಸುವ ಕುರಿತು ಹಲವಾರು ವೈಜ್ಞಾನಿಕ ಚಿಂತನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಇದರೊಂದಿಗೆ ಜೋಡೆತ್ತಿನ ಕೃಷಿಕರ ಶ್ರಮಕ್ಕೆ ಬೆಲೆ ನೀಡಿ ಪ್ರತಿ ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು ರೂ. 11000/- ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದು ನಂದಿ ಸಂಪತ್ತು ರೈತರ ಮನೆಯಲ್ಲಿ ಉಳಿಯುವಂತೆ ಮಾಡಲು ಜೋಡೆತ್ತಿನ ಕೃಷಿಕರ ಸಂಘಟನೆಯ ವತಿಯಿಂದ ಒಂದು ವರ್ಷದ ಹಿಂದೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರೂ ಕೂಡ ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತಿರುವುದಿಲ್ಲ ಎಂದು ಅವರು ಆರೋಪಿಸಿದರು.

                 ಬಸವ ತತ್ವದ ವೈಜ್ಞಾನಿಕ ವಿಚಾರಗಳ ಕುರಿತು ಜನಜಾಗೃತಿ ಮೂಡಿಸಲು ಅಗಸ್ಟ 23 ರಿಂದ ವಿಜಯಪುರದ ಜ್ಞಾನ ಯೋಗಾಶ್ರಮದಿಂದ ಬೆಂಗಳೂರಿನ ಬಸವನ ಗುಡಿಯಲ್ಲಿರುವ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿ ಬಸವ ಸಂಸ್ಕೃತಿ ಅಭಿಯಾನದ ಸಂದರ್ಭದಲ್ಲಿ ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳು ಎಂದು ಗುರುತಿಸಿ ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಯ ಕುರಿತು ಘೋಷಣೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

                  ಜೋಡೆತ್ತಿನ ಕೃಷಿಕರ ಬೇಡಿಕೆಯು ನ್ಯಾಯ ಸಮ್ಮತವಾಗಿರುವುದರಿಂದ ನಾವು ಅವರ ಬೇಡಿಕೆಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಜವಾಬ್ದಾರಿಯಾಗಿದೆ. ಜೋಡೆತ್ತಿನ ಕೃಷಿಕರ ಕೋರಿಕೆಯಂತೆ, ಬಸವ ಸಂಸ್ಕೃತಿ ಅಭಿಯಾನದ ಸಂದರ್ಭದಲ್ಲಿ ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳು ಎಂದು ಗುರುತಿಸಿ ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರುವ ಕುರಿತು ಘೋಷಣೆ ಮಾಡಿ, ಇಲ್ಲವಾದರೆ, ಜೋಡೆತ್ತಿನ ಕೃಷಿಕರು ಬಸವ ತತ್ವದ ಮೂಲ ಬೇರುಗಳು ಅಲ್ಲವೆಂದು ತಿಳಿಸಿ ಅಧಿಕೃತ ಪತ್ರವನ್ನು ನೀಡಬೇಕೆಂದು ಅವರು ಕೋರಿದ್ದಾರೆ.

 ತಮ್ಮಿಂದ ಯಾವುದೇ ರೀತಿಯ ಸ್ಪಂದನೆ ಬರದೇ ಇದ್ದರೆ, ಜೋಡೆತ್ತಿನ ಕೃಷಿಕರ ಸಂಘಗಳು ತೆಗೆದುಕೊಳ್ಳುವ ಮುಂದಿನ ನಿರ್ಧಾರಕ್ಕೆ ನಾವು ಬೆಂಬಲವಾಗಿ ನಿಲ್ಲುವುದು ಅನಿವಾರ್ಯವಾಗುವುದು ಎಂಬ ವಿಷಯವನ್ನು ತಮ್ಮ ಗಮನಕ್ಕೆ ತರಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಬಯಸುತ್ತದೆ ಎಂದು ಅವರು ಮನವಿ ಮಾಡಿಕೊಂಡರು. 

             ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾಳಗಿ ತಾಲೂಕ ಘಟಕದ ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್,ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ್ ಗೋಣಗಿ, ಭೀಮರಾವ ಮಲಘಾಣ ಕಾಳಗಿ,ವೀರಣ್ಣ ಸೀಗಿ ರಟಕಲ್, ಸುಂದರ ಡಿ.ಸಾಗರ,ನಿಂಗಪ್ಪಾ ನಾಮದಾರ ಮಲಘಾಣ, ಈರಣ್ಣಾ ಸಾಗರ‌ ಮಂಗಲಗಿ,ಚಂದ್ರಶೇಖರ ಕಲ್ಲ‌ ಮಂಗಲಗಿ,ಗುರುನಾಥ ಎಸ್‌. ಹೊಸಮನಿ,ಪಿಎಸಿಎಸ್ ನಿರ್ದೇಶಕರಾದ ಶಿವಲಿಂಗಪ್ಪ ಬಿ.ಸುಲಪೇಟ,ಶಿವಲಿಂಗಪ್ಪ ಹಡಪದ,ದೇವಿಂದ್ರಪ್ಪ ಎಸ್ ನರಬೋಳ ಸೇರಿದಂತೆ ಇನ್ನಿತರರು ಇದ್ದರು.