ಕಲಬುರಗಿಯಲ್ಲಿ ರಾಷ್ಟ್ರಕೂಟ ಉತ್ಸವ ಸಂಭ್ರಮ – ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿಯಲ್ಲಿ ರಾಷ್ಟ್ರಕೂಟ ಉತ್ಸವ ಸಂಭ್ರಮ – ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿಯಲ್ಲಿ ರಾಷ್ಟ್ರಕೂಟ ಉತ್ಸವ ಸಂಭ್ರಮ – ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ:  ಕಲ್ಯಾಣ ನಾಡು ವಿಕಾಸ ವೇದಿಕೆಯ ವತಿಯಿಂದ ಕಲಬುರಗಿಯ ಕನ್ನಡ ಭವನದಲ್ಲಿ 2ನೇ ವರ್ಷದ ರಾಷ್ಟ್ರಕೂಟ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಚಿರಂಜೀವಿ ಎಸ್. ಅಪ್ಪ ಅವರು ವಹಿಸಿದ್ದರು.

ಕಾರ್ಯಕ್ರಮವನ್ನು ಶರಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಉದ್ಘಾಟಿಸಿದರು. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕ ರಾಮಕೃಷ್ಣ ಬಡಶೇಶಿ ಹಾಗೂ ಸಾಹಿತಿ ಡಾ. ಹನುಮಂತರಾವ ದೊಡ್ಡಮನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವೇದಿಕೆಯ ಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿ, “ಕೋಟಿಗಟ್ಟಲೆ ಹಣ ಖರ್ಚು ಮಾಡಿ ಮೈಸೂರು ದಸರಾ, ಹಂಪಿ, ಚಾಲುಕ್ಯ, ಕಿತ್ತೂರು, ಕದಂಬ ಹಾಗೂ ಲಕ್ಕುಂಡಿ ಉತ್ಸವಗಳನ್ನು ನಡೆಸುವ ರಾಜ್ಯ ಸರ್ಕಾರವು ರಾಷ್ಟ್ರಕೂಟ ಉತ್ಸವವನ್ನು ಆಚರಿಸದಿರುವುದಕ್ಕೆ ಕಾರಣ ತಿಳಿಸಬೇಕು. ಇತಿಹಾಸವನ್ನು ನಿರ್ಲಕ್ಷಿಸುವ ಸರ್ಕಾರಗಳಿಂದ ಇತಿಹಾಸ ಉಳಿಯುವುದಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರಕೂಟರ ಇತಿಹಾಸ, ಪರಂಪರೆ ಹಾಗೂ ಅಸ್ತಿತ್ವವನ್ನು ಉಳಿಸಬೇಕಾದರೆ ಈ ಉತ್ಸವವನ್ನು ಸರ್ಕಾರವೇ ಪ್ರತಿವರ್ಷ ಮಳಖೇಡದಲ್ಲಿ ಆಯೋಜಿಸಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ ಹೋರಾಟಗಾರ ಡಾ. ಲಕ್ಷ್ಮಣ ದಸ್ತಿ ಅವರು, ರಾಷ್ಟ್ರಕೂಟರ ಸಾಮ್ರಾಜ್ಯವು ಉತ್ತರದಲ್ಲಿ ಕಾಶ್ಮೀರದಿಂದ ದಕ್ಷಿಣದಲ್ಲಿ ಶ್ರೀಲಂಕಾವರೆಗೂ ವಿಸ್ತಾರವಾಗಿತ್ತು ಎಂದು ಉಲ್ಲೇಖಿಸಿದರು. 64 ವರ್ಷಗಳ ಕಾಲ ಆಡಳಿತ ನಡೆಸಿದ ಚಕ್ರವರ್ತಿ ಅಮೋಘವರ್ಷ ನೃಪತುಂಗರನ್ನು ಸ್ಮರಿಸಿದರು. ರಾಷ್ಟ್ರಕೂಟರ ಕಾಲದಲ್ಲಿ ಕಲಾ, ವಾಸ್ತು, ಸಾಹಿತ್ಯ, ಶಿಕ್ಷಣ ಹಾಗೂ ಧರ್ಮ ಸಹಿಷ್ಣುತೆ ವಿಫುಲವಾಗಿ ವೃದ್ಧಿಯಾಗಿದ್ದನ್ನು ಅವರು ವಿವರಿಸಿದರು. "ಅಜಂತಾ, ಎಲ್ಲೋರಾ, ಎಲಿಫೆಂಟಾ ಸ್ಮಾರಕಗಳು ಯುನೆಸ್ಕೋ ಮಾನ್ಯತೆ ಪಡೆದಿವೆ. ಆದರೆ ಅವರ ರಾಜಧಾನಿಯಾದ ಮಳಖೇಡ ಶೋಚನೀಯ ಸ್ಥಿತಿಯಲ್ಲಿದೆ," ಎಂದು ವಿಷಾದಿಸಿದರು.

ಕಾರ್ಯಕ್ರಮದ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು:

- ಚಲನಚಿತ್ರ ಕ್ಷೇತ್ರ: ರಾಘವಿ ಅರಳಗುಂಡಗಿ  

- ಸಾಹಿತ್ಯ: ಡಾ. ಬಸವರಾಜ ಕೊನೇಕ  

- ಮಾಧ್ಯಮ: ಶೇಷಮೂರ್ತಿ ಅವಧಾನಿ  

- ದೃಶ್ಯ ಮಾಧ್ಯಮ: ಶರಣಯ್ಯ ಹಿರೇಮಠ  

- ಕಾನೂನು: ನಾಗೇಂದ್ರ ಜವಳಿ  

- ಪೊಲೀಸ ಇಲಾಖೆ: ಯಲ್ಲಪ್ಪ ತಳವಾರ  

- ಹೋರಾಟಗಾರ: ಸೋಮನಾಥ ಕಟ್ಟಿಮನಿ  

- ಕೃಷಿ: ಶರಣಬಸಪ್ಪ ಪಾಟೀಲ  

- ಜಾನಪದ: ಎಂ. ಬಿ. ನಿಂಗಪ್ಪ  

- ಸಮಾಜ ಸೇವೆ: ಅಸ್ಲಮ ಚೋಗೆ

ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಬಾಬು ಮದನಕರ, ಸಂಘಟಕರಾದ ಜೈಭೀಮ ಮಾಳಗೆ, ಮೋಹನ್ ಸಾಗರ, ಪ್ರವೀಣ ಖೇಮನ, ವಿಜಯಕುಮಾರ ಕಂಬಾರ, ದೇವು ದೊರೆ, ಶ್ರೀಶೈಲ ಪೂಜಾರಿ, ಮಲ್ಲು ಸಂಕನ, ರಾಣೇಶ ಸಾವಳಗಿ, ರಾಕೇಶ ಕೊರವಾರ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಪಂಡಿತ ಮದಗುಣಕಿ ನಿರೂಪಿಸಿದರು, ನಾಗು ಡೊಂಗರಗಾಂವ ಸ್ವಾಗತ ಗೈದರು ಹಾಗೂ ಮಲ್ಲು ದೊರೆ ವಂದನಾರ್ಪಣೆ ಸಲ್ಲಿಸಿದರು.