ಬೆಳೆನಷ್ಟ: ಎಕರೆಗೆ 20 ಸಾವಿರ ರೂ.ಪರಿಹಾರಕ್ಕೆ ಆಗ್ರಹ

ಬೆಳೆನಷ್ಟ: ಎಕರೆಗೆ 20 ಸಾವಿರ ರೂ.ಪರಿಹಾರಕ್ಕೆ ಆಗ್ರಹ
ಕಲಬುರಗಿ: ಅತಿವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡ ರೈತರಿಗೆ ಸರಕಾರ ಪ್ರತಿ ಎಕರೆಗೆ 20 ಸಾವಿರ ರೂ.ಪರಿಹಾರ ನೀಡುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸುಂದರ ಡಿ.ಸಾಗರ ನೇತೃತ್ವದಲ್ಲಿ ಕಾಳಗಿ ಗ್ರೇಡ್ ೨ ತಹಶೀಲ್ದಾರ ಮುಖಾಂತರ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಅವರು,ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ರೈತರ ಕೋಟ್ಯಂತರ ರೂ. ಫಸಲು ನಷ್ಟವಾಗಿದೆ. ಬೆಳೆ ವಿಮೆ ಪರಿಹಾರ ಇನ್ನೂ ಪಾವತಿಯಾಗಿಲ್ಲ. ಹಾಲಿನ ದರವನ್ನು ಇಳಿಸಿದ್ದರಿಂದ ಹಾಲು ಉತ್ಪಾದಕರು ಕಂಗಾಲಾಗಿದ್ದಾರೆ. ಮುಸುಕಿನ ಜೋಳದ ಬೆಲೆ ಕುಸಿದು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ರೈತರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ಸರಕಾರ, ಜಿಲ್ಲಾಡಳಿತ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು.
ಅಕಾಲಿಕ ಮಳೆಯಿಂದ ಜಿಲ್ಲೆಯ ರೈತರು ಬೆಳೆದಿದ್ದ ತೊಗರಿ ಫಸಲು ನಷ್ಟವಾಗಿದೆ. ತರಕಾರಿ ಫಸಲು ನಾಶವಾಗಿದೆ. ಇವೆಲ್ಲವುಗಳ ನಷ್ಟವನ್ನು ಸರಕಾರ ತುಂಬಿಕೊಡಬೇಕು. ಹವಾಮಾನ ಹೊಂದಿಕೆಗೆ ಅನುಗುಣವಾಗಿ ಅಲ್ಪಾವಧಿ ಬೆಳೆ ಬೆಳೆಯಲು ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಒದಗಿಸಬೇಕು. ಕೃಷಿ ಉತ್ಪನ್ನ ಮಾರಾಟದಲ್ಲಿ ದಲ್ಲಾಳಿಗಳ ಹಸ್ತಕ್ಷೇಪ ತಡೆಯಲು ಜಿಲ್ಲಾಧಿಕಾರಿಗಳು ರೈತರ ಮತ್ತು ಅಧಿಕಾರಿಗಳ ಸಭೆ ಕರೆದು ಚರ್ಚಿಸಬೇಕು ಎಂದು ಅವರು ಒತ್ತಾಯಿಸಿದರು.