ಬೋಂತಿ ತಾಂಡಾದಲ್ಲಿ ಜಾತ್ರಾ ಮಹೋತ್ಸವ ಇಂದಿನಿಂದ

ಬೋಂತಿ ತಾಂಡಾದಲ್ಲಿ ಜಾತ್ರಾ ಮಹೋತ್ಸವ ಇಂದಿನಿಂದ
ಕಮಲನಗರ: ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರ ಗ್ರಾಮವಾದ ಬೋಂತಿ ತಾಂಡಾದಲ್ಲಿ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ಜಾತ್ರಾ ಮಹೋತ್ಸವ ಫೆಬ್ರವರಿ 10 ರಿಂದ 12ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಫೆ.10ರಂದು ಇಚ್ಛಾಪೂರ್ತಿ ಮಾತಾ ಜಗದಂಬಾ, ಸಂತ ಸೇವಾಲಾಲ ಮಹಾರಾಜರು ಹಾಗೂ ಡಾ.ರಾಮರಾವ ಮಹಾರಾಜರ ದೇವಸ್ಥಾನಗಳಲ್ಲಿ ಪೂಜೆ, ಅಭಿಷೇಕ, ಹೋಮ-ಹವನ ಮತ್ತು ಯಜ್ಞೆಗಳು ನಡೆಯಲಿವೆ. ಫೆ.11ರ ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಜನಪದ ಸಂಭ್ರಮ ನಡೆಯಲಿದ್ದು, ಜಿಲ್ಲೆ, ತಾಲ್ಲೂಕು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಆಗಮಿಸಲಿದ್ದಾರೆ.
ಖ್ಯಾತ ಗಾಯಕ ಹನುಮಂತ ಲಮಾಣಿ, ರಾಯಚೂರಿನಿಂದ ಹಗಲು ವೇಶ ಮತ್ತು ವೀರಗಾಸೆ, ಶಹಾಪೂರನಿಂದ ಚಿಕ್ಕ ಹಲಗೆ ತಂಡ, ಬಳ್ಳಾರಿಯಿಂದ ಖ್ಯಾತ ಕುಚಿಪುಡಿ ಕಲಾವಿದ ಬಸವರಾಜ ಮಯೂರಿ, ಬೀದರ್‌ನ ಬರೂರ್‌ನಿಂದ ಚರ್ಮವಾದ್ಯ, ಚಿಟಕಿ ಭಜನೆ ತಂಡಗಳು, ರಾಜಕುಮಾರ ಸ್ವಾಮಿ ಅವರಿಂದ ಜಾನಪದ ಗಾಯನ ಹೀಗೆ ವಿವಿಧ ಕಲಾ ತಂಡಗಳು ಬರಲಿದ್ದು, ಜಾನಪದ ಗಾಯನ, ನೃತ್ಯ, ಭಕ್ತಿಗೀತೆ, ಕೋಲಾಟ, ಭಜನೆ, ಕೀರ್ತನೆಯಂತಹ ವೈವಿದ್ಯಯಮ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಅಂದು ಬೆಳಗ್ಗೆ ಸಂತ ಸೇವಾಲಾಲ ಮಹಾರಾಜರು, ಡಾ.ರಾಮರಾವ ಮಹಾರಾಜರು ಹಾಗೂ ಮಾತಾ ಜಗದಂಬಾ ದೇವಿಯ ಧ್ವಜಾರೋಹಣ ನಡೆಯಲಿದ್ದು, ಸಂಜೆ 7 ಗಂಟೆಯಿಂದ ಬಂಜಾರಾ ಭಜನೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಫೆ.12ರ ಮಧ್ಯಾಹ್ನ 2ರಿಂದ ಜಂಗಿ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಿದ್ದು, ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಆಗಮಿಸಲಿದ್ದಾರೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ 11,001 ಹಾಗೂ ದ್ವಿತಿಯ ಬಹುಮಾನವಾಗಿ 7001 ನಗದು ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ.
ಮಾತಾ ಜಗದಂಬಾ ದೇವಿ ಬಹಳಷ್ಟು ಶಕ್ತಿಶಾಲಿ ದೇವತೆಯಾಗಿದ್ದು, ಕಷ್ಟವೆಂದು ಬರುವ ಎಲ್ಲ ಭಕ್ತಾದಿಗಳ ಸಮಸ್ಯೆ ನಿವಾರಿಸುತ್ತಾಳೆ. ಪವಾಡಗಳಿಗೆ ಹೆಸರುವಾಸಿಯಾಗಿರುವ ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣಾದಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶಾಸಕರು ಕೋರಿದ್ದಾರೆ.