ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆ ಸದಾ ಪ್ರಸ್ತುತ: ಶಿವರಾಜ ಅಂಡಗಿ

ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆ ಸದಾ ಪ್ರಸ್ತುತ: ಶಿವರಾಜ ಅಂಡಗಿ
ಕಲಬುರಗಿ: "ಸಮಾಜ ಪರಿವರ್ತನೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಚಿಂತನೆಗಳು ಇಂದಿಗೂ ಕೂಡ ಅತಿ ಪ್ರಸ್ತುತ," ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.
ಡಾ. ಅಂಬೇಡ್ಕರ 134ನೇ ಜಯಂತ್ಯೋತ್ಸವದ ಅಂಗವಾಗಿ ಜಿಲ್ಲೆಯ ಕ.ಸಾ.ಪ. ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, "ಅಂಬೇಡ್ಕರವರ ತತ್ವಗಳು ಬುದ್ಧ, ಬಸವ ತತ್ವದ ಸಮನ್ವಯವಾಗಿದ್ದು, ಸಮಾಜದಲ್ಲಿ ಸಮಾನತೆ, ನ್ಯಾಯ, ಹಾಗೂ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತವೆ," ಎಂದರು.
ಜಿಲ್ಲಾ ಅಧ್ಯಕ್ಷ ವಿ.ಪಾಟೀಲ ತೇಗಲತಿಪ್ಪಿ ಮಾತನಾಡಿ, ಅಂಬೇಡ್ಕರ ಆಶಯದಂತೆ ಪರಿಷತ್ತು ಪುಸ್ತಕಗಳ ಗ್ರಂಥಾಲಯವನ್ನು ವಿಸ್ತಾರಗೊಳಿಸಿ ಓದುಗರಿಗೆ ಅನುಕೂಲವಾಗುವ ಕೆಲಸ ಮಾಡುತ್ತಿದೆ ಎಂದರು. ಅವರು ರಾಜಗೃಹದಲ್ಲಿ ಹೊಂದಿದ್ದ ಖಾಸಗಿ ಗ್ರಂಥಾಲಯ ಜಗತ್ತಿನ ಅತಿದೊಡ್ಡ ಖಾಸಗಿ ಗ್ರಂಥಾಲಯವಾಗಿದೆ ಎಂಬ ವಿಷಯವನ್ನು ಸ್ಮರಿಸಿದರು.
ಧರ್ಮಣ್ಣ ಎಚ್. ಧನ್ನಿ ಮಾತನಾಡಿ, "ಸರ್ವರ ಹಿತಕ್ಕಾಗಿ ರಚಿಸಲಾದ ಸಂವಿಧಾನ ಇಂದು ಹೆಮ್ಮೆಪಡಬಹುದಾದ ಗ್ರಂಥವಾಗಿದೆ. ಮಹಿಳಾ ಸಬಲೀಕರಣ ಮತ್ತು ಪ್ರಬುದ್ಧ ಭಾರತದ ದಿಕ್ಕಿನಲ್ಲಿ ಅಂಬೇಡ್ಕರರು ಶಿಕ್ಷಣದ ಮೌಲ್ಯ ಎತ್ತಿ ಹಿಡಿದಿದ್ದಾರೆ" ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ರಮೇಶ ಬಡಿಗೇರ, ಎಂ.ಎನ್. ಸುಗಂಧಿ, ಅಮೃತ ಅಣ್ಣೂರ, ಶರಣರಾಜ ಛಪ್ಪರಬಂಧಿ, ಪ್ರಭುಲಿಂಗ ಮೂಲಗೆ, ಧರ್ಮರಾಜ ಜವಳಿ, ಬಾಬುರಾವ ಪಾಟೀಲ, ರವೀಂದ್ರಕುಮಾರ ಬಂಟ್ನಳ್ಳಿ, ಸುರೇಶ ಲೇಂಗಟಿ, ದಿನೇಶ ಮದಕರಿ, ಶಿವಾನಂದ ಅಣ್ಣೂರ, ಶಿವಯೋಗೆಪ್ಪ, ರಾಜೇಂದ್ರ ಮಾಡಬೂಳ ಮೊದಲಾದವರು ಭಾಗವಹಿಸಿದ್ದರು.