ಸಿದ್ಧರಾಮಯ್ಯ — ಹೋರಾಟದಿಂದ ಹುಟ್ಟಿದ ನಾಯಕತ್ವ
ಸಿದ್ಧರಾಮಯ್ಯ — ಹೋರಾಟದಿಂದ ಹುಟ್ಟಿದ ನಾಯಕತ್ವ
ಜನಮನ ಗೆದ್ದ ನಾಯಕನಿಗೆ ಜನುಮದಿನದ ಶುಭಾಶಯಗಳು
ಕರ್ನಾಟಕದ ಪ್ರಸ್ತುತ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು, ರಾಜಕೀಯದಲ್ಲಿ ಎಷ್ಟು ಪರ-ವಿರೋಧಗಳನ್ನು ಎದುರಿಸಿದ್ದರೂ, ಸೋಲು-ಗೆಲುವುಗಳ ಗಡಿ ಮೀರಿ, ಯಾವಾಗಲೂ ಸುದ್ದಿಯ ಕೇಂದ್ರಬಿಂದುವಾಗಿರುತ್ತಾರೆ.
ಸಿದ್ಧರಾಮಯ್ಯ ಅವರು 1947ರ ಆಗಸ್ಟ್ 12ರಂದು (ಶಾಲಾ ದಾಖಲೆಯಲ್ಲಿ ಆಗಸ್ಟ್ 3 ಎಂದು ಉಲ್ಲೇಖ) ಮೈಸೂರು ಜಿಲ್ಲೆಯ ಸಿದ್ದರಾಮನ ಹುಂಡಿ ಎಂಬ ಊರಲ್ಲಿ ಜನಿಸಿದರು. ತಂದೆ ಸಿದ್ಧರಾಮೇಗೌಡ, ತಾಯಿ ಬೋರಮ್ಮ.
ಬಾಲ್ಯದಲ್ಲಿ ಅವರು ಶಾಲೆಯ ಮುಖ ನೋಡದೇ ಕುರಿಮೇಯುತ್ತಾ, ಆಟವಾಡುತ್ತಾ ಕಾಲ ಕಳೆಯುತ್ತಿದ್ದರೂ, ಓದಿನ ಆಸಕ್ತಿ ಅಪಾರವಾಗಿತ್ತು. ಮರಳಿನ ಮೇಲೆ ಅಕ್ಷರಗಳನ್ನು ಗೀಚುವ ಹವ್ಯಾಸದಿಂದ ಅವರ ಬುದ್ಧಿವಂತಿಕೆ ಗೊತ್ತಾದ ನಂಜೇಗೌಡ ಅವರು, 1957ರಲ್ಲಿ ನೇರವಾಗಿ ಐದನೇ ತರಗತಿಗೆ ಸೇರಿಸಿದರು.
ಅವರು ವಿದ್ಯಾವರ್ಧಕ ಶಾಲೆಯಲ್ಲಿ ಪ್ರಾಥಮಿಕ-ಪ್ರೌಢ ಶಿಕ್ಷಣ ಪಡೆದು, 1964ರಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ.ಎಸ್ಸಿ ಪೂರೈಸಿ, ವಿದ್ಯಾವರ್ಧಕ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಅಲ್ಲದೆ ಅದೇ ಕಾಲೇಜಿನಲ್ಲಿ ಸ್ವಲ್ಪಕಾಲ ಬೋಧನೆ ನಡೆಸಿದರು.
ಹೋರಾಟಗಳಿಂದ ರಾಜಕೀಯದತ್ತ
ವಿದ್ಯಾರ್ಥಿ ಜೀವನದಲ್ಲೇ ಅವರು ಪ್ರೊ. ನಂಜುಂಡಸ್ವಾಮಿ, ಜಯಪ್ರಕಾಶ್ ನಾರಾಯಣ್,ಲೋಹಿಯಾ,ಪೆರಿಯಾರ್ ರಾಮಸ್ವಾಮಿ ಮುಂತಾದ ಹೋರಾಟಗಾರರ ಚಿಂತನೆಗಳಿಂದ ಪ್ರೇರಿತರಾದರು. 1974ರಲ್ಲಿ ಜೆಪಿ ಚಳವಳಿಯಲ್ಲಿ, 1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡು ಜೈಲು ಜೀವನ ಅನುಭವಿಸಿದರು.
1978ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ ಮೊದಲ ಬಾರಿಗೆ ಸಾರ್ವಜನಿಕ ಹುದ್ದೆಗೆ ಆಯ್ಕೆಯಾದರು. 1980ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋತರು. 1983ರಲ್ಲಿ ಪಕ್ಷೇತರರಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು, ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ರೇಷ್ಮೆ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. 1985ರಲ್ಲಿ ಪುನಃ ಗೆದ್ದು ಪಶುಸಂಗೋಪನೆ ಹಾಗೂ ಸಾರಿಗೆ ಸಚಿವ ಹುದ್ದೆ ವಹಿಸಿಕೊಂಡರು. 1989ರಲ್ಲಿ ಸೋಲನುಭವಿಸಿದರೂ, 1994ರಲ್ಲಿ ಗೆದ್ದು ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವ ರಾದರು.
ಕಾಂಗ್ರೆಸ್ ಸೇರ್ಪಡೆ ಮತ್ತು ಪ್ರಮುಖ ಹುದ್ದೆಗಳು
ಜೆಡಿಎಸ್‌ನ ಒಳರಾಜಕೀಯ ತೊಂದರೆಗಳಿಂದ ಬೇಸತ್ತು, 2005ರಲ್ಲಿ ಅಹಿಂದ ಸಂಘಟನೆಯತ್ತ ಮುಖ ಮಾಡಿ, ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾದರು. 2006ರ ಉಪಚುನಾವಣೆಯಲ್ಲಿ ಪ್ರಬಲ ಪೈಪೋಟಿಯಲ್ಲಿ ಗೆದ್ದು, 2008ರಲ್ಲಿ ವರುಣಾ ಕ್ಷೇತ್ರದಲ್ಲಿ ಜಯ ಸಾಧಿಸಿದರು. ವಿರೋಧ ಪಕ್ಷದ ನಾಯಕರಾಗಿ ತಮ್ಮದೇ ಆದ ಛಾಪು ಮೂಡಿಸಿದರು.
2013ರ ವಿಧಾನಸಭಾ ಚುನಾವಣೆಯಲ್ಲಿ ವರುಣಾದಿಂದ ಗೆದ್ದು, ಪೂರ್ಣ ಅವಧಿಗೆ ಮುಖ್ಯಮಂತ್ರಿ ಹುದ್ದೆ ವಹಿಸಿದ ವಿರಳ ನಾಯಕರಲ್ಲಿ ಒಬ್ಬರಾದರು. 2018ರಲ್ಲಿ ಚಾಮುಂಡೇಶ್ವರಿಯಲ್ಲಿ ಸೋತರೂ, ಬಾದಾಮಿ ಕ್ಷೇತ್ರದಲ್ಲಿ ಗೆದ್ದರು. ಸ್ಪಷ್ಟ ಬಹುಮತ ಯಾರಿಗೂ ಸಿಕ್ಕದ ಕಾರಣ, ಕಾಂಗ್ರೆಸ್-ಜೆಡಿಎಸ್ ಒಕ್ಕೂಟ ಸರ್ಕಾರಕ್ಕೆ ಬೆಂಬಲ ನೀಡಿದರು.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದಾಗ, ತೀವ್ರ ಪೈಪೋಟಿ ನಡುವೆ ಸಿದ್ಧರಾಮಯ್ಯ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಕರ್ನಾಟಕದ ಬಜೆಟ್ ಅನ್ನು 16 ಬಾರಿ ಮಂಡಿಸಿದ ಅಪರೂಪದ ದಾಖಲೆ ಅವರ ಹೆಸರಿನಲ್ಲಿದೆ.
ಬಾಲ್ಯದಲ್ಲಿ ಕುರಿಮೇಯುತ್ತಿದ್ದ ಬಾಲಕನಿಂದ ಆರಂಭವಾಗಿ, ರಾಜ್ಯದ ಅತ್ಯುನ್ನತ ಹುದ್ದೆಗೆ ಏರಿದ ಸಿದ್ಧರಾಮಯ್ಯ ಅವರ ಜೀವನಕಥೆ, ಹೋರಾಟ, ಪರಿಶ್ರಮ ಮತ್ತು ಜನಪರ ನಿಲುವಿನ ಸಂಕೇತವಾಗಿದೆ. ರಾಜಕೀಯದ ಅಲೆಮಾಳಿಗಳ ಮಧ್ಯೆಯೂ ಜನಸಾಮಾನ್ಯರ ಪರ ನಿಂತು ಸೇವೆ ಸಲ್ಲಿಸುವ ಅವರ ಧೀಮಂತಿಕೆ, ಅವರನ್ನು ಕರ್ನಾಟಕದ ರಾಜಕೀಯದಲ್ಲಿ ವಿಶಿಷ್ಟ ವ್ಯಕ್ತಿತ್ವವಾಗಿಸಿದೆ.
ಸಮ್ಮಾನ್ಯ ಸಿದ್ಧರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
ಜನಪರ ಚಿಂತನೆ, ದೃಢನಿಲುವು, ಹೋರಾಟದ ಮನೋಭಾವ, ಮತ್ತು ಸಮಾಜದ ಎಲ್ಲ ವರ್ಗಗಳ ಸಮಾನ ಪ್ರಗತಿಗೆ ಬದ್ಧತೆಯಿಂದ ಸೇವೆ ಸಲ್ಲಿಸುತ್ತಿರುವ ನಮ್ಮ ಪ್ರಿಯ ನಾಯಕ ಶ್ರೀ ಸಿದ್ಧರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮ ಜೀವನಯಾತ್ರೆ ಹೋರಾಟ, ಪರಿಶ್ರಮ ಮತ್ತು ಜನಸೇವೆಗಾಗಿ ಮಾದರಿಯಾಗಿದೆ. ಜನರ ಹಿತಕ್ಕಾಗಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಕರ್ನಾಟಕದ ಅಭಿವೃದ್ಧಿಗೆ ಬೆಳಕಾಗಲಿ.
ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನಷ್ಟು ಸೇವಾ ಶಕ್ತಿ ನೀಡಲಿ. ಜನ್ಮದಿನದ ಶುಭಾಶಯಗಳು ಸರ್!
-ಶರಣಗೌಡ ಪಾಟೀಲ ಪಾಳಾ