ಇದು ನಿರ್ಜೀವ ಬಜೆಟ್: ಪ್ರಭು ಚವ್ಹಾಣ್ ಲೇವಡಿ

ಇದು ನಿರ್ಜೀವ ಬಜೆಟ್: ಪ್ರಭು ಚವ್ಹಾಣ್ ಲೇವಡಿ

ಇದು ನಿರ್ಜೀವ ಬಜೆಟ್: ಪ್ರಭು ಚವ್ಹಾಣ್ ಲೇವಡಿ

ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 2025-26ನೇ ಸಾಲಿನ ಆಯವ್ಯಯ ಜೀವ ಇಲ್ಲದ್ದಾಗಿದ್ದು, ಇದೊಂದು ನಿರ್ಜೀವ ಬಜೆಟ್ ಆಗಿದೆ ಎಂದು ಮಾಜಿ ಸಚಿವರು ಹಾಗೂ ಔರಾದ್ ಶಾಸಕ ಪ್ರಭು ಚವ್ಹಾಣ ಲೇವಡಿ ಮಾಡಿದರು.

ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಜೆಟ್‌ನಲ್ಲಿ ಮೂಖ ಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕಸಾಯಿಖಾನೆ ಬಂದ್ ಮಾಡುವಂತಹ ಧಮ್ ಈ ಬಜೆಟಲ್ಲಿ ಇಲ್ಲ ಎಂದರು.

ಪಶು ಸಂಗೋಪನೆ ಇಲಾಖೆಗೆ ಏನೂ ಕೊಟ್ಟಿಲ್ಲ. ಪ್ರಾಣಿ ಸಹಾವಾಣಿ ಕೇಂದ್ರವೂ ಬಂದ್ ಆಗಿದೆ. 7 ಕೋಟಿ ಜನತೆಗೆ ಮೋಸ ಮಾಡುವ ಬಜೆಟ್ ಇದಾಗಿದೆ. ಈ ಸರ್ಕಾರ ಮೂಕ ಪ್ರಾಣಿಗಳ ವಿರೋಧಿ ಸರ್ಕಾರ. ಗೋ ಶಾಲೆಗಳು ಬಂದ್ ಮಾಡಿದ್ದಾರೆ ಎಂದು ಅವರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಿದ್ಧರಾಮಯ್ಯ ವಿಫಲರಾಗಿದ್ದಾರೆ. ಪ್ರಾಣಿಗಳ ಮೇಲೆ ನಿರಂತರವಾಗಿ ಸಾರ್ವಜನಿಕವಾಗಿ ಹಲ್ಲೆ-ಹತ್ಯೆಗಳಾಗುತ್ತಿದ್ದರೂ ಕೂಡ ಅವುಗಳ ರಕ್ಷಣೆಗೆ ಈ ಸರ್ಕಾರ ಮುಂದಾಗದಿರುವುದು ದುರಂತ ಎಂದು ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕಕ್ಕೂ ಸಿದ್ಧರಾಮಯ್ಯ ಬಜೆಟಲ್ಲಿ ಹಣ ನೀಡಿಲ್ಲ. ನಮ್ಮ ತಾಲೂಕಿಗೂ ಏನೂ ಕೊಟ್ಟಿಲ್ಲ. ಪ್ರವಾಸೋದ್ಯಮ, ಕೃಷಿ, ನೀರಾವರಿಗಾಗಿ ಅನುದಾನ ಸಿಗಬಹುದೆಂದು ಜನತೆ ನಿರೀಕ್ಷಿಸಿದ್ದರು. ಆದರೆ ಬೀದರ ಜಿಲ್ಲೆಗೆ ಹೊಸ ಯೋಜನೆ ನೀಡದೇ ಅನ್ಯಾಯ ಮಾಡಲಾಗಿದೆ. ಇಬ್ಬರು ಸಚಿವರಿದ್ದರೂ ಜಿಲ್ಲೆಗೆ ಹೇಳಿಕೊಳ್ಳುವಂತಹ ಪ್ರಯೋಜನ ಸಿಕ್ಕಿಲ್ಲ. ಈ ಬಜೆಟ್ ರಾಜ್ಯದ ಅಭಿವೃದ್ಧಿ ಮಾರಕವಾಗಿದೆ. ಜನರ ನಿರೀಕ್ಷೆ ಸುಳ್ಳಾಗಿದೆ ಎಂದು ಅವರು ಟೀಕಿಸಿದರು. 

ಸಿದ್ದರಾಮಯ್ಯರ 16ನೇ ಬಜೆಟ್ ನಿರ್ಜೀವ ಬಜೆಟ್ ಆಗಿದೆ. ಪಶು ಸಂಗೋಪನೆ ಇಲಾಖೆಗೆ ಖಾಲಿ ಚೆಂಬು ಕೊಟ್ಟಿದ್ದಾರೆ. ನಾಲ್ಕು ಲಕ್ಷ ಕೋಟಿ ವೆಚ್ಚದ ಬಜೆಟ್ ಸರ್ಕಾರದ ಖಜಾನೆ ಖಾಲಿ ಸೂಚಿಸುತ್ತಿದೆ. ಜನರನ್ನು ಲೂಟಿ ಮಾಡಲು ಸಿದ್ಧರಾಮಯ್ಯ ಸರ್ಕಾರ ಮುಂದಾಗಿದೆ ಎಂದು ಪ್ರಭು ಚವ್ಹಾಣ್ ಹೇಳಿದರು.

ಈ ಹಿಂದಿನ ಯೋಜನೆಗಳಿಗೆ ಹಣ ಕೊಟ್ಟಿಲ್ಲ. ಗೋಶಾಲೆಗಳಿಗೆ ಹಣ ಕೊಟ್ಟಿಲ್ಲ. ಗೋವುಗಳನ್ನು ರಕ್ಷಿಸಬೇಕಾದ ಸರ್ಕಾರ ಭಕ್ಷಿಸಲು ಮುಂದಾಗಿದೆ. ಮೂಕ ಪ್ರಾಣಿಗಳ ಶಾಪ ತಟ್ಟುತ್ತದೆ. ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಪ್ರಭು ಚವ್ಹಾಣ್ ಭವಿಷ್ಯ ನುಡಿದರು.