ಸಂತೃಪ್ತ ಪ್ರಾಧ್ಯಾಪಕ : ಡಾ. ರೋಳೆಕರ ನಾರಾಯಣ ಡಿ.

ಸಂತೃಪ್ತ ಪ್ರಾಧ್ಯಾಪಕ : ಡಾ. ರೋಳೆಕರ ನಾರಾಯಣ ಡಿ.
ಸಿಕ್ಕಷ್ಟರಲ್ಲೇ ತೃಪ್ತರಾಗುವ ದ್ವಂದ್ವಾತೀತರಾದ, ಮಾತ್ಸರ್ಯವನ್ನರಿಯದ, ಸೋಲುಗೆಲುವುಗಳನ್ನು ಸಮಾನಾಗಿ ಸ್ವೀಕರಿಸಬಲ್ಲ ಜ್ಞಾನಿಯೋಗಿಗಳು, ಕರ್ಮದಲ್ಲಿ ತೊಡಗಿದರೂ ಬಂಧನದಲ್ಲಿ ಸಿಲುಕಿರುವುದಿಲ್ಲ.
(ನೀತಿ ವಾಕ್ಯ) ಜೀವನದ ವೃತ್ತಿ ಮತ್ತು ಸಾಹಿತ್ಯ- ಸಾಂಸ್ಕೃತಿಕ ಲೋಕದಲ್ಲಿ ಗುರುತಿಸಿಕೊಂಡ ಡಾ. ರೋಳೆಕರ ನಾರಾಯಣ ಡಿ. ಅವರು ಪ್ರತಿಭಾವಂತ, ಸೂಕ್ಷ್ಮ ಸಂವೇದನೆಯ ಪ್ರಾಧ್ಯಾಪಕರು, ಲೇಖಕರು ಮತ್ತು
ಮನುಷ್ಯಪರ ಜೀವಿ.! ಅವರೊಬ್ಬ ನಿಸ್ವಾರ್ಥ ಕನ್ನಡ ಸೇವಕರು. ಇಂದಿನ ವೃತ್ತಿ- ಸಾಹಿತ್ಯ- ಸಮುದಾಯದ ರಾಗದ್ಷೇಷಗಳೆ ತುಂಬಿ ತುಳುಕಿರುವಾಗ ಇದರಿಂದ ದೂರವಿದ್ದು ತನ್ನ ವೃತ್ತಿ ಕಾಯಕ, ಸಂಸಾರ, ಬರಹದ ಜೊತೆಗೆ ಯಾವ ಕಪ್ಪು ಚುಕ್ಕೆ ಇಲ್ಲದೇ ತಮ್ಮ ಸೇವಾವಯೋ ನಿವೃತ್ತಿ ಪೊರೈಸಿದ್ದು ಈ ಮನುಕುಲ, ನಾಡಿಗೊಂದು ಪ್ರೇರಣೆ.
ಕಲ್ಯಾಣದಲ್ಲಿ ಅರಳಿದ ಪ್ರತಿಭೆ: "ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ
ಅಸಂಖ್ಯಾತ ಭಕ್ತಗಣಂಗಳು"
ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೆ? ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ? ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಮಹಿಮೆಯ ನೋಡಾ ಸಿದ್ಧರಾಮಯ್ಯಾ. ಎಂಬ ಅಲ್ಲಮಪ್ರಭುವಿನ ವಚನದಂತೆ
ಡಾ. ರೋಳೆಕರ ನಾರಾಯಣ ಡಿ. ಅವರು ಇದೇ ಶರಣರ ನಾಡಿನಲ್ಲಿ ಹುಟ್ಟಿ ಬೆಳೆದ ಹಿರಿಯ ಚೇತನ.
ಹುಟ್ಟಿನಿಂದ ಊರ ಬೆಳೆಗಿದವರು :
ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಿರಗುಡಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಕಮಲ. ದನ, ಕರು, ಕುರಿಗಳ ಮಧ್ಯ ಬಡತನದ ರೈತಾಪಿ ಕುಟುಂಬದಲ್ಲಿ ಜೀವನ ಸಾಗಿಸುವ ದೇವರಾಯ ಮತ್ತು ಶಿವಮ್ಮರ ಮಗನಾಗಿ ದಿನಾಂಕ : ೦೨-೦೮-೧೯೬೫ ರಂದು ಜನಿಸಿದರು. ಇವರ ತಂದೆ ತಾಯಿ ಮತ್ತು ಕುಟುಂಬ ಸದಸ್ಯರು ಊರಿನ ಯಾರ ಉಸಾಬರಿಗೂ ಹೋಗದೆ ನಿಷ್ಠೆ ಶ್ರದ್ಧೆಯಿಂದ ತಮ್ಮ ಕಾಯಕದಲ್ಲಿ ನಿರತರಾದವರು. ತಂದೆ ತಾಯಿಯ ಗುಣ ಹೊಂದಿದ ನಾರಾಯಣ ಅವರು ಬಾಲ್ಯದಲ್ಲಿ ಓದಬೇಕೆಂಬ ಆಸೆ ಮೂಡಿತ್ತು. ಅದಕ್ಕೆ ಪೂರಕವಾಗಿ ತಂದೆ ತಾಯಿ ಮಗನನ್ನು ಓದಿಬೇಕೆಂಬ ಉತ್ಕಟತೆಯೂ ಇತ್ತು. ಎರಡು ಸೇರಿ ಹಾಲು- ಜೇನು ಬೆರೆತಂತೆ; ರೋಗಿ ಬಯಸಿದ್ಧು ಹಾಲು ಅನ್ನ, ವೈದ್ಯರು ಹೇಳಿದ್ದು ಅದೇ ಎಂಬಂತೆ ಅಕ್ಷರ ಕಲಿಕೆಗೆ ಹೆಜ್ಜೆಯನ್ನು ಇಟ್ಟರು.
ಶಿಕ್ಷಣದ ರಸ ಹೀರಿದ ಜ್ಞಾನದಾಹಿ:
ಪ್ರಾಥಮಿಕ ಶಿಕ್ಷಣವನ್ನು ನಿರಗುಡಿ ತಮ್ಮ ಊರಲ್ಲಿ ಅಕ್ಷರಾಭ್ಯಾಸ ಪೋರೈಸಿದರು. ಮನೆಯೇ ಅವರಿಗೆ ಮೊದಲ ಪಾಠ ಶಾಲೆ ಆಗಿತ್ತು. ತಾಯಿ ಹಾಡುವ ಜಾನಪದ ಹಾಡುಗಳು ಇವರ ಮೇಲೆ ಪ್ರಭಾವ ಬೀರಿವೆ. ನಂತರ ಕೌಡಿಯಾಳ ಮತ್ತು ಸಸ್ತಾಪುರಗಳಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಣ ಪಡೆದುಕೊಂಡರು. ಪ್ರೌಢ ಶಿಕ್ಷಣವನ್ನು ಜೆ.ಬಿ.ಕೆ ಹೈಸ್ಕೂಲ್ ಬಸವಕಲ್ಯಾಣದಲ್ಲಿ ಪಡೆದುಕೊಂಡರು. ಕಾಲೇಜು ಶಿಕ್ಷಣವನ್ನು ಎಸ್.ಎಸ್.ಕೆ.ಬಿ ಕಾಲೇಜು ಬಸವಕಲ್ಯಾಣದಲ್ಲಿ ಪೂರೈಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಯನ್ನು ೧೯೮೯ರಲ್ಲಿ ಪಡೆದುಕೊಂಡರು. ಸಂಶೋಧನೆ ಮಾಡಬೇಕೆಂಬ ಕನಸು ಅವರಲ್ಲಿತ್ತು. ಹೀಗಾಗಿ ರೋಳೆಕರರು ಹೆಸರಾಂತ ಸಾಹಿತಿ, ಪ್ರಗತಿ ಶೀಲ ಕಾಲ ಘಟ್ಟದ ಕಾದಂಬರಿಕಾರ "ಚದುರಂಗರ ವೈಶಾಖ ಒಂದು ಅಧ್ಯಯನ" ಎಸ್ ವಿಷಯದ ಮೇಲೆ ಅಧ್ಯಯನ ನಡೆಸಿ ೧೯೯೦ರಲ್ಲಿ ಎಂ.ಫಿಲ್ ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದುಕೊಂಡರು. ದಾಸೋಹ ಮತ್ತು ಸರ್ವೋದಯ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಪಿಹೆಚ್.ಡಿ. ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದಿಂದ ೧೯೯೯ ರಲ್ಲಿ ಹಿರಿಯ ಕನ್ನಡ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಶಶಿಕಲಾ ಮೊಳ್ದಿ ಅವರ ಮಾರ್ಗದರ್ಶನದಲ್ಲಿ ಪಡೆದಿದ್ದಾರೆ. ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಕಲಬುರಗಿಯಿಂದ ಬಿ.ಈಡಿ ಪದವಿಯನ್ನೂ ಪಡೆದಿದ್ದಾರೆ. ಇವರು ಸದಾ ಅಧ್ಯಯನ ಶೀಲರು. ಯಾವುದೇ ಹರಟೆ, ಬೇರೆ ಬೇರೆ ವಿಷಯದಲ್ಲಿ ಮೂಗುತೂರಿಸದೇ ತಮ್ಮ ಸರಳ ವ್ಯಕ್ತಿತ್ವದ ಸೌಜನ್ಯತೆಯಿಂದ ಗುರುಗಳಲ್ಲಿ ಭಯ, ಭಕ್ತಿ, ಪ್ರೇಮ ಹೊಂದಿ; ಎಲ್ಲರ ಜೊತೆ ಅನ್ಯೋನ್ಯತೆ ಹೊಂದಿ ತಮ್ಮ ಉನ್ನತ ಶಿಕ್ಷಣ ಪಡೆದುಕೊಂಡರು. ಎಂ.ಎ., ಬಿಇಡಿ, ಎಂ.ಫಿಲ್., ಪಿಎಚ್.ಡಿ ಪದವೀಧರರು. ನಾರಾಯಣ ದೇವರಾಯ ರೋಳೆಕರ ಅವರ ಪೂರ್ಣ ಹೆಸರು.
ವೃತ್ತಿಯ ಜೀವನದ ಸಾರ್ಥಕ ಪಯಣ :
ಶ್ರೀಯುತರು ಸರಕಾರಿ ಮಹಾವಿದ್ಯಾಲಯ ಕಲಬುರಗಿಯಲ್ಲಿ ೧೯೯೦ ರಿಂದ ೧೯೯೨ ರವರೆಗೆ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದಿಂದ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ೧೯೯೨ ರಲ್ಲಿ ಆಯ್ಕೆಗೊಂಡರು. ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿಯಲ್ಲಿ ೧೯೯೨ರ ಡಿಸೆಂಬರನಲ್ಲಿ ನೇಮಕಗೊಂಡರು. ೧೯೯೮ ರಲ್ಲಿ ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಫಜಲಪುರಕ್ಕೆ ವರ್ಗಾವಣೆ ಹೊಂದಿದರು. ೧೯೯೯ ರಿಂದ ೨೦೦೪ ರವರೆಗೆ ಹಿರಿಯ ಶ್ರೇಣಿ ಉಪನ್ಯಾಸಕರಾಗಿ, ೨೦೦೪ ರಿಂದ ೨೦೦೭ ರವರೆಗೆ ಆಯ್ಕೆ ಶ್ರೇಣಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೭ ರಿಂದ ಸಹ ಪ್ರಾಧ್ಯಾಪಕರಾಗಿ. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೦೨ರಲ್ಲಿ ಮತ್ತು ನವೆಂಬರ ೨೦೧೦ ರಿಂದ ಜೂನ್ ೨೦೧೪ರ ವರೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಫಜಲಪುರದಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ೨೦೧೩ ರಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪಿಹೆಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೆ ೧೩ ಜನ ಸಂಶೋಧನಾ ವಿದ್ಯಾರ್ಥಿಗಳು
ಪಿಹೆಚ್.ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ೨೦೧೭ ರಿಂದ ಕಲಬುರಗಿಯ ಸ್ವಾಯತ್ತ ಸರಕಾರಿ ಮಹಾವಿದ್ಯಾಲಯದ ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಕಳೆದ ೩೨ ವರ್ಷಗಳಿಂದ ಯಾದಗಿರಿ, ಅಫಜಲಪುರ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ವಿದ್ಯಾರ್ಥಿ ಜೀವನದಿಂದಲೂ ಪ್ರಾಮಾಣಿಕ ಪರಿಶ್ರಮ, ಪಾರದರ್ಶಕ ಸ್ವಭಾವ, ವಿನಮ್ರತೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. 'ಶಿಸ್ತು, ಸರಳತೆ, ಸೌಜನ್ಯತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ತಮ್ಮ ನಿರಂತರ ಅಧ್ಯಯನ, ಸಮರ್ಪಿತ ಅಧ್ಯಾಪನ ಮತ್ತು ಪ್ರಾಂಜಲ ಮಾರ್ಗದರ್ಶನಗಳಿಂದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದಾರೆ. ಇವರು ಇದೇ ೩೧-೦೮-೨೦೨೫ ರಂದು ಸೇವಾ ವಯೋನಿವೃತ್ತಿ ಹೊಂದಿದ್ದಾರೆ.
ಲೇಖಕರಾಗಿ-ಸಂಪಾದಕರಾಗಿ :
ಸದರಿಯವರು ಕನ್ನಡ ಸಾಹಿತ್ಯ-ಸಂಸ್ಕೃತಿ ಕುರಿತು ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಹಳಗನ್ನಡ, ವಚನ ಸಾಹಿತ್ಯ, ದಾಸ ಸಾಹಿತ್ಯ, ಹೊಸಗನ್ನಡ ಸಾಹಿತ್ಯ, ಗಾಂಧಿ-ಫುಲೆ-ಅಂಬೇಡ್ಕರ ಸಾಹಿತ್ಯ ಬುಡಕಟ್ಟು ಸಾಹಿತ್ಯ ಮತ್ತು ಅನುವಾದ ಸಾಹಿತ್ಯ ಇವರ ಆಸಕ್ತಿಯ ವಿಷಯಗಳು. 'ದಾಸೋಹ ಮತ್ತು ಸರ್ವೋದಯ' ಕುರಿತಾದ ಇವರ ಪ್ರೌಢ ಮಹಾ ಪ್ರಬಂಧ, ಮಹಾದಾಸೋಹ ಸೂತ್ರಗಳು, ಚದುರಂಗರ ವೈಶಾಖ ಒದು ಅಧ್ಯಯನ ಮತ್ತಿತರ ಹತ್ತೆಂಟು ಕೃತಿಗಳು ಸಾರಸ್ವತ ಲೋಕದಲ್ಲಿ ಜನಮನ್ನಣೆ ಪಡೆದಿವೆ. ಕಥಾ ಕುಸುಮ, ಕಥಾ ಸಂಗ್ರಹ, ಹಳಗನ್ನಡ ಕಾವ್ಯ ಸಂಗ್ರಹ-ವಚನ-ಕೀರ್ತನ ಸಂಗ್ರಹ, ಕಲಾ ಕನ್ನಡ, ವಿಜ್ಞಾನ ಕನ್ನಡ ಇವು ಇವರ ಸಂಪಾದಿತ ಕೃತಿಗಳಾಗಿವೆ. ಡಾ.ಸುರೇಶ ಜಾಧವ ಅವರ ಅಭಿನಂದನ ಗ್ರಂಥ ಸಾಹಿತ್ಯ ಮಂಥನದ ಪ್ರಧಾನ ಸಂಪಾದಕರಾಗಿ ಮಹತ್ವದ ಕಾರ್ಯ ಮಾಡಿದ್ದಾರೆ. ಈ ಸಂಪಾದನೆಗಳು ಕೃತಿಗಳಿಗೆ ಬರೆದ ಪ್ರಸ್ತಾವನೆಗಳು ಮೌಲಿಕ. ಇವರೊಬ್ಬ ಸೃಜನಶೀಲ ಸೃಜನೇತರ ಲೇಖಕರು.
ಪ್ರಬಂಧ ಮಂಡನೆ- ಸಮೂಹ ಮಾಧ್ಯಮಗಳಲ್ಲಿ:
ಇವರು ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅನೇಕ ವಿಚಾರ ಗೋಷ್ಠಿ,ಸಮ್ಮೇಳನಗಳಲ್ಲಿ ಪ್ರಬಂಧ, ಆಶಯ ನುಡಿ, ಉಪನ್ಯಾಸ, ಅಧ್ಯಕ್ಷತೆ ವಹಿಸಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವ, ಜಿಲ್ಲಾ ಆಧುನಿಕ ಸಮ್ಮೇಳನ, ಶರಣ ಸಮ್ಮೇಳನ, ಜಾನಪದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಆಕಾಶವಾಣಿ. ದೂರದರ್ಶನಗಳಲ್ಲಿ ಸಾಹಿತ್ಯ, ವಿಮರ್ಶೆ, ಚಿಂತನೆಗೆ ಸಂಬಂಧಿಸಿದ ಅನೇಕ ಬರಹಗಳು ಪ್ರಸಾರಗೊಂಡಿವೆ.
ಪಠ್ಯ ರಚನೆ- ರಾಜ್ಯ- ಹೊರ ರಾಜ್ಯ:
ಶ್ರೀಯುತರು ಮಹಾರಾಷ್ಟ್ರ ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಳಿಯ ಹನ್ನೊಂದು ಮತ್ತು ಹನ್ನೆರಡನೆಯ ತರಗತಿಯ ಕನ್ನಡ ಪಠ್ಯಪುಸ್ತಕದ ಸಂಪಾದಕ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸೊಲ್ಲಾಪುರ ವಿಶ್ವವಿದ್ಯಾಲಯದ ಕನ್ನಡ ಸ್ನಾತಕ ಮತ್ತು ಸ್ನಾತಕೋತ್ತರ ಅಭ್ಯಾಸ ಸದಸ್ಯರಾಗಿಯೂ, ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಾಲೇಜಿನ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸ್ನಾತಕ ಮತ್ತು ಸ್ನಾತಕೋತ್ತರ ಅಭ್ಯಾಸ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವುದು ಗಮನಾರ್ಹ.
ಸಂದ ಪ್ರಶಸ್ತಿ ಗೌರವಗಳು :
ವಚನ ಸಾಹಿತ್ಯ ಸೇವೆಗಾಗಿ ಶ್ರೀ ಮುರುಘರಾಜೇಂದ್ರ ಮಠ ಚಿತ್ರದುರ್ಗದಿಂದ ಇವರು ಶಿಕ್ಷಕರತ್ನ ಪ್ರಶಸ್ತಿ, ಶ್ರೀ ಯಲ್ಲಾಲಿಂಗೇಶ್ವರ ಪ್ರಶಸ್ತಿ, ಮೊದಲಾದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.
ಸತಿಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು:
ಡಾ. ರೋಳೆಕರ ಅವರು ಕಲ್ಯಾಣ ನಾಡಿನವರು. ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಶರಣರ ನಾಡು, ಧರಿನಾಡಿನ ಹುಮನಾಬಾದ ತಾಲೂಕಿನ ನಂದಗಾಂವದ ತಹಶಿಲ್ದಾರರಾದ ಶ್ರೀ ಲಕ್ಷಮಣರಾವ ಮತ್ತು ನಿರ್ಮಲಾ ದೇವಿ ಅವರ ಮಗಳಾದ ಡಾ. ಸಾರಿಕಾದೇವಿ ಕಾಳಗಿಯವರನ್ನು ವಿವಾಹವಾದರು. ಇಬ್ನರು ಪಿಎಚ್.ಡಿ ಪದವಿಧರರು. ಸಂಸಾರ- ದಾಂಪತ್ಯ ಜೀವನ ಯಶಸ್ವಿಯಾಗಿ ನಡೆಸಿ; ಇಬ್ಬರಿಗೆ ಇಬ್ಬರೂ ಗಂಡು ಮಕ್ಕಳು
ಸತಿಪತಿಗಳೊಂದಾದ ಭಕ್ತಿ
ಹಿತವಾಗಿಪ್ಪುದು ಶಿವಂಗೆ .
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ ! ರಾಮನಾಥ
ಎನ್ಮು ವಚನ ದಂತೆ ಒಂದಾದ ಸತಿ-ಪತಿಗಳು.
ಇಬ್ಬರು ಪ್ರಾಧ್ಯಾಪಕರು. ಸಾಹಿತ್ಯ ಸೇವೆಯಲ್ಲಿ ನಿರತರು.
ಇಬ್ಬರು ಶರಣ ಸಾಹಿತ್ಯ ಜಾನಪದ ಸಾಹಿತ್ಯ, ತತ್ವಪದ ಸಾಹಿತ್ಯ, ಆಧುನಿಕ ಸಾಹಿತ್ಯದ ಮೇಲೆ ಸದಾ ಹಿಡಿತ ಸಾಧಿಸಿದ ಸಾಧಕರು. ಮನೆಗೆದ್ದು; ಮಾರುಗೆದ್ಧವರು. ಕನ್ನಡ ಸೇವಕರು, ಕನ್ನಡ ಪ್ರಾಧ್ಯಾಪಕರು, ಸತಿ-ಪತಿಗಳು ಒಂದಾದ ಆದರ್ಶ ದಾಂಪತ್ಯ ಜೀವಿಗಳು.ಇಬ್ಬರೂ ಸತಿ- ಪತಿ ಅರಿತವರು.
ಸತಿಯ ಗುಣವ ಪತಿ ನೋಡಬೇಕಲ್ಲದೆ
ಪತಿಯ ಗುಣವ ಸತಿ ನೋಡಬಹುದೆ ಎಂಬರು.
ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೇ ಪತಿಯಿಂದ ಬಂದ ಸೋಂಕು ಸತಿಗೆ ಕೇಡಲ್ಲವೇ ಒಂದಂಗದ ಕಣ್ಣ ಉಭಯದಲ್ಲಿ. ಒಂದು ಹಿಂಗಲಿಕ್ಕೆ ಭಂಗವಾರಿಗೆಂಬುದ ತಿಳಿದಲ್ಲಿಯೆ ಕಾಲಾಂತರ ಭೀಮೇಶ್ವರ ಲಿಂಗಕ್ಕೆ ಸಲೆಸಂದಿತ್ತು.ಡಕ್ಕೆಯ ಬೊಮ್ಮಣ್ಣನ ವಚನ ದಂತೆ
ಬದುಕಿ; ಬದುಕುತ್ತಿರುವ ಲಿಂಗ ಭೇದ ಅಳಿಸಿದವರು.
ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯೂಯಿತ್ತು
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ ಎನ್ನುವ ಬಸವಣ್ಣನವರ ಹಾಗೆ ಅಪೂರ್ವ ಸಾಧಕರು ಡಾ.ರೋಳೆಕರರು.!
"ಶರಣಾಗುವ ಮೂಲಕ, ಪ್ರಶ್ನಿಸುವ ಮೂಲಕ ಹಾಗೂ ಸೇವೆ ಮಾಡುವ ಮೂಲಕ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬಂತೆ ಮೂರು ಹಂತಗಳನ್ನು ದಾಟಿ ಯಶಸ್ವಿಯಾಗಿ ಬಂದ ಡಾ.ನಾರಾಯಣ ರೋಳೆಕರ
ಅವರು ನಿವೃತ್ತಿಯ ನಂತರ ಸಾಹಿತ್ಯ, ಸಮಾಜ, ಸಾಂಸ್ಕೃತಿಕ ಲೋಕದಲ್ಲಿ ತಮ್ಮನ್ನು ತೊಡಗಿಕೊಳ್ಳಲೆಂದು ಹಾರೈಸುವೆ.
ಡಾ. ಗವಿಸಿದ್ಧಪ್ಪ ಪಾಟೀಲ,ಸಂಸ್ಕೃತಿ ಚಿಂತಕರು, ಕಲಬುರಗಿ
ವರದಿ ಡಾ.ಅವಿನಾಶ್, ಎಸ್. ದೇವನೂರು.