ಇಷ್ಟಲಿಂಗ ಪೂಜೆಯಿಂದ ಅಂತರಂಗ ಶುದ್ಧಿ : ಮಹಾಲಿಂಗದೇವರು

ಇಷ್ಟಲಿಂಗ ಪೂಜೆಯಿಂದ ಅಂತರಂಗ ಶುದ್ಧಿ : ಮಹಾಲಿಂಗದೇವರು

ಡಿಗ್ಗಿಯ ಮಡಿವಾಳೇಶ್ವರ ಮಂದಿರದಲ್ಲಿ ಧಾರ್ಮಿಕ ಅರಿವು ಕಾರ್ಯಕ್ರಮ,

ಇಷ್ಟಲಿಂಗ ಪೂಜೆಯಿಂದ ಅಂತರಂಗ ಶುದ್ಧಿ : ಮಹಾಲಿಂಗದೇವರು

ಕಮಲನಗರ: ನೆಮ್ಮದಿ ಬೇರೆಲ್ಲೂ ಇಲ್ಲ. ನಮ್ಮಲ್ಲಿರುವ ನೆಮ್ಮದಿ ಕಾಣುವ ಪ್ರಕ್ರಿಯೆಯೇ ಇಷ್ಟಲಿಂಗ ಪೂಜಾ ಪರಿಕಲ್ಪನೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನ ಮಹಾಲಿಂಗದೇವರು ತಿಳಿಸಿದರು. 

ಇಲ್ಲಿಗೆ ಸಮೀಪದ ಜಗದ್ಗುರು ಪಂಚಾಚಾರ್ಯರು ರಂಭಾಪುರಿ ಪೀಠದ ಅಧಿನದಲ್ಲಿ ನಡೆಯುತ್ತಿರುವ ಡಿಗ್ಗಿ ಗ್ರಾಮದ ಆರಾಧ್ಯದೈವ ಶ್ರೀ ಮಡಿವಾಳೇಶ್ವರ ಮಂದಿರ ಆವರಣದಲ್ಲಿ ಶ್ರಾವಣ ಮಾಸ ನಿಮಿತ್ತ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಧಾರ್ಮಿಕ ಅರಿವು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ದೇಹದ ಮೇಲೆ ಲಿಂಗ ಕಟ್ಟಿ ಸುಮ್ಮನಿದ್ದರೆ ನಮಗೆ ಯಾವ ಯೋಗವೂ ಸಿಗುವುದಿಲ್ಲ. ಇಷ್ಟಲಿಂಗ ಪೂಜೆ ಮಾಡಿ, ಆಚರಣೆ ಮಾಡಿದಾಗ ಅದರ ಫಲ ಸಿಕ್ಕೇ ಸಿಗುತ್ತದೆ. ಇಷ್ಟಲಿಂಗ ಪೂಜೆಯಿಂದ ಮನಸ್ಸಿಗೆ ಏಕಾಂತ ಸಿಕ್ಕಿ, ನಮ್ಮ ಅಂತರಂಗ ಶುದ್ಧಿ ಮಾಡುತ್ತದೆ. ದೇವರನ್ನು ನಾವು ಇಷ್ಟಲಿಂಗದಲ್ಲೇ ಕಾಣಬಹುದು. ಇಷ್ಟಲಿಂಗ ಪೂಜೆ ನಮಗೆ ಒಳ್ಳೆಯ ಸಂಸ್ಕಾರ, ಆಚಾರ-ವಿಚಾರ ಕಲಿಸುತ್ತದೆ. ಯುಪೀಳಿಗೆ ಪೂಜೆ ಕೈಗೊಂಡು ಪ್ರತಿದಿನ ಅಂಗದ ಮೇಲಿರುವ ಲಿಂಗ ಕಳಚಿಡದೆ ಪೂಜೆ ಮಾಡಬೇಕು ಎಂದರು.

ಮಡಿವಾಳೇಶ್ವರ ರಂಭಾಪುರಿ ಪೀಠ ಟ್ರಸ್ಟನ ಅಧ್ಯಕ್ಷ ದೇವೇಂದ್ರ ಪಾಟೀಲ ಮಾತನಾಡಿ, ಧರ್ಮದ ಅರಿವು ಮೂಡಿಸಲು ಯುವ ಪೀಳಿಗೆಗೆ ವೀರಶೈವ ಧರ್ಮದ ಸಾರ ತಿಳಿಸಲು, ಇಷ್ಟಲಿಂಗ ಪೂಜೆ ಮಹತ್ವ ಸಾರುವ ಉದ್ದೇಶದಿಂದ ರಂಭಾಪುರಿ ಪೀಠದ ಡಿಗ್ಗಿ ಮಡಿವಾಳೇಶ್ವರ ಮಂದಿರದಲ್ಲಿ ಧರ್ಮಪ್ರಚಾರ ಕಾರ್ಯಕ್ರಮವನ್ನು ಅಗಷ್ಟ್ 7ರಿಂದ ನಡೆಸಲಾಗುತ್ತಿದೆ ಎಂದು ತಿಳಿಸಿದರು. 

ಹಿರೇಮಠ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಮನೋಜಕುಮಾರ ಹಿರೇಮಠ, ಕಾರ್ಯದರ್ಶಿ ಮಡಿವಾಳಪ್ಪ ಮುರ್ಕೆ, ವಿಜಯಕುಮಾರ ಪಾಟೀಲ, ಪುಜಾರಿ ಮಹೇಶ ಪುರಾಣಿಕ, ಯುವರಾಜ ಚ್ಯಾಂಡೇಶ್ವರೆ, ಸೂರ್ಯಕಾಂತ ಬಿರಾದಾರ, ನಾಗಯ್ಯ ಸ್ವಾಮಿ, ಸಿದ್ರಾಮ ಬಿರಾದಾರ, ನಂದಕುಮಾರ ದಂಡವತೆ, ಬಾಲಾಜಿ, ಪರಮೇಶ್ವರ, ಅಕ್ಕನ ಬಳಗ ಮತ್ತು ಅಣ್ಣನ ಬಳಗ ಭಜನಾ ಮಂಡಳಿಯ ಸದಸ್ಯರು ಹಾಗೂ ಮಹಿಳೆಯರು ಮತ್ತು ಯುವಕರು ಇದ್ದರು.