ಅಪ್ಪಾರಾವ ಅಕ್ಕೋಣೆ

ಅಪ್ಪಾರಾವ ಅಕ್ಕೋಣೆ
ಅಪ್ಪಾರಾವ ಅಕ್ಕೋಣೆಯವರ ಹೆಸರು ಕಲಬುರ್ಗಿ ನೆಲದಲ್ಲಿ ಚಿರಪರಿಚಿತ ಅಧ್ಯಯನ ಅಧ್ಯಾಪನಗಳಿಂದ ಜ್ಞಾನದಾಹಿಯದಲ್ಲಿ ವಿದ್ಯಾದಾನಿಯಾಗಿ ಬದುಕಿದವರು. ಶರಣ ಸಾಹಿತ್ಯದ ಮೌಲ್ಯಗಳಿಗೆ ತಲೆಬಾಗಿದವರು. ಸಹಕಾರ ತತ್ವದಡಿಯಲ್ಲಿ ದುಡಿದವರು. ರಕ್ತದಾನ ಜೀವದಾನದಷ್ಟೇ ಮಹತ್ವವೆಂದು ಬಗೆದು ಅನುಷ್ಠಾನಕ್ಕೆ ಇಳಿಸಿದವರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ತೇರನ್ನು ಜಗದಗಲ ಮುಗಿಲಗಲ ಎಳೆದು ತಂದವರು. ಮನೆತನದ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಿದವರು. ಬಹುಮುಖಿ ಚಟುವಟಿಕೆಗಳ ಮೂಲಕ ಸದಾ ಕ್ರಿಯಾಶೀಲರಾದವರು. ಎಲ್ಲರನ್ನೂ ಒಗ್ಗೂಡಿಸುತ್ತ ಕಾರ್ಯ ಪ್ರವೃತ್ತರಾದವರು. ಎಂಟು ದಶಕಗಳ ತುಂಬು ಜೀವನದಲ್ಲಿ ಉತ್ಸಾಹದ ಚಿಲುಮೆಯಂತೆ ಚಿಮ್ಮಿದವರು. ಇಂತಹ ಮಹನಿಯರನ್ನು ನಾಡಿಗೆ ಪರಿಚಯಿಸುವುದು ನಮ್ಮ ಬದುಕಿನ ಮಾದರಿ ಎಂಬಂತೆ ಭಾವಿಸುತ್ತೇನೆ.
ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾಂವ ಎಂಬ ಪುಟ್ಟ ಹಳ್ಳಿಯಲ್ಲಿ ೧೯೪೨ ಅಗಸ್ಟ್ ೧೦ರಂದು ಅಪ್ಪಾರಾವ ಜನಿಸಿದರು. ತಾಯಿ ಶರಣಮ್ಮ ಮತ್ತು ತಂದೆ ವೀರಭದ್ರಪ್ಪನವರ ಬದುಕಿನ ಮಾದರಿಯಂತೆ ದುಡಿಮೆಯನ್ನು ಆಪ್ತವಾಗಿ ಮೈಗೂಡಿಸಿಕೊಂಡವರು. ಡೊಂಗರಗಾಂವ, ಕಲಬುರ್ಗಿ ಕಡೆಗಳಲ್ಲಿ ಓದಿ ಎಚ್ ಎಸ್.ಎಲ್.ಎಂ.ಪಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಶಿಕ್ಷಣದ ಮಹತ್ವವನ್ನು ತಿಳಿಸಿದ್ದಾರೆ. ತಾಂತ್ರಿಕ ವಿಚಾ ಶಿಕ್ಷಣವನ್ನು ಕೈಬಿಟ್ಟು ಭಾವನಾತ್ಮಕ ಕಲಾ ಶಿಕ್ಷಣಕ್ಕೆ ಮಾರುಹೋದರು. ಈಗ ಮಕ್ಕಳು, ಮೊಮ್ಮಕ್ಕಳ ಜೊತೆ ತುಂಬು ಜೀವನ ಸಾಗಿಸುತ್ತ ತಾವು ಮತ್ತು ತಮ್ಮ ಕುಟುಂಬಕ್ಕೆ ಸೀಮಿತಗೊಳ್ಳದೆ ಸಮಾಜಕ್ಕೆ ತೆರೆದುಕೊಂಡಿದ್ದಾರೆ.
ವಾರ್ತಾ ಇಲಾಖೆಯ ಅತ್ಯುನ್ನತ ಹುದ್ದೆಗೆ ಏರಿದರೂ ನೌಕರಿಯನ್ನು ಸೇವೆಯೆಂದು ಭಾವಿಸಿ ದುಡಿದಿದ್ದಾರೆ. ಸುದ್ದಿಯನ್ನು ಪ್ರಚಾರ ಮಾಡಬೇಕಾದರೆ ಅದರಲ್ಲಿ ಸತ್ಯತೆ ಇರಬೇಕೆಂದು ನಂಬಿದವರು. ಜನರ ಮನೆ ಮನೆಗೆ ಸತ್ಯ ನಿಷ್ಠುರವಾದ, ಪಾರದರ್ಶಕವಾದ ಸುದ್ದಿಗಳನ್ನು ಮುಟ್ಟಿಸಲು ನಿಷ್ಠೆಯಿಂದ ಕಾರ್ಯ ಮಾಡಿದ್ದಾರೆ. ಮಾಹಿತಿ ಎಂಬುದು ದೇಶದ ವಿಚಾರಧಾರೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂದು ನಂಬಿದವರು. ಸುಳ್ಳು ಸುದ್ದಿಯ ಪ್ರಚಾರವನ್ನು ಕಟುವಾಗಿ ವಿರೋಧಿಸುತ್ತಿದ್ದರು. ಸುಸ್ಥಿರ ಅಭಿವೃದ್ಧಿಯ ಎಲ್ಲ ಆಯಾಮಗಳನ್ನು ಪ್ರಚಾರಕ್ಕೆ ತರುತ್ತಿದ್ದರು. ಕರ್ನಾಟಕದ ಮುನ್ನಡೆಗೆ ಪೂರಕವಾದ ಮಾಹಿತಿಯ ಪ್ರಚಾರಾಂದೋಲನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ವಾರ್ತಾ ಇಲಾಖೆಯ ಸಿಬ್ಬಂದಿಗಳಿಗೂ ಪತ್ರಕರ್ತರಿಗೂ, ಪತ್ರಿಕೋದ್ಯಮಿಗಳಿಗೂ, ಜನಪ್ರತಿನಿಧಿಗಳಿಗೂ ಸೇತುಬಂಧುವಾಗಿ ಪ್ರಾಮಾಣಿಕ ಸೇವೆ ಮಾಡಿದ್ದಾರೆ.
ಅಪ್ಪಾರಾವ ಅಕ್ಕೊಣೆಯವರಿಗೆ ಬಾಲ್ಯದಿಂದಲೂ ಶರಣರ ನಡೆನುಡಿಗಳಿಗೆ ಸಮರ್ಪಣಾಭಾವದಿಂದ ಅರ್ಪಿಸಿಕೊಂಡ ಮನಸ್ಸಿದೆ. ಅವರ ತಂದೆ ತಾಯಿಗಳು ಶರಣರಂತೆ ಬದುಕಿರುವುದೇ ಇಂತಹ ಮನಃಸ್ಥಿತಿಗೆ ಕಾರಣ ಎನ್ನಬಹುದು. ಸರಳ ಜೀವನಶೈಲಿ, ಎಲ್ಲ ಜಾತಿ ಜನಾಂಗದವರನ್ನು ಸಮಭಾವದಿಂದ ನೋಡುವ ಪ್ರವೃತ್ತಿ ಇವರದ್ದು. ಅತ್ಯುನ್ನತ ಹುದ್ದೆಯಲ್ಲಿದ್ದರೂ ವಿನೀತಭಾವವನ್ನು ತಾಳಿ ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೀತಿಯನ್ನು ತೋರುತ್ತ ಕಾರುಣ್ಯಮತಿಯಾಗಿ ಬದುಕಿದ್ದಾರೆ. ಎಲ್ಲ ಶರಣ ಶರಣೆಯರ ವಚನಾಮೃತವನ್ನು ಸವಿದು ಅನುಭಾವದ ನೆಲೆಯಲ್ಲಿ ತುಂಬು ಜೀವನ ನಡೆಸುತ್ತಿದ್ದಾರೆ. 'ಎನಗಿಂತ ಕಿರಿಯರಿಲ್ಲ' ಎನ್ನುವ ನಮ್ರತೆ ಇವರಲ್ಲಿದೆ.
ಅಪ್ಪಾರಾವ ಅಕ್ಕೋಣೆ ಅವರು ಕನ್ನಡ ನಾಡು ನುಡಿಯ ಸೇವೆಯನ್ನು ನಾವು ನೆನೆಯಲೇಬೇಕು. ಕನ್ನಡದ ಉಳಿವಿಗಾಗಿ ಬೆವರು ಸುರಿಸುತ್ತಿರುವ ಇವರಿಗೆ ಕನ್ನಡದ ಬಗ್ಗೆ ಅಪಾರವಾದ ಪ್ರೀತಿ ಇದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡನಾಡಿನ ಗತವೈಭವವನ್ನು ಸದಾ ನೆನೆಯುತ್ತಾ ಕನ್ನಡದ ನೆಲಜಲವನ್ನು ಉಳಿಸಿ ಬೆಳೆಸುವುದಕ್ಕಾಗಿ ಅನೇಕ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಕಲಬುರಗಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಭಾಷೆಯ ಕುರಿತಾಗಿ
ವಿಚಾರ ಸಂಕಿರಣಗಳನ್ನು, ಸಮ್ಮೇಳನಗಳನ್ನು, ನುಡಿಹಬ್ಬಗಳನ್ನು ಮಾಡಿರುವ ಇವರು ಕನ್ನಡವನ್ನು ಕಟ್ಟಿ ಬೆಳೆಸಲು ಅವಿರತ ದುಡಿದಿದ್ದಾರೆ. 'ಕನ್ನಡವೇ ಸತ್ಯ, ಕನ್ನಡವೇ ನಿತ್ಯ... ಎನ್ನುವಂತೆ ಬಾಳುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಅಕ್ಕೋಣೆ
ಜಿಲ್ಲಾ ಕನ್ನಡ ಸಾಹಿತ್ಯ ಪರಿತ್ತಿನ ಅಧ್ಯಕ್ಷರಾಗುವ ಮುನ್ನ ೧೯೬೯ರಲ್ಲಿ ಶ್ರೀ ತವಗ ಭೀಮಸೇನರಾವ ಕಲಬುರಗಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿತಿಗೆ ಅಧ್ಯಕ್ಷರಾಗಿರುವಾಗ ಶ್ರೀ ಅಪ್ಪಾರಾವ ಅಕ್ಕೋಣಿಯವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ನಂತರ ಪ್ರೊ. ಪ್ರಭುಲಿಂಗಯ್ಯಾ ಮಲ್ಲಾಪೂರ ಅವರ ಅಧ್ಯಕ್ಷತೆಯಲ್ಲಿಯೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರಂತೆ. ಅಂದಿನಿಂದ ಇಂದಿನವರೆಗೂ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ವಿವಿಧ ಸಮ್ಮೇಳನಗಳು, ಗೋಷ್ಠಿಗಳು ಇತರೆ ವಿಷಯಗಳ ಬಗ್ಗೆ ಆಗಿನ ಅಧ್ಯಕ್ಷರುಗಳು ಇವರ ಸಲಹೆ, ಮಾರ್ಗದರ್ಶನ ಬಯಸುತ್ತಿದ್ದರಂತೆ.
ಪೂಜ್ಯ ದೊಡ್ಡಪ್ಪ ಅಪ್ಪ ಅವರ ಆಶೀರ್ವಾದ ಮತ್ತು ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರ ಸಹಕಾರದೊಂದಿಗೆ ೧೯೮೭ರಲ್ಲಿ ಕಲಬುರಗಿಯಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ೫೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಶ್ರೀ ಸಿದ್ದಯ್ಯ ಪುರಾಣಿಕರು ಆ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಆಗ ಶ್ರೀ ಬಾಪುಗೌಡ ದರ್ಶನಾಪುರ, ಶ್ರೀ ಅಪ್ಪಾರಾವ ಅಕ್ಕೋಣಿಯವರು, ಶ್ರೀ ಬಿ.ಮಹಾದೇವಪ್ಪ, ಶ್ರೀ ಲಕ್ಷ್ಮಣರಾವ ಗೋಗಿ, ಶ್ರೀ ದೇವಿಂದ್ರಪ್ಪ ಬಿ.ಡಿ.ಓ ಮತ್ತು ಶ್ರೀ ಗಳಂಗಪ್ಪ ಪಾಟೀಲರು ಇನ್ನು ಅನೇಕರು ಕೂಡಿಕೊಂಡು ಆ ಸಮ್ಮೇಳನವನ್ನು ಯಶಸ್ವಿ ಗೊಳಿಸಿದ್ದರು.
ಶ್ರೀ ಅಪ್ಪಾರಾವ ಅಕ್ಕೋಣಿಯವರು ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಅವಧಿಯಲ್ಲಿ ೨೦೦೧ರಿಂದ ೨೦೦೪ರ ವರೆಗೆ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು ನಿರಂತರ ನಡೆದಿವೆ. ಪ್ರತಿ ವರ್ಷ ನವೆಂಬರ್ ೧ರಂದು ರಾಜ್ಯೋತ್ಸವ ಕಾರ್ಯಕ್ರಮವು ೨೦೦೧, ೨೦೦೨, ೨೦೦೩ ಮತ್ತು ೨೦೦೪ರಲ್ಲಿ ೪ ದಿವಸಗಳ ಕಾಲ ಕನ್ನಡ ಚಟುವಟಿಕೆಗಳು ಹಮ್ಮಿಕೊಂಡಿದ್ದರು. ಹೊರಗಿನಿಂದ ಸಾಹಿತಿಗಳಾದ ನಾಡೋಜ ಚನ್ನವೀರ ಕಣವಿ, ಶ್ರೀ ಪಾಟೀಲ ಪುಟ್ಟಪ್ಪ, ಶ್ರೀ ಗುರುಲಿಂಗ ಕಾಪಸೆ, ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ದುರ್ಗಾದಾಸ, ಡಾ.ಜಿ.ಎಸ್. ಸಿದ್ಧಲಿಂಗಯನವರನ್ನು ವಿವಿಧ ಕಾರ್ಯಕ್ರಮಗಳಿಗೆ ಬರಮಾಡಿಕೊಂಡಿದ್ದರು.
ನ್ನಡ ರಾಜ್ಯೋತ್ಸವದಲ್ಲಿ ಉಪನ್ಯಾಸಮಾಲೆ, ಕಾವ್ಯ ಸಂಗೀಶ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು - ೨೦೦೨ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಾಶನದಲ್ಲಿ 'ಕಾವ್ಯತೀರ್ಧ ಎಂಬ ಜಿಲ್ಲಾ ಪ್ರಾತಿನಿಧಿಕ ಕವನ ಸಂಕಲನ ಹಾಗೂ 'ಮೌನವೊಡೆದ ಮಾತು' ಎಂಬ ಜಿಲ್ಲಾ ಪ್ರಾತಿನಿಧಿಕ ಕಥಾ ಸಂಕಲನಗಳನ್ನು ಶ್ರೀ ಅಪ್ಪಾರಾವ ಅಕ್ಟೋಣಿಯವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಂಡಿವೆ. ಕುಂಚ ಮತ್ತು ಏರ್ಪಡಿಸುತ್ತಿದ್ದರು.
"ಶ್ರೀ ಅಪ್ಪಾರಾವ ಅಕ್ಕೋಣಿಯವರು ಅಧ್ಯಕ್ಷರಾಗಿರುವಾಗ 'ಸಾಹಿತ್ಯ 'ಸಂವಾದ' ಕಾರ್ಯಕ್ರಮದ ಮುಖಾಂತರ ಅನೇಕ ಸಾಹಿತಿಗಳು ಮತ್ತು ರಾಜಕಾರಣಿಗಳನ್ನು ಒಗ್ಗೂಡಿಸಿ ಕನ್ನಡ ಭವನಕ್ಕೆ ಕರೆತಂದರು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗಡೆ ಮತ್ತು ಶ್ರೀ ವೀರಪ್ಪ ಮೊಯಿಲಿಯವರು ಕನ್ನಡ ಭವನಕ್ಕೆ ಭೇಟಿ ಕೊಟ್ಟವರಲ್ಲಿ ಪ್ರಮುಖರಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಪ್ರತಿ ತಿಂಗಳು 'ಕಾವ್ಯ ಕಾವೇರಿ' ಎಂಬ ಕಾರ್ಯ ಕ್ರಮ ಏರ್ಪಡಿಸಿ ಸ್ಥಳೀಯ ಕವಿಗಳು ಮತ್ತು ಸಂಗೀತಗಾರರಿಗೆ ಪ್ರೋತ್ಸಾಹಿಸಿದ್ದಾರೆ. ಸಾಹಿತ್ಯ ಯಾತ್ರೆ ಕೈಗೊಂಡು ನಗರದ ಒಂದೊಂದು ಬಡಾವಣೆಯಲ್ಲಿ ಒಬ್ಬರ ಮನೆಯಲ್ಲಿ ಉಪನ್ಯಾಸ ಏರ್ಪಡಿಸಿ ಸಾಹಿತಿ ಮತ್ತು ಸಾಹಿತ್ಯಾಭಿಮಾನಿಗಳಲ್ಲಿ ಆಸಕ್ತಿ ತುಂಬಿದ್ದಾರೆ. ಪುಸ್ತಕ ಮಾರಾಟಕ್ಕೂ ವ್ಯವಸ್ಥೆ ಮಾಡಿದ್ದರು.
೨೦೦೩ ಮಾರ್ಚ್ ೧೫ ಮತ್ತು ೧೬ರಂದು ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಶ್ರೀ ರೇವಣಸಿದ್ದಯ್ಯಾ ರುದ್ರಸ್ವಾಮಿಮಠ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ 'ಕಾಗಿಣಾ' ಎಂಬ ಸ್ಮರಣ ಸಂಚಿಕೆ ಪ್ರಕಟಗೊಂಡಿದೆ.
ಪರಿಷತ್ತು ಬುಕ್ ಟ್ರಸ್ಟನೊಂದಿಗೆ ಜಂಟಿಯಾಗಿ ಪುಸ್ತಕ ಪ್ರದರ್ಶನ 'ಹಮ್ಮಿಕೊಂಡು ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಎರಡು ದಿವಸಗಳ ಕಾಲ ಪುಸ್ತಕೋತ್ಸವವನ್ನು ಏರ್ಪಡಿಸಿದ್ದರು.
ಜಿಲ್ಲಾ ಕನ್ನಡ ಭವನವು ಸದಾ ಜನಸಂಪರ್ಕದಲ್ಲಿ ಇರಲಿ ಎಂದು ತಿಳಿದ ಶ್ರೀ ಅಪ್ಪಾರಾವ ಅಕ್ಕೋಣಿಯವರು ಜಿಲ್ಲಾ ಮತ್ತು ಕೇಂದ್ರ ಸಾರ್ವಜನಿಕ ಗ್ರಂಥಾಲಯದ ಮುಖ್ಯ ಅಧಿಕಾರಿಗಳಿಗೆ ಕನ್ನಡ ಭವನದಲ್ಲಿ ಸಾರ್ವಜನಿಕರಿಗಾಗಿ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಗ್ರಂಥಾಲಯದ ಶಾಖೆಯನ್ನು ತೆರೆಯಬೇಕು. ಅದಕ್ಕೆ ಪರಿಷತ್ತು ಉಚಿತವಾಗಿ ಸ್ಥಳಾವಕಾಶ ಒದಗಿಸುವುದು ಎಂದು ಪತ್ರ ಬರೆದಾಗ ಅದಕ್ಕೆ ಆ ಗ್ರಂಥಾಲಯದ ಅಧಿಕಾರಿಗಳು ಸ್ಪಂದಿಸಿ ಕಲಬುರಗಿ ಜಿಲ್ಲಾ ಗ್ರಂಥಾಲಯದ ಒಂದು ಶಾಖೆಯನ್ನು ಕನ್ನಡ ಭವನದಲ್ಲಿ ತೆರೆದು ಓದುಗರಿಗೆ ಅನುಕೂಲ ಮಾಡಿಕೊಟ್ಟರು. ಇವರ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ತಾಲ್ಲೂಕಿಗೆ ಒಂದು ವರ್ಷ ಮಾತ್ರ ಐದು ಸಾವಿರ ರೂಪಾಯಿಗಳು ಕನ್ನಡ ಚಟುವಟಿಕೆಗಳಿಗಾಗಿ ಅನುದಾನ ಒದಗಿಸಿಕೊಟ್ಟರು.
ಗುಲಬರ್ಗಾ ಜಿಲ್ಲಾ ಪದವಿಧರರ ಪತ್ತಿನ ಸಹಕಾರ ಸಂಘ ನಿ. ಸ್ಥಾಪನೆ ಗುಲಬರ್ಗಾ ಜಿಲ್ಲಾ ಪದವಿಧರರ ಪತ್ತಿನ ಸಹಕಾರ ಸಂಘ ನಿ.
ಇದು ಶ್ರೀ ಅಪ್ಪಾರಾವ ಅಕ್ಕೋಣಿಯವರ ಕನಸಿನ ಕೂಸು. ಕಲಬುಗರಿಯ ಜಿಲ್ಲಾ ಪದವಿಧರರ ಪತ್ತಿನ ಸಹಕಾರ ಸಂಘ ರಾಜ್ಯದಲ್ಲಿರುವ ಐದಾರು ಪದವಿಧರರ ಪತ್ತಿನ ಸಹಕಾರ ಸಂಘಗಳಲ್ಲಿ ಒಂದಾಗಿದೆ. ಐದಾರು ಪದವಿಧರರ ಸಹಕಾರ ಸಂಘಗಳಲ್ಲಿ, ಪದವಿಧರರ ಪತ್ತಿನ ಸಹಕಾರಿ ಸಂಘ, → ಪ್ರಮುಖರಾಗಿದ್ದಾರೆ ಶವಮೊಗ್ಗ, ಪದವಿಧರರ ಪತ್ತಿನ ಸಹಕಾರಿ ಸಂಘ, ಮೈಸೂರು (ಈಗ ಅದು ಬ್ಯಾಂಕಾಗಿದೆ) ಪದವಿಧರರ ಪತ್ತಿನ ಸಹಕಾರ ಸಂಘ, ಬೆಂಗಳೂರು ಪ್ರಮುಖವಾಗಿವೆ.
ಪದವಿಧರರ ಸಹಕಾರ ಸಂಘ ಸ್ಥಾಪಿಸುವ ಸಂದರ್ಭದಲ್ಲಿ ಕಲಬುರಗಿ ವಿಭಾಗದಲ್ಲಿಯೇ ಇಂತಹ ಚಟುವಟಿಕೆಯ ಸಹಕಾರ ಸಂಘಗಗಳೇ ಇರಲಿಲ್ಲ. ಈ ಸಂಘದ ಸ್ಥಾಪನೆಯ ಹಿಂದೆ ಒಂದು ರೋಚಕವಾದ ಕಥೆಯೇ ಇದೆ ಎನ್ನುತ್ತಾರೆ ಪ್ರಾರಂಭಿಕವಾಗಿ ಗುಲಬರ್ಗಾ ತಾಲ್ಲೂಕು ಪದವೀಧರ ಪತ್ತಿನ ಸಹಕಾರ ಸಂಘ ನಿಯಮಿತ ಕಲಬುರ್ಗಿ ಎಂದು ಆಗಷ್ಟ ೧೯೯೫ರಲ್ಲಿ ನೋಂದಾಯಿಸಲಾಯಿತು. ನಗರದ ಮಹಾತ್ಮ ಬಸವೇಶ್ವರ ಕಾಲನಿಯಲ್ಲಿಯೇ ಒಂದು ಬಾಡಿಗೆ ಅಂಗಡಿಯನ್ನು ತೆಗೆದುಕೊಂಡು ಕಛೇರಿಯ ಕಾರ್ಯ ಪ್ರಾರಂಭವಾಯಿತು. ಅಪ್ಪಾರಾವ ಅಕ್ಕೋಣೆಯವರು ಅದರ ಅಧ್ಯಕ್ಷರಾದರು ಮತ್ತು ಶ್ರೀ ಎಸ್.ಎಸ್. ಬೊಮ್ಮ ಇವರು ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅದರಂತೆ ಕೆಳಕಂಡ ಸದಸ್ಯರನ್ನು ಕೂಡಾ ಆಯ್ಕೆ ಮಾಡಲಾಯಿತು.
ನಾಗಣ್ಣ ಗಣಜಲಖೇಡ, ಬಸವರಾಜ ಆವಂಟಿ, ಅಣ್ಣಾರಾವ ಬಿರಾದಾರ, ಚನ್ನಪ್ಪ ರಟಗಲ,ನಾಗೇಂದ್ರಪ್ಪ ಪಾಟೀಲ, ಡಿ.ಎಮ್.ಪಾಟೀಲ ಈ ಪ್ರಕಾರ ಸಂಘವು ೧೯೯೫ರಲ್ಲಿ ಅಸ್ತಿತ್ವಕ್ಕೆ ಬಂದಿತು.
ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿ. ಸ್ಥಾಪನೆ
ಕೃಷಿ ಸಾಲ, ಹೈನುಗಾರಿಕೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಹಕಾರ ತತ್ವಗಳನ್ನು ಸಾಹಿತ್ಯ ಮತ್ತು ಪುಸ್ತಕ ಪ್ರಕಾಶನದಲ್ಲಿ ತಂದ ಕೀರ್ತಿ ಶ್ರೀ ಅಪ್ಪಾರಾವ ಅಕ್ಕೋಣೆಯವರಿಗೆ ಸಲ್ಲುತ್ತದೆ. ಇದೊಂದು ವಿಶೇಷ ಮತ್ತುಪ್ರಯೋಗವೆಂತಲೇ ಹೇಳಬೇಕಾಗುತ್ತದೆ. ಹೀಗೆ ಅಪ್ಪಾರಾವ ಅಕ್ಕೋಣಿಯವರು ಹೊಸ ವಿಚಾರಧಾರೆಯ ಮುಖಂಡರಾಗಿದ್ದಾರೆ. ಅವರು ಇಳಿವಯಸ್ಸಿನಲ್ಲಿಯೂ ಪಾದರಸದಂತೆ ಕ್ರಿಯಾಶೀಲರಾಗಿದ್ದಾರೆ. ಅವರಿಗೆ ವಯಸ್ಸು ಒಂದು ಸಂಖ್ಯೆ ಮಾತ್ರ ಎನಿಸುತ್ತದೆ. ಅವರ ಮನಸ್ಸಿಗೆ ವಿಚಾರಧಾರೆಗಳಿಗೆ, ಕನಸುಗಳಿಗೆ ಖಂಡಿತಾ ವಯಸ್ಸಾಗಿಲ್ಲ ಎಂಬುದನ್ನೇ ಇಂಥ ಅಪರೂಪದ ಸಂಘ ಹುಟ್ಟು ಹಾಕುವುದರ ಮೂಲಕ ಸಾಬೀತು ಪಡಿಸಿದ್ದಾರೆ.
ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ ಕಲಬುರಗಿ, ೨೦೦೮ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದು ಕೇರಳದ ರೈಟರ್ಸ್ ಗಿಲ್ಡ್ (ಬರಹಗಾರರ ಸಂಘ) ಮಾದರಿಯಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘವು ಸಹಕಾರಿ ತತ್ವದಲ್ಲಿ ಸಾಹಿತ್ಯ ಚಟುವಟಿಕೆಅಚ್ಚುಕಟ್ಟಾಗಿ ನೆರವೇರಿಸುತ್ತಿದೆ. ಸಾಹಿತ್ಯದ ಕುರಿತು ಆಸಕ್ತಿ ಎಲ್ಲರಲ್ಲೂ ಮೂಡಬೇಕು ಮತ್ತು ಪುಸ್ತಕ ಸಂಸ್ಕೃತಿ ಎಲ್ಲರಿಗೂ ಮುಟ್ಟಬೇಕು ಎಂಬುದು ಸಂಘದ ಉದ್ದೇಶವಾಗಿದೆ.
ಹೀಗೆ ಶ್ರೀ ಅಪ್ಪಾರಾವ ಅಕ್ಕೋಣಿಯವರು ಇರುವ ಕಡೆಗೆ ಹೊಸ ಮನ್ವಂತರವೇ ಕಾಣಬಹುದಾಗಿದೆ. ಅವರಿದ್ದಲ್ಲಿ ಹೊಸ ಹೊಸ ಚಿಂತನೆ, ಯೋಜನೆ ಮತ್ತು ಪ್ರಯೋಗಗಳನ್ನು ಕಾಣುತ್ತೇವೆ. ಒಬ್ಬ ನಾಯಕನಲ್ಲಿರಬೇಕಾದ ಸವಾಲು ಸ್ವೀಕರಿಸುವ, ನಿರ್ಭಯ ವ್ಯಕ್ತಿತ್ವ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಹೃದಯ ವೈಶಾಲ್ಯ ಮತ್ತು ಹೊಸ ವಿಚಾರಗಳಿಗೆ ತೆರೆದುಕೊಳ್ಳುವ ಮನಸ್ಸು ಅವರಲ್ಲಿದೆ. ಅವರೊಬ್ಬ ಈ ನಾಡಿನ ದೂರದೃಷ್ಟಿಯುಳ್ಳ ನಿಷ್ಪಕ್ಷಪಾತ ಸ್ವಭಾವದವರಾಗಿದ್ದಾರೆ.
ಡಾ. ಶರಣಬಸಪ್ಪ ವಡ್ಡನಕೇರಿ