ವಿಜಯ ಸಂಕೇಶ್ವರರು: ಸಾಧನೆಯ ಸಿಂಹಾಸನಾರೋಹಿ

ವಿಜಯ ಸಂಕೇಶ್ವರರು: ಸಾಧನೆಯ ಸಿಂಹಾಸನಾರೋಹಿ
ಗದಗ ಜಿಲ್ಲೆಯ ಬೆಟಗೇರಿ ಗ್ರಾಮದಲ್ಲಿ 1950ರ ಆಗಸ್ಟ್ 2ರಂದು ಜನಿಸಿದ ವಿಜಯ ಸಂಕೇಶ್ವರರು, ತಮ್ಮ ದುಡಿಮೆ, ದೃಢ ಸಂಕಲ್ಪ ಮತ್ತು ವಿಶಿಷ್ಟ ದೃಷ್ಟಿಕೋನದ ಮೂಲಕ ನೂರಾರು ಜನರಿಗೆ ಆದರ್ಶರಾಗಿರುವ ವ್ಯಕ್ತಿತ್ವ. ತಂದೆ ಬಸವಣ್ಣೆಪ್ಪ ಮತ್ತು ತಾಯಿ ಚಂದ್ರಮ್ಮ ಅವರ ಸಂಸ್ಕಾರಗಳಲ್ಲಿ ಬೆಳೆದ ವಿಜಯ ಅವರು ಪ್ರಾರಂಭದಲ್ಲಿ ಮುದ್ರಣ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿದರು.
ಆದರೆ ಉದ್ಯಮ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸಾಧನೆ ಮಾಡಬೇಕೆಂಬ ಧೈರ್ಯ ಮತ್ತು ಕನಸು ಅವರನ್ನು 26ನೇ ವಯಸ್ಸಿನಲ್ಲಿ ಲಾರಿ ಉದ್ಯಮಕ್ಕೆ ಸೆಳೆದಿತು. ಒಂದು ಲಾರಿಯಿಂದ ಆರಂಭವಾದ ಈ ಪಯಣ, ಇಂದು 3500ಕ್ಕೂ ಹೆಚ್ಚು ಲಾರಿಗಳ ಹಾಗೂ 400ಕ್ಕೂ ಹೆಚ್ಚು ಬಸ್ಸುಗಳ ವೈಶಾಲ್ಯವಿರುವ ವಿಆರ್‌ಎಲ್ ಸಂಸ್ಥೆಯಾಗಿ ಬೆಳೆದಿದೆ.
1983ರಲ್ಲಿ ಸ್ಥಾಪಿತವಾದ ವಿಆರ್‌ಎಲ್ ಟ್ರಾನ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ 1994ರಲ್ಲಿ ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿ ನಾನಾ ಕ್ಷೇತ್ರಗಳಲ್ಲಿ ಪಾದಾರ್ಪಣೆ ಮಾಡಿತು. ಸರಕು ಸಾಗಣಿಕೆಯಿಂದ ಹಿಡಿದು ಪ್ರಯಾಣಿಕರ ಸಾರಿಗೆವರೆಗೆ ಸೇವೆ ವಿಸ್ತಾರಗೊಂಡಿದ್ದು, ವಿಆರ್‌ಎಲ್ ಬಸ್ಸುಗಳು ಕರ್ನಾಟಕದ ಮಾತ್ರವಲ್ಲದೆ ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಜನಪ್ರಿಯವಾದವು.
ಸುದ್ದಿ ಜಗತ್ತಿನಲ್ಲಿ ‘ವಿಜಯ ಕರ್ನಾಟಕ’ ಪತ್ರಿಕೆಯಿಂದ ಕ್ರಾಂತಿ ಮೂಡಿಸಿದ ವಿಜಯ ಸಂಕೇಶ್ವರರು, ಅದನ್ನು ಟೈಮ್ಸ್ ಗ್ರೂಪ್‍ಗೆ ಮಾರಾಟ ಮಾಡಿದ ಬಳಿಕ ‘ವಿಜಯವಾಣಿ’ ಪತ್ರಿಕೆಯನ್ನು ಆರಂಭಿಸಿ ಮತ್ತೆ ಜನಮನ ಗೆದ್ದರು. ಜೊತೆಗೆ ‘ದಿಗ್ವಿಜಯ 24x7’ ನ್ಯೂಸ್ ಚಾನೆಲ್ ಮೂಲಕ ಸುದ್ದಿಜಾಲದ ಜಗತ್ತಿಗೆ ಹೊಸ ಬಣ್ಣ ತರುವಲ್ಲಿ ಅವರು ಯಶಸ್ವಿಯಾದರು.
ರಾಜಕೀಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಪಾದಚಿಹ್ನೆ ಬಿಟ್ಟಿದ್ದಾರೆ. ಪದ್ಮಶ್ರೀ ಸೇರಿದಂತೆ ಹಲವು ಗೌರವಗಳು ಅವರ ಸಾಧನೆಗೆ ದೊರೆತಿವೆ. ಅವರ ಜೀವನ ಚಲನಚಿತ್ರ ರೂಪದಲ್ಲಿಯೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಪ್ರತಿಭೆ, ಪರಿಶ್ರಮ ಮತ್ತು ಪ್ರಜ್ಞೆಯಿಂದ ವಿಜಯಗಳ ದಿಗ್ವಿಜಯ ಸಾಧಿಸಿರುವ ವಿಜಯ ಸಂಕೇಶ್ವರರು ನಾಡಿನ ಯುವತೆಗೆ ಪ್ರೇರಣೆಯ ಪುಂಜವಾಗಿದ್ದಾರೆ.
-ಶರಣಗೌಡ ಪಾಟೀಲ ಪಾಳಾ