ವೀರಮ್ಮ ಶರಣೆ

ಪರಿಪೂರ್ಣನಲ್ಲ, ಪ್ರದೇಶಿಕನಲ್ಲ,
ನಿರತಿಶಯದೊಳತಿಶಯ ತಾ ಮುನ್ನಲ್ಲ.
ಶರಣನಲ್ಲ, ಐಕ್ಯನಲ್ಲ, ಪರಮನಲ್ಲ, ಜೀವನಲ್ಲ,
ನಿರವಯನಲ್ಲ, ಸಾವಯನಲ್ಲ;
ಪರವಿಹವೆಂಬುಭಯದೊಳಿಲ್ಲದವನು.
ನಿರಾಲಯ ನಿಜಗುರು ಶಾಂತೇಶ್ವರನ
ಶರಣನ ನಿಲವು ಉಪಮೆಗೆ ತಾನನುಪಮ. *ವೀರಮ್ಮ ಶರಣೆ*
(ದಸರಯ್ಯ ಶರಣರ ಧರ್ಮಪತ್ನಿ)
** *ವಚನ ಅನುಸಂಧಾನ*
ಅಪ್ಪ ಬಸವಾದಿ ಶರಣರೆಲ್ಲಾ ಸೇರಿ ಕಟ್ಟಿದಂಥಾ ಲಿಂಗಾಯತ ಧರ್ಮವು ತನ್ನ ವಿಶಿಷ್ಟವಾದ ಮತ್ತು ವಿನೂತನವಾದ ತತ್ವ ಸಿದ್ಧಾಂತಗಳ ಮೂಲಕ; ಅರಿವು ಆಚರಣೆ ಹಾಗೂ ನಡೆ ನುಡಿ ಸಾಂಗತ್ಯದ ಅತ್ಯಂತ ವೈಚಾರಿಕ ವೈಜ್ಞಾನಿಕ ಮನೋಭಾವದ ಅಡಿಯಲ್ಲಿ ಸೃಷ್ಟಿಯ ರಹಸ್ಯದ ಲಿಂಗತತ್ವ ಮತ್ತು ವ್ಯಕ್ತಿಯ ಅಂಗ ತತ್ವದ ರಹಸ್ಯಗಳನ್ನು ಭೇದಿಸಿ, ಸಾಮಾಜಿಕ ಆರ್ಥಿಕ ನೈತಿಕ ನೈಸರ್ಗಿಕ ಧಾರ್ಮಿಕ ಹೀಗೆ ವಿವಿಧ ಕ್ಷೇತ್ರಗಳ ವ್ಯಾಪ್ತಿಯ ಆಯಾಮಗ ಳಲ್ಲಿ ಒಟ್ಟಂದದ ಮೂಲಕ ಸಮಗ್ರವಾಗಿ ಅರಳಿ ಇಹಪರದ ಬದುಕಲ್ಲಿ ಪ್ರಗತಿಪರವಾಗಿ ಬಾಳಿ ಬೆಳಗಿದ ವೈಚಾರಿಕ ಮನೋಭಾವ ಹೊಂದಿರುವ ಪ್ರಜ್ಞಾವಂತ ಶರಣರೆಲ್ಲರೂ ಸೇರಿ ಕಟ್ಟಿದ ಸರ್ವಸ ಮಾನತೆಯ ದಯಾಮಯಿಭಾವದ ಲಿಂಗಾಯತ ಧರ್ಮವಾಗಿದೆ.
ವ್ಯಕ್ತಿಯು ಇಷ್ಟಲಿಂಗವನ್ನು ತನ್ನ ಅಂಗದ ಮೇಲೆ ಆಯತ ಮಾಡಿಕೊಂಡು, ಅಂಗೈಯಲ್ಲಿ ಅದನ್ನು ಇಟ್ಟುಕೊಂಡು ನೆಟ್ಟನೋಟದ ಭಕ್ತಿ ಕೂಟದಲ್ಲಿ ಅನುಷ್ಠಾನ ಮಾಡುವ ಸದ್ಭಕ್ತನಾಗಿ ಇಷ್ಟಲಿಂಗದ ಸಾಧನೆಯನ್ನು ಮಾಡಿಕೊಳ್ಳುತ್ತಾ; ಭಕ್ತ ಮಹೇಶ
ಪ್ರಸಾದಿ ಪ್ರಾಣಲಿಂಗಿ ಶರಣ ಮತ್ತು ಐಕ್ಯಸ್ಥಲಗಳ ಊರ್ಧ್ವಮುಖಿಯಾಗಿ ಅನುಸಂಧಾನ ಮಾಡುವ ಮೂಲಕ ಪ್ರತಿಯೊಂದು ಸ್ಥಲವನ್ನು ಸಾಧಿಸುತ್ತಾ ಮೇಲೇರಿ ಷಟಸ್ಥಳಗಳನ್ನು ಸಾಧಿಸಿ, ಕೊನೆಯಲ್ಲಿ ಶರಣನಾಗಿ ಜಗದಲ್ಲಿ ನಿಜ ಜಂಗಮನಾಗಿ ಜಗದ ಜನಮಾನಸದಲ್ಲಿ ಭಕ್ತಿ ಭಾವವನ್ನು ಬಿತ್ತಿ ಬೆಳೆದು ಭವ ಮುಕ್ತಿಯನ್ನ ಸಾಧಿಸ ಬೇಕಾಗುತ್ತದೆ.ಅದಕ್ಕೆ ಶರಣನಾಗುವುದೆಂದರೆ ಅದು ಕಡುಕಷ್ಟದ ಕಠಿಣ ಕೆಲಸವಾಗಿದೆ. ಅದಕ್ಕಾಗಿನೇ ಶರಣರು ಅಂದೇ ಹೀಗೆ ಅಂದಿದ್ದಾರೆ; 'ಲಕ್ಷಕ್ಕೊಬ್ಬ ಭಕ್ತ ಕೋಟಿಗೊ ಬ್ಬ ಶರಣ' ಎಂದು ಸಾರಿದ್ದಾರೆ. ಇದರಿಂದಾಗಿಯೇ ಶರಣ ಪದವು ಅಷ್ಟೊಂದು ಘನತೆ ಗೌರವವನ್ನು ಗಳಿಸಿದೆ.
ಈ ಮೇಲಿನ ವೀರಮ್ಮ ಶರಣೆ (ಶರಣ ದಸರಯ್ಯ ನವರ ಧರ್ಮಪತ್ನಿ) ರಚಿಸಿದ ವಚನವು ಶರಣನ ನಿಲುವು ಎಂಥಾದ್ದು ಎನ್ನುವುದನ್ನ ಇಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಹಿಡಿದಿಟ್ಟಿದೆ. ಅದನ್ನೀಗ ಇಲ್ಲಿ ಅನುಸಂಧಾನ ಮಾಡಿ, ವಚನಾಶಯವು ಏನಿದೆ ಯಂಬುದನ್ನು ನೋಡೋಣ.
*#ಪರಿಪೂರ್ಣನಲ್ಲ, ಪ್ರದೇಶಿಕನಲ್ಲ,*
*ನಿರತಿಶಯದೊಳತಿಶಯ ತಾ ಮುನ್ನಲ್ಲ.*
*ಶರಣನಲ್ಲ, ಐಕ್ಯನಲ್ಲ, *ಪರಮನಲ್ಲ, ಜೀವನಲ್ಲ,*
*ನಿರವಯನಲ್ಲ, ಸಾವಯನಲ್ಲ;*
ಪರವಿಹವೆಂಬುಭಯದೊಳಿಲ್ಲದವನು.*
ಶರಣನು ಷಟಸ್ಥಳವ ಸಾಧಿಸಿ ಜಂಗಮನಾದರೂ
ಭೌತಿಕ ಶರೀರವನ್ನು ಪಂಚಭೂತಗಳ ಹಂಗಿನಲ್ಲಿ ಪೊರೆದು ಇರಬೇಕಾದ ಕಾರಣದಿಂದ 'ಶರಣನು ಪರಿಪೂರ್ಣನಲ್ಲಾ' ಎನ್ನುವ ವಚನಕಾರ್ತಿ ಶರಣೆ ವೀರಮ್ಮನವರು; ಶರಣನು ಇರಬೇಕಾದ ಸ್ಥಿತಿ ಹೇಗಿರಬೇಕು ಎಂದರೆ, "ಸುಟ್ಟ ನೂಲಿನ ಹಾಗೆ" ಎನ್ನುವರು. ಶರಣ ವಿಶ್ವಕುಟುಂಬಿ ಆಗಿರುವನು ಆದ್ದರಿಂದ ಆತನನ್ನು ಒಂದು ಸೀಮಿತ ಸ್ಥಾನದ ಪ್ರದೇಶಕ್ಕೆ ಸೀಮಿತವಾಗಿ ಗುರುತಿಸಲೂ ಬಾರದು ಮತ್ತು ಶರಣನು ಅತಿಶಯವಾದ ಶಕ್ತಿಸಾಮರ್ಥ್ಯ ಹೊಂದಿದ್ದರೂ ಈ ಭವದ ಬದುಕಿನಲ್ಲಿ ಆತನು "ಕನಸು ಕಂಡ ಶಿಶುವಿನಂತೆ" ಅಮಾಯಕನಾಗಿ ಇರುವನು. ಹಾಗಾಗಿ ಅಪೂರ್ಣತ್ವ ಅಂಟಿಕೊಂಡ ಕಾರಣದಿಂದ ಶರಣನಲ್ಲ, ಐಕ್ಯನಲ್ಲ ಪರಮನಲ್ಲ, ಜೀವನಲ್ಲ ನಿರವಯನಲ್ಲ ಸಾವಯನಲ್ಲ; ಆದ್ರೂ
ಪರವಿಹವೆಂಬುಭಯದೊಳಿಲ್ಲದವನು.ಶರಣನು ಇಹದವ ಇಲ್ಲವೇ ಪರದವ ಎನ್ನಲೂ ಸಾಧ್ಯವಿಲ್ಲ ಎನ್ನುವ ಮೂಲಕ ಶರಣರ ವಿಶಿಷ್ಟ ವ್ಯಕ್ತಿತ್ವದ ಆ ಚಿತ್ರಣವನ್ನು ಇಲ್ಲಿ ವೀರಮ್ಮ ಶರಣೆ ನೇತ್ಯಾತ್ಮಕ ನೋಟದಲ್ಲಿಯೇ ನಿಶರಣರ ನಿಜದ ನೆಲೆಯನ್ನು ಕಟ್ಟಿಕೊಟ್ಟಿದ್ದಾರೆ.
*#ನಿರಾಲಯ ನಿಜಗುರು ಶಾಂತೇಶ್ವರನ*
*ಶರಣನ ನಿಲವು ಉಪಮೆಗೆ #ತಾನನುಪಮ.*
ವೀರಮ್ಮ ಶರಣೆ ತಮ್ಮ ಗುರು ನಿರಾಲಯ ನಿಜ ಗುರು ಶಾಂತೇಶ್ವರನ ಶರಣನ ಘನತರ ನಿಲುವು ನಿಜಕ್ಕೂ ಉಪಮೆಗೆ ನಿಲುಕಲಾರದ್ದು. ಹಾಗಾಗಿ ಶರಣನು ಯಾವುದೇ ಉಪಮೆಗೆ ನಿಲುಕದಂಥಾ ಅನುಪಮನು ಎಂದು ಹೆಮ್ಮೆಯಿಂದ ಹೇಳಿದ್ದಾರೆ ಎಂದು ಹೇಳಬಹುದಾಗಿದೆ. ಇದ್ದೂ ಇಲ್ಲದಂತಿರು ಶರಣನು ಥೇಟ್ ಇದ್ದೂ ಇಲ್ಲದಂತಿರುವ ಪರಮ ಪವಿತ್ರ ಬಯಲ ಶೂನ್ಯ ಮೂರ್ತಿಯೇ ಆಗಿರುವ ಎಂದು ವಚನಕಾರ್ತಿ ವೀರಮ್ಮ ಶರಣೆಯು ಇಲ್ಲಿ ಅರ್ಥಪೂರ್ಣ ನುಡಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
*ಅಳಗುಂಡಿ ಅಂದಾನಯ್ಯ*