ಗಜಲ್ ಜನ್ನತ್ ನಲ್ಲಿ ಪ್ರಭೆಯ ಹೊಂಗಿರಣ :ಡಾ.ಮಲ್ಲಿನಾಥ ತಳವಾರ

ಗಜಲ್ ಜನ್ನತ್ ನಲ್ಲಿ ಪ್ರಭೆಯ ಹೊಂಗಿರಣ :ಡಾ.ಮಲ್ಲಿನಾಥ ತಳವಾರ

ಗಜಲ್ ಜನ್ನತ್ ನಲ್ಲಿ ಪ್ರಭೆಯ ಹೊಂಗಿರಣ : ಲೇಖನ ಡಾ.ಮಲ್ಲಿನಾಥ ತಳವಾರ 

"ಸ್ತ್ರೀವಾದವು ಮಹಿಳೆಯರು ಮನುಷ್ಯರು ಎಂಬ ಮೂಲಭೂತ ಪರಿಕಲ್ಪನೆಯಾಗಿದೆ" -ಚೆರಿಸ್ ಕ್ರಮಾರೇ 

         ಜನನ ಮತ್ತು ಮರಣ ಎರಡೂ ಪರಸ್ಪರ ವಿರುದ್ಧವಾದ ಪದಗಳು.‌ ಈ ಎರಡರ ನಡುವಿನ ಪಯಣಕ್ಕೆ ವಯಸ್ಸೆಂಬುದು ಸೇತುವೆಯಾಗಿದೆ. ವಯಸ್ಸಾಗುವುದು ಎಂದರೆ ಯೌವ್ವನ ಕಳೆದು ಹೋಗುವುದು ಅಂತಲ್ಲ, ಅವಕಾಶ ಮತ್ತು ಶಕ್ತಿಯ ಹೊಸ ಹಂತ. ಅಂತೆಯೇ ಸೌಂದರ್ಯವನ್ನು ನೋಡುವ, ಕಾಣುವ ಸಾಮರ್ಥ್ಯ ಹೊಂದಿರುವವರಿಗೆ ಎಂದಿಗೂ ವಯಸ್ಸಾಗುವುದಿಲ್ಲ ಎನ್ನಲಾಗುತ್ತದೆ. ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಮಾತ್ರ. ಜೀವನ ಮತ್ತು ವೃದ್ಧಾಪ್ಯವು ನಾವು ಹೊಂದಬಹುದಾದ ಶ್ರೇಷ್ಠ ಕೊಡುಗೆಗಳಾಗಿವೆ. "ಸುಂದರ ಯುವಕರು ಪ್ರಕೃತಿಯ ಅಪಘಾತಗಳು, ಆದರೆ ಸುಂದರ ವೃದ್ಧರು ಕಲಾಕೃತಿಗಳು" ಎಂಬ ಅಮೇರಿಕನ್ ರಾಜಕೀಯ ಮುತ್ಸದ್ದಿ ಎಲೀನರ್ ರೂಸ್ವೆಲ್ಟ್ ರವರ ಮಾತು 'ಹಿರಿತನ'ದ ಮಹತ್ವವನ್ನು ಸಾರುತ್ತದೆ. ಅತ್ಯುತ್ತಮ ರಾಗಗಳನ್ನು ಹಳೆಯ ಪಿಟೀಲುಗಳಲ್ಲಿ ನುಡಿಸಲಾಗುತ್ತದೆ! ಈ ಹಿನ್ನೆಲೆಯಲ್ಲಿ ವಯಸ್ಸಾಗುವುದು ಕಡ್ಡಾಯ, ಆದರೆ ಅದರೊಂದಿಗೆ ಬೆಳೆಯುವುದು ಐಚ್ಛಿಕ ಎನ್ನಲಾಗುತ್ತದೆ. ಇಂಥಹ ವಯಸ್ಸಿನೊಂದಿಗೆ ಜೀವನ ಶ್ರದ್ಧೆ ಹಾಗೂ ಸಕಾರಾತ್ಮಕ ಮನೋಭಾವ ಹೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸುಖನವರ್ ಶ್ರೀಮತಿ ಪ್ರಭಾವತಿ ದೇಸಾಯಿಯವರ ಜೀವನವೇ ಒಂದು ಉತ್ತಮ ನಿದರ್ಶನ. ನಾವು ಮಾಡುತ್ತಿರುವುದನ್ನು ಇಷ್ಟಪಡದ ಹೊರತು ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತಿರುವ ಇವರು ಗಜಲ್ ಹಾಗೂ ಗಜಲ್ ಲೋಕವನ್ನು ತುಂಬಾ ಪ್ರೀತಿಸುತ್ತಾರೆ. "ಗಜಲ್ ಬರೆಯುವುದೆಂದರೆ ಏನೋ ಒಂದು ತರಹದ ಸಂತೋಷವಾಗುತ್ತದೆ. ಅದರಲ್ಲಿ ಹೃದಯದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ" ಎಂಬ ಗಜಲ್ ಬಗೆಗಿನ ಪ್ರೀತಿ, ಬದ್ಧತೆ ಹಾಗೂ ಅವಿರತ ಕೃಷಿಯೇ ಇಂದು ಇವರಿಗೆ ಅಖಿಲ ಕರ್ನಾಟಕ ಗಜಲ್ ಸಮ್ಮೇಳನದ ಅಧ್ಯಕ್ಷತೆಯ ಗೌರವ ದೊರೆಯುವಂತೆ ಮಾಡಿದೆ.

        ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ ಅವರು ಶ್ರೀ ಗಿರಿಮಲ್ಲಪ್ಪ ಹಸ್ಮಕಲ್ ಹಾಗೂ ಶ್ರೀಮತಿ ಪಾರ್ವತಮ್ಮ ಗಿರಿಮಲ್ಲಪ್ಪ ಹಸ್ಮಕಲ್ ದಂಪತಿಗಳ ನಾಲ್ಕನೇ ಪುತ್ರಿಯಾಗಿ ೧೯೪೭ ರ ಜುಲೈ ೦೨ ರಂದು ರಾಯಚೂರಿನಲ್ಲಿ ಜನಿಸಿದ್ದಾರೆ. ಮಾಧ್ಯಮಿಕ ಶಿಕ್ಷಣ ರಾಯಚೂರಿನಲ್ಲಿ ಪೂರೈಸಿ ಮುಂದೆ ತಮ್ಮ ಹಿರಿಯ ಸಹೋದರಿ ಡಾ.ಶೈಲಜಾ ಉಡಚಣ ಅವರ ಜೊತೆಗಿದ್ದು ಪ್ರೌಢ ಶಿಕ್ಷಣ ಹಾಗೂ ಕಾಲೇಜ ಶಿಕ್ಷಣವನ್ನು ಗುಲಬರ್ಗಾದಲ್ಲಿ ಮುಗಿಸಿದ್ದಾರೆ. ಮುಂದೆ ಹುಬ್ಬಳ್ಳಿಯ ಸರಕಾರಿ ಮಹಿಳಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಫ್ಯಾಶನ್ ಡಿಸೈನಿಂಗ್ ನಲ್ಲಿ ಡಿಪ್ಲೊಮಾ ಮಾಡಿ ವಿಜಯಪುರದ ಸರಕಾರಿ ಮಹಿಳಾ ವೃತ್ತಿ ತರಬೇತಿ ಕೇಂದ್ರದಲ್ಲಿ ಹೊಲಿಗೆಯ ಮುಖ್ಯ ಭೋದಕರಾಗಿ ಕಾರ್ಯ ನಿರ್ವಹಿಸುತ್ತ ಎರಡು ಪದವಿಗಳನ್ನು ಪೂರೈಸಿದ್ದಾರೆ. ನಿವೃತ್ತಿ ಹೊಂದಿದ ಮೇಲೆ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದಾರೆ. ಇದು ಪ್ರಭಾವತಿ ದೇಸಾಯಿಯವರ ಓದಿನ ತುಡಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸೇವೆಯಿಂದ ನಿವೃತ್ತಿ ಹೊಂದಿದ ಮೇಲೆ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇಲ್ಲಿಯವರೆಗೆ ಕವಿತೆ, ಹನಿಗವನ, ಪ್ರಬಂಧ, ಆಧುನಿಕ ವಚನಗಳು, ಕಥೆ, ಪ್ರವಾಸ ಕಥನ, ವಿಮಶೆ೯ ಹಾಗೂ ಗಜಲ್... ಹೀಗೆ ಹಲವು ಪ್ರಕಾರಗಳಲ್ಲಿ ೨೩ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಅವುಗಳಲ್ಲಿ 'ಮೌನ ಇಂಚರ', 'ಮಿಡಿತ', 'ನಿನಾದ', 'ಭಾವಗಂಧಿ', 'ಒಲವ ಹಾಯಿದೋಣಿ', 'ಸೆರಗಿಗಂಟಿದ ಕಂಪು', 'ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ' (ತರಹೀ ಗಜಲ್), 'ಜೀವ ಭಾವದ ಉಸಿರು' (ಜುಗಲ್ ಬಂದಿ), 'ಬೆಸೆದ ಭಾವಕೆ ಒಲವ ನಾದ(ಜುಗಲ್ ಬಂದಿ) ಹಾಗೂ 'ಒಳನೋಟ' (ಗಜಲ್ ಕೃತಿಗಳ ವಿಶ್ಲೇಷಣೆ) ದಂತಹ ಗಜಲ್ ಸಂಕಲನಗಳು ಇವರನ್ನು ಶಾಯರಾ ಎಂದೇ ಗುರುತಿಸುವಂತೆ ಮಾಡಿವೆ. 

          ಔದ್ಯಮೀಕರಣದ ರಭಸದಿಂದಾಗಿ ದಿನೇದಿನೇ ಜಟಿಲವಾಗುತ್ತ ನಡೆದ ಬದುಕಿನಲ್ಲಿ ವ್ಯಕ್ತಿಗೆ ಒದಗುವ ಅನುಭವಗಳು ಅನಂತ. ಒಂದೊಂದು ಅನುಭವವೂ ವ್ಯಕ್ತಿಯ ಸೃಜನಶೀಲತೆಗೆ ಆಹ್ವಾನ. ಆಹ್ವಾನ ಸ್ವೀಕರಿಸುತ್ತ ಹೋದಂತೆ ಬದುಕಿನ ವಿಸ್ಮಯಕಾರಿ, ಕ್ರೂರ ವಾಸ್ತವತೆಗಳ ಹುಡದಿ, ವಾಸ್ತವತೆಯ ಆಳಕ್ಕೆ ಇಳಿದಂತೆಲ್ಲ ಅನಿರೀಕ್ಷಿತ ಅಪರಿಚಿತ ಆಯಾಮಗಳ ದೈತ್ಯನರ್ತನ, ಚಿತ್ರಕ್ಕೆ ಎಟಕುವ ಅನುಭವಗಳಿಗಿಂತ ನಿಮಿಷ ನಿಮಿಷಕ್ಕೂ ನುಣುಚಿಕೊಂಡು ಹೋಗುವ ಭೋರ್ಗರೆವ ಸಂಕೀರ್ಣತೆ. ಅನಿವಾರ್ಯವಾದ ಬದುಕಿನ ಬದ್ಧತೆಯಿಂದಾಗಿ ಹತ್ತು ಕಡೆಗೆ ಕೈಚಾಚಿದರೂ ವ್ಯಕ್ತತ್ವವೇ ತತ್ತರಿಸುವ ಯಾವುದೂ ದಕ್ಕದ ಅಮೂರ್ತ ಸಂವೇದನೆಗಳು. ಈ ಎಲ್ಲ ಅಂಶಗಳೂ ಗಜಲ್ ಗೆ ಜೀವ ತುಂಬುತ್ತವೆ. ಗಜಲ್ ಮೂಡುವುದು ಅಂದರೆ ಮೊಗ್ಗೊಂದು ಹೂವಾಗಿ ಚೆಲುವಿನಿಂದ ಅರಳಿ ತನ್ನೆಲ್ಲಾ ಒಟ್ಟು ಅಂದವನ್ನು ಹೊರಸೂಸುವ ಕ್ರಿಯೆಯಾಗಿದೆ. ಯಾವುದೇ ಪೂರ್ವಾಗ್ರಹ ಇಲ್ಲದೆ ತಾನು ಮತ್ತು ತನ್ನ ಗ್ರಹಿಕೆ ಸಶಕ್ತ ಪದಬಂಧದಿಂದ ಹೊರಬರ ಬೇಕು. ಹೀಗೆ ಬರುವಾಗ ಕೆಲವು ಬಾರಿ ನಾವು ನಂಬಿದ್ದ ಮೌಲ್ಯಗಳು, ಒಲವುಗಳು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಬಹುದು. ಇವೆಲ್ಲವನ್ನೂ ಹೊಂದಿ ಆ ಗಜಲ್ ಸುಂದರವಾಗಿ ಮನಸ್ಸನ್ನು ತಟ್ಟುವ ಹಾಗೆ ಮೂಡಿದರೆ ಅದು ಗಜಲ್ ಗೋ ಅವರ ಹಾಗೂ ಆ ಗಜಲ್ ನ ಸಾರ್ಥಕತೆ. ಮೌಲ್ಯಕ್ಕಾಗಿಯೋ, ಧೋರಣೆಗಾಗಿಯೋ ಗಜಲ್ ಬರೆಯಲ್ಪಟ್ಟಾಗ ಗಜಲ್ ಸಹಜವಾಗಿಯೇ ಭಾರದಿಂದ ಕುಸಿಯುತ್ತದೆ. ಕಾಡಿನಲ್ಲಿ ನೂರಾರು ಮರಗಳಿರುವಂತೆ, ಒಂದೊಂದು ಮರವೂ ತನ್ನದೇ ಆದ ಸೌಂದರ್ಯ, ಘನತೆ, ಉದ್ದೇಶ, ಉಪಯುಕ್ತತೆ ಪಡೆದಿರುವಂತೇ ಸುಖನವರ್ ಪ್ರಭಾವತಿ ದೇಸಾಯಿ ಯವರು ಬರೆದ ಗಜಲ್ ಗಳು ಹೂದೋಟದಲ್ಲಿ ಹಲಬಗೆಯ ಹೂಗಳಿರುವಂತೆ ರೂಪ, ಸ್ಪರ್ಶ, ರಸ, ಗಂಧಗಳಿಂದ ಭಿನ್ನ ಎನಿಸಬಹುದಾದರೂ ಒಳಗೆ ನೆಲೆಗೊಂಡಿರುವ ಜೀವ ಮಾತ್ರ ಒಂದೇ. ಎಲ್ಲರಿಗೂ, ಎಲ್ಲಾ ಕಾಲದಲ್ಲೂ ಶುಭವನ್ನೇ ಬಯಸುವಂತದ್ದು. 'ಕೇಡು' ಎಂಬುದಕ್ಕೆ ವಿರುದ್ಧ ಪದವಿದ್ದರೆ ನಿಸ್ಸಂದೇಹವಾಗಿ ಅದು ಗಜಲ್! ಪ್ರೀತಿ, ಅಂತಃಕರಣ, ಕರುಣೆ, ಸಹಾನೂಭೂತಿಗಳನ್ನೇ ಉಸಿರು, ರಕ್ತ, ಮಾಂಸ, ಮಜ್ಜೆಯಾಗಿ ಪಡೆದಿರುವ ಇವರ ಗಜಲ್ ಗಳೇ ಇದಕ್ಕೆ ಪುರಾವೆ. 

     ಪ್ರತಿ ದಿನದ ತಮ್ಮ ನೆಚ್ಚಿನ ಭಾಗವೆಂದರೆ ಗಜಲ್ ನೊಂದಿಗೆ ಕಳೆಯುವ ಸಮಯ ಎಂಬಂತೆ ಗಜಲ್ ಗೋ ಶ್ರೀಮತಿ ಪ್ರಭಾವತಿ ದೇಸಾಯಿಯವರು ಕಳೆದ ಒಂದುವರೆ ದಶಕದಿಂದ ಗಜಲ್ ಲೋಕದಲ್ಲಿ ಪಾದರಸದಂತೆ ಸಕ್ರಿಯವಾಗಿದ್ದು, ಕನ್ನಡ ಗಜಲ್ ಸಂಸಾರದಲ್ಲಿ 'ಅಮ್ಮ'ನ ಸ್ಥಾನವನ್ನು ತುಂಬಿದ್ದಾರೆ‌. ಗಜಲ್ ಕುರಿತು ವಿಶೇಷ ಒಲವನ್ನು ಹೊಂದಿರುವ ಇವರು ವಿಶ್ವದಲ್ಲಿ ನೆಚ್ಚಿನ ಧ್ವನಿಯೆಂದರೆ ಗಜಲ್ ನ ಅಶಅರ್ ನಲ್ಲಿ ಅಡಗಿರುವ ಪ್ರೀತಿಯ ಕನವರಿಕೆ ಎಂಬುದನ್ನು ಅರಿತಿದ್ದಾರೆ. ಅಂತೆಯೇ ಇವರ ಗಜಲ್ ಗಳನ್ನು ಓದುವುದೇ ಒಂದು ಖುಷಿ. ಪ್ರೀತಿಯು ತನ್ನನ್ನು ತಾನು ಅತ್ಯಂತ ಸ್ಪಷ್ಟವಾದ ರೀತಿಯಲ್ಲಿ ಬಹಿರಂಗಪಡಿಸುವ ಮಾರ್ಗವನ್ನು ಸಾರುತ್ತವೆ. ಪ್ರೀತಿಸಲು ನಮಗೆ ಕಾರಣಗಳೆ ಬೇಕಾಗಿಲ್ಲ, ಸ್ವತಃ ಪ್ರೀತಿಯೇ ಕಾರಣ. ಪ್ರೀತಿಸಲು ಋತುವಿನ ಅಗತ್ಯವೂ ಇಲ್ಲ, ಏಕೆಂದರೆ ಪ್ರೀತಿಯೇ ಒಂದು ಋತುವಾಗಿದೆ. ಈ ಸಂದೇಶವನ್ನು ದೇಸಾಯಿಯವರ ಗಜಲ್ ಗಳು ಸಹೃದಯ ಓದುಗರ ಎದೆಗೆ ರವಾನಿಸುತ್ತವೆ. ಇವರ ಸಮಗ್ರ ಗಜಲ್ ಗಳನ್ನು ಅವಲೋಕಿಸಿದಾಗ ಅವುಗಳು ನಮ್ಮ ಮನವೊಲಿಸುತ್ತವೆ. ಇವರು ಬಳಸುವ ರದೀಫ್ ಹಾಗೂ ತಖಲ್ಲುಸ್ ನಾಮ ಇವರ ಗಜಲ್ ಗಳು ಇನ್ನಿತರರ ಗಜಲ್ ಗಳಿಗಿಂತಲೂ ಭಿನ್ನವಾಗಿ ನಿಲ್ಲುವಂತೆ ಮಾಡಿವೆ. ಇವರು ಬಳಸಿದ ಕೆಲವು 'ತಖಲ್ಲುಸನಾಮ' ಒಳಗೊಂಡಿರುವ ಮಿಸರೈನ್ ಗಮನಿಸಬಹುದು. 

'ನೊಂದ ಜೀವಿಗೆ ಸುಖದ 'ಪ್ರಭೆ'ಯಾದರೂ ಇರುಳಿಗೆ ಇರಲಿ' 

'ಸೂರ್ಯ 'ಪ್ರಭೆ'ಗೆ ಸುಮ ಅರಳುತಿದೆ ನಲಿವನ್ನಾದರೂ ನೀಡು' 

'ಶಿವ 'ಪ್ರಭೆ'ಯಲಿ ಒಂದಾಗಲು ಕದಳಿಗೆ ನಡೆದ ಶರಣೆ'

ಈ ಮೇಲಿನ ಮಿಸರೈನ್ ನಲ್ಲಿ ತಖಲ್ಲುಸ್ ನಾಮ ತುಂಬಾ ಸರಳವಾಗಿ ಭಾವದೊಂದಿಗೆ ಬೆರತು ಹೋಗಿದೆ. ಎಲ್ಲಿಯೂ ಅನಗತ್ಯವಾಗಿ ತುರುಕಿದಂತೆ ಭಾಸವಾಗುವುದೇ ಇಲ್ಲ. ಇಂಥಹ ಅನೇಕ ಮಾದರಿಗಳನ್ನು ಇವರ ಸಂಕಲನಗಳುದ್ದಕ್ಕೂ ಕಾಣಬಹುದು. ಇದರೊಂದಿಗೆ ಹಲವು ಕಡೆ ತಖಲ್ಲುಸ್ ನಾಮ 'ವ್ಯಕ್ಯಿ'ವಾಚಕವಾಗಿಯೂ ಬಳಕೆಯಾಗಿದೆ. ಇನ್ನೂ ಪ್ರತಿ ಗಜಲ್ ಗೊಂದು ಹೊಸ ರದೀಫ್ ಬಳಸುವ ಇವರ ರದೀಫ್ ಪ್ರೀತಿಗೆ ತಲೆಬಾಗಲೇ ಬೇಕು. 

"ವಿರಹ ಕಡಲಲಿ ಮುಳುಗಿದೆ ನಿನ್ನ ನೆನೆಯುತಾ 

ಇರುಳೆಲ್ಲ ಕರಗಿ ಬೆಳಗಿದೆ ನಿನ್ನ ನೆನೆಯುತಾ" (ಮೌನ ಇಂಚರ) 

"ಅಸತ್ಯ ಅಂಗಳಕೆ ಸತ್ಯ ಕಿರಣ ಚೆಲ್ಲುತಾ ಬೆಳಗಲಿ ಹಣತೆ 

ಕಾಮ, ಕ್ರೋಧ, ಮದ, ಮತ್ಸರ ಅಳಿಸುತಾ ಬೆಳಗಲಿ ಹಣತೆ" (ಮಿಡಿತ) 

"ಗುಡಿಸಲ ಬೆವರ ಉಪ್ಪು ಮಹಡಿ ಅನ್ನದಲಿ ಅಡಗಿದೆ 

ನೇಕಾರನ ಗಂಜಿನಾತ ಬಟ್ಟೆಯ ಅತ್ತರದಲಿ ಅಡಗಿದೆ" (ನಿನಾದ) 

"ಲೋಕದ ನೋವಿಗೆ ನೊಂದು ಮುಲಾಮ ಹುಡುಕುತ್ತಾ ಹೋದನು 

ಅವಳ ಹೃದಯದ ದುಃಖ ದುಮ್ಮಾನ ಅರಿಯಲಾಗಲಿಲ್ಲ" (ಭಾವಗಂಧಿ) 

"ಹೃದಯ ಬೆಸೆಯಲು ಮಾತುಗಳೇನು ಮುಖ್ಯವಲ್ಲ ಬಿಡು 

ಮೌನದಲ್ಲಿ ಪ್ರೀತಿಯ ಸಡಗರವೊಂದು ಉಳಿಯಲಿ" (ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ) 

"ಲೋಕದ ಮನಸುಗಳು ದ್ವೇಷದಲಿ ಉರಿಯುತಿವೆ ಇಂದು 

ಅನುರಾಗದ ಜಲವನು ಸುರಿಸುವವರು ಯಾರು ಇಲ್ಲ" (ಒಲವ ಹಾಯಿದೋಣಿ) 

"ಗಾಣದ ಎತ್ತಿನಂತೆ ದಿನ ದುಡಿಯುವುದು ತಪ್ಪುವುದೇ ಇಲ್ಲ 

ಗೌಡರ ಮನೆ ಜೋಳ ಹಾಡಿ ಬೀಸುವುದು ತಪ್ಪುವುದೇ ಇಲ್ಲ" (ಜೀವ ಭಾವದ ಉಸಿರು) 

ಈ ಮೇಲಿನ ಬಿಡಿ ಬಿಡಿ ಅಶಆರ್ ಗಜಲ್ ಗೋ ಪ್ರಭಾವತಿ ದೇಸಾಯಿಯವರ ಎಲ್ಲ ಗಜಲ್ ಸಂಕಲನಗಳಿಂದ ಆಯ್ದುಕೊಂಡ ಸ್ಯಾಂಪಲ್ ಗಳು! ಇವುಗಳನ್ನು ನೋಡಿದಾಗ ದೇಸಾಯಿಯವರ ದಟ್ಟ ಜೀವನ ಅನುಭವದ ಛಾಯೆ ಎದ್ದು ಕಾಣುತ್ತದೆ. ಇಲ್ಲಿ ವಿಷಯದ ಹರಹು ನೋಡಿದಾಗ ಹೆಚ್ಚಿನ ಗಜಲ್ ಗಳು ಗಜಲ್ ನ ಮೂಲ ಸ್ಥಾಯಿ ಭಾವವನ್ನು ಉಸಿರಾಗಿಸಿಕೊಂಡಿರುವುದು ಮನವರಿಕೆಯಾಗುತ್ತದೆ. ಪ್ರೀತಿ, ಕನವರಿಕೆ, ಮುನಿಸು, ವಿರಹ, ಭಗ್ನ, ತ್ಯಾಗ, ಪ್ರಣಯದ ಅನುಭೂತಿ, ಸೌಂದರ್ಯದ ಆಸ್ವಾದನೆ, ನೆನಪುಗಳ ಮೆರವಣಿಗೆ... ಎಲ್ಲವೂ ನಮ್ಮನ್ನು ತಡೆದು ನಿಲ್ಲಿಸುತ್ತವೆ. ಇವುಗಳೊಂದಿಗೆ ಮನುಷ್ಯನ ಜೀವನದ ಅವಲೋಕನ, ಅಹಂಕಾರ, ಅಲೌಕಿಕತೆಯ ಜ್ಯೋತಿ, ಪ್ರಸ್ತುತ ಸಮಾಜದ ಚಿತ್ರಣ, ಸ್ತ್ರೀ ಸಂವೇದನೆಯ ಕೋಮಲತೆ, ಮೌಢ್ಯತೆಯ ಖಂಡನೆ, ಪ್ರಕೃತಿಯ ಸೊಬಗು, ಹೆತ್ತವರ ತೊಳಲಾಟ, ಕನ್ನಡ ಭಾಷಾಭಿಮಾನ... ಇವುಗಳು ಸಹೃದಯಿಗಳೊಂದಿಗೆ ಸಂವಾದಕ್ಕಿಳಿಯುತ್ತವೆ. ತಾವು ಹೇಳಬೇಕಾದುದನ್ನು ತುಂಬಾ ಸರಳವಾಗಿ ಹಾಗೂ ಅಷ್ಟೇ ಸ್ಪಷ್ಟವಾಗಿ ಅಭಿವ್ಯಕ್ತಿಸುವ ಕಲೆ ಇವರಿಗೆ ಕರಗತವಾಗಿದೆ. 

         ಇಂದು ಕನ್ನಡದಲ್ಲಿ ಗಜಲ್ ಮೇನಿಯಾ ಶುರುವಾಗಿದೆ. ಅಸಂಖ್ಯಾತ ಬರಹಗಾರರು ಗಜಲ್ ಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಆದರೆ ಆ ಗಜಲ್ ಗಳು ಹೇಗಿವೆ, ಅವರೆಲ್ಲರೂ ಇನ್ನೂ ಗಜಲ್ ಕೃಷಿಯಲ್ಲೇ ನಿರತರಾಗಿದ್ದಾರಾ ಅಥವಾ ಒಂದೆರಡು ಗಜಲ್ ಬರೆದರು ಮಾಯಾವಾಗಿದ್ದಾರಾ, ಒಂದು-ಎರಡು ಸಂಕಲನಗಳನ್ನು ಪ್ರಕಟಿಸಿ ದಣಿದಿದ್ದಾರಾ ಎಂಬುದೂ ಮುಖ್ಯವಾಗುತ್ತದೆ! ಆದರೆ ಸುಖನವರ್ ಪ್ರಭಾವತಿ ದೇಸಾಯಿ ಯವರ ಗಜಲ್ ಕನವರಿಕೆಯ ರೀತಿ ಅನುಪಮವಾಗಿದೆ. ೨೦೦೭ ರಿಂದ ಇಲ್ಲಿಯವರೆಗೆ, ಅಂದರೆ ಒಂದುವರೆ ದಶಕಗಳಿಂದಲೂ ಗಜಲ್ ಎಂಬ ಜ್ಯೋತಿಯನ್ನು ಹಚ್ಚುತಲೇ ಬಂದಿದ್ದಾರೆ, ಗಜಲ್ ಪ್ರೇಮಿಗಳಿಗೆ ಗಜಲ್ ನ ಅಮಲನ್ನು ಹಂಚುತ್ತಲ್ಲೇ ಬಂದಿದ್ದಾರೆ. ಹಾಗಂತ ಕೇವಲ ಸಂಖ್ಯೆ ಮುಖ್ಯವಾಗುತ್ತದೆ ಎಂದಲ್ಲ, ಬದಲಿಗೆ ಇವರು ಲಂಬಿ ರೇಸ್ ಕಾ ಗೋಡಾ ಎನ್ನುವುದು ಸಾಬೀತಾಗುತ್ತದೆ. ೧೬-೧೭ ವರುಷಗಳಿಂದ ಗಜಲ್ ಮನಸುಗಳನ್ನು ಹಿಡಿದಿಡುವುದು ಎಂದರೆ ತಮಾಷೆಯ ಮಾತಂತೂ ಅಲ್ಲವೇ ಅಲ್ಲ. ಇದೊಂದು ಪದಗಳಿಗೆ ನಿಲುಕದ ಸಾಧನೆ! ಇವರ ಆರಂಭಿಕ ಗಜಲ್ ಗಳು ಪ್ರೀತಿ, ಪ್ರೇಮದ ಸುತ್ತ ಮುತ್ತ ಸುಳಿದಂತೆ ಫೀಲ್ ಆಗುತ್ತದೆಯಾದರೂ ಕಾಲ ಕಳೆದಂತೆ ಮನುಕುಲದ ಎಲ್ಲ ವಿಷಯಗಳನ್ನು ಆವರಿಸಿಕೊಂಡಿರುವುದು ಮನವರಿಕೆಯಾಗುತ್ತದೆ. 

"ಸೋಲಾಗುತ್ತದೆ ಅದನ್ನು ಒಪ್ಪಿಕೊಂಡಾಗ 

ಗೆಲುವಾಗುತ್ತದೆ ಸಂಕಲ್ಪವನ್ನು ಮಾಡಿದಾಗ" 

ಶಕೀಲ್ ಆಜಮಿಯವರ ಈ ಮೇಲಿನ ಷೇರ್ ಪ್ರಭಾವತಿ ದೇಸಾಯಿಯವರ ಜೀವನವನ್ನು, ಸಾಹಿತ್ಯವನ್ನು ಪ್ರತಿನಿಧಿಸುವಂತಿದೆ. ಮೇಲ್ಗಡೆ ಹೇಳಿದಂತೆ ರದೀಫ್ ಹಾಗೂ ತಖಲ್ಲುಸನಾಮ ವಿಶಿಷ್ಟವಾಗಿ ಬಳಸುವಲ್ಲಿ ಇವರು ಮಾಹಿರ್ ಇದ್ದಾರೆ. ಇದಕ್ಕೆ ಇವರೇ ಉಸ್ತಾದ್ ಎಂದರೂ ಅತಿಶಯೋಕ್ತಿಯಾಗದು! ಇವುಗಳೊಂದಿಗೆ ಮಾತ್ರೆಯಾಧಾರಿತವಾಗಿ, ಮೀಟರ್ ಬದ್ಧವಾಗಿ ಬರೆಯುವುದು, ಹೆಚ್ಚಾಗಿ ೭ ಅಶ ಅರ್ ನಲ್ಲಿ ಗಜಲ್ ಗಳನ್ನು ಹೆಣೆಯುವುದು, ವಿಷಯದಲ್ಲಿ ವೈವಿಧ್ಯತೆಯನ್ನು ಉಳಿಸಿಕೊಂಡು ಬರುತ್ತಿರುವುದು, ದಿನ ಕಳೆದಂತೆ ಗಜಲ್ ನ ಬಾಹ್ಯ ಹಾಗೂ ಆಂತರಿಕ ಲಕ್ಷಣಗಳನ್ನು ಅರಿತು ಅಳವಡಿಸಿಕೊಂಡಿರುವುದು, ಅಳವಡಿಸಿಕೊಳ್ಳುತ್ತಿರುವುದು, ಪ್ರಾಸಂಗಿಕವಾಗಿ ಯುವ ಶಾಯರ್/ರಾ ಗಳಿಗೆ ಸಲಹೆ-ಸೂಚನೆಗಳನ್ನು ನೀಡುವುದು ಹಾಗೂ ತಪ್ಪುಗಳು ಪುನರಾವರ್ತನೆ ಆಗದಂತೆ ತಿದ್ದಿಕೊಳ್ಳುತ್ತಾ ಬೆಳೆಯುವುದು ಇವರ ಗಜಲ್ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ. ಸ್ವತಃ ಪ್ರಕಾಶನವೊಂದನ್ನು ಆರಂಭಿಸಿ ಗಜಲ್ ಸಂಕಲನಗಳನ್ನು ಪ್ರಕಟಿಸುತ್ತಿರುವ ಇವರ ಗಜಲ್ ಪ್ರೀತಿಗೆ ಬೆಲೆ ಕಟ್ಟಲಾಗದು! ಗಜಲ್ ಗಳಲ್ಲಿ ಕಾಫಿಯಾನ ಗಜಲ್ ಗಳನ್ನು ಬರೆದಿರುವವರ ಹಾಗೂ ಬರೆಯುತ್ತಿರುವವರ ಬಹುದೊಡ್ಡ ದಂಡೇ ಇದೆ. ಆದರೆ ಇವರಿಗೆ ಮಾತ್ರ ಅದ್ಯಾಕೋ ಹಿಡಿಸುತಿಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ 'ಅದೊಂದು ಸ್ಲೀವ್ ಲೆಸ್ ಬ್ಲೌಸ್ ಇದ್ದ ಹಾಗೆ' ಎನ್ನುತ್ತಾರೆ ಅವರು! ಇದು ಸರಿಯೋ, ತಪ್ಪು ಎಂದು ನಿರ್ಣಯಿಸುವುದಕ್ಕಿಂತ ಶಾಯರಾ ಪ್ರಭಾವತಿ ದೇಸಾಯಿಯವರ ಅಭಿಪ್ರಾಯವನ್ನು ಗೌರವಿಸುತ್ತೇನೆ. ನಾಡಿನ ಮತ್ತು ಹೊರನಾಡಿನ ಹಲವು ಸಂಘ, ಸಂಸ್ಥೆಗಳು ಏರ್ಪಡಿಸಿದ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಪ್ರಭಾವತಿ ದೇಸಾಯಿ ಯವರು ಭಾಗವಹಿಸಿ ಕವನ, ಗಜಲ್ ಗಳನ್ನು ವಾಚನ ಮಾಡಿ ಪಂಡಿತ ಹಾಗೂ ಪಾಮರರಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ. ಇವರ ಸಾಹಿತ್ಯ ಹಾಗೂ ಸಾಮಾಜಿಕ ಸೇವೆಯನ್ನು ಕೃಷಿಯನ್ನು ಗುರುತಿಸಿ ಹತ್ತು ಹಲವು ಸಂಘಟನೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ಕನಾ೯ಟಕ ಸರಕಾರ ಕೊಡುವ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ, ವಿಜಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತು (ರಿ) ಗದಗ ಇವರು ಬೆಳ್ಳಿ ಸಂಭ್ರಮ ನಿಮಿತ್ಯ "ಅಖಿಲ ಭಾರತ ಗಜಲ್ ಕಾವ್ಯ ಪ್ರಶಸ್ತಿ", ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಬಿಸಿಲುನಾಡು ಪ್ರಕಾಶನ ಕಲಬುರಗಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದಕ್ಕೆ 'ಸಾಧಕ ಶ್ರೀ ಪ್ರಶಸ್ತಿ'.... ಪ್ರಮುಖವಾಗಿವೆ. 

"ಒಂದು ಯುಗದಿಂದ ನನ್ನ ತಾಯಿ ಮಲಗಿಲ್ಲ 'ತಾಬೀಶ್' 

ನಾನೊಮ್ಮೆ ಹೇಳಿದ್ದೆ ನನಗೆ ಭಯವಾಗುತ್ತದೆ ಎಂದು" 

ಎಂಬ ಅಬ್ಬಾಸ್ ತಾಬೀಶ್ ರವರ ಷೇರ್ ತಾಯಿ 'ರಕ್ಷಾ ಕವಚ' ಎಂಬುದನ್ನು ಬಿಂಬಿಸುತ್ತದೆ. ಹಾಗಾಗಿಯೇ ಹೆಣ್ಣೆಂದರೆ ತಾಯ್ತನದ ಅಮೂಲ್ಯ ಗಣಿ. ಪ್ರತಿ ಹೆಣ್ಣು ಮೂಲತಃ ತಾಯಿಯೇ. ತುಂಬು ಕುಟುಂಬವನ್ನು ಹೊಂದಿರುವ ಶ್ರೀಮತಿ ಪ್ರಭಾವತಿ ದೇಸಾಯಿಯವರು ಮಾನವೀಯ ಮೌಲ್ಯಗಳ ಝರಿ. ಒಬ್ಬ ವ್ಯಕ್ತಿ ಹೇಗೆ ಜೀವನ ಸಾಗಿಸಬೇಕು ಎನ್ನುವುದಕ್ಕೆ ಇವರೊಂದು ರೋಲ್ ಮಾಡೆಲ್! ಸದಾ ಹಸನ್ಮುಖಿಯಾಗಿರುವ ಇವರು ಸದಾ ವರ್ತಮಾನ ಕಾಲದಲ್ಲಿ ಜೀವಿಸಲು ಬಯಸುವ ವಾಸ್ತವವಾದಿ ಹಾಗೂ ಬದಲಾವಣೆ, ಪರಿವರ್ತನೆಯನ್ನು ಆಲಂಗಿಸಿ ಸಾಗುವ ಛಾತಿ ಉಳ್ಳವರು! ಇವರು ಯಾವತ್ತೂ ತಮ್ಮ ಹಣೆಬರಹವನ್ನಾಗಲಿ, ಯಾರನ್ನಾಗಲಿ ದೂಷಿಸಿದ್ದನ್ನು ನಾನು ಕಂಡಿಲ್ಲ. ಸಮಯ ಸಿಕ್ಕರೆ ಸಾಕು, ಅನ್ಯರನ್ನು ದೂಷಿಸುವಲ್ಲಿ ನಾ ಮುಂದು ತಾ ಮುಂದು ಎಂದು ಬರುವ ಈ ಜಗತ್ತಿನಲ್ಲಿ ಇವರು ಅದ್ಯಾವ ಗೋಜಿಗೂ ಹೋಗದೆ ತಮ್ಮ ಪಾಡಿಗೆ ತಾವು ಇರುವುದಕ್ಕೆ ಇಷ್ಟ ಪಡುತ್ತಾರೆ. ಇದು ಅವರ ವ್ಯಕ್ತಿತ್ವದ ಗರಿಮೆಯಾಗಿದೆ. 'ಎಡಗೈಯಿಂದ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು' ಎಂದು ತುತ್ತೂರಿ ಊದುವವರ ದಂಡಿಗೇನೂ ಕಡಿಮೆಯಿಲ್ಲ. ಆದರೆ ಇದನ್ನು ಪಾಲಿಸುವ ಹೃದಯವಂತರಲ್ಲಿ ಶ್ರೀಮತಿ ಪ್ರಭಾವತಿ ದೇಸಾಯಿಯವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ! ಕಲಬುರಗಿಯಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವೂ ಇವರಿಗೆ ಲಭಿಸಿರುವುದು ಗಜಲ್ ಗೆ ಸಂದ ಗೌರವವಾಗಿದೆ. ಇವರಿಂದ ಮತ್ತಷ್ಟು, ಮೊಗೆದಷ್ಟೂ ಕೃತಿಗಳು ಹೊರ ಬರಲಿ; ಅದರಲ್ಲೂ ಗಜಲ್ ಲೋಕ ಇವರ ಪ್ರಭೆಯಿಂದ ಮತ್ತಷ್ಟು ಪ್ರಕಾಶಿಸಲಿ ಎಂದು ಶುಭ ಕೋರುತ್ತೇನೆ. 

"ಯಾರು ಹೆಣ್ಣನ್ನು ದೇಹದಾಚೆಗೆ ನೋಡುತ್ತಾರೆ 

 ಎಲ್ಲರ ಕಣ್ಣುಗಳು ಗಿರವಿ ಇವೆ ಈ ನಗರದಲ್ಲಿ" 

-ಹಮೀದಾ ಶಾಹೀನ್ 

-✍️ರತ್ನರಾಯಮಲ್ಲ 

ಡಾ. ಮಲ್ಲಿನಾಥ ಎಸ್. ತಳವಾರ 

ಕನ್ನಡ ಪ್ರಾಧ್ಯಾಪಕರು, 

ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ, 

ಕಲಬುರಗಿ ೫೮೫ ೧೦೩