ಡೆಲ್ಲಿ ಪಬ್ಲಿಕ್ ಶಾಲೆ ಬೆಂಗಳೂರು ಉತ್ತರದಲ್ಲಿ ವಿಜೃಂಭಣೆಯ ಕರ್ನಾಟಕ ರಾಜ್ಯೋತ್ಸವ
ಡೆಲ್ಲಿ ಪಬ್ಲಿಕ್ ಶಾಲೆ ಬೆಂಗಳೂರು ಉತ್ತರದಲ್ಲಿ ವಿಜೃಂಭಣೆಯ ಕರ್ನಾಟಕ ರಾಜ್ಯೋತ್ಸವ
ಡೆಲ್ಲಿ ಪಬ್ಲಿಕ್ ಶಾಲೆ, ಬೆಂಗಳೂರು ಉತ್ತರ ವಲಯದಲ್ಲಿ ಕನ್ನಡಿಗರ ಸಂಸ್ಕೃತಿ ಮತ್ತು ಪರಂಪರೆಯನ್ನು ಕೊಂಡಾಡುವ 70ನೇ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಖ್ಯಾತ ಗಾಯಕರು ಹಾಗೂ ಕರ್ನಾಟಕ ಸರ್ವೋದಯ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಯ. ಚಿ. ದೊಡ್ಡಯ್ಯನವರು ಧ್ವಜಾರೋಹಣ ನೆರವೇರಿಸಿದರು.
ವಿಶೇಷ ಆಹ್ವಾನಿತ ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿಯವರು “ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ” ಎಂಬ ಮನಮುಟ್ಟುವ ಗೀತೆಯ ಹಿನ್ನೆಲೆಯೊಂದಿಗೆ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಪ್ರಕಟಪಡಿಸಿರುವ ಹೊತ್ತಿಗೆಗಳನ್ನು ಶಾಲಾ ಗ್ರಂಥಾಲಯಕ್ಕೆ ನೀಡಿದರು.
“ಗಣನಾಯಕಾಯ ಗಣದೈವತಾಯ ಗಣಾಧ್ಯಕ್ಷಾಯ ಧೀಮಹಿ” ಎಂಬ ಹಾಡಿಗೆ ಸಂಯೋಜಿತ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
“ನಾ ಕಂಡ ಕರುನಾಡು” ಎಂಬ ಪರಿಕಲ್ಪನೆಯ ಅಡಿಯಲ್ಲಿ ಕನ್ನಡ ನಾಡಿನ ನೈಸರ್ಗಿಕ ಸೌಂದರ್ಯವನ್ನು ಚಿತ್ರಿಸುವ ನೃತ್ಯ, ಗುರು–ಶಿಷ್ಯರ ನಡುವಿನ ಬಾಂಧವ್ಯವನ್ನು ತೋರಿಸುವ ನಾಟಕ, “ವಿವಿಧತೆಯಲ್ಲಿ ಏಕತೆ” ಎಂಬ ಕಿರು ನೃತ್ಯ ನಾಟಕ ಹಾಗೂ “ರೆಟ್ರೋ ಟು ಮೆಟ್ರೋ” ಎಂಬ ಶೀರ್ಷಿಕೆಯಡಿಯಲ್ಲಿ ಸಿನಿ ಲೋಕದಲ್ಲಿ ನಡೆದ ಬದಲಾವಣೆಗಳನ್ನು ಚಿತ್ರಿಸುವ ವಿಶೇಷ ಪ್ರದರ್ಶನಗಳು ಪ್ರೇಕ್ಷಕರ ಮನ ಗೆದ್ದವು ಅದಲ್ಲದೆ ಪೋಷಕರಿಗಾಗಿ ಆಯೋಜಿಸಿದ್ದ ಆಟ, ಬೊಂಬಾಟ ಮತ್ತು ಫ್ಯಾಷನ್ ಶೋ ಕಾರ್ಯಕ್ರಮಗಳು ಸಂಭ್ರಮವನ್ನು ಹೆಚ್ಚಿಸಿದವು.
ಪ್ರಸಿದ್ಧ ರಂಗಭೂಮಿ ಕಲಾವಿದರಾದ ಶ್ರೀ ಸೂರ್ಯನಾರಾಯಣ ರವರಿಗೆ ಈ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು.
ಶಾಲೆಯ ಪ್ರಾಂಶುಪಾಲೆ ಮಂಜು ಬಾಲಸುಬ್ರಮಣ್ಯ ರಾಷ್ಟ್ರಮಟ್ಟದಲ್ಲಿ ಶಾಲೆ ತನ್ನದೇ ಆದ ವೈಶಿಷ್ಟಗಳಿಂದ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಅಧ್ಯಾಪಕರ ಕಾರ್ಯ ತತ್ಪರತೆಯಿಂದ ಮುನ್ನಡೆದಿದೆ ಎಂದು ತಿಳಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಸುಮತಿ ಸಗರ್ ಮಾತನಾಡಿ ಕನ್ನಡದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಸುವ ಮೂಲಕ ಇಲ್ಲಿನ ಸಂಸ್ಕೃತಿ ಪರಿಚಯ ಮಾಡಿಸಿ ಭಾಷಾಭಿಮಾನ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
