ಸಾಹಿತ್ಯ ಚೇತನ ಅಪ್ಪಾಸಾಹೇಬ ಅಲಿಬಾದಿ

Appasaheb alibad

ಸಾಹಿತ್ಯ ಚೇತನ ಅಪ್ಪಾಸಾಹೇಬ ಅಲಿಬಾದಿ

ಸಾಹಿತ್ಯ ಚೇತನ ಅಪ್ಪಾಸಾಹೇಬ ಅಲಿಬಾದಿ

( ದಿನಾಂಕ: 01-03-2025 ರಂದು ಜರುಗಲಿರುವ 

ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಯುತರ ಕುರಿತು ಬರೆದ ಲೇಖನ)

ಗಡಿ ಭಾಗದ ಸಾಹಿತ್ಯ ಚೇತನ , ನೇರ ನುಡಿಯ ಕವಿ, ಸಂಘಟಕ, ಪ್ರಗತಿಪರ ಚಿಂತಕ, ಪ್ರಕಾಶಕ, ಸರಳ ಸಜ್ಜನಿಕೆಯ ಸ್ನೇಹ ಜೀವಿಗಳಾದ ಅಪ್ಪಾಸಾಹೇಬ ಅಲಿಬಾದಿ ಅಥಣಿ ರವರು ಎಂದು ಹೆಮ್ಮೆಯಿಂದ ಹೇಳಬಹುದು.

ಬೆಳಗಾವಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹಲವು ಪ್ರಮುಖ ಸಾಹಿತಿಗಳಲ್ಲಿ ಶ್ರೀಯುತರ ಹೆಸರು ಮುಂಚೂಣಿಯಲ್ಲಿ ಕಾಣಬಹುದು. ಕಾಯಕ ಬದುಕಿನಲ್ಲಿ ಭಾರತೀಯ ಜೀವ ವಿಮಾ ನಿಗಮ ಅಥಣಿಯಲ್ಲಿ ೩೭ ವರ್ಷ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶ್ರೀಯುತರು ೪೨ ಗ್ರಂಥಗಳನ್ನು ಕನ್ನಡ ಸಾರಸ್ವತಲೋಕಕ್ಕೆ ನೀಡಿರುವುದು ಅಭಿನಂದನೀಯ ಸಂಗತಿಯಾಗಿದೆ. ಅಪ್ಪಾಸಾಹೇಬ ಅಲಿಬಾದಿಯವರ ಬದುಕು-ಬರಹ ಕುರಿತು ೪ ಗ್ರಂಥಗಳು ಬೆಳಕು ಕಂಡಿವೆ. ನಿರಂತರ ತಮ್ಮನ್ನು ಸಾಹಿತ್ಯ, ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿಕೊಂಡು “ಗಡಿಭಾಗದ ಸಾಹಿತ್ಯ ಚೇತನ ರಾಗಿ” ಬೆಳಗುತ್ತಿದ್ದಾರೆ.

ಅಲಿಬಾದಿಯವರು ಅಥಣಿ ತಾಲೂಕಿನ ಕನ್ನಾಳ ಗ್ರಾಮದಲ್ಲಿ ೦೧-೦೯-೧೯೬೧ ರಂದು ಬಸಪ್ಪ ಮತ್ತು ನೀಲಾಂಬಿಕೆ ದಂಪತಿಗಳ ಮಗನಾಗಿ ಜನಿಸಿದ್ದಾರೆ.

“ಬಸವ ನೀಲಾಂಬಿಕಾತನಯ” ಅಂಕಿತದಲ್ಲಿ ಸಾವಿರಾರು ವಚನಗಳನ್ನು ರಚಿಸಿ ಕನ್ನಡದ ಅಭಿಜಾತ ಆಧುನಿಕ ವಚನಕಾರರಾಗಿದ್ದಾರೆ. ೨೫ ಕವನ ಸಂಕಲನಗಳನ್ನು ನೀಡಿ, ಸಹಸ್ರಾರು ಚುಟುಕುಗಳನ್ನು ರಚಿಸಿ “ಆಧುನಿಕ ಚುಟುಕು ಬ್ರಹ್ಮ”ರಾಗಿದ್ದಾರೆ. ನಾಡಿನ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಶ್ರೀಯುತರು ವಿದ್ಯಾರ್ಥಿ ದಿಸೆಯಿಂದಲೇ ಖ್ಯಾತರಾಗಿದ್ದು ತಮ್ಮ ಆಳವಾದ ಅಧ್ಯಯನ, ವೈಜ್ಞಾನಿಕ ದೃಷ್ಟಿಕೋನ, ಜೀವಪರ ನಿಲುವು, ಸಮಾಜಪರ ಒಲವುಗಳಿಂದಾಗಿ ಜನಪ್ರಿಯ ಸ್ನೇಹಜೀವಿಯಾಗಿದ್ದಾರೆ. “ದೂರದರ್ಶನ ಕವಿಗೋಷ್ಠಿ, “ಆಕಾಶವಾಣಿ ಕವಿಗೋಷ್ಠಿ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಗೀತ ಸಂಗೀತ ಕುಂಚಗೋಷ್ಠಿಗಳಲ್ಲಿ ಹಾಗೂ ಅನುಭಾವ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ. “ಮೈಸೂರು ದಸರಾ ಕವಿಗೋಷ್ಠಿ”, “ಆಳ್ವಾಸ್ ನುಡಿಸಿರಿ”, “ಕವಿಸಮಯ-ಕವಿನಮನ” ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ಸುರ್ವೆ ಕಲ್ಚರಲ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಇವರ ಸಹಕಾರದೊಂದಿಗೆ ಕೊಂಡಜ್ಜಿ ಬಸಪ್ಪ ಭವನ ಬೆಂಗಳೂರಿನಲ್ಲಿ ದಿನಾಂಕ: ೨೨, ೨೩, ೨೪, ೨೫ ನೆಯ ಡಿಸೆಂಬರ್ ೨೦೧೭ರಲ್ಲಿ ನಡೆದ ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಮತ್ತು ಅಖಂಡ ಕರ್ನಾಟಕ ಚುಟುಕು ಸಾಹಿತ್ಯ ಮತ್ತು ಸಾಂಸ್ಕೃತಿಕ ದ್ವಿತೀಯ ಸಮ್ಮೇಳನಾಧ್ಯಕ್ಷತೆಯ ಗೌರವಕ್ಕೆ ಅಪ್ಪಾಸಾಹೇಬ ಅಲಿಬಾದಿಯವರು ಪಾತ್ರರಾಗಿರುವುದು ಅಭಿನಂದನೀಯ ಸಂಗತಿಯಾಗಿದೆ. ಲಕ್ಷದ್ವೀಪದಲ್ಲಿ ಜರುಗಿದ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಅಧ್ಯಕ್ಷರಾಗಿದ್ದಾರೆ. ಹೀಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಲವು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿದ್ದಾರೆ. ಇದು ಅವರ ಕನ್ನಡ ಕೈಂಕರ್ಯಕ್ಕೆ ಸಂದ ಗೌರವವಾಗಿದೆ.

ದೂರದರ್ಶನ ಚಂದನ ವಾಹಿನಿಯ “ಬೆಳಗು” ನೇರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಉತ್ತಮ ವಾಗ್ಮಿಗಳಾಗಿ, ಚಿಂತಕರಾಗಿ ಜನ ಮೆಚ್ಚುಗೆ ಪಡೆದಿದ್ದಾರೆ. ಶ್ರೀಯುತರು ತಮ್ಮ ಬಾಳಸಂಗಾತಿ ಕವಯತ್ರಿ ಶ್ರೀಮತಿ ಭಾರತಿ ಅವರೊಂದಿಗೆ ೪೦ ವರ್ಷಗಳಿಂದ ಆದರ್ಶ ಬದುಕನ್ನು ನಡೆಸಿದ್ದಾರೆ. ಸಾಹಿತಿ ದಂಪತಿಗಳಾಗಿ ಖ್ಯಾತರಾಗಿದ್ದಾರೆ. ಸಂತೋಷ, ವಿನೂತ, ಅಭಿಷೇಕ ಮೂವರು ಪುತ್ರ ರತ್ನರಿದ್ದು ಮೂವರು ವಿವಾಹಿತರಾಗಿದ್ದಾರೆ. ಸಾನ್ವಿ, ಶಿವಾಂಶ ಇಬ್ಬರು ಮೊಮ್ಮಕ್ಕಳನ್ನು ಹೊಂದಿದ್ದು ತುಂಬು ಬದುಕನ್ನು ನಡೆಸಿದ್ದಾರೆ. ತಮ್ಮ “ಶಾಂತಿನಿಕೇತನ ಮಹಾಮನೆ”ಯಲ್ಲಿ “ಶ್ರೀ ಸಿದ್ದೇಶ್ವರ ಗ್ರಂಥಾಲಯ” ಸ್ಥಾಪಿಸಿ ಗಣ್ಯಮಾನ್ಯರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬೆಳಗಾವಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿದಾಗ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನವನ್ನು ಕಿತ್ತೂರಿನಲ್ಲಿ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಸಂಯೋಜಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. “ದೇಶ ಸುತ್ತು ಕೋಶ ಓದು” ಎನ್ನುವ ಗಾದೆ ಮಾತಿನಂತೆ ಅಲಿಬಾದಿಯವರು ೨೦೧೬ರಲ್ಲಿ ಯೂರೋಪಿನ ಇಂಗ್ಲೆಂಡ್, ಪ್ರಾನ್ಸ್, ಬೆಲ್ಜಿಯಂ, ಜರ್ಮನಿ, ನೆದರ್‌ಲ್ಯಾಂಡ, ಸ್ವಿಜ್ಜರಲ್ಯಾಂಡ್ ಲುಥೇನ್ ಸ್ಟನ್, ಆಸ್ಟ್ರೀಯಾ ಹಾಗೂ ವ್ಯಾಟಿಕನ್ ದೇಶಗಳನ್ನು ಸಂದರ್ಶಿಸಿ ಬಂದಿದ್ದಾರೆ. ನಂತರ “ಯುರೋಪ ದರ್ಶನ” ಎಂಬ ಪ್ರವಾಸ ಕಥನವನ್ನು ಬರೆದಿದ್ದಾರೆ. ೨೦೧೮ರಲ್ಲಿ ಸಿಂಗಾಪೂರ, ಮಲೇಷಿಯಾ ಹಾಗೂ ಥೈಲ್ಯಾಂಡ ದೇಶಗಳ ಪ್ರವಾಸವನ್ನು ದಂಪತಿ ಸಮೇತ ಮಾಡಿದ್ದಾರೆ. ಹೀಗೆ ಹತ್ತಾರು ದೇಶಗಳನ್ನು ಸಂದರ್ಶಿಸಿದ ಭಾಗ್ಯಶಾಲಿಯಾಗಿದ್ದಾರೆ. “ಸ್ನೇಹಗಾನ” ಧ್ವನಿ ಸುರುಳಿಯನ್ನು ತರುವ ಮೂಲಕ ಗಾಯನ ಪ್ರಿಯರಿಗೆ ಗೀತ ರಚನೆಯ ಸವಿಯನ್ನು ಉಣಬಡಿಸಿದ್ದಾರೆ. ನಾಡು-ನುಡಿಯ ಸಂರಕ್ಷಣೆಗಾಗಿ ಹಾಗೂ ಸಾಹಿತ್ಯ-ಸಂಸ್ಕೃತಿ ಸಂವರ್ಧನೆಗಾಗಿ ೧೯೯೩ ರಲ್ಲಿ “ವಿನೂತನ ವಿಚಾರ ವೇದಿಕೆ” ಹಾಗೂ “ವಿನೂತನ ಪ್ರಕಾಶನ” ಸಂಸ್ಥೆಗಳನ್ನು ೨೦೨೦ ರಲ್ಲಿ “ಅಲಿಬಾದಿ ಸಾಂಸ್ಕೃತಿಕ ಪ್ರತಿಷ್ಠಾನ”ವನ್ನು ೨೦೨೧ರಲ್ಲಿ “ಅಪ್ಪಾಸಾಹೇಬ ಅಲಿಬಾದಿ ಎಜುಕೇಶನ್ ಅಂಡ್ ಸೋಶಿಯಲ್ ವೆಲ್ಫೇರ್ ಫೌಂಡೇಶನ್, ಅಥಣಿ " ಸಂಸ್ಥೆಗಳನ್ನು ಹುಟ್ಟುಹಾಕಿ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಸ್ಥೆಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷರಾಗಿ, ಶರಣ ಸಾಹಿತ್ಯ ಪರಿಷತ್ತಿನ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ತಾಲೂಕಾ ಅಧ್ಯಕ್ಷರಾಗಿ ಹೀಗೆ ೬೫ಕ್ಕೂ ಅಧಿಕ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸೇವಾಶ್ರೀಗಂಧವಾಗಿದ್ದಾರೆ. 

              ವಿನೂತನ ಪ್ರಕಾಶನ ಸ್ಥಾಪಿಸಿ ಬೇರೆ ಬೇರೆ ಲೇಖಕರ ೩೫ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ವಿನೂತನ ಸಾವಯವ ಕೃಷಿವನ ಅಭಿವೃದ್ಧಿ ಪಡಿಸಿ ರೋಟರಿ ಸಂಸ್ಥೆಯಿಂದ “ಶ್ರೇಷ್ಠ ಸಾವಯವ ಕೃಷಿಕ ಪ್ರಶಸ್ತಿ” ಹಾಗೂ ಬಾಪು ಸಂಸ್ಥೆ ಬೀದರ ಹಾಗೂ ಕರ್ನಾಟಕ ಸರ್ಕಾರದಿಂದ “ಬಾಪು ಪ್ರಶಸ್ತಿ” ಯನ್ನು ಪಡೆದು ಕೃಷಿಕರಿಗೆ ಮಾದರಿಯಾಗಿದ್ದಾರೆ. “ತ್ಯಾಗವೀರ ಶಿರಸಂಗಿ ಲಿಂಗರಾಜ ಪ್ರಶಸ್ತಿ”, “ಶ್ರೀ ಮರುಳಶಂಕರ ಪ್ರಶಸ್ತಿ”, “ಸಂಕ್ರಮಣ ಸಾಹಿತ್ಯ ಪುರಸ್ಕಾರ”, “ಸಾಹಿತ್ಯ ರತ್ನಾಕರ ಪ್ರಶಸ್ತಿ”, “ಡಾ. ರಾಜ ಸೇವಾ ರತ್ನ ಪ್ರಶಸ್ತಿ”, “ಮಿರ್ಜಿ ಅಣ್ಣಾರಾಯ ಪ್ರಶಸ್ತಿ”, “ಆಜುರೆ ಪ್ರಶಸ್ತಿ”, “ಅಡ್ವೈಸರ್ ಪ್ರಶಸ್ತಿ”, “ಕೃಷ್ಣಾ ತೀರದ ಸಾಹಿತ್ಯ ರತ್ನ ಪ್ರಶಸ್ತಿ”, ಹೀಗೆ ತಮ್ಮ ಸೇವಾ ಕೈಂಕರ್ಯದಿಂದ ಸುಮಾರು ೪೫ ಕ್ಕಿಂತ ಅಧಿಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 

ಐದು ದಶಕಗಳ ಸಾರ್ಥಕ ಬದುಕಿನ ಇಂತಹ ಮಹನೀಯರನ್ನು ಅಭಿನಂದಿಸಲು ಅವರ ಸಮಸ್ತ ಹಿತೈಷಿಗಳು, ಬಂಧು_ಮಿತ್ರರು ಹಾಗೂ ಅಭಿಮಾನಿ ಬಳಗ “ಸುವರ್ಣ ಮಹೋತ್ಸವ” ಅಭಿನಂದನ ಸಮಾರಂಭವನ್ನು ಅಥಣಿಯಲ್ಲಿ ದಿನಾಂಕ: ೧೧-೧೦-೨೦೧೪ ರಂದು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ “ಸುವರ್ಣ ಮಿಂಚು” ಅಭಿನಂದನ ಗ್ರಂಥವನ್ನು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜ್ಞಾನಯೋಗಾಶ್ರಮ ವಿಜಯಪುರ ಅವರು ಲೋಕಾರ್ಪಣೆಗೊಳಿಸಿ, ಅಲಿಬಾದಿ ದಂಪತಿಯನ್ನು ಸನ್ಮಾನಿಸಿ ಆಶೀರ್ವದಿಸಿದ್ದಾರೆ. ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಯ ಸುವರ್ಣ ಕನ್ನಡಿಗ-2025ರ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಸರ್ವಾಧ್ಯಕ್ಷರಾಗಿ ಆಯ್ಕೆ: ಅಪ್ಪಾಸಾಹೇಬ ಅಲಿಬಾದಿ ರವರು 

ಬೆಳಗಾವಿ ಜಿಲ್ಲಾ 4ನೇಯ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಾಹಿತ್ಯ ಪ್ರೇಮಿಗಳಿಗೆ ಎಲ್ಲಿಲ್ಲದ ಸಂತಸ ತಂದಿದೆ. ಇನ್ನು ಇವರ ಸಾಹಿತ್ಯ ಸೇವೆ ಗಡಿ ಪ್ರದೇಶಗಳಲ್ಲಿ ಪಸರಿಸಿ, ಸಾಹಿತ್ಯ ಸುಗಂಧ ಸರ್ವರಲ್ಲಿಯೂ ಹಬ್ಬಲಿ ಎಂದು ಶುಭ ಹಾರೈಸುತ್ತೇವೆ.

ಸಂಗಮೇಶ ಎನ್ ಜವಾದಿ ಬರಹಗಾರರು, ಚಿಂತಕರು,

ಬೀದರ ಜಿಲ್ಲೆ.9663809340.