ಕನ್ನಡ ಕಟ್ಟುವ ಕಾಯಕಕ್ಕೆ ಕೈಜೋಡಿಸಿ ಉದ್ಯಮಿಗಳಿಗೆ ಕರೆ

ಕನ್ನಡ ಕಟ್ಟುವ ಕಾಯಕಕ್ಕೆ ಕೈಜೋಡಿಸಿ ಉದ್ಯಮಿಗಳಿಗೆ ಕರೆ

ಕನ್ನಡ ಕಟ್ಟುವ ಕಾಯಕಕ್ಕೆ ಕೈಜೋಡಿಸಿ ಉದ್ಯಮಿಗಳಿಗೆ ಕರೆ

ಕನ್ನಡ ಗಡಿ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಉದ್ಯಮಿಗಳ ಜೊತೆ ಸಂವಾದ:

ಕಲಬುರಗಿ: ಕನ್ನಡ ನಾಡು ನುಡಿ ಸಂರಕ್ಷಣೆಗೆ ಸರಕಾರದ ಜೊತೆ ಉದ್ಯಮಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಿದಾಗ ಶಕ್ತಿ ಬರುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಹೇಳಿದರು.

   ಕಲಬುರಗಿಗೆ ಜುಲೈ 20ರಂದು ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಹೋಟೆಲ್ ಅನಂತದ ಅಕ್ಷಯ ಸಭಾಂಗಣದಲ್ಲಿ ಕಲಬುರ್ಗಿ ಜಿಲ್ಲಾ ಹೋಟೆಲ್, ಬೇಕರಿ ವಸತಿ ಗೃಹ ಸೇರಿದಂತೆ ಉದ್ಯಮಿಗಳ ಜೊತೆ ಸಂವಾದದಲ್ಲಿ ಪಾಲ್ಗೊಂಡು ಕನ್ನಡ ಕಟ್ಟುವ ಕಾಯಕದಲ್ಲಿ ಕನ್ನಡಿಗರೆಲ್ಲರೂ ಜೊತೆಗೂಡಬೇಕು. ಸರಕಾರದ ಅನುದಾನ ಅತ್ಯಲ್ಪವಾಗಿರುವುದರಿಂದ ಉದ್ಯಮಿಗಳು ಸೇರಿದಂತೆ ಸ್ವಯಂಸೇವಾ ಸಂಸ್ಥೆ, ಖಾಸಗಿ ಕಂಪನಿ ಮತ್ತು ಭಾಗಿದಾರರು ಬೆಂಬಲ ನೀಡಿದರೆ ಕನ್ನಡದ ಸರ್ವಾಂಗೀಣ ಅಭಿವೃದ್ಧಿಯಾಗುವುದಲ್ಲದೆ ಗಡಿನಾಡು ಜಿಲ್ಲೆಗಳ ಕನ್ನಡ ಶಾಲೆಗಳ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬಹುದು. ಉದ್ಯಮ ಸಮೂಹದ ಶಕ್ತಿಯನ್ನು ಕನ್ನಡ ಕಟ್ಟುವ ಕೆಲಸಕ್ಕೆ ಬಳಸಿಕೊಳ್ಳಲು ಪ್ರಾಧಿಕಾರವು ಚಿಂತನೆ ಮಾಡುತ್ತಿದೆ ಎಂದು ಬೇವಿನ ಮರದ ಹೇಳಿದರು. 

    ಉದ್ಯಮಿಗಳ ಜೊತೆಗಿನ ಸಂವಾದವನ್ನು ಆಕಾಶವಾಣಿ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ನೆರವೇರಿಸಿ ಕನ್ನಡ ನಾಡು ನುಡಿಯ ಸಂರಕ್ಷಣೆಗೆ ಎಲ್ಲ ಕನ್ನಡಿಗರು ಒಂದೇ ಮನಸ್ಸಿನಿಂದ ದುಡಿದಾಗ ಪ್ರಾದೇಶಿಕ ತಾರತಮ್ಯ ಮತ್ತು ಗಡಿ ಜಿಲ್ಲೆಗಳ ಸಮಸ್ಯೆ ನಿವಾರಣೆಗೊಂಡು ಸಮಾನವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಇಲ್ಲವಾದರೆ ಕರಾವಳಿ ಹಾಗೂ ಹಳೆ ಮೈಸೂರು ಅಭಿವೃದ್ಧಿಯ ಮುಂಚೂಣಿಯಲ್ಲಿದ್ದರೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಕಿತ್ತೂರು ಕರ್ನಾಟಕ ಭಾಗ ನಿಧಾನ ಗತಿಯ ಪ್ರಗತಿ ಹೊಂದುವ ಆತಂಕವಿದೆ ಎಂದು ಹೇಳಿದರು. 

   ಸಂವಾದ ಕಾರ್ಯಕ್ರಮದಲ್ಲಿ ಉದ್ಯಮಿ ಕಿರಣ್ ಜತ್ತನ್ ಸ್ವಾಗತ ಕೋರಿ ಈ ರೀತಿಯ ಮಾತುಕತೆಯಿಂದ ಸರಕಾರ ಮತ್ತು ಖಾಸಗಿಯವರ ನಡುವೆ ಸಂಬಂಧ ವೃದ್ಧಿಗೊಳ್ಳುತ್ತದೆ ಎಂದರು. ಹಿರಿಯ ಉದ್ಯಮಿಗಳಾದ ವೆಂಕಟೇಶ್ ಕಡೇಚೂರ್ ಉದ್ಯಮಿಗಳ ಪರವಾಗಿ ಸೋಮಣ್ಣ ಬೇವಿನಮರದ ಅವರಿಗೆ ಶಾಲು ಕೃತಿ ಹಾಗೂ ಹಾರದೊಂದಿಗೆ ಸನ್ಮಾನ ನೆರೆವೇರಿಸಿದರು. ಹೋಟೆಲ್ ಬೇಕರಿ ಮತ್ತು ವಸತಿ ಮಾಲೀಕರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷರಾದ ನರಸಿಂಹ ಮೆಂಡನ್ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕೆಲಸ ಕಾರ್ಯಗಳಿಗೆ ಶುಭ ಹಾರೈಸಿದರು. ಉದ್ಯಮಿಗಳಾದ ರಾಜೇಶ್ ಗುತ್ತೇದಾರ್, ತಿಮ್ಮಪ್ಪ ಗಂಗಾವತಿ, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಸುರೇಶ್ ಗುತ್ತೇದಾರ್ ಮಟ್ಟೂರು ಸಂತೋಷ್ ಡಾಂಗೆ , ಶ್ರೀಧರ ಬಡಿಗೇರ್ ವಿರೂಪಾಕ್ಷ ಪಾಟೀಲ್ ಶಿಗ್ಗಾoವಿ, ರೇವಣಸಿದ್ಧ ಪೂಜಾರ್ ಮತ್ತು ಅಶೋಕ್ ಈ ಸಂದರ್ಭದಲ್ಲಿ ಹಾಜರಿದ್ದರು.