ಒಂದು ಭಾಷೆಗಿಂತ ಹೆಚ್ಚು ಭಾಷೆ ಕಲಿಯುವುದು ಅನಿವಾರ್ಯ: ಡಾ. ಚವ್ಹಾಣ

ಒಂದು ಭಾಷೆಗಿಂತ ಹೆಚ್ಚು ಭಾಷೆ ಕಲಿಯುವುದು ಅನಿವಾರ್ಯ: ಡಾ. ಚವ್ಹಾಣ
ಕಲಬುರಗಿ: ಇಂದಿನ ಆಧುನಿಕ ಜಗತ್ತಿನಲ್ಲಿ ನಾವು ಕೇವಲ ಒಂದು ಭಾಷೆಗೆ ಸೀಮಿತವಾಗದೇ ಹೆಚ್ಚು ಹೆಚ್ಚು ಭಾಷೆಗಳು ಕಲಿಯುವುದು ಅನಿವಾರ್ಯ ಎಂದು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರೇಮಚಂದ ಚವ್ಹಾಣ ಅವರು ನುಡಿದರು.
ನಗರದ ಏಕೈಕ ಸ್ವಾಯತ್ತ ಮಹಾವಿದ್ಯಾಲಯವಾದ ಸರಕಾರಿ ಮಹಾವಿದ್ಯಾಲಯದ ಹಿಂದಿ ವಿಭಾಗದ ಸ್ನಾತಕೋತ್ತರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಬೀಳುಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ್ದರು.
ಮುಂದುವರೆದು ಇಂದು ನಾವು ನಮ್ಮ ಮಾತೃ ಭಾಷೆಯೊಂದಿಗೆ ಹೆಚ್ಚು ಹೆಚ್ಚು ಭಾಷೆ ಕಲಿಯುವುದು ಅನಿವಾರ್ಯ, ಭಾರತದ ಮೂಲೆ ಮೂಲೆಗಳಲ್ಲಿ ಕೆಲಸ ಮಾಡಬೇಕಾದ ಸಂದರ್ಭ ಬಂದರೆ ಆ ಸಂದರ್ಭದಲ್ಲಿ ಬೇರೆ ಸಂಪರ್ಕ ಭಾಷೆಯ ಅನಿವಾರ್ಯತೆ ಬೇಕಾಗುತ್ತದೆ. ಹೀಗಾಗಿ ನಮಗೆ ಕೇವಲ ಒಂದು ಭಾಷೆಗೆ ಸೀಮಿತವಾಗದೇ ಹೆಚ್ಚು ಹೆಚ್ಚು ಭಾಷೆಗಳು ಕಲಿಯುವುದು ಅನಿವಾರ್ಯ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಸವಿತಾ ತಿವಾರಿ ಅವರು ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯದಲ್ಲಿ ಒಂದು ಒಳ್ಳೆಯ ವ್ಯಕ್ತಿಗಳಾಗಿ ದೇಶದ ನಿರ್ಮಾಣದಲ್ಲಿ ಕೈ ಜೋಡಿಸುವಂತೆ ಮನವಿ ಮಾಡಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ ಅನುಸೂಯಾ ಗಾಯಕ್ವಾಡ್, ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ಶಂಕರ ರಾಠೋಡ, ವಿಭಾಗದ ಹಿರಿಯ ಉಪನ್ಯಾಸಕರಾದ ಡಾ ಮಿಲನ ಕಾಂಬ್ಳೆ ಮತ್ತು ವಿಭಾಗದ ಪ್ರಥಮ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಜರಿದ್ದರು.