ದಸರಾ ದರ್ಬಾರ್ ಕಾರ್ಯಕ್ರಮ ಕೈಬಿಡಲು ಸಂಗಮೇಶ ಎನ್ ಜವಾದಿ ಆಗ್ರಹ.

ದಸರಾ ದರ್ಬಾರ್ ಕಾರ್ಯಕ್ರಮ ಕೈಬಿಡಲು ಸಂಗಮೇಶ ಎನ್ ಜವಾದಿ ಆಗ್ರಹ.
ಬೀದರ/ಚಿಟಗುಪ್ಪಾ: ವಿಶ್ವಕ್ಕೆ ಮಾನವೀಯತೆಯ ಮೌಲ್ಯಾಧಾರಿತ ಸಂದೇಶಗಳನ್ನು ಸಾರಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ
ಬಸವಕಲ್ಯಾಣದ ಪವಿತ್ರ ಭೂಮಿಯಲ್ಲಿ ನಡೆಸಲು ಉದ್ದೇಶಿಸಿರುವ ದಸರಾ ದರ್ಬಾರ್ ಕಾರ್ಯಕ್ರಮ ಈ ಕೂಡಲೇ ಕೈಬಿಡಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ ಎನ್ ಜವಾದಿ ಆಗ್ರಹಿಸಿದ್ದಾರೆ.
ಬಸವಕಲ್ಯಾಣ ಕ್ಷೇತ್ರವು ಬಸವಾದಿ ಪ್ರಮಥರು ಲಿಂಗಾಯತ ಧರ್ಮ ತತ್ವಕ್ಕಾಗಿ ಪ್ರಾಣಕೊಟ್ಟ ಐತಿಹಾಸಿಕ ನೆಲ. ಈ ನೆಲದಲ್ಲಿ ಶರಣರ ತತ್ವಕ್ಕೆ ವಿರುದ್ಧವಾದ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಸೂಕ್ತ ಮತ್ತು ಸಮಂಜಸವಲ್ಲ ಎಂದು ಹೇಳಿದ್ದಾರೆ.
ನಮ್ಮದು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಪರಂಪರೆಯೇ ಹೊರತು ದರ್ಬಾರ್ ಪರಂಪರೆಯ ಸಂಸ್ಕೃತಿ ಅಲ್ಲವೇ ಅಲ್ಲ. ಹೀಗಾಗಿ ದಸರಾ ದರ್ಬಾರ್ ಕಾರ್ಯಕ್ರಮ ಮಾಡುವ ಯಾವ ಅವಶ್ಯಕತೆಯೂ ಇಲ್ಲ ಎಂದು ತಿಳಿಸಿದ್ದಾರೆ.
ಆಡಂಬರ, ಬಂಗಾರದ ಕಿರೀಟ ಧರಿಸುವುದು, ಎತ್ತರದಲ್ಲಿ ಕೂರುವುದು, ಅಡ್ಡಪಲ್ಲಕ್ಕಿಯಲ್ಲಿ ಮೆರೆಯುವುದು ನಮ್ಮ ಶರಣರ ಪರಂಪರೆ
ಅಲ್ಲ. ನಮ್ಮದು ಸರಳ, ಸಜ್ಜನಿಕೆ, ಸೌಮ್ಯ ಸಂಪ್ರದಾಯ ಶರಣ ಪರಂಪರ,
ದಯವೇ ಧರ್ಮ, ಅರಿವೇ ಗುರು ಎನ್ನುವ ಶರಣರ ವಾಣಿ, ಎನಗಿಂತ ಕಿರಿಯರಿಲ್ಲವೆನ್ನುವ, ತತ್ವವನ್ನು ಮೆರೆಸುವ ಪರಂಪರೆ ನಮ್ಮದು ಎಂದು ಹೇಳಿದ್ದಾರೆ.
ಬಸವಕಲ್ಯಾಣ ಶ್ರೀಕ್ಷೇತ್ರಕ್ಕೆ ಎಲ್ಲರಿಗೂ ಆದರದ ಸ್ವಾಗತವಿದೆ. ಆದರೆ, ಈ ನೆಲದ ಸಂಸ್ಕೃತಿ ಹಾಗೂ ಪರಂಪರೆಗೆ ಚ್ಯುತಿ ಉಂಟಾಗುವಂತಹ ಯಾವುದೇ ರೀತಿಯ ಕಾರ್ಯಕ್ರಮ ಸಂಘಟಿಸಿ ಮಾಡುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಂಘಟಕರು ಈ ಕೂಡಲೇ ದಸರಾ ದರ್ಬಾರ್ ಕೈಬಿಡಬೇಕು. ಇಲ್ಲವಾದಲ್ಲಿ ಬಸವಾಭಿಮಾನಿಗಳ ತ್ರೀವ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸಂಗಮೇಶ ಎನ್ ಜವಾದಿ ಎಚ್ಚರಿಕೆ ನೀಡಿದ್ದಾರೆ.