ವಿಜಯ ಪಥ

ವಿಜಯ ಪಥ
ಶಿಕ್ಷಣ.ಸಾಹಿತ್ಯ.ಸಮಾಜ ಸೇವೆಯೊಂದಿಗೆ, ಭಾವೈಕ್ಯತೆಯನ್ನು ಬಿಂಬಿಸುವ, ಮತ್ತು ಕಟ್ಟುವ ಕೆಲಸವನ್ನು ಮಾಡುವುದರೊಂದಿಗೆ, ಸೃಜನಶೀಲತೆಯೊಡಗೂಡಿ ರಚನಾತ್ಮಕ ಕ್ರಿಯೆಗಳಲ್ಲಿ ತೊಡಗಿ ಸಾರ್ಥಕ ಬದುಕನ್ನು ಬಾಳಿದ ವ್ಯಕ್ತಿಗಳಿಗೆ ಗೌರವಿಸಿ ಅಭಿನಂದನಾ ಗ್ರಂಥವನ್ನು ಸಮರ್ಪಿಸುವುದು ರೂಢಿಯಾಗಿ ಬಂದಿದೆ.
ಅವರವರ ಶಕ್ತಿ, ಚಾಣಾಕ್ಷತೆ ಧನಬಲ, ಸದಾಭಿಪ್ರಾಯ ಸಾಮರ್ಥ್ಯಗಳು ಕಾರಣವಾಗಿ ಅನೇಕ ಅಭಿನಂದನಾ ಗ್ರಂಥಗಳು ಬಂದಿವೆ. ಇವು ಯಾವುದೂ ಇಲ್ಲದೇ ಸೌಹಾರ್ದ, ಸಜ್ಜನಿಕೆಯ ಸಾಕಾರಮೂರ್ತಿಯಾಗಿರುವ, ಸದಾ ಸಮಾಜಪರ ಚಿಂತನೆಯುಳ್ಳವರು ಇರುತ್ತಾರೆ. ಅವರಿಗೆ ಅವರ ಹಿತೈಷಿಗಳು, ಸೇರಿಕೊಂಡು ಗೌರವಿಸಿ ಅಭಿನಂದನಾ ಗ್ರಂಥ ಸಮರ್ಪಿಸಬೇಕಾಗುತ್ತದೆ. ಅಂಥಹದೊಂದು ಪ್ರಯತ್ನದ ಫಲವೇ ಈ "ವಿಜಯ ಪಥ"
ಡಾ. ವಿಜಯಕುಮಾರ ಪರುತೆಯವರು ಕಲಬುರಗಿಯ ಶೈಕ್ಷಣಿಕ, ಸಾಹಿತ್ಯಕ,ಸಾಮಾಜಿಕ ರಂಗಗಳಲ್ಲಿ ಅವಿರತ ಕೆಲಸವನ್ನು ಮಾಡುವುದರೊಂದಿಗೆ ಅವಿಭಾಜ್ಯ ಅಂಗವಾಗಿದ್ದಾರೆ. ಪದವಿ ವಿದ್ಯಾರ್ಥಿಗಳಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಕಳೆದ ೩೬ ವರ್ಷಗಳಿಂದ ಚಿರಪರಿತರು. ಸೃಜನಾತ್ಮಕ, ರಚನಾತ್ಮಕ, ಶೈಕ್ಷಣಿಕ, ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಮಂಚೂಣಿಯಲ್ಲಿದ್ದು ಕೈಲಾದ ಮಟ್ಟಿಗೆ ಸೇವೆಯನ್ನು ಮಾಡಿದವರು ಅಲ್ಲದೆ ನಾಡಿನ ಸಾಹಿತ್ಯ ಲೋಕಕ್ಕೆ ೨೫ ಪುಸ್ತಕ ನೀಡಿದವರು.ಅವರ ವಿನಯ ವಿದ್ವತ್ತು, ವಿವೇಕ, ಸೌಜನ್ಯ. ಸೌಹಾರ್ದತೆಯ ಬಾಳನ್ನು ಎಷ್ಟು ವರ್ಣಿಸಿದರೂ ಕಡಿಮೆ. ಪರುತೆಯವರಿಗೆ ಪರುತೆಯವರೇ ಸಾಟಿ ಎನ್ನಬಹುದು. ಅವರೊಂದಿಗೆ ಇನ್ನೊಬ್ಬರನ್ನು ಹೋಲಿಸಲೂ ಸಾಧ್ಯವಿಲ್ಲ.
ಅವರೊಬ್ಬಪ್ರಾಧ್ಯಾಪಕ, ಸಾಹಿತಿ,ಸಂಘಟಕ, ಸಮಾಜಸೇವಕ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ ಮಾಂತ್ರಿಕ ಎಂದು ಹೇಳಿದರೆ ತಪ್ಪಾಗದು. ಇಂತಹವರನ್ನು ಗುರುತಿಸಿ ಗೌರವಿಸಿ, ಸತ್ಕರಿಸಿ ಅವರ ಆದರ್ಶಮಯ ಸಾಧನೆಯನ್ನು ದಾಖಲಿಸಿ ಮುಂದಿನವರಿಗೆ
ಮಾರ್ಗದರ್ಶನವಾಗಲೆಂದು ಆಶಿಸಿ ಅಭಿನಂದನಾ ಗ್ರಂಥವಾದ 'ವಿಜಯ ಪಥ'ವನ್ನು ಸಮರ್ಪಿಸಲು ನನಗೆ ತುಂಬಾ ಹರ್ಷವೆನಿಸುತ್ತದೆ. ಅಲ್ಲದೇ ನನ್ನ ಎಲ್ಲ ಪ್ರಯತ್ನಕ್ಕೆ ಫಲ ಸಿಕ್ಕ ಸಂತೃಪ್ತಿ ನನ್ನದಾಗಿದೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾಂವ ಗ್ರಾಮದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ 2023 ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ 248 ಪುಟಗಳಿದ್ದು 250 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ