ಕೊರೊನಾ ಕುರಿತು ಜಾಗೃತಿ ವಹಿಸಿ ಭಯ - ಆತಂಕ ಬೇಡ

ಕೊರೊನಾ ಕುರಿತು ಜಾಗೃತಿ ವಹಿಸಿ ಭಯ - ಆತಂಕ ಬೇಡ
ರಾಷ್ಟ್ರ ಹಾಗೂ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವರದಿಯಾಗುತ್ತಿವೆ. ರಾಜ್ಯ ಸರಕಾರ ಸಹ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ಸೊಂಕಿನ ಲಕ್ಷಣಗಳು ಕಂಡು ಬಂದರೆ ತ್ವರಿತವಾಗಿ ಕೋವಿಡ್ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಜನತೆ ಸಹ ತಮ್ಮ ಬಗ್ಗೆ ತಾವು ಕಾಳಜಿ ವಹಿಸಿಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸರಕಾರದ ಜತೆ ಕೈ ಜೋಡಿಸಬೇಕು.
ಪ್ರಸ್ತುತ ಮಳೆಗಾಲವಿರುವುದರಿಂದ ಸಹಜವಾಗಿಯೇ ವಾತಾವರಣ ಬದಲಾವಣೆಯ ಕಾರಣ ಜ್ವರ, ಶೀತ. ಕೆಮ್ಮು ಇತರೆ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಂತ ಜ್ವರ, ಉಸಿರಾಟದ ಸಮಸ್ಯೆ ಉಂಟಾದಾಗ ಸ್ವಯಂ ವೈದ್ಯರಾಗದೆ ಹಾಗೂ ನಿರ್ಲಕ್ಷ್ಯ ಮಾಡದೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ವಿಶೇಷವಾಗಿ ಮಧುಮೇಹ,ರಕ್ತದೊತ್ತಡ, ಉಸಿರಾಟ ಸಮಸ್ಯೆ ಸೇರಿದಂತೆ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅವರು ಹೇಳಿದ ಪರೀಕ್ಷೆಗಳನ್ನು ನಿರ್ಲಕ್ಷ್ಯ ತೋರದೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಕೊರೊನಾ ದೃಢಪಟ್ಟರೂ ಜನರು ಎದೆಗುಂದದೆ, ಸಾಮಾಜಿಕ ಅಂತರ ಸೇರಿದಂತೆ ವೈದ್ಯರು ನೀಡುವ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.
ಏಕೆಂದರೆ ಇದು ಕೊರೊನಾದ ಮೊದಲ ಅಲೆಯಂತೆ ಭಯಂಕರವಾಗಿರುವುದಿಲ್ಲ ಈಗಾಗಲೇ ಲಸಿಕೆ ಪಡೆದಿರುವುದರಿಂದ ಸಾಮುದಾಯಿಕ ರೋಗನಿರೋಧಕ ಶಕ್ತಿ ನಮ್ಮ ನಡುವೆ ಬೆಳವಣಿಗೆ ಹೊಂದಿರುತ್ತದೆ. ಇದರಿಂದಾಗಿ ಕೊರೊನಾ ವೈರಾಣು ಸಾಂಕ್ರಾಮಿಕ ಹರಡುವ ಸಾಧ್ಯತೆ ಕುಂಠಿತವಾಗಿರುತ್ತದೆ.
ಸರಕಾರ ಈಗಾಗಲೇ ಕೊರೊನಾ ಪ್ರಕರಣಗಳ ಮೇಲೆ ನಿಗಾ ಇರಿಸಿದ್ದು ಸೂಕ್ತ ನಿರ್ದೇಶನಗಳನ್ನು ಆರೋಗ್ಯಾಧಿಕಾರಿಗಳಿಗೆ ನೀಡಿದ್ದಾರೆ. ಅಲ್ಲದೆ ಆರ್‌ಟಿಪಿಸಿಆರ್ ಪ್ರಯೋಗಾಲಯ ಸ್ಥಾಪನೆಗೆ ಮುಂದಾಗಿದೆ. ಈ ಹಿಂದೆ ಕೊರೊನಾದ ಕುರಿತು ಕಿಂಚಿತ್ತೂ ಗೊತ್ತಿಲ್ಲದ ಗಂಭೀರ ಸನ್ನಿವೇಶದಲ್ಲಿ ಆಗಿದ್ದ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸುವ ಹೊಣೆಗಾರಿಕೆ ಸರಕಾರದ ಹಾಗೂ ಆಸ್ಪತ್ರೆಗಳ ಮೇಲಿದೆ. ಸರಕಾರ, ಕೊರೊನಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪರಾಮರ್ಶಿಸಿ ಸೂಕ್ತ ಸಂದರ್ಭದಲ್ಲಿ ಉಪಯುಕ್ತ ನಿರ್ಧಾರ ಕೈಗೊಂಡು ಸಮಯಪ್ರಜ್ಞೆ ತೋರಲಿ. ಕೊರೊನಾ ಪ್ರಕರಣಗಳು ತಲೆದೋರದಂತೆ ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಸುಳ್ಳು ಪ್ರಕರಣಗಳು ವರದಿಯಾಗುವುದನ್ನು ತಡೆಗಟ್ಟುವತ್ತ ಸರಕಾರ ಗಮನಹರಿಸಬೇಕು. ಅಂತಿಮವಾಗಿ 'ನಮ್ಮ ಆರೋಗ್ಯ ನಮ್ಮ ಕೈಯಲ್ಲಿ' ಎನ್ನುವ ನುಡಿಯನ್ನು ನಾವು ಮರೆಯಬಾರದು. ಆತಂಕಕ್ಕೊಳಗಾಗದೆ ಸಮಯ ಸಂದರ್ಭಾನುಸಾರ ನಮ್ಮ ಆರೋಗ್ಯದ ಕಾಳಜಿ ವಹಿಸೋಣ. ಕರೊನಾ ಕುರಿತು ಜಾಗೃತಿಯ ಅವಶ್ಯಕತೆ ಇದೆ, ಯಾವುದೇ ಕಾರಣಕ್ಕೂ ಭಯ , ಆತಂಕ ಮತ್ತು ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ಒಳ್ಳೆಯದಲ್ಲ.
-ಪ್ರೊ ಯಶವಂತರಾಯ ಅಷ್ಠಗಿ