ಮೂರನೇ ಬಜೆಟ್ ನಲ್ಲೂ ಈಡಿಗ -ಬಿಲ್ಲವರ ನಿರ್ಲಕ್ಷ್ಯ

ಮುಗಿದ ಅಧಿವೇಶನ ಈಡಿಗ ನಿಗಮಕ್ಕೆ ಬಿಡುಗಡೆಯಾಗದ ಅನುದಾನ : ಮೂರನೇ ಬಜೆಟ್ ನಲ್ಲೂ ಈಡಿಗ -ಬಿಲ್ಲವರ ನಿರ್ಲಕ್ಷ್ಯ
ಕಲಬುರಗಿ : ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮೂರನೇ ಬಾರಿಗೆ ಬಜೆಟ್ ಮಂಡಿಸಿದಾಗಲೂ ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಪೂರ್ಣವಾಗಿ ಕಡೆಗಣನೆ ಮಾಡಿ ಒಂದು ನಯಾಪೈಸೆ ನೀಡಲಿಲ್ಲ. ಬಜೆಟ್ ಗೆ ಉತ್ತರಿಸುವಾಗ ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಬಹುದೆಂಬ ನಿರೀಕ್ಷೆಯು ಕೂಡಾ ಸುಳ್ಳಾಗಿದೆ. ಅಧಿವೇಶನ ಮುಕ್ತಾಯಗೊಂಡಿರುವುದರಿಂದ ಸಮುದಾಯಗಳಿಗೆ ತೀವ್ರ ನಿರಾಶೆ ಉಂಟಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ತನ್ನ ಬೇಸರ ವ್ಯಕ್ತಪಡಿಸಿದೆ.
ಕರ್ನಾಟಕ ರಾಜ್ಯದಲ್ಲಿ ಸುಮಾರು 70 ಲಕ್ಷದಷ್ಟು ಈಡಿಗ, ಬಿಲ್ಲವ, ನಾಮಧಾರಿ ನಾಯಕ ಸೇರಿದಂತೆ 26 ಪಂಗಡಗಳ ಸಮುದಾಯದ ಜನರಿದ್ದರೂ ಕಾಂಗ್ರೆಸ್ ಸರ್ಕಾರವು ಸಮುದಾಯಕ್ಕೆ ನೀಡಿದ ಭರವಸೆಯನ್ನು ಮರೆತು ದ್ರೋಹವೆಸಗಿದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಎಂ ಕಡೇಚೂರ್ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
ಮೊದಲನೆಯ ಬಜೆಟ್ ಮಂಡನೆಯಾದಾಗ ನಿರೀಕ್ಷೆಯಲ್ಲಿದ್ದು ಕೊನೆಗೂ ಕೊಡದಿದ್ದಾಗ ಎರಡನೇ ಬಜೆಟ್ ನಲ್ಲಿ ಸಿಗಬಹುದೆಂಬ ಮಹದಾಸೆ
ಹೊಂದಲಾಗಿತ್ತು. ಆದರೆ ಮೂರನೇ ಬಾರಿಯ ಬಜೆಟ್ ಮಂಡನೆಯಾದಾಗಲೂ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ನಯಾ ಪೈಸೆಯನ್ನು ಘೋಷಿಸಲಿಲ್ಲ. ಅನುದಾನ ವಂಚಿತಗೊಂಡ ಈಡಿಗ ನಿಗಮಕ್ಕೆ ಮುಖ್ಯಮಂತ್ರಿಗಳು ತನ್ನ ಬಜೆಟ್ ಭಾಷಣಕ್ಕೆ ಉತ್ತರ ನೀಡುವಾಗ ಹಣ ಬಿಡುಗಡೆ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದು ಶುಕ್ರವಾರ ಅಧಿವೇಶನವೇ ಮುಕ್ತಾಯಗೊಂಡಿರುವುದರಿಂದ ಕಾಂಗ್ರೆಸ್ ಸರ್ಕಾರವು ಸಮುದಾಯಕ್ಕೆ ಮಂಕು ಬೂದಿ ಎರಚಿದೆ.
ಈಡಿಗ ನಿಗಮಕ್ಕೆ ಅನುದಾನ ನೀಡುವಂತೆ ವಿಧಾನಸಭೆಯಲ್ಲಿ ಶಾಸಕರು ಒತ್ತಾಯಿಸಿ ಪ್ರಶ್ನೆ ಕೇಳಿದರೂ ಮುಖ್ಯಮಂತ್ರಿಗಳು ಜಾಣ ಮೌನ ತೋರಿದ್ದಾರೆ. ರಾಜ್ಯದಲ್ಲಿರುವ ಇಷ್ಟು ದೊಡ್ಡ ಸಮುದಾಯಕ್ಕೆ ನಿಗಮ ಘೋಷಣೆಯಾದರೂ ಸತತವಾಗಿ ಮೂರು ವರ್ಷಗಳಿಂದ ಗಣನೆಗೆ ತೆಗೆದುಕೊಳ್ಳದೆ ಅನುದಾನ ಪ್ರಕಟಿಸದೆ ಕಡೆಗಣಿಸಿರುವುದು ಈ ಸರಕಾರ ಹಿಂದುಳಿದ ವರ್ಗಗಳ ಅಭ್ಯುದಯಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
*ಪ್ರಿಯಾಂಕ ಖರ್ಗೆ ಪತ್ರಕ್ಕೂ ಕವಡೆ ಕಿಮ್ಮತ್ತಿಲ್ಲ*
ಈ ಬಾರಿಯ ಬಜೆಟ್ ನಲ್ಲಿ ಗುಲ್ಬರ್ಗ ವಿಶ್ವವಿದ್ಯಾನಿಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠವನ್ನು ಪ್ರಾರಂಭ ಮಾಡುವಂತೆ 2019ರಲ್ಲಿ ರಾಜ್ಯ ಹಣಕಾಸು ಇಲಾಖೆಗೆ ಸಲ್ಲಿಸಿದ ಪ್ರಸ್ತಾವನೆಯನ್ನು ಉಲ್ಲೇಖಿಸಿ ಸನ್ಮಾನ್ಯ ಸಚಿವರಾದ ಪ್ರಿಯಾಂಕ ಖರ್ಗೆಯವರು ಸ್ವತಹ ಪತ್ರ ಬರೆದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿರುವುದಲ್ಲದೆ ನಿಗಮಕ್ಕೂ ಈ ಬಾರಿ ಅನುದಾನ ನೀಡುವುದಾಗಿ ಸಮಾಜದ ಮುಖಂಡರಿಗೆ ಭರವಸೆ ನೀಡಿದ್ದರು. ಆದರೆ ಮುಖ್ಯಮಂತ್ರಿಗಳು ಸಚಿವರ ಪತ್ರವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಸಮುದಾಯವನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್ ಮುಖ್ಯಮಂತ್ರಿಗಳೊಡನೆ ನೇರವಾಗಿ ನಿಗಮಕ್ಕೆ ಅನುದಾನ ಹಾಗೂ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಹಲವಾರು ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದರು. ಆದರೆ ಈ ಸಮುದಾಯಗಳ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಪೂರ್ಣವಾಗಿ ತಿರಸ್ಕರಿಸಲಾಗಿದೆ. ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳನ್ನು ಈ ಸರಕಾರವು ಕಡೆಗಣಿಸಿ ಪ್ರಜಾಪ್ರಭುತ್ವದ ಸಿದ್ಧಾಂತವನ್ನು ಗಾಳಿಗೆ ತೂರಿದೆ ಎಂದು ದೂರಿದರು.
*ಚಿಂತನ - ಮಂಥನ ಸಭೆಯಲ್ಲೂ ಅತೃಪ್ತಿ ಪ್ರಕಟ*
ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಚಿಂತನ ಮಂಥನ ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಶಾಸಕ ಸುನಿಲ್ ಕುಮಾರ್ ಕಾರ್ಕಳ ಮುಂತಾದ ರಾಜಕೀಯ ನಾಯಕರು ಹಾಗೂ ಸಮುದಾಯದ ಸ್ವಾಮೀಜಿಗಳಾದ ಪೂಜ್ಯಶ್ರೀ ವಿಖ್ಯಾತಾನಂದರು ಮತ್ತು ಡಾ. ಪ್ರಣವಾನಂದ ಶ್ರೀಗಳು ಸಮುದಾಯದಕ್ಕೆ ಬಜೆಟ್ ನಲ್ಲಿ ಚಿಕ್ಕಾಸು ನೀಡದೆ ಸಮುದಾಯವನ್ನು ನಿರ್ಲಕ್ಷಿಸಿರುವುದು ಅಕ್ಷಮ್ಯ ಅಪರಾಧ ಎಂದು ಸಭೆಯಲ್ಲಿ ಒಕ್ಕೊರಳಿನಿಂದ ಖಂಡಿಸಲಾಗಿತ್ತು. ಸಮುದಾಯದ ಹಿರಿಯ ನಾಯಕರಾದ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಸದ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು ಎಂದು ಸಭೆಯಲ್ಲಿ ಸಾಂತನಗೊಳಿಸಿದ್ದರು. ಆದರೆ ಯಾವುದೇ ಮನವಿಗೂ ಮುಖ್ಯಮಂತ್ರಿ ಸ್ಪಂದಿಸದಿರುವುದು ಖೇದಕರ.
*ಶಾಸಕ ಗುರ್ಮೆ ಸುರೇಶ್ ಶೆಟ್ಟಿಗೆ ಅಭಿನಂದನೆ*
ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಬಿಡುಗಡೆ ಮಾಡದಿರುವ ಬಗ್ಗೆ ಸಮುದಾಯದ ಯಾವೊಬ್ಬ ಶಾಸಕರು ಪ್ರಶ್ನೆಯನ್ನು ಕೇಳದಿದ್ದರೂ ಕಾಪು ವಿಧಾನಸಭಾ ಕ್ಷೇತ್ರದ ಬಂಟ ಸಮುದಾಯದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ವಿಧಾನಸಭೆಯಲ್ಲಿ ಮಾತನಾಡಿ ಬಿಲ್ಲವ ಸಮುದಾಯದ ಮತದಿಂದಲೇ ತಾನು ಹಾಗೂ ಸ್ಪೀಕರ್ ಯು.ಟಿ ಖಾದರ್ ನಂಥವರು ವಿಧಾನಸಭೆ ಪ್ರವೇಶಿಸುವಂತಾಗಿದೆ ಎಂದು ಅಭಿಮಾನದಿಂದ ಹೇಳಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡದೆ ಇರುವುದನ್ನು ಸಮಸ್ತ ಈಡಿಗ ಬಿಲ್ಲವ ಸಮುದಾಯದ ಜನರು ಪ್ರಶ್ನಿಸುತ್ತಿದ್ದಾರೆ. ವಿಧಾನಸೌಧದಲ್ಲಿ ಹೋಗಿ ನೀವೇನು ಮಾಡುತ್ತಿದ್ದೀರಿ? ಎಂದು ಖಾರವಾಗಿ ಪ್ರಶ್ನಿಸುತ್ತಿದ್ದಾರೆ ಆದುದರಿಂದ ಜನರಿಗೆ ಮುಖ ತೋರಿಸಲು ಸರ್ಕಾರವು ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಶಾಸಕ ಶೆಟ್ಟಿಯವರು ವಿನಯ ಪೂರ್ವಕವಾಗಿ ಸಮುದಾಯದ ಜನರ ಬಗ್ಗೆ ಕಳಕಳಿಯ ಮಾತುಗಳನ್ನಾಡಿ ಸರ್ಕಾರದ ಗಮನಸೆಳೆದಿರುವುದಕ್ಕೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ. ಸಮುದಾಯದ ಶಾಸಕರು ತುಟಿ ಬಿಚ್ಚದಿರುವುದು ಖಂಡನೀಯ ಎಂದು ಸಮಿತಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಸರ್ಕಾರವು ನಿಗಮಕ್ಕೆ ಕೂಡಲೆ 500 ಕೋಟಿ ಬಿಡುಗಡೆ ಮಾಡುವುದಲ್ಲದೆ ನಿಗಮಕ್ಕೆ ನೂತನ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಕ ಮಾಡಿ ಕಾರ್ಯ ಚಟುವಟಿಕೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸುವುದಾಗಿ ಗುತ್ತೇದಾರ್ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.