ಡಾ ಪ್ರಣವಾನಂದ ಶ್ರೀಗಳ ಜೊತೆ ಸಚಿವ ಡಿ. ಸುಧಾಕರ್ ಮಹತ್ವದ ಮಾತುಕತೆ: ಪಾದಯಾತ್ರೆ ಕೈಬಿಡುವಂತೆ ಮನವೊಲಿಕೆ

ಡಾ ಪ್ರಣವಾನಂದ ಶ್ರೀಗಳ ಜೊತೆ ಸಚಿವ ಡಿ. ಸುಧಾಕರ್ ಮಹತ್ವದ ಮಾತುಕತೆ: ಪಾದಯಾತ್ರೆ ಕೈಬಿಡುವಂತೆ ಮನವೊಲಿಕೆ

ಡಾ ಪ್ರಣವಾನಂದ ಶ್ರೀಗಳ ಜೊತೆ ಸಚಿವ ಡಿ. ಸುಧಾಕರ್ ಮಹತ್ವದ ಮಾತುಕತೆ: ಪಾದಯಾತ್ರೆ ಕೈಬಿಡುವಂತೆ ಮನವೊಲಿಕೆ

ಸೋಮವಾರ ಡಿಸಿಎಂ ಜೊತೆ ಚರ್ಚಿಸಿ ಪಾದಯಾತ್ರೆ ಅಂತ್ಯಗೊಳಿಸಲು ಪ್ರಯತ್ನ ಸಚಿವರ ಭರವಸೆ

ಚಿತ್ರದುರ್ಗ: ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ 18 ಬೇಡಿಕೆಗಳನ್ನು ಒತ್ತಾಯಿಸಿ, 700 ಕೀ.ಮೀ. ಐತಿಹಾಸಿಕ ಪಾದಯಾತ್ರೆ ಕೈಗೊಂಡಿರುವ ಡಾ. ಪ್ರಣವಾನಂದ ಸ್ವಾಮೀಜಿ ಅವರ ಜೊತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸೂಚನೆಯ ಮೇರೆಗೆ ರಾಜ್ಯದ ಯೋಜನೆ ಮತ್ತು ಸಾಂಖಿಕ ಖಾತೆಯ ಸಚಿವರು ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಚಿತ್ರದುರ್ಗದಲ್ಲಿ ಮಾತುಕತೆ ನಡೆಸಿ ಪಾದಯಾತ್ರೆ ಕೈಬಿಡುವಂತೆ ಮನವೊಲಿಸಲು ಪ್ರಯತ್ನಿಸಿದರು.

    ಚಿತ್ರದುರ್ಗದಿಂದ ಐಮಂಗಲದ ಮೂಲಕ ಮೆಟಗುರ್ಕಿಗೆ ಭಾನುವಾರ (ಫೆ 1ರಂದು)ತಲುಪಿದ ಐತಿಹಾಸಿಕ ಪಾದಯಾತ್ರೆಯು ಈಗಾಗಲೇ 27 ದಿನಗಳನ್ನು ಪೂರೈಸಿದ್ದು ಡಾ. ಪ್ರಣವಾನಂದ ಶ್ರೀಗಳನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೂಚನೆಯ ಮೇರೆಗೆ ಮೆಟಗುರ್ಕಿ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಕಲ್ಯಾಣಕ್ಕಾಗಿ 18 ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಪಾದಯಾತ್ರೆಯ ಬಗ್ಗೆ ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದು ಪಾದಯಾತ್ರೆಯನ್ನು ಕೂಡಲೇ ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. 

   ಸುಮಾರು ಒಂದು ಗಂಟೆಗಳ ಕಾಲ ಸ್ವಾಮೀಜಿಯವರ ಜೊತೆ ಚರ್ಚೆ ಮಾಡಿದ ಸಚಿವರು ಸರಕಾರವು ಸಕಾರಾತ್ಮಕವಾಗಿ ಬೇಡಿಕೆಗಳ ಬಗ್ಗೆ ಸ್ಪಂದಿಸಲಿದೆ. ಸೋಮವಾರವೇ ಉಪಮುಖ್ಯಮಂತ್ರಿಗಳನ್ನು ಭೇಟಿ ಯಾಗಿ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿ ಮಧ್ಯಸ್ಥಿಕೆಯ ಮೂಲಕ ಇತ್ಯರ್ಥ ಪಡಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಪ್ರಣವಾನಂದ ಶ್ರೀಗಳು 18 ಬೇಡಿಕೆಗಳ ಬಗ್ಗೆ ಸಚಿವರ ಗಮನಕ್ಕೆ ತಂದು ಕುಲಕಸುಬು ಕಳೆದುಕೊಂಡ ಈಡಿಗ ಸಮುದಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ಮತ್ತು ಸರಕಾರದಿಂದ ಸಮಾಜದ ಮೇಲಾಗುವ ಅನ್ಯಾಯಗಳ ಬಗ್ಗೆ ಪೂರ್ಣ ಮಾಹಿತಿ ನೀಡಿದರು. ಕನಿಷ್ಠ ಐದು ಬೇಡಿಕೆಗಳನ್ನಾದರೂ ಈಡೇರಿಸದಿದ್ದರೆ ಸರ್ಕಾರದ ಜೊತೆ ಯಾವುದೇ ಸಂಧಾನಕ್ಕೂ ಸಿದ್ಧವಿಲ್ಲ. ಪಾದಯಾತ್ರೆ ಫ್ರೀಡಂ ಪಾರ್ಕ್ ಗೆ ಫೆಬ್ರವರಿ 12 ರಂದು ತಲುಪಲಿದ್ದು ಆ ದಿನ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಸಮಾಜ ಬಾಂಧವರು ಪಾಲ್ಗೊಳ್ಳುವುದು ಖಚಿತ ಎಂದು ಸಚಿವರಿಗೆ ಸ್ವಾಮೀಜಿಯವರು ತಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿದರು. 

  ಸೋಮವಾರ ಡಿಸಿಎಂ ಜೊತೆ ಮಾತುಕತೆ ನಡೆಸಿ ಸೂಕ್ತ ನಿರ್ಧಾರ ತಿಳಿಸುವುದಾಗಿ ಸಚಿವರು ಈ ಸಂದರ್ಭದಲ್ಲಿ ಸ್ವಾಮೀಜಿಯವರಿಗೆ ಭರವಸೆ ನೀಡಿದರು. ಅತಿ ಹಿಂದುಳಿದ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಬಸವನಾಗಿ ದೇವ ಶರಣರು ಕೂಡ ಉಪಸ್ಥಿತರಿದ್ದರು