ಬಸವಗಂಗಾ ಅಕ್ವಾ ವಾರ್ಷಿಕೋತ್ಸವ – ಬಸವ ಜ್ಯೋತಿ ಹಾಗೂ ಶರಣ ನಾಗಯ್ಯಸ್ವಾಮಿಗಳ 55ನೇ ಹುಟ್ಟುಹಬ್ಬದಲ್ಲಿ ಸಾಧಕರಿಗೆ ಗೌರವ
ಬಸವಗಂಗಾ ಅಕ್ವಾ ವಾರ್ಷಿಕೋತ್ಸವ – ಬಸವ ಜ್ಯೋತಿ ಹಾಗೂ ಶರಣ ನಾಗಯ್ಯಸ್ವಾಮಿಗಳ 55ನೇ ಹುಟ್ಟುಹಬ್ಬದಲ್ಲಿ ಸಾಧಕರಿಗೆ ಗೌರವ
ಕಲ್ಯಾಣ ಕಹಳೆ ವಾರ್ತೆ ಕಮಲನಗರ:ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ಗುರುವಾರ ಗುರುಬಸವೇಶ್ವರ ಅನುಭವ ಮಂಟಪದಲ್ಲಿ ಬಸವಗಂಗಾ ಅಕ್ವಾ ಪ್ಯಾಕೇಜ್ ಪಾನೀಯ ನೀರಿನ 6ನೇ ವಾರ್ಷಿಕೋತ್ಸವ, 201ನೇ ಬಸವ ಜ್ಯೋತಿ ಕಾರ್ಯಕ್ರಮ ಹಾಗೂ ಕಮಲನಗರ ತಾಲೂಕಿನ ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಶರಣ ನಾಗಯ್ಯ ಸ್ವಾಮಿಯವರ 55ನೇ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮ.ನಿ.ಪ್ರ. ಪ್ರಭುದೇವ ಮಹಾಸ್ವಾಮಿಗಳು ಲಿಂಗಾಯತ ಮಹಾಮಠ ಬಸವಗಿರಿ – ಬೀದರ ವಹಿಸಿದರು. ಉದ್ಘಾಟಕರಾಗಿ ಆಗಮಿಸಿದ್ದ ಏಕತಾ ಫೌಂಡೇಶನ್‌ನ ಶರಣ ರವೀಂದ್ರ ಸ್ವಾಮಿಗಳು ಮಾತನಾಡಿ, “ಆಧ್ಯಾತ್ಮಿಕತೆ ಮತ್ತು ಸನ್ಮಾನವನ್ನು ಸರಳತೆಯೊಂದಿಗೆ ಆಚರಿಸುವುದು ಎಲ್ಲರಿಗೂ ಹೆಮ್ಮೆಯ ವಿಷಯ” ಎಂದು ಹಿತ ನುಡಿಗಳನ್ನು ಹಂಚಿಕೊಂಡರು.
ನಾಗಯ್ಯ ಸ್ವಾಮಿಗಳು ಪ್ರಸ್ತಾವಿಕ ಭಾಷಣ ಮಾಡುತ್ತಾ, ಯುವಕರಲ್ಲಿ ಹೆಚ್ಚುತ್ತಿರುವ ದುಶ್ಚಟಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ, “ಶಿಕ್ಷಣ ಇರುವವನು ಭ್ರಷ್ಟನಾಗಬಹುದು, ಆದರೆ ಸಂಸ್ಕಾರ ಇರುವವನು ಎಂದಿಗೂ ಭ್ರಷ್ಟನಾಗುವುದಿಲ್ಲ” ಎಂದು ವಿಶ್ವಗುರು ಬಸವಣ್ಣನವರ ವಚನಗಳನ್ನು ಸಂದೇಶ ನೀಡಿದರು.
ಶರಣ ಸೂರ್ಯಕಾಂತ ಸಿಂಗೆ ಅವರು “ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಮಕ್ಕಳಿಗೆ ಸಂಸ್ಕಾರ ಅತ್ಯವಶ್ಯಕ” ಎಂದು ಹೇಳಿದರು. ಧ್ವಜಾರೋಹಣ ನೆರವೇರಿಸಿದ ಶಿವಲಿಂಗ ಹೆಡೆಯವರು, ನಾಗಯ್ಯ ಸ್ವಾಮಿಗಳ ಆಧ್ಯಾತ್ಮಿಕ ಜೀವನಕ್ಕೆ ಶ್ಲಾಘನೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಹಾಜರಾದ ಶರಣ ಪ್ರಕಾಶ ಅವರು, ಸುಮಾರು 16 ವರ್ಷಗಳಿಂದ ಬಸವ ಜ್ಯೋತಿ ಕಾರ್ಯವನ್ನು ನಿರಂತರವಾಗಿ ಮುಂದುವರಿಸುತ್ತಿರುವ ನಾಗಯ್ಯ ಸ್ವಾಮಿಗಳ ಸೇವಾ ಮನೋಭಾವವನ್ನು ಕೊಂಡಾಡಿದರು. ಸುರೇಖಾ ಮಲ್ಲಾಪುರ ಅವರು ವಾರದ ಪ್ರಾರ್ಥನೆಗಳಿಂದ ವರ್ಷಾಚರಣೆಗಳವರೆಗೆ ಲಿಂಗಾಯತ ಧಾರ್ಮಿಕ ಚಟುವಟಿಕೆಗಳನ್ನು ಶಿಸ್ತುಬದ್ಧವಾಗಿ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಸಭಾಧ್ಯಕ್ಷ ಶರಣ ಮಾಧುರ ಪಾಟೀಲ್ ಮಾತನಾಡಿ, “ಸ್ವಾಮಿಗಳ ಆಧ್ಯಾತ್ಮಿಕ ಜೀವನಕ್ಕೆ ವಿಶ್ವಗುರು ಬಸವಣ್ಣನವರ ಕರುಣೆ ಸದಾ ಇರಲಿ” ಎಂದು ಶುಭ ಹಾರೈಸಿದರು.
ಮ.ನಿ.ಪ್ರ ಪ್ರಭುದೇವ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ಗುರು-ಲಿಂಗ-ಜಂಗಮ-ಕಾಯಕ-ದಾಸೋಹ-ಇಷ್ಟಲಿಂಗ ಪೂಜೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. “ಮುಧೋಳ(ಬಿ) ಗ್ರಾಮದಲ್ಲಿ ನಾಗಯ್ಯ ಸ್ವಾಮಿಗಳು ಭಕ್ತಿಯಿಂದ ಕೈಗೊಂಡಿರುವ ಕಾರ್ಯ ನನಗೆ ಸಂತೋಷ ತಂದಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 11 ಜನ ಸಾಧಕರಿಗೆ ವಿಶೇಷ ಸನ್ಮಾನ ನೆರವೇರಿಸಲಾಯಿತು. ವಚನ ನೃತ್ಯವನ್ನು ಕುಮಾರಿ ಶಿವಲೀಲಾ ಕುಂಬಾರ್ ಗಮನಸೆಳೆದರು. ವಚನಸುದೆ ಕಾರ್ಯಕ್ರಮವನ್ನು ಹಾವಗಿರ ಶಂಭೆಲ್ಲಿ ಹಾಗೂ ತಂಡ ನಡೆಸಿಕೊಟ್ಟರು.
ಸ್ವಾಗತವನ್ನು ನಾಗಯ್ಯ ಸ್ವಾಮಿಗಳು, ಸಭಾ ಸಂಚಲನವನ್ನು ನಾಗನಾಥ ಶಂಕರ ಹಾಗೂ ವಂದನಾರ್ಪಣೆಯನ್ನು ಬಸವರಾಜ ಒಂಟೆ ಅವರು ನೆರವೇರಿಸಿದರು. ಕಾರ್ಯಕ್ರಮ ಮಂಗಳ ಮಾತುಗಳು ಮತ್ತು ಮಹಾ ದಾಸೋಹದೊಂದಿಗೆ ಸಮಾರೋಪಗೊಂಡಿತು.
