ರಸಾಯನ ಶಾಸ್ತ್ರದ ರಸ ಶರಣ : ಡಾ. ಶರಣಪ್ಪ ತೋಟಪ್ಪ ನಂದಿಬೇವೂರ.”

ರಸಾಯನ ಶಾಸ್ತ್ರದ ರಸ ಶರಣ : ಡಾ. ಶರಣಪ್ಪ ತೋಟಪ್ಪ ನಂದಿಬೇವೂರ.”

ರಸಾಯನ ಶಾಸ್ತ್ರದ ರಸ ಶರಣ : ಡಾ. ಶರಣಪ್ಪ ತೋಟಪ್ಪ ನಂದಿಬೇವೂರ.”

 ಕೆರೆ ಹಳ್ಳ ಬಾವಿಗಳು ಮೈದೆಗೆದಡೆ ಗುಳ್ಳೆ ಗೊರಜೆ ಚಿಪ್ಪು ಕಾಣಬಹುದು

 ವಾರುಧಿ ಮೈದೆಗೆದಡೆ ರತ್ನ ಮುತ್ತುಗಳ ಕಾಣಬಹುದು

 ಕೂಡಲಸಂಗನ ಶರಣರು ಮನದೆರೆದು ಮಾತನಾಡಿದಡೆ ಲಿಂಗವ ಕಾಣಬಹುದು.

 ಈ ಮೇಲಿನ ಬಸವಣ್ಣನವರ ವಚನವನ್ನು ಮುಂದುವರಿಸಿ ಹೇಳುವುದಾದರೆ ಶರಣಪ್ಪ ನಂದಿಬೇವೂರ ಅವರನ್ನು ಮಾತಾಡಿಸಿದರೆ ರಸಾಯನಶಾಸ್ತ್ರದ ಮುತ್ತು ರತ್ನಗಳನ್ನು ಕಾಣಬಹುದು. ನಮ್ಮ ಲಿಂಗಾಯತ ಸಮುದಾಯದ ಅಮೂಲ್ಯ ರಸನಿಧಿ ಪ್ರೊಫೆಸರ್ ಎಸ್.ಟಿ.ನಂದಿಬೇವೂರ್. 

 ನಂದಿಬೇವೂರರು ಬಳ್ಳಾರಿ ಜಿಲ್ಲೆ ಹಿರೇಹಡಗಲಿ ಗ್ರಾಮದಲ್ಲಿ ೧ ಜುಲೈ ೧೯೫೩ರಲ್ಲಿ ಜನಿಸಿದರು. ಅವರ ಹುಟ್ಟೂರಾದ ಹಿರೇಹಡಗಲಿಯು ಶಿಲ್ಪಕಲಾ ಸಂಪತ್ತಿನಿಂದ ಒಂದೆಡೆ ಪ್ರಸಿದ್ಧಿಯಾದರೆ ಇನ್ನೊಂದೆಡೆ ಈ ಊರಿನ ಪುತ್ರರತ್ನ ಡಾ.ಎಸ್.ಟಿ.ನಂದಿಬೇವೂರ ಅವರಿಂದ ಹೊರಪ್ರಪಂಚಕ್ಕೆ ತೆರೆದು ಕೊಂಡಿದೆ. ವಿಶೇಷ ವಾಸ್ತುಶಿಲ್ಪದಿಂದ ಕೂಡಿದ ಗ್ರಾಮ. ಅಲ್ಲಿ ಅಮರಶಿಲ್ಪಿ ಜಕಣಾಚಾರಿಯ ಕರಕುಶಲತೆಯಿಂದ ನಿರ್ಮಿತ ಬಸವೇಶ್ವರ ಮತ್ತು ಈಶ್ವರ ದೇವಸ್ಥಾನವು ಒಂದಕ್ಕೊಂದು ಎದುರುಬದುರಾಗಿ ನಯನ ಮನೋಹರವಾಗಿದೆ. ಇದು ಊರಿಗೆ ಮೆರಗನ್ನು ತಂದು ಕೊಟ್ಟಿರುವಂತಹದು. ಊರಿನ ಬಹುಪಾಲು ಜನ ಮಳೆ ಆಶ್ರಿತ ರೈತರಾಗಿದ್ದಾರೆ.

 ಹಿರೇಹಡಗಲಿ ಗ್ರಾಮದ ನಿರಕ್ಷರ ಕುಟುಂಬದ ಶರಣೆ ಸುಂದರಮ್ಮ ಮತ್ತು ಶರಣ ತೋಟಪ್ಪ ಸಂಗಪ್ಪ ನಂದಿಬೇವೂರವರ ಮೂರನೆಯ ಪುತ್ರರತ್ನ ಡಾ.ಎಸ್.ಟಿ.ನಂದಿಬೇವೂರ. ಶರಣೆ ಸುಂದರಮ್ಮ ತುಂಬು ಗರ್ಭಿಣಿಯಾಗಿದ್ದಾಗ, ತವರುಮನೆ ಕೊಪ್ಪಳ ತಾಲೂಕಿನ ಗೊಂಡಬಾಳದಲ್ಲಿ ಶ್ರಾವಣ ಮಾಸ ನಿಮಿತ್ತ ಶರಣ ಬಸವೇಶ್ವರ ಪುರಾಣ ವಾಚನ ಸಂದರ್ಭದ ಸೋಮವಾರದಂದು ಪ್ರೋಫೆಸರ್ ನಂದಿಬೇವೂರ್ ಜನಿಸಿದ್ದರಿಂದ ಅವರಿಗೆ ಶರಣ ಬಸವೇಶ್ವರ ಎಂದು ನಾಮಕರಣ ಮತ್ತು ಲಿಂಗಧಾರಣೆ ಮಾಡಲಾಯಿತು. ಕಾಲ ಕ್ರಮೇಣ ಶರಣ ಬಸವೇಶ್ವರ ಎಂಬ ನಾಮ ಶರಣಪ್ಪ ಎಂದು ಮೊಟುಕಾಗಿ ಜನರ ನಾಲಿಗೆಯ ಮೇಲೆ ಉಳಿಯಿತು.

 ‘ಬಾಲ್ಯದ ಸ್ಮೃತಿ ಅಜಂತದ ಗವಿ’ - ಎಂಬ ಮಾತಿಗೆ ಇವರ ಬಾಲ್ಯ ಜೀವನ ಸಾಕ್ಷಿ. ಹಿರೇಹಡಗಲಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಎದುರು ಮನೆಯ ಕೊಟ್ರಬಸಪ್ಪ ಆಪ್ತಗೆಳೆಯರ ಬಳಗದಲ್ಲಿ ಒಬ್ಬರಾಗಿದ್ದರು. ಶಾಲೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಯಾವಾಗಲಾದರೊಮ್ಮೆ ಶಾಲೆಗೆ ಚಕ್ಕರ್ ಹೊಡೆದು ಊಟ ಮತ್ತು ಆಟಕ್ಕೆ ಹಾಜರಾಗುತ್ತಿದ್ದರು. ಶಾಲೆ ಬಿಡುವ ವೇಳೆಗೆ ಪಾಠೀಚೀಲದೊಂದಿಗೆ ಗೆಳೆಯರ ಜೊತೆ ಮನೆಗೆ ತೆರಳುತ್ತಿದ್ದರು. ಕೆಲವು ಸಲ ಸ್ನೇಹಿತರ ಮನೆಯಲ್ಲಿ ಆಟವಾಡಿ ಅಲ್ಲಿಯೇ ನಿದ್ರಿಸುತ್ತಿದ್ದರು. ಮರುದಿನ ತಾಯಿ ಸುಂದರಮ್ಮ ಬಂದು ತನ್ನ ಕರುಳಕುಡಿಯನ್ನು ಎತ್ತಿ ಮುದ್ದಾಡಿ ಕರೆದುಕೊಂಡು ಹೋಗುತ್ತಿದ್ದರು. 

 ಪ್ರತಿ ಗುರುವಾರ ಹಿರೇಹಡಗಲಿಯಲ್ಲಿ ಸಂತೆ ನಡೆಯುತ್ತಿತ್ತು. ನಂದಿಬೇವೂರ ಅವರ ಕಾಕ ಹಾಲಪ್ಪನವರು ಬಾಲಕ ನಂದಿಬೇವೂರನನ್ನು ತಮ್ಮ ಸಂಗಡ ಸಂತೆಗೆ ಸಾಮಾನು ತರಲು ಕರೆದು ಕೊಂಡು ಹೋಗುತ್ತಿದ್ದರು. ಸಂತೆಯ ನಂತರ ಒಂದು ಆಣೆ ಕೊಟ್ಟು ಸಂತೆ ಗಂಟನ್ನು ಹೊರಿಸಿ ಮನೆಗೆ ಕಳುಹಿಸುತ್ತಿದ್ದರು. ದಾರಿ ಮಧ್ಯದಲ್ಲಿ ಬಾಲಕ ನಂದಿಬೇವೂರು ಚೀಲ ಇಳಿಸಿ ಸೌತೆಕಾಯಿ, ಬೆಲ್ಲ, ಶೇಂಗಾ, ಗೆಜ್ಜರಿ ಮುಂತಾದ ತಿನ್ನುವ ವಸ್ತುಗಳನ್ನು ತಿಂದು ಸಮಾಧಾನದ ನಂತರ ಮನೆಗೆ ಗಂಟನ್ನು ತೆಗೆದು ಕೊಂಡು ಹೋಗುತ್ತಿದ್ದರು. ಕಳ್ಳ ಬಾಲ ಕೃಷ್ಣನಂತೆ ಯಾರು ಇಲ್ಲದಿದ್ದಾಗ ನೆಲವಿನಲ್ಲಿರುವ ಗಡಿಗೆಗಳನ್ನು ಗುರುತಿಸಿ ಬೆಲ್ಲ, ಶೇಂಗಾ, ಹುರಿಗಡಲೆಯನ್ನು ಜೇಬಿನಲ್ಲಿ ತುಂಬಿಸಿಕೊAಡು ಒಬ್ಬರೆ ಹೋಗಿ ತಿನ್ನುತ್ತಿದ್ದರು. ಪಾರಂಪರಿಕ ಆಟಗಳಾದ ಗೋಲಿ, ಚಿನ್ನಿದಾಂಡು ,ಲಗೋರಿ, ಮರಕೋತಿ ಆಟ, ಗಾಳಿಪಟ ಹಾರಿಸುವುದು, ಚೆಂಡಿನ ಆಟ, ಈಜಾಟ ಮುಂತಾದವುಗಳನ್ನು ಆಡಿ ನಲಿಯುತ್ತಿದ್ದರು. ಆ ವಯಸ್ಸೇ ಅಂತಹದು. ಪಾಠಕ್ಕಿಂತ ಆಟವೇ ಪ್ರಧಾನವಾಗಿತ್ತು. ಹೀಗೆ ಅವರ ಬಾಲ್ಯವು ಮೋಜು-ಮಸ್ತಿಯಿಂದ ಕೂಡಿದ ಸುಂದರ ನೆನಪುಗಳ ಭಂಡಾರವಾಗಿತ್ತು.

 ಸುಂದರಮ್ಮರ ತವರುಮನೆಯಲ್ಲಿ ಗಂಡುಸಂತಾನವಿಲ್ಲದ್ದರಿಂದ ಶ್ರೀ ವೀರಭದ್ರಸ್ವಾಮಿ ದೇವರ ಪೂಜಾರಿಕೆ ಮಾಡಲು ಬಾಲಕ ನಂದಿಬೇವೂರರವರು ೫ನೇ ತರಗತಿ ಓದಲು ಗೊಂಡಬಾಳಕ್ಕೆ ತೆರಳಬೇಕಾಯಿತು. ಕೊಪ್ಪಳದಿಂದ ೨-೩ ಕಿ.ಮೀ.ದೂರದಲ್ಲಿ ಗೊಂಡಬಾಳ ಗ್ರಾಮವಿತ್ತು. ಮಳೆಗಾಲದಲ್ಲಿ ಕೆರೆ ತುಂಬಿ ಕೋಡಿ ಬಿದ್ದರೆ ಊರು ನೀರಿನಲ್ಲಿ ಮುಳುಗುತ್ತಿತ್ತು. ಈ ಕಾರಣಕ್ಕಾಗಿ ೨-೩ ಕಿ.ಮೀ ದೂರದಲ್ಲಿ ಹೊಸ ಗೊಂಡಬಾಳ ನಿರ್ಮಾಣವಾಗುತ್ತಿತ್ತು. ಮನೆಯನ್ನು ಹೊಸ ಗೊಂಡಬಾಳದಲ್ಲಿ ಕಟ್ಟಲಾಯಿತು. ನಂದಿಬೇವೂರ ಅವರ ಅಣ್ಣ ಕೆ.ಟಿ.ನಂದಿಬೇವೂರ‍ರವರು ಕೊಪ್ಪಳದಲ್ಲಿ ಹೈಸ್ಕೂಲ್ ಓದುತ್ತಿದ್ದರು. ಆಗಾಗ ಸೈಕಲನಲ್ಲಿ ಬಂದು ಮೇಲ್ವಿಚಾರಣೆ ಮಾಡಿ ಚೆನ್ನಾಗಿ ಓದಲು ಪ್ರೇರೇಪಿಸುತ್ತಿದ್ದರು. ಅಣ್ಣನ ಭೇಟಿಯ ಸಮಯದಲ್ಲಿ ಸೈಕಲ್ ಓಡಿಸಲು ಕಲಿತರು. ಮನೆ ಹೊಸ ಊರಿನಲ್ಲಿ ಶಾಲೆ ಹಳೆ ಊರಿನಲ್ಲಿ ಇದ್ದುದ್ದರಿಂದ ದಿನಾಲು ಕಾಲ್ನಡಿಗೆಯಲ್ಲಿ ೩ ಕಿ.ಮೀ. ಹೋಗಿ ಬರುತ್ತಿದ್ದರು. ದಾರಿಯಲ್ಲಿ ಓರಗೆಯವರೊಂದಿಗೆ ಮರ ಕೋತಿ ಆಟವಾಡುತ್ತಿದ್ದರು. ಹೊಸ ಗೊಂಡಬಾಳ ಎರೆ ಭೂಮಿಯಲ್ಲಿ ಕಟ್ಟಿದ್ದರಿಂದ ಮಳೆಗಾಲದಲ್ಲಿ ಮನೆ ಅಂಗಳವೆಲ್ಲ ಕೆಸರುಮಯವಾಗಿರುತ್ತಿತ್ತು. ಅಜ್ಜನ ಮನೆ ಊರಿನ ಕಟ್ಟಕಡೆಯಲ್ಲಿತ್ತು. ಚಿಮಣಿ ಎಣ್ಣೆ ದೀಪದ (ಸೀಮೆ ಎಣ್ಣೆ ಬುಡ್ಡಿ) ಬೆಳಕಿನಲ್ಲಿ ಓದಬೇಕಾಗಿತ್ತು. ಜೊತೆಗೆ ಅದರಿಂದ ಹೊರಹೊಮ್ಮುವ ದಟ್ಟನೆಯ ಕರ‍್ರನೆ ಹೊಗೆಯನ್ನು ಸಹಿಸಿಕೊಳ್ಳ ಬೇಕಾಗಿತ್ತು. ಅಜ್ಜಿ ಸಿದ್ದಮ್ಮ ಸಂತೆ ವ್ಯಾಪಾರಸ್ಥೆಯಾಗಿದ್ದು ದಿನದ ವ್ಯಾಪಾರದ ನಂತರ ರಾತ್ರಿ ರೊಕ್ಕ ಎಣಿಸಲು ಬಾಲಕ ನಂದಿಬೇವೂರನಿಗೆ ಹೇಳುತಿದ್ದಳು. ಎಣಿಸುವಾಗ ಕೆಲವು ಚಿಲ್ಲರೆ ಕಾಸುಗಳನ್ನು ಜೇಬಿಗೆ ಇಳಿಸಿ ಶಾಲೆಗೆ ಹೋದಾಗ ಗೆಳೆಯರೊಂದಿಗೆ ಅಂಗಡಿಯಲ್ಲಿ ತಿನಿಸು ತಿನ್ನುತ್ತಿದ್ದರು. ರಾಗಿ ಜೋಳ ಬೀಸಲು ಅಜ್ಜಿ ಸಿದ್ಧಮ್ಮರಿಗೆ ನಂದಿಬೇವೂರ ನೆರವಾಗುತ್ತಿದ್ದರು. ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಗೆ ಗೆಳೆಯರೊಂದಿಗೆ ಹೋಗಿ ಬರುತ್ತಿದ್ದರು. 

 ಅಜ್ಜಿಯ ಊರಿನಲ್ಲಿ ಏಳನೆಯ ತರಗತಿ ಓದಿದ ಬಾಲಕ ಶರಣಪ್ಪ, ಮೇಷ್ಟು ನಾಗಪ್ಪ ಅವರ ಪ್ರೀತಿಯ ಶಿಷ್ಯರಾಗಿದ್ದರು. ಶರಣಪ್ಪನಿಗೆ ಮೇಷ್ಟ್ರು ಮನೆ ಪಾಠ ಹೇಳಿಕೊಡುತ್ತಿದ್ದರು. ಉಪಕಾರಕ್ಕೆ ಪ್ರತಿಯಾಗಿ ಅವರ ಮನೆಯ ಪಾತ್ರೆ, ಬಟ್ಟೆ ತೊಳೆಯುವುದು, ಕಸ ಗೂಡಿಸುವುದನ್ನು ಮಾಡುತ್ತಿದ್ದರು. ಶಾಲೆಯ ಪರೀಕ್ಷೆಯಲ್ಲಿ ಯಾರಾದರೂ ಹೆಚ್ಚಿಗೆ ಅಂಕ ಗಳಿಸಿದರೆ ಶರಣಪ್ಪ ಕಣ್ಣೀರು ಹಾಕಿ ಮುಂದಿನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಲು ಅಣಿಯಾಗುತ್ತಿದ್ದರು. ಬಾಲಕ ಶರಣಪ್ಪ ೭ನೇ ತರಗತಿ ತಾಲೂಕ್ ಲೆವೆಲ್ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಪಡೆದು ಉತ್ತೀರ್ಣರಾದರು. 

 ೧೯೬೬ ರಲ್ಲಿ ಹಿರೇಹಡಗಲಿಯಲ್ಲಿ ಹೊಸದಾಗಿ ಹೈಸ್ಕೂಲ್ ಪ್ರಾರಂಭವಾಯಿತು. ಅದರ ಹೆಡ್ ಮಾಸ್ಟರ್ ಆಗಿ ಶ್ರೀ ಶಂಭುಲಿAಗಯ್ಯನವರು ಆಗಮಿಸಿದ್ದರು. ಊರಿನಲ್ಲಿ ಪ್ರೌಢ ಶಿಕ್ಷಣ ಆರಂಭವಾಗಿದ್ದರಿAದ ವಯೋಮಿತಿಯನ್ನು ಮೀರಿದ ಯುವಕರು ಹುರುಪಿನಿಂದ ಶಾಲೆಗೆ ಸೇರಿದರು. ಅಜ್ಜಿ ಊರಿನಿಂದ ವಾಪಾಸ್ಸಾಗಿ ಶರಣಪ್ಪ ಬೇವೂರ ತಮ್ಮೂರಿನ ಶಾಲೆಯಲ್ಲಿ ದಾಖಲಾದರು. ಶಾಲೆಗಾಗಿ ಪಂಚಾಯತ ಬೋರ್ಡನ ಒಂದು ಕೊಠಡಿಯನ್ನು ಬಿಟ್ಟುಕೊಡಲಾಯಿತು. ಡೆಸ್ಕ ಇಲ್ಲದ್ದರಿಂದ ನೆಲದ ಮೇಲೆ ಕುಳಿತು ಪಾಠ ಕೇಳಬೇಕಾಗಿತ್ತು.

 ಶಾಲೆಯಲ್ಲಿ ಶಿಕ್ಷಕರ ಅಭಾವವಿದ್ದುದ್ದರಿಂದ ಊರಿನ ಬಿ.ಎ, ಬಿ.ಎಸ್ಸಿ. ಪದವೀಧರರು ಉಚಿತವಾಗಿ ಪಾಠ ಕಲಿಸಲು ಬರುತ್ತಿದ್ದರು. ಒಂಬತ್ತನೆಯ ತರಗತಿಯನ್ನು ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು. ಈ ಅವಧಿಯಲ್ಲಿ ಇಬ್ಬರು ಖಾಯಂ ಶಿಕ್ಷಕರನ್ನು ನೇಮಕ ಮಾಡಲಾಯಿತು. ಅದರಲ್ಲಿ ವಿಜ್ಞಾನ ಶಿಕ್ಷಕರೊಬ್ಬರು ಮನೆಯಲ್ಲಿ ಟ್ಯೂಷನ್ ಹೇಳುತ್ತಿದ್ದರು. ಬಡತನದ ಕಾರಣಕ್ಕೆ ಬಾಲಕ ಶರಣಪ್ಪ ಟ್ಯೂಷನ್‌ಗೆ ಹೋಗಲಾಗಲಿಲ್ಲ. ಮನೆ ಪಾಠಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಆ ಮಾಸ್ತರ ತಾರತಮ್ಯ ನೀತಿ ಅನುಸರಿಸಿ ಶರಣಪ್ಪನಿಗೆ ಕಡಿಮೆ ಅಂಕಗಳನ್ನು ಕೊಡುತ್ತಿದ್ದರು. ಆಗಲೇ ಟ್ಯೂಷನ್ ಮಾಫಿಯಾ ತಲೆ ಎತ್ತಿರುವುದನ್ನು ಕಾಣಬಹುದು. 

ನ್ಯಾಯ ನಿಷ್ಠುರಿ: ದಾಕ್ಷಿಣ್ಯಪರ ನಾನಲ್ಲ.

 ಲೋಕವಿರೋಧಿ: ಶರಣನಾರಿಗಂಜುವನಲ್ಲ,

 ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ. (ಬಸವಣ್ಣ)

ಎಂಬ ಶರಣರ ಸೂಳ್ನುಡಿಯಂತೆ. ಟ್ಯೂಷನ್ ಮಾಫಿಯಾ ಸಹಿಸದೆ ವಚನದ ಆಶಯದಂತೆ ಶರಣಪ್ಪ ಧೈರ್ಯವಾಗಿ ಮುಖ್ಯ ಶಿಕ್ಷಕರಿಗೆ ದೂರು ಸಲ್ಲಿಸುತ್ತಿದ್ದರು. ಇದು ಶರಣಪ್ಪನವರ ಅನ್ಯಾಯದ ವಿರುದ್ಧ ನಡೆಸಿದ ಪ್ರತಿಭಟನೆಯನ್ನು ತೋರಿಸುತ್ತದೆ. ಆ ಚಿಕ್ಕ ವಯಸ್ಸಿನಲ್ಲಿ ಪ್ರತಿಭಟನೆಯ ಗುಣ ಬೆಳೆಸಿಕೊಂಡಿದ್ದರು. ಯಾವುದೇ ಪರೀಕ್ಷೆ ಇರಲಿ ಮೊದಲಿಗರಾಗಲು ಶ್ರಮಪಡುತ್ತಿದ್ದರು.

 ನಂದಿಬೇವೂರ ಅವರ ಕುಟುಂಬ ಕೂಡು ಕುಟುಂಬ ಇದ್ದುದ್ದರಿಂದ ವ್ಯಾಸಂಗಕ್ಕೆ ಅಡಚಣೆಯಾಗುತ್ತಿತ್ತು. ಮನೆಯಲ್ಲಿ ಬೆಳಗ್ಗಿನ ಹೊತ್ತು ದನದ ಸಗಣಿ ಬಾಚುವುದು, ತಿಪ್ಪೆಗೆ ಎಸೆಯುವುದು, ದೂರದ ಬಾವಿಯಿಂದ ನೀರು ಸೇದಿ ತರುವುದು, ಮೊದಲಾದ ಕೆಲಸಗಳನ್ನು ಮಾಡುವುದು ಕಡ್ಡಾಯವಾಗಿತ್ತು. ಇದರೆಲ್ಲದರ ನಡುವೆ ಹತ್ತಿರದ ಕಣಕ್ಕೆ ಹೋಗಿ ಮರದ ಕೆಳಗೆ ಕುಳಿತು ಓದುತ್ತಿದ್ದರು. ಬಾವಿಯಿಂದ ನೀರು ತರುವಾಗ ಓದಿದ ವಿಷಯಗಳನ್ನು ಮೆಲುಕು ಹಾಕುತ್ತಿದ್ದರು. ಡಾಕ್ಟರ್ ಕಲಕೋಟಿ ಕೊಟ್ರಪ್ಪ ಅವರ ಮನೆಯ ದನದ ಕೊಟ್ಟಿಗೆಯಲ್ಲಿ ಓದುತ್ತಿದ್ದರು. ಮಾನವರಿಗಿಂತ ಪಶುಗಳೆ ಎಷ್ಟೋ ಪಾಲು ಉತ್ತಮ ಎಂದು ಶರಣಪ್ಪ ತಿಳಿದಿದ್ದರು. ಕಾರಣ ಅವು ಓದಲಿಕ್ಕೆ ತೊಂದರೆ ಕೊಡುತ್ತಿರಲಿಲ್ಲ. ಇಷ್ಟಕ್ಕೆ ಓದಿನ ದಾಹ ಶರಣಪ್ಪನಿಗೆ ತೀರಲಿಲ್ಲ. ಪಂಚಾಯತ ಬೋರ್ಡನ ಲೈಬ್ರರಿಯ ಪುಸ್ತಕಗಳನ್ನು ತಂದು ಓದುತ್ತಿದ್ದರು. 

 ಹದಿಹರೆಯದ ಶರಣಪ್ಪ ಹೈಸ್ಕೂಲ್ ಹತ್ತನೆಯ ತರಗತಿಯ ಮೊದಲ ಬ್ಯಾಚ್ ವಿದ್ಯಾರ್ಥಿ. ಆ ಕಾರಣಕ್ಕೆ ಶಾಲೆಯಲ್ಲಿ ಓದಲು ಮತ್ತು ರಾತ್ರಿ ಮಲಗಲು ವ್ಯವಸ್ಥೆ ಮಾಡಿದ್ದರು. ಅಲ್ಲಿ ಒಬ್ಬ ಟೀಚರ್ ಇರುತ್ತಿದ್ದರು. ಕನ್ನಡ ಮಾಧ್ಯಮ ಶಾಲೆಯಾಗಿದ್ದರಿಂದ ಕೆಲವು ಇಂಗ್ಲೀಷ್ ಗ್ರಾಮರ್ ಪುಸ್ತಕಗಳನ್ನು ತಂದು ಅಭ್ಯಾಸ ಮಾಡಿಸುತ್ತಿದ್ದರು. ಹಿಂದಿ ಟೀಚರ್ ಅವರು ಹಿಂದಿ ಪ್ರಚಾರ ಸಭಾದಿಂದ ರಾಜ್ಯ ಮಟ್ಟದ ಹಿಂದಿ ಪರೀಕ್ಷೆಗಳನ್ನು ನಡೆಸುತ್ತಿದ್ದರು. ಬಡತನ ಗುರುತಿಸಿದ್ದ ಆ ಹಿಂದಿ ಶಿಕ್ಷಕರು ಶರಣಪ್ಪನ ಪರೀಕ್ಷಾ ಶುಲ್ಕವನ್ನು ಅವರೇ ತುಂಬಿದರು. ೧೦ ನೇ ತರಗತಿಯಲ್ಲಿರುವಾಗ ಹಿಂದಿಪರೀಕ್ಷೆಯಲ್ಲಿ ರಾಜ್ಯಕ್ಕೆ ೭ನೇ ರ‍್ಯಾಂಕ್ ಪಡೆದು ಕೀರ್ತಿಗಳಿಸಿದರು. ಎಲ್ಲ ಶಿಕ್ಷಕರು ಸಂತೋಷ ಗೊಂಡು ಹಿಂದಿ ಪ್ರಚಾರ ಸಭಾದಿಂದ ಬಂದಿದ್ದ ೧೦೦ ರೂಪಾಯಿ ನಗದು ಬಹುಮಾನವನ್ನು ಸಮಾರಂಭದಲ್ಲಿ ಕೊಟ್ಟು ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂದು ಉದ್ಗಾರ ತೆಗೆದು ಭವಿತವ್ಯಕ್ಕೆ ಹೆಡ್ ಮಾಸ್ತರ್ ಶುಭ ಹಾರೈಸಿದರು. ಆಗ ಎಸೆಸೆಲ್ಸಿ ಪರೀಕ್ಷೆ ತಾಲೂಕ್ ಕೇಂದ್ರದಲ್ಲಿ ನಡೆಯುತ್ತಿತ್ತು. ಆದ್ದರಿಂದ ಹೂವಿನ ಹಡಗಲಿ ಹೈಸ್ಕೂಲ್ ನಲ್ಲಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಶರಣಪ್ಪ ಉತ್ತೀರ್ಣರಾದರು. ಎಸೆಸೆಲ್ಸಿ ಪಾಸಾದ ನಂತರ ಹೂವಿನ ಹಡಗಲಿಯ ಹನ್ನೊಂದನೆ ತರಗತಿ ಇರುವ ಹೈಸ್ಕೂಲ್‌ಗೆ ಸೇರಿದರು. ಪಿ.ಯು. ಕಾಲೇಜಿಗೆ ಬೇರೆ ಊರಿಗೆ ಹೋಗಬೇಕಾಗಿತ್ತು. ಬಡತನದ ಕಾರಣ ಅದು ಕೈಗೂಡಲಿಲ್ಲ.

 ಹಾಸ್ಟೆಲ್‌ಗೆ ಸೇರಲು ಹಣವಿಲ್ಲದ್ದರಿಂದ ಇವರ ಕಾಕ ಅವರಿಗೆ ಪರಿಚಯವಿದ್ದ ಒಂದು ಜಿನ್ ಫ್ಯಾಕ್ಟರಿಯಲ್ಲಿ ಮಾಲಕರಿಗೆ ಹೇಳಿಕೊಂಡು ಒಂದು ರೂಮಿನಲ್ಲಿ ವಾಸಿಸ ತೊಡಗಿದರು. ವಾರಕ್ಕೊಮ್ಮೆ ಊರಿನಿಂದ ರೊಟ್ಟಿ ಬುತ್ತಿ ಬರುತ್ತಿತ್ತು. ಉಳಿದ ದಿನಗಳಲ್ಲಿ ತಾವೇ ಅಡಿಗೆ ಮಾಡಿಕೊಳ್ಳುತ್ತಿದ್ದರು. ಆರು ತಿಂಗಳ ನಂತರ ವಿದ್ಯಾರ್ಥಿ ನಿಲಯಕ್ಕೆ ಸೇರಿಸಿದ್ದರಿಂದ ಕೈ ಊಟ ತಯಾರಿಸುವ ಸಮಸ್ಯೆಯಿಂದ ಪಾರಾದರು. ವಿದ್ಯಾರ್ಥಿ ನಿಲಯದಲ್ಲಿ ನಿಕ್ಕರ್ ಹಾಕಿಕೊಂಡು ಊಟ ಮಾಡುವಂತಿರಲಿಲ್ಲ. ಕಡ್ಡಾಯವಾಗಿ ಫೈಜಾಮ ಅಥವಾ ಲುಂಗಿ ಧರಿಸಬೇಕಾಗಿತ್ತು. ಊಟಕ್ಕೆ ಮೊದಲು ‘ ಅಸತೋಮ ಸದ್ಗಮಯ‘ ಪ್ರಾರ್ಥನೆಯನ್ನು ಹೇಳಿದ ನಂತರವೇ ಊಟ ಸೇವಿಸಬೇಕಿತ್ತು. ಅವರವರ ತಟ್ಟೆಗಳನ್ನು ಅವರೆ ತೊಳೆಯಬೇಕಿತ್ತು.

 ಪ್ರೌಢ ಶಾಲೆಯಲ್ಲಿ ೧೧ ನೇ ತರಗತಿ ಇದ್ದುದ್ದರಿಂದ ವಿಜ್ಞಾನ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ಬೋಧಿಸುತ್ತಿದ್ದರು. ಪಾಠ ಪ್ರವಚನಗಳು ಕನ್ನಡದಲ್ಲಿ, ಪರೀಕ್ಷೆಗಳು ಇಂಗ್ಲೀಷ್‌ನಲ್ಲಿ ಇರುತ್ತಿದ್ದರಿಂದ ಕಷ್ಟವಾಗುತ್ತಿತ್ತು. ಇಷ್ಟಾದರೂ ಕೂಡ ಪರೀಕ್ಷೆಯನ್ನು ಫಸ್ಟ್ ಕ್ಲಾಸ್‌ನಲ್ಲಿ ಪಾಸಾದರು. ಕೊಟ್ಟೂರಿನಲ್ಲಿ ಹಾಸ್ಟೆಲ್ ಶುಲ್ಕ ಕಡಿಮೆ ಇದ್ದುದ್ದರಿಂದ ಕೊಟ್ಟೂರು ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡರು. ರೂಮ್ ನಂಬರ್ ೧ ರಲ್ಲಿ ೫ ಜನ ಗೆಳೆಯರೊಂದಿಗೆ ವ್ಯಾಸಂಗ ಮುಂದುವರಿಯುತು. ಅಡುಗೆ ಮನೆ ಪಕ್ಕದಲ್ಲಿ ಕೊಠಡಿಯಿದ್ದುದ್ದರಿಂದ ಉಳಿದ ಆಹಾರ ತಿನ್ನಲು ಸಿಗುತ್ತಿತ್ತು.

 ಕೊಟ್ಟೂರಿನಲ್ಲಿ ಸಂಗನ ಬಸಯ್ಯನವರು ಪ್ರಿನ್ಸಿಪಾಲರಾಗಿದ್ದರು. ಅವರ ರಸಾಯನ ಶಾಸ್ತ್ರ ಬೋಧಿಸುವ ರೀತಿಯಿಂದ ಪ್ರಭಾವಿತರಾಗಿ ಆ ವಿಷಯದಲ್ಲಿ ಶರಣಪ್ಪನವರಿಗೆ ಆಸಕ್ತಿ ಇಮ್ಮಡಿಗೊಂಡಿತು. ಹೀಗೆ ಇಷ್ಟಪಟ್ಟು ಶ್ರಮದಿಂದ ಓದಿ ಬಿ.ಎಸ್ಸಿ. ಮೊದಲ ವರ್ಷವನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಬಡತನದ ಕಾರಣದಿಂದ ಎರಡನೇ ವರ್ಷದ ಬಿ.ಎಸ್ಸಿ.ಗೆ ದಾಖಲಾಗದೆ ಮನೆಯಲ್ಲಿಯೇ ಉಳಿದರು.

 ಹಿರೇಹಡಗಲಿಯ ಡ್ರಿಲ್ ಟೀಚರ್ ಚಂದ್ರಶೇಖರಯ್ಯ ನರೇಗಲ್ ಹೈಸ್ಕೂಲ್‌ನಲ್ಲಿ ಡ್ರಿಲ್ ಶಿಕ್ಷಕರಾಗಿದ್ದರು. ಅವರು ರಜಾದಿನದಲ್ಲಿ ಊರಿಗೆ ಬಂದಾಗ ಆ ಪುಣ್ಯಾತ್ಮನ ಹದ್ದಿನ ಕಣ್ಣು ನಂದಿಬೇವೂರ ಮೇಲೆ ಬಿದ್ದು, ಬುದ್ದಿವಂತಿಕೆ ಮತ್ತು ಛಲವಂತಿಕೆ ಬಗ್ಗೆ ಮಮ್ಮಲ ಮರುಗಿದರು. ‘ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ’ ಎಂಬ ಶರಣರ ನುಡಿಯಂತೆ ಓದಲೇ ಬೇಕೆಂಬ ಛಲವಿದ್ದ ಶರಣಪ್ಪನಿಗೆ ಆ ಮೇಷ್ಟ್ರು ಪ್ರಾತಃಸ್ಮರಣೀಯರಾದರು. ತಂದೆ ತೋಟಪ್ಪನವರನ್ನು ಭೇಟಿಯಾಗಿ ಅವರಿಗೆ ತಿಳವಳಿಕೆಯನ್ನು ಮೂಡಿಸಿ ಅವರಿಂದ ಅನುಮತಿಯನ್ನು ಪಡೆದು ಆಗ ತಾನೆ ನರೇಗಲ್‌ನಲ್ಲಿ ಪ್ರಾರಂಭವಾಗಿದ್ದ ಬಿ.ಎಸ್ಸಿ. ಕಾಲೇಜಿಗೆ ದಾಖಲಿಸಿದರು. ಜೊತೆಗೆ ಶಾಂತವೀರಯ್ಯನನ್ನು ಬಿ.ಎ. ಕೋರ್ಸಗೆ ಸೇರಿಸಿದರು. ಶರಣರ ಬರವೆಮಗೆ ಪ್ರಾಣಜೀವಾಳವಯ್ಯ ಎಂಬ ವಚನೋಕ್ತಿಯಂತೆ ನರೆಗಲ್‌ನಲ್ಲಿ ಅನ್ನದಾನೀಶ್ವರ ಮಠದ ಸ್ವಾಮಿಗಳು ಉಚಿತವಾಗಿ ಪ್ರಸಾದ ಮತ್ತು ವಸತಿಯನ್ನು ಕಲ್ಪಿಸಿಕೊಟ್ಟು ಬಾಳಿಗೆ ಬೆಳಕಾದರು. ಉಣ್ಣದ ಲಿಂಗಕ್ಕೆ ಬೋನವ ಹಿಡಿಯುವುದಕ್ಕಿಂತ ಉಂಬ ಜಂಗಮನಿಗೆ ಅನ್ನ ದಾಸೋಹ ಕಲ್ಪಿಸಿ ಕೊಟ್ಟ ಮಠವದು. ಕಾಯಕ ಜೀವಿಗಳಿಂದ ಕಾಣಿಕೆ ಸ್ವೀಕರಿಸಿ ಕಾಲೇಜಿನ ಶುಲ್ಕವನ್ನು ಶ್ರೀಗಳೇ ಭರಿಸಿದರು. ವರುಷಕ್ಕೆ ಒಂದು ಜೊತೆ ಬಟ್ಟೆಯನ್ನು ಕೊಡುತ್ತಿದ್ದರು. ಮಠದ ಕಾಂಪೌಂಡು ಹಾಗೂ ಕಾಲೇಜಿನ ಕಟ್ಟಡದ ಕೆಲಸಕ್ಕೆ ಬೆಳಗ್ಗೆ ಮತ್ತು ಸಾಯಂಕಾಲ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಕಲ್ಲು,ಉಸುಕು,ಮಣ್ಣು ಸಾಗಿಸಲು ನೆರವಾಗುತ್ತಿದ್ದರು.

 ಕೆಲವು ಮಿತ್ರರು ಹೋಟೆಲ್‌ಗೆ ಹೋಗಿ ತಿಂಡಿ ತಿಂದು ಟೀ ಕುಡಿದು ಬರುತ್ತಿದ್ದರು. ಆದರೆ ಶರಣಪ್ಪರಿಗೆ ಸಾಧ್ಯವಾಗುತ್ತಿರಲಿಲ್ಲ. ಆ ಮಿತ್ರರಿಗೆ ಕಾಗೆಯೊಂದಗುಳ ಕಂಡರೆ ಬಸವಣ್ಣನವರ ವಚನ ನೆನಪಾಗಿರಲಿಕ್ಕಿಲ್ಲ. ಬಡತನವನ್ನು ನೆನೆದು ನಂದಿಬೇವೂರ ಮನಸ್ಸಿಗೆ ನೋವಾಗುತ್ತಿತ್ತು. ಮನಸ್ಸಿನಲ್ಲಿ ಛಲ ಜಾಗೃತಿಯಾಗುತಿತ್ತು. ಬಡವನಾಗಿ ಹುಟ್ಟುವುದು ತಪ್ಪಲ್ಲ ಆದರೆ ಸಾಯಬಾರದೆಂದು ಅಂದೇ ನಿರ್ಧರಿಸಿ ಬಿಟ್ಟರು. ನರೆಗಲ್‌ನಲ್ಲಿ ಬಾವಿಯಿಂದ ನೀರನ್ನು ಸೇದಿ ತಣ್ಣೀರಿನಲ್ಲಿ ಝಳಕ ಮಾಡುತ್ತಿದ್ದರು. ಶೌಚಾಲಯಕ್ಕೆ ಬಯಲೇ ಗತಿಯಾಗಿತ್ತು. ರಾಗಿ ಮುದ್ದೆಯ ಜೊತೆಗೆ ಕಂತೆ ಭಿಕ್ಷೆಯಿಂದ ಬಂದ ಪ್ರಸಾದವನ್ನು ಬಡಿಸುತ್ತಿದ್ದರು. ಶ್ರಾವಣದಲ್ಲಿ ಕಂತೆಭಿಕ್ಷಗೆ ಸರದಿ ಪ್ರಕಾರ ವಿದ್ಯಾರ್ಥಿಗಳನ್ನು ಕಳುಹಿಸಲಾಗುತ್ತಿತ್ತು. ಮನೆ ಊಟ ಸಿಗುತ್ತದೆ ಎಂದು ಸರದಿ ಬಂದಾಗ ಶರಣಪ್ಪ ಸೇರಿದಂತೆ ಎಲ್ಲರೂ ಖುಷಿ ಪಡುತ್ತಿದ್ದರು. ಹಾಸ್ಟೆಲ್‌ನಲ್ಲಿ ದೊಡ್ಡ ಕೊಳಗದಲ್ಲಿ ಮುದ್ದೆ ತಿರುವಲು ಪಾಳಿ ಪ್ರಕಾರ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತಿತ್ತು. ಊಟದ ನಂತರ ಪಾಕಶಾಲೆಯನ್ನು ಶುಚಿಗೊಳಿಸುತ್ತಿದ್ದರು. 

 ಹಾಸ್ಟೆಲ್ ರೂಮ್ನಲ್ಲಿ ಬಹಳ ಜನ ಇದ್ದಿದ್ದರಿಂದ ನಂದಿಬೇವೂರ ಅವರಿಗೆ ಓದಲು ಗಲಾಟೆಯಾಗುತ್ತಿತ್ತು. ಹೀಗಾಗಿ ಹೊರಗೆ ತೋಟದಲ್ಲಿ ಓದಿ ಬರುತ್ತಿದ್ದರು. ಕಾಲೇಜಿನ ರಜಾದಿನಗಳಲ್ಲಿ ಖಾಲಿ ಕೊಠಡಿಯಲ್ಲಿ ಓದುತ್ತಿದ್ದರು. 

 ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ ?

 ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೊರೆಗಳಿಗಂಜಿದಡೆಂತಯ್ಯಾ ?

ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ ?

 ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು

 ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.(ಅಕ್ಕಮಹಾದೇವಿ)

 ಮಿತ್ರರ ಗಲಾಟೆಯನ್ನು ಲೆಕ್ಕಿಸದೆ ನಂದಿಬೇವೂರ ಸಮಾಧಾನಿಯಾಗಿ ಓದಿನಲ್ಲಿ ಮಗ್ನನಾಗಿರುತ್ತಿದ್ದರಿಂದ ಊಟಕ್ಕೆ ತಡವಾಗುತ್ತಿತ್ತು. ಇದರಿಂದಾಗಿ ರಾಗಿ ಮುದ್ದೆಯ ಮೇಲಿನ ಪದರು ಚಕ್ಕಳದಂತಾಗುತ್ತಿತ್ತು. ತುತ್ತಿಗೊಮ್ಮೆ ಶಿವಶರಣೆನ್ನುತ್ತ ಪ್ರಸಾದದೊಂದಿಗೆ ತಾಯಿ ಕಳುಹಿಸಿದ ಉಪ್ಪಿನ ಕಾಯಿ ಹಾಗೂ ಚಟ್ನಿ ಪುಡಿಯನ್ನು ಊಟದ ಸಮಯದಲ್ಲಿ ಉಪಯೋಗಿಸುತ್ತಿದ್ದರು. 

 ಬಿ.ಎಸ್ಸಿ. ಎರಡನೆ ವರ್ಷದಲ್ಲಿ ಇದ್ದಾಗ ಕಾಲೇಜಿನಲ್ಲಿ ಪ್ರಬಂಧ ಸ್ವರ್ಧೆ ಏರ್ಪಡಿಸಲಾಗಿತ್ತು. “ಜೀವನದ ಮೌಲ್ಯಗಳು “ ಎಂಬ ವಿಷಯದಲ್ಲಿ ನಂದಿಬೇವೂರ ಅವರಿಗೆ ದ್ವಿತೀಯ ಬಹುಮಾನ ಪ್ರಾಪ್ತಿಯಾಯಿತು. ವಿಜ್ಞಾನದ ವಿದ್ಯಾರ್ಥಿ ಬಹುಮಾನ ಪಡೆದಿದ್ದಕ್ಕೆ ಕಾಲೇಜಿನಿಂದ ಅಭಿನಂದಿಸಿ ವಿ.ವಿ. ಮಟ್ಟದ ಪ್ರಬಂಧ ಸ್ಪರ್ಧೆಗೆ ಧಾರವಾಡ ಕರ್ನಾಟಕ ವಿ.ವಿ. ಕ್ಯಾಂಪಸ್‌ಗೆ ಕರೆದುಕೊಂಡು ಹೋದರು. ಈ ಪ್ರಸಂಗ ನಂದಿಬೇವೂರ ಅವರ ಜೀವನದ ಮೇಲೆ ಭಾರಿ ಪರಿಣಾಮವನ್ನುಂಟು ಮಾಡಿತು. ಜೀವನದಲ್ಲಿ ಒಂದು ಒಳ್ಳೆಯ ತಿರುವು ಪಡೆಯಲಿಕ್ಕೆ ಕಾರಣವಾಯಿತು. ವಿ.ವಿ. ಕ್ಯಾಂಪಸ್‌ನ ಗ್ರಂಥಾಲಯವನ್ನು ನೋಡಿ ಒಂದು ಕ್ಷಣ ಅವಕ್ಕಾದರು. ಡಿ.ಸಿ.ಪಾವಟೆಯವರ ಮುಂದೆ ನಿಂತು ಎಂ.ಎಸ್ಸಿ. ಪದವಿಯನ್ನು ಇಲ್ಲಿಯೆ ಪಡೆಯ ಬೇಕೆಂದು ಶಪಥಗೈದರು.

 ಕಾಲೇಜಿಗೆ ಮರಳಿದ ನಂತರ ಹಗಲೂ ರಾತ್ರಿ ಎನ್ನದೆ ಓದಿ ಒಳ್ಳೆಯ ಅಂಕಗಳನ್ನು ಪಡೆಯಲು ಕಾರಣವಾಯಿತು. ಬಿ.ಎಸ್ಸಿ. ದ್ವಿತೀಯ ಹಾಗೂ ತೃತೀಯ ಪರೀಕ್ಷೆಯನ್ನು ಗದಗಿನ ಜಗದ್ಗುರು ತೋಂಟಾದಾರ್ಯ ಕಾಲೇಜಿನಲ್ಲಿ ಬರೆಯಬೇಕಾಯಿತು. ಕಾರಣ ನರೇಗಲ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು. ಪ್ರಿನ್ಸಿಪಾಲ್ ಮತ್ತು ಆಡಳಿತಾಧಿಕಾರಿಯಾದ ಟಿ.ಕೆ. ಪಾಟೀಲ್ ಆಸಕ್ತಿಯಿಂದ ಶರಣಪ್ಪರವರನ್ನು ಸ್ನಾತಕೋತ್ತರ ಪದವಿಗಾಗಿ ಹುರಿದುಂಬಿಸುತ್ತಿದ್ದರು. ೧೯೭೨ ರಲ್ಲಿ ನಂದಿಬೇವೂರ ಅವರು ಬಿ.ಎಸ್ಸಿ. ಪದವಿಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ಧಾಗ ಶಿಕ್ಷಕನಾಗಲು ಕನಸು ಕಂಡಿದ್ದ ನಂದಿಬೇವೂರ ಈಗ ಪ್ರೊಫೆಸರ್ ಆಗಲು ತವಕಿಸುತ್ತಿದ್ದರು.

 ಈಗ ನಂದಿಬೇವೂರ ಎಂ.ಎಸ್ಸಿ. ರಸಾಯನಶಾಸ್ತ್ರದ ವಿದ್ಯಾರ್ಥಿಯಾಗಿ ಕ.ವಿ.ವಿ. ಧಾರವಾಡದಲ್ಲಿ ದಾಖಲಾದರು. ೧೯೭೪ ರಲ್ಲಿ ಫಸ್ಟ ರ‍್ಯಾಂಕ್‌ನೊಂದಿಗೆ ರಸಾಯನ ಶಾಸ್ತ್ರದಲ್ಲಿ ತೇರ್ಗಡೆ ಹೊಂದಿದರು. ಡಾ.ಜೆ.ಆರ್. ರಾಜು ಅವರ ಸಮರ್ಥ ಮಾರ್ಗದರ್ಶನದಲ್ಲಿ ಪಿ.ಎಚ್ಡಿ. ಪದವಿಗಾಗಿ ರೀಸರ್ಚ್ ಸ್ಕಾಲರ್ ಆಗಿ ಪ್ರವೇಶ ಪಡೆದರು. ಧಾರವಾಡ ಕ.ವಿ.ವಿ. ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ೧೯೭೯ ರಲ್ಲಿ ಭೌತ ರಸಾಯನ ಶಾಸ್ತ್ರ(ಫಿಸಿಕಲ್ ಕೆಮಿಸ್ಟ್ರಿ) ವಿಷಯದ ಮೇಲೆ ಯಶಸ್ವಿಯಾಗಿ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಅವಾರ್ಡ ಪಡೆದು ತಮ್ಮ ಪ್ರತಿಭೆ ಸಾಬೀತು ಪಡಿಸಿದರು. ೧೯೭೮ ರಲ್ಲಿ ರಸಾಯನಶಾಸ್ತ್ರದ ವಿಭಾಗದ ಉಪನ್ಯಾಸಕರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. 

 ೧೯೮೦ರಲ್ಲಿ ಶರಣೆ ಅರುಣಾ ಅವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ನಂತರ ಶರಣಪ್ಪನವರು ಸಹೋದರರ ವಿದ್ಯಾಭ್ಯಾಸ ಹಾಗೂ ಸಹೋದರ/ರಿಯರ ವಿವಾಹ ಕಾರ್ಯಗಳನ್ನು ನೆರವೇರಿಸಿದರು. ಶರಣಪ್ಪ ಮತ್ತು ಅರುಣಾ ಅವರಿಗೆ ಅರ್ಚನಾ ಮತ್ತು ಅಮರೇಶ ಎಂಬ ಮಕ್ಕಳಿದ್ದಾರೆ. ಅರುಣಾ ಅವರು ವಿದ್ಯಾರ್ಥಿ ದೆಸೆಯಿಂದಲೂ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ರಂಗದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಧಾರಾವಾಡದ ಅಕ್ಕನ ಬಳಗ ಸಂಘಟಿಸಲು ಪ್ರಯತ್ನಿಸಿದ್ದಾರೆ. ಶಿವಯೋಗ, ಕುಂಡಲಿನಿ , ಧ್ಯಾನ ಮತ್ತು ಮಂತ್ರ ದೀಕ್ಷೆಗಳನ್ನು ಪಡೆದು ನಿರಂತರ ಸಾಧಕಿಯಾಗಿದ್ದಾರೆ. ಅಧ್ಯಾತ್ಮದಲ್ಲಿ ವಿವಿಧ ಅನುಭವಗಳನ್ನು ಪಡೆದು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ತಮ್ಮ ಸ್ವಗೃಹದಲ್ಲಿ ಶಿವಾನಿ ಸತ್ಸಂಗ ನಡೆಸುವ ಮೂಲಕ ಸಾರ್ಥಕ ಜೀವನ ನಡೆಸುತ್ತಿದ್ದಾರೆ. ಇವರು ಯೋಗ ಸಾಧನೆಯಲ್ಲಿ ಕಂಡ ಅನುಭವಗಳನ್ನು ಶಿವಲೀಲಾಮೃತ ಎಂಬ ಪುಸ್ತಕ ಪ್ರಕಟಣೆ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಇವರ ಮಗಳು ಅರ್ಚನಾ ಉಪನ್ಯಾಸಕಿಯಾಗಿ, ಮಗ ಅಮರೇಶ ಬಹುರಾಷ್ಟ್ರೀಯ ಕಂಪನಿಯಲ್ಲಿ ಮೇನೆಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳು ಮೊಮ್ಮಕ್ಕಳೊಂದಿಗೆ ನಂದಿಬೇವೂರ್ ದಂಪತಿಗಳು ತುಂಬು ಜೀವನ ನಡೆಸುತ್ತಿದ್ದಾರೆ. ಶರಣಪ್ಪನವರ ಸಾಧನೆಯಲ್ಲಿ ಅವರ ಶ್ರೀಮತಿಯವರ ಸಹಕಾರವನ್ನು ಕಾಣಬಹುದು. ಇವರ ಅನುರೂಪ ಹಾಗೂ ಅಪರೂಪದ ದಾಂಪತ್ಯಕ್ಕೆ ಜೇಡರ ದಾಸಿಮಯ್ಯನವರ ವಚನವನ್ನು ಉದಾಹರಿಸಬಹುದು. 

 ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ

 ಸತಿಪತಿಗಳೊಂದಾಗದವನ ಭಕ್ತಿ 

 ಅಮೃತದೊಳು ವಿಷ ಬೆರೆದಂತೆ ಕಾಣಾ ! ರಾಮನಾಥ .

 ನಂದಿಬೇವೂರ ಅವರಿಗೆ ರೀಡರ್ ಆಗಿ ೧೯೮೭ ರಲ್ಲಿ ಪದೋನ್ನತಿ ದೊರÀಕಿತು. ೧೯೯೬ ರಲ್ಲಿ ಪ್ರೊಫೆಸರ್ ಆಗಿ ಹುದ್ದೆ ಅಲಂಕರಿಸಿದರು. ಡಾ. ನಂದಿಬೇವೂರ ಅವರ ಸಂಶೋಧನ ಕ್ಷೇತ್ರ ರಿಯಾಕ್ಷನ್ ಮೆಕಾನಿಸಂ, ಇಲೆಕ್ಟ್ರೊ ಕೆಮಿಸ್ಟ್ರಿ, ಮತ್ತು ಡ್ರಗ್ ಪ್ರೋಟೀನ್ ಇಂಟರ‍್ಯಾಕ್ಷನ್. ಡಾ. ನಂದಿಬೇವೂರ ಒಬ್ಬ ಸಮರ್ಥ ಬೋಧಕ, ಕ್ರಿಯಾಶೀಲ ಸಂಶೋಧಕ, ಮತ್ತು ದಕ್ಷ ಆಡಳಿತಗಾರರಾಗಿ ೩೬ ವರ್ಷಗಳ ಕಾಲ ಅವಿಶ್ರಾಂತ ಸೇವೆಯನ್ನು ಕ.ವಿ.ವಿ ಧಾರವಾಡದಲ್ಲಿ ಸಲ್ಲಿಸಿದ್ದಾರೆ. ೪೦೦ ಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳು ರಾಷ್ಟç ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕೆಗಳಲ್ಲಿ ಪ್ರಕಟಗೊಂಡು ಅವರಿಗೆ ಗೌರವವನ್ನು ತಂದು ಕೊಟ್ಟಿದೆ. ಅವರ ಮಾರ್ಗದರ್ಶನದಲ್ಲಿ ೪೮ ವಿದ್ಯಾರ್ಥಿಗಳು ಪಿ.ಎಚ್ಡಿ. ಪದವಿಯನ್ನು ಹಾಗೂ ೬ ವಿದ್ಯಾರ್ಥಿಗಳು ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ೪೮ ಪಿ.ಎಚ್ಡಿ. ವಿದ್ಯಾರ್ಥಿಗಳಲ್ಲಿ ೩೨ ಜನ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಂದಿಬೇವೂರ ಅವರು ೧೨ ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ವಿದೇಶದ ಆಮಂತ್ರಣದ ಮೇರೆಗೆ ಅಮೇರಿಕಾ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ, ನೇಪಾಳ, ಇಟಲಿ, ಸಿಂಗಾಪೂರ, ದುಬೈ ಮತ್ತು ಮಲೇಶಿಯಾದಲ್ಲಿ ತಮ್ಮ ವಿದ್ವತ್ತಿನ ಜ್ಞಾನವನ್ನು ಧಾರೆ ಎರೆದಿದ್ದಾರೆ. ಅವರ ಭೌತ ರಸಾಯನ ಶಾಸ್ತ್ರದಲ್ಲಿ ಸಾಧನೆಯ ಕೊಡುಗೆಗಳನ್ನು ಸ್ಮರಿಸಿ ಅನೇಕ ಸಂಘ ಸಂಸ್ಥೆಗಳು ಸಂದರ್ಭೋಚಿತವಾಗಿ ಗೌರವಿಸಿ ಸನ್ಮಾನಿಸಿವೆ. ವಿಜ್ಞಾನ ಕ್ಷೇತ್ರದಲ್ಲಿನ ಇವರ ಸಾಧನೆ ಕನ್ನಡಿಗರೊಬ್ಬರು ಮಾಡಿದ ಅವಿಸ್ಮರಣೀಯ ಸೇವೆಯಾಗಿದೆ.

೧೯೯೭ ರಲ್ಲಿ ನರೇಗಲ್ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯವರು ಗುರುತಿಲಕ ಪ್ರಶಸ್ತಿ ಯನ್ನು ಹಾಗೂ ೨೦೦೨ ರಲ್ಲಿ ಅಖಿಲ ಭಾರತ ವೀರಶೈವ ಸಮಾಜ ಎಜುಕೇಶನಿಸ್ಟ ಮೆಡಲ್ ಕೊಟ್ಟು ಗೌರವಿಸಿದೆ. ಕರ್ನಾಟಕ ಸರ್ಕಾರದ ಃesಣ ಖeseಡಿಛಿh Pubಟiಛಿಚಿಣioಟಿ ಚಿತಿಚಿಡಿಜ ೨೦೧೦, ಆಗ್ರಾದ ಭಾರತೀಯ ರಸಾಯನ ಶಾಸ್ತçಜ್ಞರ ಮಂಡಳಿಯ Pಡಿoಜಿ. ಒಚಿಟiಞ ಒemoಡಿiಥಿಚಿಟ ಂತಿಚಿಡಿಜ ೨೦೧೧, ಅಮೇರಿಕಾ ರಸಾಯನ ಸಂಸ್ಥೆಯ ಅeಡಿಣiಜಿiಛಿಚಿಣe oಜಿ ಂಠಿಠಿಡಿeಛಿiಚಿಣioಟಿ ೨೦೧೧, ಕೊಲ್ಕತ್ತಾದ ಭಾರತೀಯ ರಸಾಯನ ಸಂಸ್ಥೆಯ Pಡಿoಜಿ.ಂmeಣಚಿ ಚಿತಿಚಿಡಿಜ ೨೦೧೫ ಇವರಿಗೆ ಸಂದಿದೆ. ಶ್ರೀಯುತರು Iಓಆಔ-ಊUಓಉಂಖಙ, ಆಂAಆ ಚಿಟಿಜ IಓSಂ-ಆಈಉ ಫೆಲೋಶಿಪ್ ವಿಜೇತರು. ಯುಜಿಸಿ ಕೊಡಮಾಡುವ ಃSಖ ಈಚಿಛಿuಟಣಥಿ ಜಿeಟಟoತಿshiಠಿ, ಆಗ್ರಾದ ಭಾರತೀಯ ರಸಾಯನ ಶಾಸ್ತçಜ್ಞರ ಮಂಡಳಿಯ ಐiಜಿe ಖಿime ಂಛಿhievemeಟಿಣ ಂತಿಚಿಡಿಜ ೨೦೧೬ ಅನ್ನು ಇವರ ರಸಾಯನ ವಿಜ್ಞಾನದ ಕೊಡುಗೆಯನ್ನು ಪರಿಗಣಿಸಿ ನೀಡಲಾಗಿದೆ. ಕ.ವಿ.ವಿ. ಧಾರವಾಡ ಇತಿಹಾಸದಲ್ಲಿಯೆ ಮೊಟ್ಟ ಮೊದಲ ಭಾರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ನಂದಿಬೇವೂರ ಅವರನ್ನು ಗೌರವಿಸಿತು. ಇವರು ಕ.ವಿ.ವಿ ಗೆ ಸಲ್ಲಿಸಿದ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸೇವೆಯನ್ನು ಮನಗಂಡು ಕ.ವಿ.ವಿ ಇತ್ತೀಚೆಗೆ ಅಂದರೆ ಜುಲೈ ೨೦೧೮ ರಲ್ಲಿ ಇವರಿಗೆ PಖಔಈಇSಔಖ ಈಔಖ ಐIಈಇ ಎಂಬ ಪ್ರಶಸ್ತಿಯನ್ನು ದಯಪಾಲಿಸಿ ಅವರ ಸೇವೆಯನ್ನು ವಿ.ವಿ.ಗೆ ತೆಗೆದುಕೊಳ್ಳಲು ನಿರ್ಧರಿಸಿರುವುದು ಇವರಿಗೆ ಸಂದ ಮತ್ತೊಂದು ಗರಿ.

ಭಾರತೀಯ ರಸಾಯನ ಶಾಸ್ತ್ರಜ್ಞರ ಮಂಡಳಿಗೆ ಎರಡು ಸಲ ಕಾರ್ಯದರ್ಶಿಯಾಗಿ ಆಯ್ಕೆ ಯಾಗಿ ೧೯೯೬- ೨೦೦೦,ಮತ್ತು ೨೦೦೮-೨೦೧೨ ನಾಲ್ಕು ವರ್ಷಗಳ ಸೇವೆ ಸಲ್ಲಿಸಿದರು. ಕ.ವಿ.ವಿ ಯಲ್ಲಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ೧೯೯೬- ೨೦೦೦, ಮತ್ತು ೨೦೦೯-೨೦೧೧ ರಲ್ಲಿ ಎರಡು ಅವಧಿಗೆ ಆಯ್ಕೆಗೊಂಡಿದ್ದರು. ಎರಡು ಕೋಟಿ ರೂಪಾಯಿ ಯುಜಿಸಿ ಅನುದಾನದ Uಉಅ-SಂP ಚಿಟಿಜ ಆSಖಿ-ಈISಖಿ ಕಾರ್ಯಕ್ರಮದ ಸಂಯೋಜಕರಾಗಿ ದುಡಿದರು. ಇಜiಣoಡಿ oಜಿ Sಥಿಟಿಣhesis ಚಿಟಿಜ ಖeಚಿಛಿಣiviಣಥಿ iಟಿ Iಟಿoಡಿgಚಿಟಿiಛಿ , ಒeಣಚಿಟ-ಔಡಿgಚಿಟಿiಛಿ ಚಿಟಿಜ ಓಚಿಟಿo-ಒeಣಚಿಟ ಅhemisಣಡಿಥಿ: Iಟಿಣeಡಿಟಿಚಿಣioಟಿಚಿಟ ಎouಡಿಟಿಚಿಟ oಜಿ ಅhemiಛಿಚಿಟ Sಛಿieಟಿಛಿes; ಇಟeಛಿಣಡಿoಟಿiಛಿ ಎouಡಿಟಿಚಿಟ oಜಿ ಅhemisಣಡಿಥಿ ಚಿಟಿಜ ಎouಡಿಟಿಚಿಟ oಜಿ ಂಠಿಠಿಟiಛಿಚಿbಟe ಅhemisಣಡಿಥಿ ಯಲ್ಲಿ ನಂದಿಬೇವೂರ ಅವಿರತವಾಗಿ ಕರ್ತವ್ಯ ನಿರ್ವಹಿಸಿದರು. ಐಸಿಸಿ ಆಗ್ರಾ ಹಾಗೂ ಕೊಲ್ಕತ್ತಾ ಐಸಿಎಸ್ ನ ಎಕ್ಸಿಕ್ಯೂಟೀವ್ ಸದಸ್ಯರಾಗಿ ಕಾರ್ಯನಿರ್ವಹಿಸಿ ಹುದ್ದೆಯ ಘನತೆ ಹೆಚ್ಚಿಸಿದರು. ಧಾರವಾಡ ಕ.ವಿ.ವಿ. ಯಲ್ಲಿ ಯುಜಿಸಿ ಅಕಾಡೆಮಿಕ್ ಸ್ಟ್ಯಾಫ್ ಕಾಲೇಜಿನ ನಿರ್ದೇಶಕರಾಗಿ ೨೦೦೪-೨೦೦೭ ರ ಅವಧಿಯಲ್ಲಿ ಯಶಸ್ವಿಯಾಗಿ ನಿಭಾಯಿಸಿದರು. ನಾಲ್ಕುವರೆ ವರ್ಷಗಳ ಕಾಲ ವಿ.ವಿ.ಯ ರಸಾಯನಶಾಸ್ತ್ರ ವಿಭಾಗದಲ್ಲಿ ಚೇರ್ಮನ್ ಆಗಿ ಕಾರ್ಯನಿರ್ವಹಿಸಿದರು. ಸಿಂಡಿಕೇಟ್ ಸದಸ್ಯರಾಗಿ , ವಿಜ್ಞಾನ ನಿಖಾಯದ ಡೀನರಾಗಿ ಪೂರ್ಣಾವಧಿ ಸೇವೆ ಸಲ್ಲಿಸಿದ್ದಾರೆ. 

 ಅವರ ಅಗಾಧವಾದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅನುಭವವನ್ನು ಪರಿಗಣಿಸಿ ಅವರ ವಿದ್ಯಾರ್ಥಿಗಳು, ಹಿತಚಿಂತಕರು ಅವರ ೬೦ನೇ ಹುಟ್ಟು ಹಬ್ಬವನ್ನು ದಿನಾಂಕ ೧೬-೦೧-೨೦೧೪ ರಂದು ವಿಜೃಂಭಣೆಯಿಂದ ಆಚರಿಸಿದರು. ಹುಟ್ಟು ಹಬ್ಬದ ಸಡಗರದಲ್ಲಿ ೫ ಜನ ಉಪ ಕುಲಪತಿಗಳು ಹಾಜರಿದ್ದು ಕಾರ್ಯಕ್ರಮಕ್ಕೆ ಮೆರಗನ್ನು ತಂದಿದ್ದಾರೆ. ಅವರ ಶಿಷ್ಯ ಬಳಗ ಮತ್ತು ಹಿತೈಷಿಗಳು ಪ್ರತಿವರ್ಷ ರಸಾಯನಶಾಸ್ತçದ ಮೊದಲ ರ‍್ಯಾಂಕ್ ವಿದ್ಯಾರ್ಥಿಗೆ ಪ್ರೋಫೆಸರ್ ನಂದಿಬೇವೂರ ಹೆಸರಿನಲ್ಲಿ ಗೋಲ್ಡ್ ಮೆಡಲ್ ಕೊಡಲು ನಿರ್ಧರಿಸಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ. ಭೌತ ರಸಾಯನಶಾಸ್ತç ವಿಷಯದ ಸಾಧಕರಿಗೆ ಐಸಿಎಸ್ ಕಾನ್ಫರೆನ್ಸ್ ನಲ್ಲಿ ಐಸಿಎಸ್ ಕೊಲ್ಕತ್ತ ಮೂಲಕ ಯುವ ವಿಜ್ಞಾನಿ ಪ್ರಶಸ್ತಿಯನ್ನು ಪ್ರತಿವರ್ಷ ನಂದಿಬೇವೂರ ಹೆಸರಿನಲ್ಲಿ ಕೊಡಲು ತೀರ್ಮಾನಿಸಿದ್ದಾರೆ. ದಾನಿಗಳಿಂದ ಹಣ ಸಂಗ್ರಹಿಸಿ ಅದರಿಂದ ಬರುವ ಬಡ್ಡಿಯಿಂದ ರಸಾಯನಶಾಸ್ತçದ ಮೇಲೆ ಸರಣಿ ಉಪನ್ಯಾಸಗಳನ್ನು ಏರ್ಪಡಿಸಲು ಯೋಜಿಸಲಾಗಿದೆ. ಅಪಾರವಾದ ಬುದ್ಧಿಶಕ್ತಿಯಿಂದ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆದಿದ್ದಾರೆ. ಭಾರತೀಯ ವೈಜ್ಞಾನಿಕ ಕ್ಷೇತ್ರಕ್ಕೆ ಬೆಲೆಕಟ್ಟಲಾಗದ ಕೊಡುಗೆಯನ್ನು ಕನ್ನಡಿಗರೊಬ್ಬರು ಸಲ್ಲಿಸಿರುವುದು ಕನ್ನಡಿಗರಾದ ನಾವು ಹೆಮ್ಮೆಪಡಬೇಕಾದ ವಿಷಯ.

 ನಮ್ಮ ಸಮುದಾಯ ಸಾಧಕರನ್ನು ಇವನಾರವ ಇನನಾರವ ಎಂದೆನಿಸದೆ ಇವ ನಮ್ಮವ ಇವ ನಮ್ಮವ ಎಂದೆನಿಸಿ ಬಿಗಿದಪ್ಪಿಕೊಳ್ಳಬೇಕು. ನಮ್ಮ ಸಮುದಾಯದ ಸಂಸದರು ಇವರಿಗೆ ಅತ್ಯುನ್ನತ ಪ್ರಶಸ್ತಿಗಳೊಂದಿಗೆ ಗೌರವಿಸಿದರೆ ನಮ್ಮ ನಾಡನ್ನು ಗೌರವಿಸಿದಂತೆ. ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸಲಿ. ಸಾಧಕರು ಶ್ರೀಗಂಧವಿದ್ದಂತೆ. ಅವರಿಗೆ ಉನ್ನತ ಸ್ಥಾನ ದೊರಕಿದರೆ ಕೂಡಲ ಸಂಗನ ಶರಣರಿಗೆ ಇಚ್ಛಾಭೋಜನವನಿಕ್ಕಿದಂತೆ.

 ಹೊನ್ನ ನೇಗಿಲಲುತ್ತು ಎಕ್ಕೆಯ ಬೀಜವ ಬಿತ್ತುವರೆ ?

 ಕರ್ಪುರದ ಮರನ ತರಿದು ಕಳ್ಳಿಗೆ ಬೇಲಿಯನಿಕ್ಕುವರೆ ?

 ಶ್ರೀಗಂಧದ ಮರನ ತರಿದು ಬೇವಿಂಗೆ ಅಡೆಯನಿಕ್ಕುವರೆ ?

 ನಮ್ಮ ಕೂಡಲಸಂಗನ ಶರಣರಿಗಲ್ಲದೆ ಬೇರೆ ಇಚ್ಛಾಭೋಜನವನಿಕ್ಕಿದಡೆ

 ಕಿಚ್ಚಿನೊಳಗೆ ಉಚ್ಚೆಯ ಹೊಯಿದು ಹವಿಯ ಬೇಳ್ದಂ

ತಾಯಿತ್ತು.

 ಲೇಖಕರು: ಚಂದ್ರಶೇಖರ ಕಗ್ಗಲ್ಲುಗೌಡ್ರು