ಭೂತಾಯಿನೇ ನಂಬಿಕೊಂಡ ರೈತ ಜೀವನೋಲ್ಲಾಸದ ವಿಜಯೋತ್ಸವ ಆಚರಿಸಿದ ಬಡ ರೈತ
ಭೂತಾಯಿನೇ ನಂಬಿಕೊಂಡ ರೈತ ಜೀವನೋಲ್ಲಾಸದ ವಿಜಯೋತ್ಸವ ಆಚರಿಸಿದ ಬಡ ರೈತ
ಕಮಲನಗರ: ರೈತ ದೇಶದ ಬೆನ್ನೆಲುಬು ರೈತ ನಿಲ್ಲದೆ ಬದುಕುವಂತಿಲ್ಲ ಈ ಜನ. ಹಗಲಿರುಳು ದುಡಿಯುತ್ತಾನೆ ಬೆಳೆಯನ್ನು ಬೆಳೆಸುತ್ತಾನೆ ಬಂದ ಬೆಳೆಯನ್ನ ಮಾರುತ್ತಾನೆ. ಅದರಿಂದ ಬಂದಿರುವ ಹಣವನ್ನು ಉಪಜೀವನಕ್ಕೆ ಉಪಯೋಗಿ ಸುತ್ತಾನೆ. ಆತನ ಬದುಕು ಅಷ್ಟೇ, ಹಿಂದೇನೂ ಇರುವುದಿಲ್ಲ ಮುಂದೇನು ಉಳಿಯುವುದಿಲ್ಲ . ಆತನ ಬದುಕಿನ ಕಥೆಯು ಯಾರು ಕೇಳುವರು. ಆದರೂ ಆತ ಗೋಳಾಡುವುದಿಲ್ಲ ಏನು ಬೇಡುವುದಿಲ್ಲ ದಿನನಿತ್ಯ ತನ್ನ ತಾನೆ ಕೆಲಸ ಮಾಡಿ ಬದುಕುತ್ತಾನೆ. ಅಂತೆಯೇ ದುಡಿಮೆಯಲ್ಲಿಯೇ ದೇವರನ್ನು ಕಾಣುತ್ತಾನೆ. ಭೂತಾಯಿಯನ್ನು ದೇವರೆಂದು ಕಂಡುಕೊಂಡಿದ್ದಾನೆ.
ಅಮಾವಾಸ್ಯೆ ಹಬ್ಬದ ದಿನ ಆತ ಸಡಗರ ಸಂಭ್ರಮದಿಂದ ವಿಜಯೋತ್ಸವವನ್ನು ಆಚರಿಸುತ್ತಾನೆ.
ಈ ಉತ್ಸವದ ದಿನ ಎಲ್ಲರನ್ನು ಬರಮಾಡಿಕೊಳ್ಳುತ್ತಾ ಹೊಲಗದ್ದೆಗೆ ಬಂದಿದವರನ್ನ ತಾ ತಂದ ಅಡುಗೆ ದಾಸೋಹ ಮಾಡುತ್ತಾನೆ.
ಈ ಹಬ್ಬವ ಹಿಂದಿನ ದಿನ ಬೇಕಾದ ಅಡುಗೆಗೆ ಕಾಯಿಪಲ್ಯವನ್ನು ತಂದು ಕಡಲೆಹಿಟ್ಟಿನಿಂದ ಸಿದ್ಧಪಡಿಸಿದ ಭಜ್ಜಿ ತಯಾರಿಸುತ್ತಾರೆ. ಕುಂಬಾರ ಮಾಡಿದ ಗಡಿಗೆ ಕುಳ್ಳಿಯನ್ನು ತೆಗೆದುಕೊಂಡು ಹೊಲದಲ್ಲಿ ತುಂಬಿದ ಗಡಿಗೆ ಇಟ್ಟಿರುತ್ತಾನೆ. ಕಳುಕಿಸುಡಿನಿಂದ ನಿರ್ಮಿಸಿರುವ ನೂತನ ಕೊಂಪೆ ಹಾಕುತ್ತಾನೆ. ಅದರಲ್ಲಿ ಪಾಂಡವರ ಮೂರ್ತಿ ಪ್ರತಿಷ್ಠಾಪಿಸುತ್ತಾನೆ. ಭೂದೇವಿಯ ಪೂಜೆಗಾಗಿ ನಾನಾ ತರದ ಅಡುಗೆ ಮಾಡಿರುವ ವಿಶೇಷ ಅಡುಗೆ ಆಗಿರುತ್ತದೆ ಒಂದೇ ಎರಡೇ ಹತ್ತಾರು ತರತರಹದ ತಿಂಡಿ ತಿನಿಸುಗಳನ್ನು ತಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಸಿದ್ಧಪಡಿಸಿದ ಅಡುಗೆಯನ್ನು ತರುತ್ತಾರೆ. ಎಲ್ಲರನ್ನ ನೆಚ್ಚಿನ ಭೋಜನವಾಗಿರುತ್ತದೆ.
ಅಮಾವಾಸ್ಯೆ ದಿನ ನಸುಕಿನ ಜಾವದಲ್ಲಿ ಎದ್ದು ಸ್ನಾನಾದಿ ಮಾಡಿ ಮಡಿಬಟ್ಟೆ ಹಾಕಿಕೊಂಡು ಅಲಂಕರಿಸಿದ ಬುಟ್ಟಿಗಳಲ್ಲಿ ನೈವೇದ್ಯಕ್ಕಾಗಿ ಬೇಕಾಗುವ ಎಲ್ಲಾ ವಸ್ತುಗಳನ್ನು ಇಟ್ಟುಕೊಂಡು ಹೆಂಗಳೆಯರು, ಯುವಕರು ,ವೃಧ್ಧರು, ಮಕ್ಕಳು ಎಲ್ಲರೂ ಸೇರಿ ಹೊಸ ಬಟ್ಟೆ ಧರಸಿ ಚಿನ್ನಾಭರಣಗಳಿಂದ ಸಿಂಗರಿಸಿಕೊಂಡು ಉತ್ಸಾಹದಿಂದ ತಲೆ ಮೇಲೆ ಅಂಬಲಿ ಗಡಿಗೆ , ಭಜ್ಜಿ ರೊಟ್ಟಿ ಇತರ ಅಡುಗೆ ಪದಾರ್ಥಗಳು ತುಂಬಿಕೊಂಡು ಪಾಂಡವರ ಭೂದೇವಿ ಪೂಜೆಗಾಗಿ ಹೊಲಕ್ಕೆ ಹೋಗುತ್ತಾರೆ.
ಇಡೀ ದಿನ ಹೊಲದಲ್ಲಿಯೇ ಕಾಲ ಕಳೆದು ಸಾಯಂಕಾಲಕ್ಕೆ ಮತ್ತೆ ಮನೆಗೆ ಬರುತ್ತಾರೆ. ಸಣ್ಣದೊಂದು ನಿರ್ಮಿಸಿರುವ ಕೊಂಪಿಗೆ ಕೆಂಪನೆ ಶಾಲು ಹೊಂದಿಸಿ, ಕಬ್ಬು ಜೋಳದ ದಂಟೆಗಳಿಂದ ಶೃಂಗರಿಸಿ ಕೊಂಪಿ ಯಲ್ಲಿರುವ ಪಾಂಡವರಿಗೆ ವಿಭೂತಿ ಕುಂಕುಮ ಹಚ್ಚಿ, ಹೂವು, ಪತ್ರಿ ಏರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಬ್ಬದ ವಿಶೇಷ ತಿಂಡಿ ಪದಾರ್ಥಗಳು ಒಂದು ಮುಚ್ಚಳದಲ್ಲಿ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ನೀರು ಬೆರೆಸಿ ಹೊಲದಲ್ಲಿ ಬೆಳೆದು ನಿಂತ ಬೆಳೆಗಳ ಸುತ್ತಮುತ್ತ ಸಿಂಪಡಿಸಿ ಓಲಿಗ್ಯಾ......ಒಲಿಗ್ಯಾ ಎಂದು ಹೇಳಿದರೆ ಇನ್ನೊಬ ಚಾಲೋ...ಪಲಗ್ಯಾ ಎಂದು ಕೂಗುತ್ತಾ ಜಯ ಘೋಷಗಳೊಂದಿಗೆ ಚರಗ ಚೆಲ್ಲುತ್ತಾರೆ. ಈ ರೀತಿ ಮಾಡುವುದು ಮುಖ್ಯ ಉದ್ದೇಶವಿಷ್ಟೆ, ಭೂಮಿ ತಾಯಿ ನಿನ್ನ ಸೇವೆಯನ್ನು ಮಾಡಿದ್ದೇವೆ .ತಾಯಿ ನೀನು ಸಮೃದ್ಧವಾದ ಬೆಳೆಯನ್ನು ಉತ್ತಮ ಫಸಲು ಕರುಣಿಸಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತಾನೆ.
ಕೊಂಪಿಯಲ್ಲಿ ಪ್ರತಿಷ್ಠಾಪಿಸಿರುವ ಪಾಂಡವರ ಮೂರ್ತಿಗೆ ದೀರ್ಘದಂಡ ನಮಸ್ಕಾರ ಹಾಕಿ ಕನೋಲಿ ಸ್ವೀಕರಿಸುತ್ತಾನೆ. ನಂತರದಲ್ಲಿ ಎಲ್ಲರೂ ಕೂಡಿಕೊಂಡು ಊಟ ಮಾಡ್ತಾರೆ. ಮಹಿಳೆಯರು ಯುವಕರು ಮುದುಕರು ಹಾಗೂ ಮಕ್ಕಳು ಸೇರಿ ಎಲ್ಲರೂ ಊಟವಾದ ಮೇಲೆ ಜೋಕಾಲಿಯ ಆಡುವಲ್ಲಿ ಸಂತೋಷ ಪಡುತ್ತಾರೆ. ಮಕ್ಕಳು ಗಾಳಿಪಟ ಆರಿಸುವುದರಲ್ಲಿ ಆನಂದ ಪಡೆಯುತ್ತಾರೆ ಹೇಗೆ ಇಡಿ ದಿನ ಹೊಲದಲ್ಲಿ ಇದನ್ನೆಲ್ಲ ನೋಡುತ್ತಿದ್ದರೆ ಆನಂದವೇ ಆನಂದ. ಸಾಯಂಕಾಲ ಹೊಲದಿಂದ ಮನೆಗೆ ಬರುವ ಮುಂಚೆ ಲಕ್ಷ್ಮಿ ಎದುರಿಗೆ ಇರುವ ಬೆಂಕಿಯ ಕೆಂಡದಲ್ಲಿ ಹಾಲಿನ ಮಿಳ್ಳಿ ಹಾಲು ಉಕ್ಕಿಸುವುದರೊಂದಿಗೆ ತೆಂಗು ಹೊಡೆದು ನಂತರ ಪಾಂಡವರ ಮೂರ್ತಿಗೆ ಭೂಮಿ ತಾಯಿಗೆ ಪೂಜೆ ಸಲ್ಲಿಸುತ್ತಾರೆ. ಅಡುಗೆ ಪದಾರ್ಥ ತುಂಬಿಕೊಂಡು ಹೋದ ಬುಟ್ಟಿಯ ಮೇಲೆ ಐದು ಜೋಳದ ದಂಟಿನಿಂದ ಗುಡಿ ತಯಾರಿಸಿ ಹುಗ್ಗಿಯ ಗಡಿಗೆ ಬುಟ್ಟಿಯಲ್ಲಿಟ್ಟು ಅದರಲ್ಲಿ ದೀಪವನ್ನಿಟ್ಟು ಅದಕ್ಕೆ ಕುಬ್ಬಸ ಸುತ್ತಿ ಕಳಸ ತಯಾರಿಸಿಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಾರೆ. ಇದೊಂದು ರೈತನ ಸಂಭ್ರಮದ ಸುಗ್ಗಿಯ ವಿಜಯೋತ್ಸವ ವೆನ್ನಿಸುತ್ತದೆ.
ಮನೆ ಕಡೆ ಹೊರಡುವ ಮುಂಚೆ ಊರಿನಲ್ಲಿರುವ ಗುಡಿಗುಂಡಾರಗಳಿಗೆ ಹೋಗಿ ದೀಪ ಹಚ್ಚಿ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋಗುವರು. ಭೂಮಿತಾಯಿಯನ್ನು ನಂಬಿಕೊಂಡಿರುವ ಆತನಿಗೆ ಜೀವನೋಲ್ಲಾಸ ತರುವ ಹಬ್ಬ ಇದ್ದಾಗಿದೆ.
ಭೂತಾಯಿಯ ಎಲ್ಲಾ ಬೆಳೆಗಳಿಂದ ಹೊಲ ಹಚ್ಚಹಸಿರಾಗಿದಾಗ ಆಕೆ ಗರ್ಭಿಣಿ ಆಗಿರುತ್ತಾಳೆ, ಅವಳಿಗೆ ಬಯಕೆ ತ್ತಿರುವ ನಿಟ್ಟಿನಲ್ಲಿ ಈ ರೀತಿಯಲ್ಲಿ ವಿವಿಧ ಅಡಿಗೆ ಮಾಡಿ ಅರ್ಪಿಸುವುದು ಇತಿಹಾಸಿಕ ಸತ್ಯ....