ವಚನ ಸಾಹಿತ್ಯಕ್ಕೆ ಡಾ.ಫ.ಗು. ಹಳಕಟ್ಟಿ ಅವರ ಕೊಡುಗೆ ಅಪಾರ: ಜಗದೀಶ ಮರಪ್ಪಳ್ಳಿ

ವಚನ ಸಾಹಿತ್ಯಕ್ಕೆ ಡಾ.ಫ.ಗು. ಹಳಕಟ್ಟಿ ಅವರ ಕೊಡುಗೆ ಅಪಾರ: ಜಗದೀಶ ಮರಪ್ಪಳ್ಳಿ
ಇಂದು ನಾವು ವಚನ ಸಾಹಿತ್ಯವನ್ನು ಸಮಗ್ರವಾಗಿ, ವ್ಯವಸ್ಥಿತವಾಗಿ ಅಧ್ಯಯನ ಮಾಡುತ್ತಿದ್ದರೆ ಅದು ಡಾ. ಫ. ಗು. ಹಳಕಟ್ಟಿ ಅವರ ಕೊಡುಗೆ ಎಂದು ಸಾಹಿತ್ಯ ಪ್ರೇರಕ ಜಗದೀಶ ಮರಪ್ಪಳ್ಳಿ ಹೇಳಿದರು.
ಅವರು ರಾವೂರ ಗ್ರಾಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ವತಿಯಿಂದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಚನ ಕಂಠ ಪಾಠ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಹಮ್ಮಿಕೊಂಡಿದ್ದ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಸಸಿಗೆ ನಿರುಣಿಸಿ ಉದ್ಘಾಟಿಸಿ ಮಾತನಾಡಿದರು. ತಮ್ಮ ಜೀವನವನ್ನೇ ವಚನ ಸಾಹಿತ್ಯಕ್ಕಾಗಿ ಮೀಸಲಿಟ್ಟಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ವಚನ ಸಾಹಿತ್ಯದ ಸಂಗ್ರಹ, ಅಧ್ಯಯನ, ಮುದ್ರಣ ಮತ್ತು ಪ್ರಸಾರ ಮಾಡಿ ವಚನ ಸಾಹಿತ್ಯವನ್ನು ಜಗದಗಲ ಪಸರಿಸಿದರು. ಜನರು ಮನೆಗಳಲ್ಲಿ, ಜಗುಲಿಗಳಲ್ಲಿ. ಮಠಗಳಲ್ಲಿ ಪೂಜಿಸುತ್ತಿದ್ದ ವಚನಗಳ ಕಟ್ಟುಗಳನ್ನು ಸೈಕಲ್ ತುಳಿದು ಮನೆ ಮನೆಗೆ ಹೋಗಿ ಕಾಡಿ ಬೇಡಿ ಅವುಗಳನ್ನು ತಂದು ತಮ್ಮ ಸ್ವಂತ ಮನೆಯನ್ನು ಮಾರಿ ವಚನ ಸಾಹಿತ್ಯವನ್ನು ಮುದ್ರಿಸಿ ಜನಮಾನಸಕ್ಕೆ ತಲುಪಿಸಿದರು. ವಚನ ಸಾಹಿತ್ಯ ಓದುವ ನಾವುಗಳು ಅವರಿಗೆ ಚಿರಋಣಿ ಯಾಗಿರಬೇಕು ಎಂದು ಹೇಳಿದರು. ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಮಾತನಾಡಿ ವಚನಗಳನ್ನು ಕಂಠಪಾಠ ಮಾಡಿದರೆ ಸಾಲದು ಅವುಗಳನ್ನು ಅರ್ಥೈಸಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯ ಮೇಲೆ ಸಂಸ್ಥೆಯ ಸದಸ್ಯ ಸಿದ್ದಲಿಂಗ ಜ್ಯೋತಿ, ಬಸವ ಸಮಿತಿ ಶಾಲೆಯ ಅಧ್ಯಕ್ಷ ರೇವಣಸಿದ್ಧಪ್ಪ ಮುಸ್ತರಿ, ಕಾರ್ಯದರ್ಶಿ ಅಮೃತ ಮಾನಕರ ಉಪಸ್ಥಿತರಿದ್ದರು.
ಅತಿ ಹೆಚ್ಚು ವಚನಗಳನ್ನು ಹೇಳಿದ ಮಕ್ಕಳಿಗೆ ಸತ್ಕರಿಸಲಾಯಿತು. ಶಿಶು ವಿಭಾಗದಿಂದ ಹತ್ತನೇ ತರಗತಿವರೆಗೆ ತರಗತಿವಾರು ನಡೆದ ಸ್ಪರ್ಧೆ ಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಗುರು ವಿದ್ಯಾಧರ ಖಂಡಳ, ವಿಜಯಲಕ್ಷ್ಮಿ ಬಮ್ಮನಳ್ಳಿ ಸೇರಿದಂತೆ ಶಿಕ್ಷಕರು. ಮಕ್ಕಳು ಉಪಸ್ಥಿತರಿದ್ದರು.
ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು. ಈರಣ್ಣ ಹಳ್ಳಿ ಪ್ರಾರ್ಥಿಸಿದರು. ಭುವನೇಶ್ವರಿ. ಎಂ ಬಹುಮಾನ ಕಾರ್ಯಕ್ರಮ ನಡೆಸಿಕೊಟ್ಟರು.