ಪವಿತ್ರ ರಂಜಾನ್ ಹಬ್ಬದ ಸಂದರ್ಭ; ಆಹಾರ ಕಿಟ್ ವಿತರಣೆ

ಪವಿತ್ರ ರಂಜಾನ್ ಹಬ್ಬದ ಸಂದರ್ಭ; ಆಹಾರ ಕಿಟ್ ವಿತರಣೆ
ಕಲಬುರಗಿ: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಆಹಾರ ಕಿಟ್‌ಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅವರ ನೇತೃತ್ವದಲ್ಲಿ ಮೇಯರ್ ಯಲ್ಲಪ್ಪ ನಾಯಕೋಡಿ ಅವರು ಮುಸ್ಲಿಂ ಸಮುದಾಯದ ಬಾಂಧವರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಕಾಂಗ್ರೆಸ್ ಮುಖಂಡ ರವಿ ರಾಠೋಡ, ನಿವೃತ್ತ ಅಧಿಕಾರಿ ಈರಣ್ಣ ಪಟೇದಾರ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಭಿತ್ರಿ, ನ್ಯಾಯವಾದಿ ಚಂದ್ರಶೇಖರ ಪಾಟೀಲ, ಬಾಬುಮಿಯ್ಯಾ ಪರಿಠ, ಅಮೃತ ಪಾಟೀಲ, ರವಿ ಒಂಟಿ, ಲಕ್ಷ್ಮೀ, ಭಾಗ್ಯ, ಶ್ರೀದೇವಿ, ರೇಷ್ಮಾ, ರಿಜವಾನ ಶೇಖ, ರಿಜಿಯಾ ಬೇಗಂ, ಗನಿ, ರಾಘವೇಂದ್ರ ಕುಲಕರ್ಣಿ, ವೆಂಕಟೇಶ, ಮಹೇಶ ಸೂರ್ಯವಂಶಿ, ಅಶೋಕ ರೆಡ್ಡಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದ ಪ್ರಮುಖ ಉದ್ದೇಶದ ಕುರಿತು ಮಾತನಾಡಿದ ಜಗನ್ನಾಥ ಸೂರ್ಯವಂಶಿ, ಸಮಾಜದಲ್ಲಿ ಬಾಂಧವ್ಯ ಹಾಗೂ ಸಹಾನುಭೂತಿ ಬೆಳೆಸಲು ಈ ರೀತಿಯ ಸೇವಾ ಕಾರ್ಯಕ್ರಮಗಳು ಅಗತ್ಯವೆಂದು ಹೇಳಿದರು. ಮೇಯರ್ ಯಲ್ಲಪ್ಪ ನಾಯಕೋಡಿ ಅವರು ಸಮಾಜ ಸೇವೆಗೆ ತೊಡಗಿರುವ ಸಂಘದ ಕೆಲಸವನ್ನು ಶ್ಲಾಘಿಸಿ, ಎಲ್ಲಾ ಧರ್ಮಗಳ ಹಬ್ಬಗಳನ್ನು ಸೌಹಾರ್ದಪೂರ್ಣವಾಗಿ ಆಚರಿಸುವುದು ಶ್ರೇಯಸ್ಕರ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಯಶಸ್ವಿಗೆ ಸಂಘದ ಸದಸ್ಯರು ಮತ್ತು ಸ್ವಯಂಸೇವಕರು ಶ್ರಮಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಪದಾಧಿಕಾರಿಗಳು ಭಾಗವಹಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.