ವಚನೋತ್ಸವ ಪ್ರೀಯ ದಿ. ಈರಣ್ಣ ದಸಮಾ ಅವರಿಗೆ ನುಡಿ ನಮನ ಶ್ರದ್ಧಾಂಜಲಿ

ವಚನೋತ್ಸವ ಪ್ರೀಯ ದಿ. ಈರಣ್ಣ ದಸಮಾ ಅವರಿಗೆ ನುಡಿ ನಮನ ಶ್ರದ್ಧಾಂಜಲಿ
ವಿದ್ಯಾನಗರ: ವಚನೋತ್ಸವ ಪ್ರೀಯ ಹಾಗೂ ವಿದ್ಯಾನಗರ ವಚನೋತ್ಸವ ಸಮಿತಿಯ ದೀರ್ಘಕಾಲದ ಸಂಚಾಲಕ ದಿ. ಈರಣ್ಣ ದಸಮಾ ರವರಿಗೆ ಶ್ರದ್ಧಾಂಜಲಿಯ ನುಡಿನಮನ ಕಾರ್ಯಕ್ರಮವನ್ನು ದಿನಾಂಕ ೧೦-೦೪-೨೦೨೫ರಂದು ವಿದ್ಯಾನಗರದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು.
ಸುಮಾರು ೨೫ ವರ್ಷಗಳಿಂದ ಪ್ರತಿವಾರ ವಚನೋತ್ಸವ ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ್ದ ಈರಣ್ಣ ದಸಮಾ ಅವರು, ಕೊರೋನಾ ಸಂದರ್ಭದಲ್ಲಿ ೨೮ ದಿನಗಳ ಕಾಲ ಕೋಮಾದಲ್ಲಿ ಬಿದ್ದು ಸಾವು-ಬದುಕಿನ ಹೋರಾಟ ನಡೆಸಿ, ಬಳಿಕ ದೈಹಿಕವಾಗಿ ದುರ್ಬಲರಾಗಿದ್ದರೂ ಸಹ, ಮೊಬೈಲ್ ಮೂಲಕ ವಚನಸಾಂಜೆ ನಡೆಸುತ್ತಲೇ ಹೋದವರು. ಇಂತಹ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವಕ್ಕೆ ನುಡಿನಮನ ಸಲ್ಲಿಸುವ ಈ ಕಾರ್ಯಕ್ರಮವನ್ನು ವಚನೋತ್ಸವ ಪ್ರತಿಷ್ಠಾನದ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಮಾಜಿ ಅಧ್ಯಕ್ಷ ಬಸವರಾಜ ಪುಣ್ಯಶೆಟ್ಟಿ, “೧೯೮೭ರಲ್ಲಿ ಮನೆ ಮನೆಗೆ ಸಂಗ್ರಹಿಸಿದ ೫೦೦ ರೂ. ಗಳನ್ನು ವ್ಯವಹಾರ ನಡೆಸಿ ಸೊಸೈಟಿ ಸ್ಥಾಪನೆ ಮಾಡಿದ ಪ್ರತಿಫಲವೇ ಇಂದು ಈ ಗುಡಿಯ ರೂಪದಲ್ಲಿ ಸಿದ್ಧವಾಗಿದೆ. ಈರಣ್ಣ ದಸಮಾ ಆರ್ಥಿಕ ತಜ್ಞರಾಗಿದ್ದರು,” ಎಂದರು.
ನಿವೃತ್ತ ಸೈನಿಕ ಆರೋಗ್ಯಾಧಿಕಾರಿ ರೇವಣಸಿದ್ದಪ್ಪ ಜೀವಣಗಿ ಮಾತನಾಡುತ್ತಾ, “ವೃದ್ಧರ ಆರೋಗ್ಯ ವೀಟಮಿನ್ ಮಾತ್ರೆಗಳಲ್ಲ, ಮನೋಬಲದಲ್ಲಿ ಇದೆ ಎಂಬುದನ್ನು ದಸಮಾ ತೋರೆದವರು. ಅವರು ಸದಾ ಸರಳ ಹಾಗೂ ಆಡಂಬರ ರಹಿತ ಬದುಕಿಗೆ ಮಾದರಿ,” ಎಂದು ಹೇಳಿದರು.
ಅಲ್ಲದೆ ಕಲ್ಯಾಣಪ್ಪ ಬಿರಾದಾರ ದಸಮಾ ಅವರ ಅಚ್ಚುಮೆಚ್ಚಿನ “ಅಕ್ಕ ಕೇಳವ್ವ” ಗೀತೆಯನ್ನು ಹಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿನೋದಕುಮಾರ ಜೆನೇವರಿ ಸ್ವಾಗತಿಸಿ, ಉಮೇಶ ದಸಮಾ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ರವಿ ಗಣಜಲಖೇಡ, ಸಿದ್ದಪ್ಪ ಮಸಳಿ, ಬಸವರಾಜ ಧೂಳಾಗುಂಡಿ, ಗೊಲ್ಲಾಳಪ್ಪ ನಾಗೂರ, ನಾಗರಾಜ ಹೆಬ್ಬಾಳ, ಕಂಠೆಣ್ಣ ಕಂಠಿ, ಶರಣಯ್ಯ ಹಿರೇಮಠ, ರೇವತಿಬಾಯಿ ದಸಮಾ, ಸುರೇಖಾ ಯಾದಗಿರಿ, ಶಿವಾನಂದ ನಾಗೂರ, ಸುಚಿತಾ, ಸಂಗೀತಾ, ರಮೇಶ ದಸಮಾ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.