ಭಿಕಾರಿ ಭೀಮಯ್ಯ ಶರಣ

ಭಿಕಾರಿ ಭಿಕಾರಕ್ಕೆಳಸ.
ಉಣ್ಣಲು ಉಡಲು ಕಾಣದಾತ ಭಿಕಾರಿ.
ತನು ಮೀಸಲು, ಮನ ಮೀಸಲು,
ಬಾಯಿ ಬೋರು ಬೋರು.
ಮರಣವಳಿದುಳಿದಾತ ಭಿಕಾರಿ.
ಸಂಚಲದ ಪಂಚ ಕರಣಗಳ ತೆಗೆದುಂಡು, ರುಂಡಮಾಲೆಯ ರಣಮಾಲೆಯ ಹೆಣಮಾಲೆಯ ಚಾರುಚ್ಚಿದಲ್ಲದೆ,
ಭಿಕಾರಿ ಭೀಮೇಶ್ವರಲಿಂಗಕ್ಕೆ ದೂರ ಕಾಣಾ, ಕರುತಿರುವ ಗೊರವಾ.
*ಭಿಕಾರಿ ಭೀಮಯ್ಯ*
*ವಚನ ಅನುಸಂಧಾನ*
ಅಪ್ಪ ಬಸವಣ್ಣನವರ ಸಮಕಾಲೀನ ಶರಣರಾದ ಭಿಕಾರಿ ಭೀಮಯ್ಯನವ್ರು ಅನುಭವ ಮಂಟಪದ ೭೭೦ ಅಮರ ಗಣಂಗಳ ಪೈಕಿ ಒಬ್ಬ ವಚನಕಾರ ಶರಣ. ಇವರ ಎರಡೇ ವಚನಗಳು ಲಭ್ಯವಾಗಿವೆ ಅವೆರಡೂ ವಚನ ತುಂಬಾ ಉನ್ನತ ಮಟ್ಟದವು ಎನ್ನುವರು ಪ್ರಾಜ್ಞರು.‘ಭಿಕಾರಿ ಭೀಮೇಶ್ವರಲಿಂಗ’ ಎಂಬುದು ಇವರ ವಚನಾಂಕಿತ. ಇಲ್ಲಿ ಈ ಹೆಸರೇ ಸೂಚಿಸುವಂತೆ ಇವರದು ಕೋರಾನ್ನ ಭಿಕ್ಷೆ ಬೇಡು ವುದು ಮತ್ತು ವ್ರತ ತಪ್ಪಿದವರನ್ನು ಸಂಹರಿಸುವ ಕಠೋರ ವೃತ್ತಿ (ಕಾಯಕ!?)ಎನ್ನುವುದು ಮಾಹಿತಿ ಇದು ಇವರು ಶರಣರಾಗು ಮೊದಲಿನ ವೃತ್ತಿಯೇ ಆಗಿರಬಹುದಾಗಿದೆ. ಅನೇಕ ಶೈವ ಪಂಥಗಳಲ್ಲಿ ಇಂಥ ಕಠೋರ ವ್ರತಸ್ಥರು ಇದ್ದಿರಬಹುದೇನೋ!
ಭಿಕಾರಿ ಎಂದರೆ; ಲೌಕಿಕದಲ್ಲಿ ಮನೆ ಮಠ ಏನೂ ಇಲ್ಲದ ಭಿಕ್ಷೆ ಬೇಡಿ ಬದುಕುವ ನಿರ್ಗತಿಕನಾದಂಥ ದಿಕ್ಕೇಡಿ ಮನುಷ್ಯ ಎಂಬುದು ಸಾಮಾನ್ಯವಾದ ಗ್ರಹಿಕೆ. ಹಾಗೆಯೇ ಪಾರಮಾರ್ಥಿಕದಲ್ಲಿ ಕೂಡಾ ಯಾವನಿಗೆ ಹುಟ್ಟು ಸಾವಿಲ್ಲವೋ ದಿಕ್ಕೇಡಿಯೋ ಅಂಥವ ಭಿಕಾರಿ ಬಿಡಾಡಿ ಎಂದು ಸಂಬೋಧಿಸಿ ಕರೆಯಿಸಿಕೊಳ್ಳುತ್ತಾನೆ. ಅಪ್ಪ ಬಸವಣ್ಣನವರ ಪರುಷ ದೃಷ್ಟಿಗೆ ಬಿದ್ದಂಥವನು ಅವ ಎಂಥಾದ್ದೇ ಕ್ರೂರಿಯೇ ಅಥವಾ ಕಟುಕನೇ ಇರಲಿ ಆತನು ಹೊಸ ಮನುಷ್ಯನಾಗಿ ಸಾಧನೆ ಮಾಡಿ ಶರಣನೇ ಆಗಿರುವ ಉದಾಹರಣೆಗಳು ಹನ್ನೆರಡನೆಯ ಶತಮಾನದಲ್ಲಿ ಘಟಿಸಿದ್ದಿದೆ. ಅಂಥವರ ಪೈಕಿ ಈ ಭಿಕಾರಿ ಭೀಮಯ್ಯ ಒಬ್ಬರಾಗಿದ್ದರೆ. ಇವರ ಬಗ್ಗೆ ಸಿಗುವ ಮಾಹಿತಿಯ ಪ್ರಕಾರ ಇವರು ಯಾವತ್ತೂ ಆಂತರ್ಮುಖಿಯಾಗಿ ಪರಮಾತ್ಮನ್ನು ತಮ್ಮೊಳಗೆ ತುಂಬಿಕೊಂಡಿದ್ದ ಸದಾ ಜಾಗೃತ ಭಾವದ ಭಿಕಾರಿ ಭೀಮಯ್ಯ ಎಲೆ ಮರೆಯ ಕಾಯಿಯ ಹಾಗಿದ್ದೇ ಹಣ್ಣಾಗಿ ನಂತರದಲ್ಲಿ ಶರಣರ ಗಮನವ ಸೆಳೆದು, ಕ್ರಮೇಣ ಇವರು ತಮ್ಮೊಳಗಿನ ಅದಮ್ಯವಾದ ಶಿವಭಾವದ ಪರಿಮಳದ ಕಾರಣದಿಂದಾಗಿಯೇ ಅನುಭವ ಮಂಟಪದ ಗಮನಕ್ಕೆ ಬಂದು ಬೆಳಕಿಗೆ ಬಂದಂತಿದೆ. ಇಂಥ ಶಿವಭಕ್ತಿ ನೆಲೆಯಿಂದ ಬಂದ ಶರಣರಿಗೆ ಆಚಾರವೇ ಮುಖ್ಯ. ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚರಣೆ ಆಗಬೇಕೆನ್ನುವ ಇವರು ಶಿವಾನಂದದ ಅನುಭಾವವನ್ನು ತಮ್ಮ ಎರಡೂ ವಚನದಲ್ಲಿ ಮನಮುಟ್ಟುವಂತೆ ಚಿತ್ರಣ ಮಾಡಿದ್ದಾರೆ. *'ಭಕ್ತಿ , ಜ್ಞಾನ, ವೈರಾಗ್ಯ ಇವುಗಳು ಪ್ರಸಾದದಿಂದ ಅಳವಡದೆ, ಭಕ್ತ; ತಾನು ಖುದ್ದು ಅರಿತುಕೊಂಡಾಗ ಮಾತ್ರವೇ ಅನುಭವ ವೇದ್ಯ ಆಗುವುದು'* ಎನ್ನುವುದು ಇವರ ನಿಶ್ಚಿತ ನಿಲುವು.
ಇಂಥ ನಿಷ್ಠಾವಂತ ಭಿಕಾರಿ ಭೀಮಯ್ಯ ಶರಣರ ಮಹೇಶ್ವರ ಸ್ಥಲಗುಣ ಸ್ವರೂಪವ ಹೊಂದಿರುವ ವಚನಗಳು ಶಿವನೇ ಸರ್ವೋತ್ತಮನೆಂಬ ತತ್ವವ ನ್ನು ಸಾರಿ ಹೇಳುವಂತಿವೆ. ಪ್ರಸ್ತುತ ಈ ಮೇಲಿನ ಇವರ ವಚನವು; ಬೆಡಗಿನ ರೂಪಕದ ಭಾಷೆಯ ಲ್ಲಿದ್ದು ಅನುಭಾವದ ಘನತರವಾದ ವಿಚಾರವನ್ನ ತನ್ನಲ್ಲಿ ಇಂಬಿಟ್ಟುಕೊಂಡ ಕಾರಣದಿಂದ ಅದಂತು ಅರ್ಥ ವಿನ್ಯಾಸದಲ್ಲಿ ಇಂದ್ರಚಾಪ/ಕಾಮನಬಿಲ್ಲು ರೀತಿಯಲ್ಲಿ ಗೋಚರಿಸಿ ಅನುಭವಕ್ಕೆ ಬರುತ್ತದೆ. ಇಲ್ಲಿ ಇದು ಭಿಕಾರಿಯ ಚಿತ್ರಣದಂತೆ ಕಂಡರೂ ಕೂಡಾ ಅದು ಅನಂಗ ಅನುಪಮ ಅಗೋಚರ ಅಪ್ರತಿಮ ಲಿಂಗ(ದೇವ)ನ ಚಿತ್ರಣವಾಗಿಯೇನೇ ಅಭಿವ್ಯಕ್ತಿಗೊಂಡಿರುವುದು ಕಾಣಬರುತ್ತದೆ. ಅಷ್ಟಲ್ಲದೇ ಭಿಕಾರಿ ಭೀಮಯ್ಯರ ಪೂರ್ವಾಶ್ರಮ ದ ಭೀಕರ ರಣಗುಡುವ ಭಯಂಕರ ಅನುಭವದ ಗ್ರಹಿಕೆಯ ಪಡಿನೆಳಲೇ ಪ್ರಸ್ತುತ ವಚನದಲ್ಲಿ ಈ ರೀತಿ ಬೆಡಗಿನ ರೂಪಕವಾಗಿ ಮೈದಾಳಿದ್ದು ಕಂಡು ನಿಜವಾಗಿ ರೋಮಾಂಚನದ ಸಂಚಲನೆಯನ್ನೇ ಉಂಟು ಮಾಡುತ್ತದೆ. ಇಲ್ಲಿ ಭಿಕಾರಿ ಭೀಮಯ್ಯ ಶರಣ ಈ ಕೆಳಗಿನ ವಚನದ ಸಾಲುಗಳು ಹೀಗಿದೆ;
*#ಸಂಚಲದ ಪಂಚ ಕರಣಗಳ ತೆಗೆದುಂಡು,* *ರುಂಡಮಾಲೆಯ ರಣಮಾಲೆಯ ಹೆಣಮಾಲೆಯ ಚಾರುಚ್ಚಿದಲ್ಲದೆ,*
*ಭಿಕಾರಿ ಭೀಮೇಶ್ವರಲಿಂಗಕ್ಕೆ ದೂರ ಕಾಣಾ, ಕರುತಿರುವ #ಗೊರವಾ.*
ಜೀವವೊಂದನ್ನು ತಿಂದಲ್ಲದೇ ಜೀವಿಯು ಜೀವಿಸ ಲಾರದು ಎನ್ನುವ ಮಾತನ್ನು ಇಲ್ಲಿ ವಚನದ ಈ ಸಾಲು ಧ್ವನಿಸುವಂತಿದೆ! ಈ ಕೊಂದು ಬದುಕುವ ಜೀವನ ಬಿಟ್ಟು, ತೋರುವಂತೆ ತೊಟ್ಟಿರುವ ರಣ ಭೀಕರವಾದ ವೇಷಭೂಷಣಗಳನ್ನು ಕಟ್ಟು ಬಿಚ್ಚಿ ತಗೆದುಹಾಕಿದಲ್ಲದೇ ಆತನು ಭಿಕಾರಿ ಭೀಮೇಶ್ವರ ಲಿಂಗಕ್ಕೆ ದೂರ ಆಗುವನು ಎನ್ನುವಲ್ಲಿನ ವಚನದ ಈ ಸಾಲುಗಳು ನಿಜಕ್ಕೂ ಭಿಕಾರಿ ಭೀಮೇಶ್ವರನ್ನು ವಿಶಿಷ್ಟ ಹಾಗೂ ವಿಶೇಷವಾದ ಶರಣರೆಂಬುದನ್ನು ಈ ಸಾಲುಗಳು ಖರೆ ಸಾಬೀತು ಪಡಿಸಿಬಿಡುತ್ತವೆ.
*ಅಳಗುಂಡಿ ಅಂದಾನಯ್ಯ*