ಬಸವಣ್ಣನವರು

ಬಸವಣ್ಣನವರು
ಊರಿಗೆ ಹೊಸಬರು ಬಂದರೆ ಪುರದೊಳಗಣ ಶ್ವಾನ ನೋಡಿ ಬಗುಳದೆ ಸುಮ್ಮನೆ ಬಿಡುವುದೆ
ಊರಿಗೆ ಹೊರಗಾದ ಶರಣರು ಊರುಗಳ ಮಧ್ಯದೊಳಿರಲು ದೂಷಕರು ದೂಷಿಸದಿಪ್ಪರೇ ಅಯ್ಯ ?
ದೂಷಕರ ಧೂಮಕೇತುಗಳು ನಿಮ್ಮ ಶರಣರು,
ಕೂಡಲಸಂಗಮದೇವಾ.
ಬಸವಣ್ಣನವರು
ವಚನ ಅನುಸಂಧಾನ
ಅಪ್ಪ ಬಸವಣ್ಣ ಬಾಲ್ಯದಿಂದಲೇ ರೂಢಿಯಲ್ಲಿದ್ದ
ಮೌಢ್ಯಗಳನ್ನು ಅಸಮಾನತೆಯ ನಡತೆಗಳನ್ನು ಪ್ರಶ್ನಿಸಿ, ಸಮರ್ಪಕ ಉತ್ತರಗಳು ಸಿಗದೇ ಇದ್ದಾಗ
ಬಂಡಾಯ ಹೂಡಿ, ಮನೆ ಮಂದಿಯನ್ನ ಊರನ್ನ
ತೊರೆದು ಹೊಸ ಬದುಕನ್ನರಸಿ ಹೊರಬಿದ್ದವರು.
ಹೀಗೆ ತಮಗೆ ತಾವೇ ಗುರುವಾಗಿ ಅರಿವಿನ ದಾರಿ ಹಿಡಿದು ಸಾಗಿದಂಥವರು ಅಪ್ಪ ಬಸವಣ್ಣನವರು. ಆಗ ಬಂಧನದಿಂದ ಬಯಲಿಗೆ ಬಂದ ಅಪ್ಪ ಬಸ ವಣ್ಣನವರು ಎದಿರುಗೊಂಡ ಗಂಡಾಂತರಗಳನ್ನು
ತಮ್ಮ ಪ್ರಖರವಾದ ವೈಚಾರಿಕ ಚಿಂತನೆಗಳ ಚಕ್ರ ದಿಂದ ಛಿದ್ರಗೊಳಿಸಿ, ತಮ್ಮೊಳಗಿನ ನಿಗಿನಿಗಿಸುವ ಅರಿವಿನ ಚಿದ್ಬೆಳಗಿನಲ್ಲಿ ಸ್ಪಷ್ಟವಾಗಿ ಕಷ್ಟಕೋಟಲೆ
ಗಳ ಕಳೆದುಕೊಂಡು ಮುಂದೆ ಸಾಗಿದವರು. ಎಲ್ಲ ಅನುಭವದ ಹಿನ್ನಲೆಯಲ್ಲಿ ಅವರೊಳಗೆ ಮೊಳೆತ ಹೊಸತು ಸರ್ವಸಮಾನತೆಯ ಸಮಸಮಾಜದ ಪರಿಕಲ್ಪನೆಯ ಕನಸ ಕೂಸಿಗೆ ಇಂಬಾಗಿಬಂದದ್ದು
ಬಿಜ್ಜಳನ ಆಸ್ಥಾನದ ಮಂತ್ರಿ ಕಾಯಕದ ಮಣಿಹ.
ರಾಜನ ತರುವಾಯ ಸಮಾಜದ ಕಣ್ಣಿಗೆ ಕಾಣುವ ಉನ್ನತ ಸ್ಥಾನವನ್ನಲಂಕರಿಸಿದ ಅಪ್ಪ ಬಸವಣ್ಣರು
ತಮ್ಮ ಸರಳವಾದ ಪ್ರಾಮಾಣಿಕ ನಡೆ ನುಡಿಯ
ವ್ಯಕ್ತಿತ್ವದಿಂದಾಗಿ ಜನಸಾಮಾನ್ಯರ ಆರಾಧ್ಯರಾಗಿ
ಆಕರ್ಷಣೆಯ ಕೇಂದ್ರವಾದರು. ಸಮಾಜದಲ್ಲಿನ ಕಟ್ಟಕಡೆಯ ಶೋಷಿತರಲ್ಲಿ ಬೆರೆತದ್ದಲ್ಲದೇ ಅವರ ಅಂತರಂಗದ ಕತ್ತಲೆಯನ್ನ ಕಳೆಯಲು ಕರಸ್ಥಳಕ್ಕೆ ಇಷ್ಟಲಿಂಗವ ಕೊಟ್ಟು ಅವರನ್ನು ಗಟ್ಟಿಗೊಳಿಸುವ ಜೊತೆಗೆ ಅನುಭವ ಮಂಟಪ ಕಟ್ಟಿ ಅವರಿಗೆಲ್ಲಾ ಅಲ್ಲಿ ಮಾತನಾಡುವ ಅವಕಾಶವನ್ನು ಕಲ್ಪಿಸಿದ್ದು ಬಹು ದೊಡ್ಡ ಬೆಳವಣಿಗೆಗೆ ತಳಪಾಯವಾಯ್ತು.
ಊರ ಹೊರಗೆ ಪ್ರಾಣಿಗಳಂತೆ ಬದುಕಿದವರೆಲ್ಲಾ ಈಗ ಊರೊಳಗೆ ಬಂದು ಮನುಷ್ಯರಾಗಿ ಮಾತ ನಾಡುವ ಪರಿವರ್ತನೆ ಕಂಡು ಪಟ್ಟಭದ್ರ ಮನಸು ಗಳಿಗೆ ಸಹಿಸಲಾರದ ಸಂಗತಿಯಾಯಿತು. ಇಂಥಾ ಸನ್ನಿವೇಶದಲ್ಲಿ ಈ ಮೇಲಿನ ವಚನವನ್ನು ಅಪ್ಪ ಬಸವಣ್ಣನವರು ರಚಿಸಿದಂತೆ ತೋರುತ್ತದೆ. ಈಗ ಪ್ರಸ್ತುತ ವಚನ ಅನುಸಂಧಾನವ ಮಾಡುವುದರ ಮೂಲಕ ಹೆಚ್ಚಿನ ವಿವರಗಳ ತಿಳಿದುಕೊಳ್ಳೋಣ.
ಊರಿಗೆ ಹೊಸಬರು ಬಂದರೆ ಪುರದೊಳಗಣ ಶ್ವಾನ ನೋಡಿ ಬಗುಳದೆ ಸುಮ್ಮನೆ ಬಿಡುವುದೆ.
ಮೇಲೆ ಪ್ರಸ್ತಾವನೆ ಮಾಡಿದಂತೆ; ಬಸವ ಪ್ರಣೀತ ಲಿಂಗಾಯತ ಪ್ರಜ್ಞಾವಂತ ಜನರು ಊರೊಳಗಡೆ ಬಂದದ್ದನ್ನು ಸಹಿಸದ ಪಟ್ಟಭದ್ರ ಪುರೋಹಿತರು
ಬಂದವರನ್ನು ಹಿಯಾಳಿಸಿ ವಾಗ್ದಾಳಿ ನಡೆಸಿದಾಗ ವಚನದ ಈ ಸಾಲುಗಳು ಹೀಗೆ ಪರೋಕ್ಷವಾಗಿ ರೂಪಕದ ಪರಿಭಾಷೆಯಲ್ಲಿ ರಚನೆಗೊಂಡಿವೆ ಎನಿಸುತ್ತದೆ. ಊರಿಗೆ ಬರುವ ಹೊಸಬರ ಕಂಡು ನಾಯಿಗಳು ಬೊಗಳುವ ದೃಶ್ಯದ ವ್ಯಂಗ್ಯವು ಇಲ್ಲಿ ಅರ್ಥಪೂರ್ಣವಾಗಿದೆ.
ಊರಿಗೆ ಹೊರಗಾದ ಶರಣರು ಊರುಗಳ ಮಧ್ಯದೊಳಿರಲು ದೂಷಕರು ದೂಷಿಸದಿಪ್ಪರೇ ಅಯ್ಯ ?
ಈ ಸಾಲುಗಳು ನೇರವಾಗಿ ಪಟ್ಪಭದ್ರರ ಹೊಟ್ಟೆ ಉರಿಯ ಬಿಸಿಯನ್ನು ವ್ಯಕ್ತಪಡಿಸುತ್ತವೆ. ಊರಿನ ಹೊರಗೆ ಶತ ಶತಮಾನದವರೆಗೆ ಹುಳಗಳ ಬಾಳ ಬದುಕಿದವರು ಈಗ ಶರಣರಾಗಿ ಊರಿನ ಮಧ್ಯೆ ಬಂದಿರುವಾಗ ದೂಷಕರಿಗೆ ದೂಷಣೆಮಾಡದೇ ಇರುವರೇ? ಎಂದು ಅಪ್ಪ ಬಸವಣ್ಣನವರು ಇಲ್ಲಿ ಕಲ್ಯಾಣ ಪಟ್ಟಣದಲ್ಲಿ ಅಂದು ಜರುಗಿದ ಘಟನೆ ಕುರಿತು ಹೀಗೆ ಪ್ರತಿಕ್ರಿಯೆ ನೀಡಿರುವಂತಿದೆ ಎಂಬ ಭಾಸವಾಗುತ್ತದೆ.
ದೂಷಕರ ಧೂಮಕೇತುಗಳು ನಿಮ್ಮ ಶರಣರು,
ಕೂಡಲಸಂಗಮದೇವಾ.
ಅಂದಿನ ಶ್ರೇಣೀಕೃತ ವ್ಯವಸ್ಥೆಯ ಕೆಡವಿ ಹೊಸ ಸರ್ವ ಸಮಾನತೆಯ ಸಮಾಜದ ಪ್ರಜ್ಞಾವಂತ ಪ್ರಜೆಗಳಾದ ಶರಣರು; ಸಾಮಾಜಿಕ ನೆಲೆಯಲ್ಲಿ ಮತ್ತು ಆಂತರಿಕವಾಗಿ ಸ್ಪಷ್ಟ ದಷ್ಟಪುಷ್ಟತೆಯನ್ನು ಹೊಂದಿ ಗಟ್ಟಿಯಾಗಿದ್ದರೆನ್ನುವುದನ್ನು ಮೇಲಿನ ಸಾಲುಗಳು ದ್ಯೋತಿಸುತ್ತವೆ. ದಯಾಳುಗಳಾಗಿದ್ದ ಶರಣರು ಕೆಟ್ಟದ್ದನ್ನು ಎದುರಿಸಲು ಸದಾ ಸನ್ನದ್ಧ ಸೈನಿಕರಂತೆ ಎಚ್ಚರಾಗಿದ್ದರು ಎನ್ನುವುದನ್ನು ಹೇಳ
ಹೊರಟಿರುವ ಈ ಸಾಲು ಶರಣರ ಧೀಃಶಕ್ತಿಯನ್ನ ಎತ್ತಿ ತೋರಿಸುತ್ತದೆ. ತನ್ಮೂಲಕ ಅಪ್ಪ ಬಸವಣ್ಣ ಕಟ್ಟಿ ಬೆಳೆಸಿದ ಶರಣ ಸಮಾಜವು; ಮರಣವನ್ನು ಮಹಾನವಮಿ ಎಂದು ತಾತ್ವಿಕ ನೆಲೆಯಲ್ಲಿ ಹೇಳಿ ದಂತಿದ್ದರೂ ಸಾಮಾಜಿಕ ನೆಲೆಯಲ್ಲೂ ಮರಣದ ಹಂಗಿರದ ಶರಣರ ಧೀರ ಧೀಮಂತಿಕೆಯ ಸದೃಢ ನಿಲುವು; ದೂಷಕರ ಧೂಮಕೇತುಗಳು ನಿಮ್ಮ ಶರಣರು ಕೂಡಲಸಂಗಮದೇವಾ ಎನ್ನುವ ಅಪ್ಪ ಬಸವಣ್ಣನವರ ಈ ಮಾತುಗಳು ಇಲ್ಲಿ ಅತ್ಯಂತ ಮಹತ್ವದ್ದಾಗಿವೆ ಎನ್ನುವುದನ್ನು ಗಮನಿಸಬೇಕು.
ಅಳಗುಂಡಿ ಅಂದಾನಯ್ಯ