ಬಡವನ ಗುಡಿಸಲು

ಬಡವನ ಗುಡಿಸಲು

 "ಬಡವನ ಗುಡಿಸಲು" ಪುಸ್ತಕ ವಿಮರ್ಶೆ

"ಬಡವನ ಗುಡಿಸಲು" ಕವನ ಸಂಕಲನ ಕವಿ, ಸಾಹಿತಿ ಅಂಬಾರಾಯ ಮಡ್ಡೆ ಅವರು ಶಿಕ್ಷಕರಾಗಿ, ಸಾಹಿತಿಗಳಾಗಿ ಅಲ್ಲದೆ ಧಾರ್ಮಿಕ ಕ್ಷೇತ್ರದಲ್ಲಿಯು ತಮ್ಮದೇ ಆದ ಸೇವೆಯನ್ನು ಮಾಡುತ್ತಿದ್ದಾರೆ. 

ಕವಿ ಅಂಬಾರಾಯ ಮಡ್ಡೆ ಅವರು ಸೂಕ್ಷ್ಮಸಂವೇದನೆ ಮತ್ತು ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ. ಈ ಸಂಕಲನವು ಕೇವಲ ಬಡವರ ಗುಡಿಸಲಿನ ಕಥೆಯನ್ನು ಹೇಳದೆ. ನಮ್ಮ ಸಮಾಜದ ವಿವಿಧ ಸ್ತರಗಳ ಮತ್ತು ಮೌಲ್ಯಗಳ ಕುರಿತು ಆಳವಾದ ಚಿಂತನೆಗಳನ್ನು ಪ್ರಸ್ತುತಪಡಿಸುತ್ತದೆ.

ಈ ಕವನ ಸಂಕಲನದ ಆಯ್ದ ಕೆಲವು ಪ್ರಮುಖ ಅಂಶಗಳನ್ನು ಗಮನಿಸುವುದಾದರೆ:

ರೈತರ ಬದುಕು: ಮೊದಲ ಕವಿತೆಯೇ ರೈತರ ದುಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ರೈತನು ದೇಶದ ಬೆನ್ನೆಲುಬಾಗಿದ್ದರೂ, ಅವನ ಬಿದುಕು ಕಷ್ಟಗಳಿಂದ ತುಂಬಿದೆ. ವಿಶ್ರಾಂತಿ ಅವನಿಗೆ ಮರೀಚಿಕೆಯಾಗಿವೆ, ಮತ್ತು ಬೆಳೆ ಬೆಳೆದಾಗ ಸಂತೋಷವಾದರೂ, ಮಾರುಕಟ್ಟೆಯ ಬೆಲೆ ಕೇಳಿದಾಗ ಚಿಂತೆಯ ಗೆರೆಗಳು ಮೂಡುತ್ತವೆ. ಬೀಜ, ಗೊಬ್ಬರಕ್ಕಾಗಿ ಮಾಡಿದ ಸಾಲವೇ ಅವನ ಜೀವನದ ಕೊನೆಯ ಶೂಲವಾಗುತ್ತದೆ ಎಂಬ ವಾಸ್ತವದ ಚಿತ್ರಣವು ಮನ ಕಲಕುವಂತಿದೆ.

ಸೈನಿಕರ ಶೌರ್ಯ: ಸೈನಿಕರ ದೇಶಪ್ರೇಮ ಮತ್ತು ತ್ಯಾಗವನ್ನು ಕವಿ ಕೊಂಡಾಡಿದ್ದಾರೆ. ಅವರು ಬೆಟ್ಟ ಗುಡ್ಡಗಳನ್ನು ಲೆಕ್ಕಿಸದೆ, ಮಳೆ ಗಾಳಿಗೆ ಬೆರಗಾಗದೆ ದೇಶದ ಗಡಿಯನ್ನು ಕಾಯುತ್ತಿರುತ್ತಾರೆ. ನಾವು ನೆಮ್ಮದಿಯಿಂದ ಮಲಗಿರಲು ಅವರೇ ಕಾರಣ ಎಂದು ಕವಿ ಹೇಳಿದ್ದಾರೆ.

ಸಂಸ್ಕೃತಿಯ ಮಹತ್ವ: ಸಂಸ್ಕೃತಿಯ ಮಿಲನದ ಕುರಿತಾದ ಕವಿತೆಗಳು ಹಿರಿಯರಿಗೆ, ಗುರುಗಳಿಗೆ ಗೌರವ ಕೊಡುವುದರ ಮಹತ್ವವನ್ನು ತಿಳಿಸುತ್ತವೆ. ರೈತರು ಮತ್ತು ಸೈನಿಕರಿಗೆ ಗೌರವ ನೀಡದ ಸಂಸ್ಕೃತಿಯನ್ನು ವಿಲನ್ ಎಂದು ಕವಿ ಕರೆದಿದ್ದಾರೆ. ನ್ಯಾಯ ನೀತಿಗಳನ್ನು ಪಾಲಿಸುವುದೇ ನಿಜವಾದ ಸಂಸ್ಕೃತಿಯ ಮಿಲನ ಎಂಬುದು ಗಮನಾರ್ಹ.

ಕನ್ನಡದ ಕೀರ್ತಿ: "ಕನ್ನಡಕ್ಕೆ ಅಷ್ಟಮುಖಗಳು" ಎಂಬ ಕವಿತೆಯು ಕನ್ನಡ ಸಾಹಿತ್ಯದ ದಿಗ್ಗಜರಾದ ಕುವೆಂಪು, ಅಂಬಿಕಾತನಯದತ್ತ (ಬೇಂದ್ರೆ), ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೋಕಾಕ, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಅವರ ಕೊಡುಗೆಗಳನ್ನು ಸ್ಮರಿಸುತ್ತದೆ. ಕನ್ನಡ ಸಾಹಿತ್ಯಕ್ಕೆ ಇವರೆಲ್ಲರೂ ಅಮುಖ್ಯವಾದ ಸಂಪತ್ತು ಎಂಬುದನ್ನು ಕವಿ ಭಾವಪೂರ್ಣವಾಗಿ ತಿಳಿಸಿದ್ದಾರೆ. ಕಲಬುರಗಿಯ ಕನ್ನಡದ ಮೊದಲ ಕೃತಿ ಕವಿರಾಜಮಾರ್ಗ ಮತ್ತು ಕೇಶಿರಾಜರ ವ್ಯಾಕರಣ ಗ್ರಂಥದ ಉಲ್ಲೇಖವು ಈ ನಾಡಿನ ಸಾಹಿತ್ಯ ಪರಂಪರೆಯನ್ನು ಎತ್ತಿ ತೋರಿಸುತ್ತದೆ.

ಅವ್ವನ ಪ್ರೀತಿ: ತಾಯಿಯ ತ್ಯಾಗ ಮತ್ತು ಪ್ರೀತಿಯನ್ನು ಕವಿ ಹೃದಯಸ್ಪರ್ಶಿಯಾಗಿ ವರ್ಣಿಸಿದ್ದಾರೆ. ಅವ್ವ ಜೀವನದಲ್ಲಿ ಕಹಿಯನ್ನುಂಡು, ನೋವನ್ನು ಅನುಭವಿಸಿ ಮಕ್ಕಳಿಗಾಗಿ ಬದುಕುತ್ತಾಳೆ ಆಕೆ ಯಾವುದೇ ಆಸ್ತಿಯನ್ನು ಗಳಿಸದಿದ್ದರೂ, ತನ್ನ ಆಚಾರ ವಿಚಾರಗಳ ಮೂಲಕ ಮಕ್ಕಳ ಏಳಿಗೆಗೆ ಕಾರಣಳಾಗುತ್ತಾಳೆ.

ಧಾರ್ಮಿಕ ಶ್ರದ್ಧೆ ಮತ್ತು ಸಾಮಾಜಿಕ ಸಾಮರಸ್ಯ: ಕನಕದಾಸ, ಶರಣಬಸವ, ಕಳ್ಳಿಮಠದ ಗುರುಗಳು. ತುಳಜಾ ಭವಾನಿ, ವೀರಭದ್ರೇಶ್ವರ ಮುಂತಾದ ಶರಣ ಸಂತರ ದೇವರ ಕುರಿತಾದ ಕವಿತೆಗಳು ಭಕ್ತಿ ಮತ್ತು ಶ್ರದ್ಧೆಯ ಮಹತ್ವವನ್ನು ಸಾರುತ್ತವೆ. ಶರಣಬಸವರ ದಾಸೋಹ ತತ್ತ್ವ ಮತ್ತು ಬಸವರ ಕಾಯಕವೇ ಕೈಲಾಸ ಎಂಬ ಉಕ್ತಿಯು ಕಾವ್ಯದಲ್ಲಿ ಮಹತ್ವ ಪಡೆದಿವೆ. ಬಹುತ್ವ ಭಾರತದ ಕಲ್ಪನೆಯು ಕೋಮು ಸೌಹಾರ್ದತೆಯ ಆಶಯವನ್ನು ವ್ಯಕ್ತಪಡಿಸುತ್ತದೆ.

ಸಂವಿಧಾನದ ಮಹತ್ವ: ನಮ್ಮ ಸಂವಿಧಾನವು ಎಲ್ಲರಿಗೂ ಸಮಬಾಳನ್ನು ಮತ್ತು ಸಮಪಾಲನ್ನು ನೀಡುವ ಉದಾತ್ತ ಆಶಯವನ್ನು ಹೊಂದಿದೆ ಎಂದು ಕವಿ ಹೇಳಿದ್ದಾರೆ. ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್

ಅವರ ಕೊಡುಗೆಗಳನ್ನು ಸ್ಮರಿಸಲಾಗಿದೆ. ಜಾತ್ಯಾತೀತ ತತ್ತ್ವ ಮತ್ತು ಸ್ತ್ರೀ ಸಬಲೀಕರಣದ ಮಹತ್ವವನ್ನು ಸಂವಿಧಾನದ ಎತ್ತು ಹಿಡಿದಿದೆ ಎಂದು ಕವಿ ಬಣ್ಣಿಸಿದ್ದಾರೆ.

ಆಧುನಿಕತೆಯ ವಿಪರ್ಯಾಸಗಳು: ಊರು ಬಿಟ್ಟವರ ಕುರಿತಾದ ಕವಿತೆಯು ಅಧುನಿಕ ಜೀವನದ ಮೌಲ್ಯಗಳ ಅವನತಿಯನ್ನು ವಿಮರ್ಶಿಸುತ್ತದೆ. ಅವಿಭಕ್ತ ಕುಟುಂಬಗಳ ಮೌಲ್ಯಗಳು ಕಳೆದುಹೋಗುತ್ತಿವೆ ಮತ್ತು ನಿಸ್ವಾರ್ಥ ಮರೀಚಿಕೆಯಾಗಿದೆ ಎಂದು ಕವಿ ವಿಷಾದಿಸುತ್ತಾರೆ. ನೋಟು ಮತ್ತು ವೋಟಿನ

ವ್ಯಾಮೋಹ ಹಾಗೂ ಉಚಿತ ಕೊಡುಗೆಗಳ ರಾಜಕೀಯದ ಕುರಿತು ಕವಿ ಕಳವಳ ವ್ಯಕ್ತಪಡಿಸಿದ್ದಾರೆ.

ಮಾನವಿಯ ಮೌಲ್ಯಗಳ: ಪ್ರೀತಿ, ವಿಶ್ವಾಸ,ಮಮತೆ , ಸಹನೆ ಮತ್ತು ಸಮಾನತೆಯಂತಹ ಮಾನವೀಯ ಮೌಲ್ಯಗಳು ಎತ್ತಿ ಹಿಡಿಯುವ ಕವಿತೆಗಳು ಸಂಕಲನದಲ್ಲಿವೆ. ವ್ಯಕ್ತಿಗತ ದ್ವೇಷವನ್ನು ದೂರ ಮಾಡಿ ನೆಮ್ಮದಿಯ ನಾಡನ್ನು ಕಟ್ಟಲು ಕವಿ ಕರೆ ನೀಡಿದ್ದಾರೆ.

ಪ್ರಕೃತಿ ಮತ್ತು ಪರಿಸರ: ಮಲೆನಾಡಿನ ಸೊಬಗು ಮತ್ತು ಪ್ರಕೃತಿಯ ಮಹತ್ವವನ್ನು ವರ್ಣಿಸುವ ಕವಿತೆಗಳಿವೆ. ಪರಿಸರವನ್ನು ರಕ್ಷಿಸುವ ಕಳಕಳಿಯನ್ನು ಕವಿ ವ್ಯಕ್ತಪಡಿಸಿದ್ದಾರೆ.

ವಿಶ್ವ ಮಾನವ ಸಂದೇಶ: ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಕವಿ ಸ್ಮರಿಸಿದ್ದಾರೆ. ಜಾತಿ ಮತಗಳ ಕಟ್ಟುಪಾಡುಗಳನ್ನು ಮೀರಿ ಮನುಷ್ಯನಾಗುವುದರ ಮಹತ್ವವನ್ನು ಕವಿ ಪ್ರತಿಪಾದಿಸಿದ್ದಾರೆ.

"ಬಡವನ ಗುಡಿಸಲು" ಕವನ ಸಂಕಲನವು ಸರಳ ಮತ್ತು ನೇರವಾದ ಭಾಷೆಯಲ್ಲಿ ರಚಿತವಾಗಿದ್ದು ಓದುಗರಿಗೆ ಸುಲಭವಾಗಿ ಅರ್ಥವಾಗುವಂತಿದೆ. ಕವಿ ಜೀವಂತ ಮತ್ತು ವಾಸ್ತವಿಕ ಚಿತ್ರಣಗಳನ್ನು ಬಳಸಿದ್ದಾರೆ, ಅದು ಕವಿತೆಗಳಿಗೆ ಒಂದು ವಿಶೇಷವಾದ ಅನುಭವವನ್ನು ನೀಡುತ್ತದೆ. ಅಲ್ಲಲ್ಲಿ ಜನಪದ ಶೈಲಿಯ ಸ್ಪರ್ಶವು ಕವಿತೆಗಳ ಸೊಬಗನ್ನು ಹೆಚ್ಚಿಸಿದೆ.

ಒಟ್ಟಾರೆಯಾಗಿ, ಅಂಬಾರಾಯ ಮತ್ತೆ ಅವರ "ಬಡವನ ಗುಡಿಸಲು" ತವನ ಸಂಕಲನವು ಒಂದು ಅರ್ಥಪೂರ್ಣ ಮತ್ತು ಚಿಂತನೀಯ ಕೃತಿಯಾಗಿದೆ. ಇದು ನಮ್ಮ ಸಮಾಜದ ಆಗುಹೋಗುಗಳನ್ನು, ಮೌಲ್ಯಗಳನ್ನು ಮತ್ತು ಸಮಸ್ಯೆಗಳನ್ನು ಕವಿಗಳ ಸೂಕ್ಷ್ಮಕಣೋಟದಿಂದ ನೋಡಲು ನಮಗೆ ಅವಕಾಶ ನೀಡುತ್ತದೆ. ರೈತರ ಬದುಕು, ಸೈನಿಕರ ತ್ಯಾಗ, ಸಂಸ್ಕೃತಿಯ ಮಹತ್ವ ಮತ್ತು ಮಾನವೀಯ ಮೌಲ್ಯಗಳ ಕುರಿತಾದ ಕವಿಗಳ ಕಾಳಜಿ ಮೆಚ್ಚುವಂತಿದೆ. ಈ ಕವನ ಸಂಕಲನವು ಓದಲೇಬೇಕಾದ ಕೃತಿಯಾಗಿದ್ದು ಸಮಾಜದ ಕುರಿತು ಆಳವಾಗಿ ಚಿಂತಿಸುವವರಿಗೆ ಇದು ಖಂಡಿತವಾಗಿಯೂ ಇಷ್ಟವಾಗುತ್ತದೆ. ಕವಿ ಅಂಬಾರಾಯ ಮತ್ತೆ ಅವರಿಗೆ ಈ ಕೃತಿಗಾಗಿ ನನ್ನ ಹಾರ್ದಿಕ ಮೆಚ್ಚುಗೆಗಳು

ಶಿವರಾಜ ಸಣಮನಿ

ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೋಟ್ನಳ್ಳಿ ತಾ. ಸೇಡಂ