ಒಳ ಮೀಸಲಾತಿ ಜಾರಿಗೆ ದಿನಾಂಕ ಘೋಷಿಸಿ, ಬದ್ಧತೆ ಪ್ರದರ್ಶಿಸಿ, ಸಿಎಂಗೆ ಸುಂದರ ಡಿ ಸಾಗರ ಆಗ್ರಹ

ಒಳ ಮೀಸಲಾತಿ ಜಾರಿಗೆ ದಿನಾಂಕ ಘೋಷಿಸಿ, ಬದ್ಧತೆ ಪ್ರದರ್ಶಿಸಿ, ಸಿಎಂಗೆ ಸುಂದರ ಡಿ ಸಾಗರ ಆಗ್ರಹ
ಕಲಬುರಗಿ: ಒಳ ಮೀಸಲಾತಿ ಜಾರಿ ಮಾಡುವ ದಿನಾಂಕ ಘೋಷಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬದ್ಧತೆ ಪ್ರದರ್ಶಿಸಬೇಕು ಎಂದು ಮಾದಿಗ ದಂಡೋರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸುಂದರ ಡಿ.ಸಾಗರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಒಳ ಮೀಸಲಾತಿ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ನಿಲುವು ವ್ಯಕ್ತಪಡಿಸಿ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸುವ ದಿನಾಂಕ ಘೋಷಣೆ ಮಾಡಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ. ನಂತರದ ದಿನಗಳಲ್ಲಿ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮೀಕ್ಷೆಯ ದತ್ತಾಶಂಗಳ ಸರ್ವೇಕ್ಷಣೆ ಬಗ್ಗೆಯೂ ಈ ನಾಯಕರು ದ್ವಂದ್ವ ನಿಲುವು ತಾಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಳಮೀಸಲಾತಿ ಜಾರಿಗೆ ಬದ್ಧತೆ ಪ್ರದರ್ಶಿಸಬೇಕಿದೆ ಎಂದಿದ್ದಾರೆ.
ಕಳೆದ ಆ.1 ರಂದೇ ಸುಪ್ರೀಂಕೋರ್ಟ್ ಒಳ ಮೀಸಲಾತಿ ಜಾರಿ ಮಾಡಲು ಆಯಾ ರಾಜ್ಯಗಳಿಗೆ ಅಧಿಕಾರ ನೀಡಿದೆ. 30 ವರ್ಷಗಳಿಂದ ನೆನೆಗುದಿಗೆ ಬಿದ್ದ ಒಳಮೀಸಲಾತಿ ಅವಶ್ಯಕತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯೂ ಆಗಿದೆ. ತೆಲಂಗಾಣ, ಹರಿಯಾಣ, ಆಂಧ್ರ ಪ್ರದೇಶ ಸರ್ಕಾರಗಳು ಈಗಾಗಲೇ ಒಳಮೀಸಲಾತಿ ಜಾರಿಗೊಲಿಸಿವೆ. ಆದರೆ ಸಾಮಾಜಿಕ ನ್ಯಾಯದ ಹರಿಕಾರ ಎಂದು ಬಿಂಬಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಗೊಳಿಸಿಲ್ಲ, ಈ ನಡೆ ಉಳಿದ ರಾಜ್ಯಗಳ ಎದುರು ತಲೆ ತಗ್ಗಿಸುವಂತೆ ಮಾಡಿದೆ, ಇನ್ನೊಂದೆಡೆ ರಾಜ್ಯ ಸರ್ಕಾರ ಒಳಮೀಸಲಾತಿ ಹೋರಾಟವನ್ನು ದಮನಗೊಳಿಸುವ ವ್ಯವಸ್ಥಿತ ಪ್ರಯತ್ನ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.
ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸರ್ವೇಕ್ಷಣ ಕಾರ್ಯ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಒಳಮೀಸಲಾತಿ ಜಾರಿಗೊಳಿಸುವ ದಿನಾಂಕವನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸರ್ವೇಕ್ಷಣಾ ಕಾರ್ಯಕ್ಕೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿರುವುದರಿಂದ ಕೆಲವೇ ದಿನಗಳಲ್ಲಿ ವರದಿ ಸಿದ್ಧವಾಗುತ್ತದೆ. ಹೀಗಾಗಿ ಕೂಡಲೇ ಒಳಮೀಸಲಾತಿ ಜಾರಿಗೊಳಿಸುವ ದಿನಾಂಕವನ್ನು ತ್ವರಿತಗತಿಯಲ್ಲಿ ಘೋಷಣೆ ಮಾಡುವಂತೆ ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.