ಮಳೆಗೆ ಬೆಳೆ ಹಾನಿ: ಸಂಸದ ಸಾಗರ ಖಂಡ್ರೆ ಮಿಂಚಿನ ಸಂಚಾರ, ಪರಿಶೀಲನೆ
ಮಳೆಗೆ ಬೆಳೆ ಹಾನಿ: ಸಂಸದ ಸಾಗರ ಖಂಡ್ರೆ ಮಿಂಚಿನ ಸಂಚಾರ, ಪರಿಶೀಲನೆ
ಕ್ಷೇತ್ರದ ರಸ್ತೆಗಳ ಸುಧಾರಣೆಗೆ ಕೆಕೆಆರ್ ಡಿಬಿಯಿಂದ 4 ಕೋಟಿ 90 ಲಕ್ಷ , ಎನ್.ಎಚ್ ಯೋಜನೆಯಡಿ 6 ಕೋಟಿ ರು ನೀಡಲಾಗುತ್ತಿದೆ
ಚಿಂಚೋಳಿ :ಎಸ್.ಡಿ.ಆರ್.ಎಫ್ ಮತ್ತು ಎನ್ .ಡಿ .ಆರ್ .ಎಫ್ ನಿಯಮಗಳ ಪ್ರಕಾರ ಸರಕಾರ ನೀರಾವರಿ ಜಮೀನುಗಳಿಗೆ ಎಕರೆಗೆ 17 ಸಾವಿರ, ನೀರಾವರಿ ಅಲ್ಲದ ಜಮೀನುಗಳಿಗೆ 2 ಎಕರೆಗೆ 17 ಸಾವಿರ ರು ಪರಿಹಾರ ರೈತರಿಗೆ ನೀಡಲಾಗುತ್ತಿದೆ ಎಂದು ಬೀದರ ಸಂಸದ ಸಾಗರ ಈಶ್ವರ ಖಂಡ್ರೆ ತಿಳಿಸಿದರು.
ಅವರು ಚಿಂಚೋಳಿ ಮತಕ್ಷೇತ್ರದಲ್ಲಿ ಅಧಿಕಾರಿಗಳೊಂದಿಗೆ ನಾಗಾಇದ್ಲಾಯಿ, ಕೊಳ್ಳೂರ, ಪೋಲಕಪಳ್ಳಿ, ಸೋಮಲಿಂಗದಳ್ಳಿ ಹಾಗೂ ಪಟ್ಟಣದ ಪಟೇಲ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿ ಅತಿವೃಷ್ಟಿಗೆ ಹಾನಿಗೊಳಗಾದ ರೈತರ ಹೊಲಗಳಿಗೆ ಮತ್ತು ಮನೆಗಳಿಗೆ ಮಿಂಚಿನ ಸಂಚಾರಕೈಗೊಂಡು ಬೆಳೆ ಹಾನಿ ವಿಕ್ಷಣೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿದರ ಪರಿಣಾಮ ರೈತರಿಗೆ ಸಂಕಷ್ಟ ಎದುರಾಗಿದ್ದು, ರೈತರ ಬೆಳೆಗಳು ಹೆಸರು, ಉದ್ದು ಮಳೆಗೆ ನಾಶವಾಗಿದೆ. ನಾಶಗೊಂಡ ಬೆಳೆಗಳಿಗೆ ಸರಕಾರ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ಕಾಯ್ದೆ ರೂಪಿಸಿರುವ ನಿಯಮಗಳಂತೆ ನೀರಾವರಿ ಜಮೀನುಗಳಿಗೆ ಎಕರೆಗೆ 17 ಸಾವಿರ, ನೀರಾವರಿ ಅಲ್ಲದ ಜಮೀನುಗಳಿಗೆ 2 ಎಕರೆಗೆ 17 ಸಾವಿರ ರು ಪರಿಹಾರ ರೈತರಿಗೆ ನೀಡಲಾಗುತ್ತಿದ್ದು, ಈ ಪರಿಹಾರ ರೈತರ ಹಾನಿಗೆ ಸರಿ ಹೊಂದುವುದಿಲ್ಲ. ಆದರೆ ಈ ನಿಯಮಗಳನ್ನು ಮುಂದಿನ ದಿನಗಳಲ್ಲಿ ಬದಲಾವಣೆ ತರಲು ಸರಕಾರದೊಂದಿಗೆ ಚರ್ಚಿಸಿ ರೈತರಿಗೆ ಹೆಚ್ಚಿನ ಪರಿಹಾರ ಕೊಡುವ ಪ್ರಯತ್ನ ಮಾಡಲಾಗುತ್ತದೆ. ಇನ್ನೂ ಬೆಲೆ ವಿಮೆಗೆ ಆನಲೈನ್ ಮತ್ತು ಆಫ್ ಲೈನ್ ಮುಖಾಂತೆ ನೋಂದಣಿ ಮಾಡಿಸಿರುವ ಫಲಾನುಭವಿಗಳಿಗೆ ಕಳೆದ ವರ್ಷದಂತೆ ಈ ವರ್ಷವೂ ಕೂಡ ವಿಮೆ ಮೊತ್ತ ಜಮೆ ಮಾಡಲಾಗುತ್ತದೆ. ಮಳೆಯಿಂದ ಶೇ.20 ಪ್ರತಿಶತಕ್ಕಿಂತ ಕಡಿಮೆ ಮಟ್ಟದಲ್ಲಿ ಕುಸಿತ ಕಂಡ ಮನೆಗಳಿಗೆ 6500. 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾದರೆ 30 ಸಾವಿರ ರು ಮತ್ತು ಮನೆಯೊಳಗೆ ನೀರು ನುಗ್ಗಿ ಮನೆಯ ಸಾಮಗ್ರಿಗಳು ಹಾನಿಗೊಳಿಸಿದರೆ 5 ಸಾವಿರ ರೂಪಾಯಿಗಳು ಸರಕಾರ ನೀಡತ್ತಿದೆ. ಇನ್ನೂ ಕೆ.ಕೆ.ಆರ್.ಡಿ.ಬಿ ವತಿಯಿಂದ ಸಂಸದರಿಗೆ ನೀಡಿರುವ 4ಕೋಟಿ 90 ಲಕ್ಷ ರು ಸಂಪೂರ್ಣ ಹಣ ಚಿಂಚೋಳಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ನೀಡಲಾಗಿದೆ ಮತ್ತು ಎನ್.ಎಚ್ ರಸ್ತೆ ಯೋಜನೆಯಿಂದ 6 ಕೋಟಿ ರು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಚಿಂಚೋಳಿ ಬ್ಲಾಕ್ ಅಧ್ಯಕ್ಷ ಬಸವರಾಜ ಮಲಿ, ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್, ವಕ್ತಾರ ಶರಣು ಪಾಟೀಲ ಮೋತಕಪಳ್ಳಿ, ಮುಖಂಡ ನಾಗೇಶ ಗುಣಾಜಿ, ಅಬ್ದುಲ್ ಬಾಷಿದ್, ಆರ್ ಗಣಪತರಾವ, ಲಕ್ಷ್ಮಣ ಆವಂಟಿ, ಜಗನ್ನಾಥ ಕಟ್ಟಿ, ಸಂತೋಷ ಗುತ್ತೇದಾರ, ಶಬ್ಬೀರ್, ವಿಶ್ವನಾಥ ಹೊಡೆಬೀರನಳ್ಳಿ, ಸೇರಿದಂತೆ ತಾಲೂಕ ಮಟ್ಟದ ಸರಕಾರಿ ಅಧಿಕಾರಿಗಳು ಇದ್ದರು.