ದೆಹಲಿಯಲ್ಲಿ ಬಂಜಾರಾ ಜನರ ಸ್ವಾಭಿಮಾನದ ಭವನ ನಿರ್ಮಾಣ ನನ್ನ ಗುರಿ: ಡಾ. ಉಮೇಶ್ ಜಾಧವ್

ದೆಹಲಿಯಲ್ಲಿ ಬಂಜಾರಾ ಜನರ ಸ್ವಾಭಿಮಾನದ ಭವನ ನಿರ್ಮಾಣ ನನ್ನ ಗುರಿ: ಡಾ. ಉಮೇಶ್ ಜಾಧವ್

ದೆಹಲಿಯಲ್ಲಿ ಬಂಜಾರಾ ಜನರ ಸ್ವಾಭಿಮಾನದ ಭವನ ನಿರ್ಮಾಣ ನನ್ನ ಗುರಿ: ಡಾ. ಉಮೇಶ್ ಜಾಧವ್

ರಾಷ್ಟ್ರ ರಾಜಧಾನಿಯಲ್ಲಿ ಸಂತ ಸೇವಾಲಾಲ್ ಜಯಂತಿ ಸಂಪನ್ನ

ನವದೆಹಲಿ: ಭಾರತದಲ್ಲಿರುವ 14 ಕೋಟಿ ಬಂಜಾರಾ ಜನರ ಸ್ವಾಭಿಮಾನದ ಪ್ರತೀಕವಾಗಿ ನವದೆಹಲಿಯಲ್ಲಿ ಅತ್ಯಪೂರ್ವ ಬಂಜಾರ ಭವನ ನಿರ್ಮಾಣಕ್ಕೆ ಸಂಕಲ್ಪ ತೊಡಲಾಗಿದೆ ಎಂದು ಮಾಜಿ ಲೋಕಸಭಾ ಸದಸ್ಯರು ಹಾಗೂ ಅಖಿಲ ಭಾರತ ಬಂಜಾರಾ ಸೇವಾ ಸಂಘದ ಕಾರ್ಯಾಧ್ಯಕ್ಷರಾದ ಡಾ. ಉಮೇಶ್ ಜಾಧವ್ ಹೇಳಿದರು.

  ನವದೆಹಲಿಯ ಅಂಬೇಡ್ಕರ್ ಅಂತರಾಷ್ಟ್ರೀಯ ಸೆಂಟರ್ ನ ಭೀಮ ಸಭಾಂಗಣದಲ್ಲಿ ಫೆ 28ರಂದು ಸಂತ ಸೇವಾಲಾಲರ 286 ನೇ ಜಯಂತ್ಯುತ್ಸವ ಯಶಸ್ವಿಯಾಗಿ ಪೂರ್ಣಗೊಂಡ ನಂತರ ದೇಶದ ಬಂಜಾರಾ ಸಮುದಾಯದವರಿಗೆ ಹಾಗೂ ವಿವಿಧ ರಾಜ್ಯಗಳ ಕಲಾವಿದರಿಗೆ ಕೃತಜ್ಞತೆ ಸಲ್ಲಿಸಲು ಸುದ್ದಿಗಾರರ ಜೊತೆ ಮಾತನಾಡಿ ದೇಶದಲ್ಲಿರುವ 14 ಕೋಟಿಯಷ್ಟು ಬಂಜಾರಾ ಜನರು ತಮ್ಮ ತಮ್ಮ ರಾಜ್ಯಗಳಲ್ಲಿ ಬಂಜಾರಾ ಸಂಸ್ಕೃತಿ ಪ್ರಚಾರ ಮತ್ತು ಪ್ರಸಾರಕ್ಕಾಗಿ ಭವನಗಳನ್ನು ಹೊಂದಿದ್ದರೂ ಲಕ್ಕೀಶಾ ಬಂಜಾರಾ ಸಂತರ ಪುಣ್ಯ ಭೂಮಿ ದೆಹಲಿಯಲ್ಲಿ ಸರಕಾರಿ ನಿವೇಶನ ಪಡೆದು ಬಂಜಾರಾ ಸಮುದಾಯದವರಿಂದ ತಲಾ ಒಂದು ರೂಪಾಯಿ ದೇಣಿಗೆ ಸಂಗ್ರಹಿಸಿ ಭವನ ನಿರ್ಮಾಣಕ್ಕಾಗಿ ಭರದ ತಯಾರಿ ನಡೆಯುತ್ತಿದೆ.

ದೆಹಲಿ ಸರಕಾರವು ಬಂಜಾರಾ ಟ್ರಸ್ಟ್ ರಚನೆ ಮಾಡಲು ಈಗಾಗಲೇ ಸೂಚಿಸಿದ್ದು ಅದಕ್ಕೆ ನಿವೇಶನ ಒದಗಿಸಲು ಒಪ್ಪಿದೆ. ಅದರ ಮೂಲಕ ಬಂಜಾರಾ ಭವನ ನಿರ್ಮಾಣದ ಗುರಿ ಹೊಂದಲಾಗಿದೆ. ಬಂಜಾರಾ ಸಂಸ್ಕೃತಿಯು ಭಾರತೀಯ ಸಂಸ್ಕೃತಿಗೆ ದೊಡ್ಡ ಕೊಡುಗೆ ನೀಡಿದ್ದು ಜ್ಞಾನ ಪರಂಪರೆ, ವೈದ್ಯ ಪರಂಪರೆ, ವ್ಯಾಪಾರ ಸಂಸ್ಕೃತಿ, ಕೃಷಿ ಸಂಸ್ಕೃತಿಗೆ ಲಂಬಾಣಿ ಸಮುದಾಯದ ಕೊಡುಗೆ ಅಪಾರವಾಗಿದೆ. ಲಂಬಾಣಿಗರ ಉಡುಗೆ ತೊಡುಗೆಗಳು ಕರಕುಶಲತೆ ಮತ್ತು ಕೌಶಲ್ಯತೆಗೆ ಉತ್ತಮ ಮಾದರಿಯಾಗಿದೆ. ಆಹಾರ ಉಡುಗೆ ತೊಡುಗೆಗೆ ಅಪಾರ ಬೇಡಿಕೆ ಇದ್ದು ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಸಂಸ್ಕೃತಿ ವಿಚಾರಧಾರೆಯನ್ನು ಪಸರಿಸುತಿದ್ದಾರೆ. ಇದನ್ನು ವಿಶ್ವ ಮುಟ್ಟಕ್ಕೆ ತಲುಪಿಸಲು ನವದೆಹಲಿಯಲ್ಲಿ ಭವನದ ಅಗತ್ಯವಿದೆ ಎಂದು ಒತ್ತಿ ಹೇಳಿದರು. 

   ತಾನು ಲಂಬಾಣಿ ಸಮುದಾಯದಿಂದ ಹುಟ್ಟಿ ಬಂದು ಲೋಕಸಭಾ ಸದಸ್ಯನಾಗಿ ಸಂಸತ್ತಿನಲ್ಲಿ ಉತ್ತಮ ಕಾರ್ಯ ನಿರ್ವಹಣೆಗೆ ಅವಕಾಶ ಲಭಿಸಿದ್ದು ಬಲುದೊಡ್ಡ ಭಾಗ್ಯವಾಗಿದೆ. ಅದಕ್ಕೆ ಲೋಕಸಭಾ ಅಧ್ಯಕ್ಷರಾದ ಓಂ ಬಿರ್ಲಾರವರ ಪ್ರೋತ್ಸಾಹ ಕೂಡ ಸ್ಮರಣೀಯವಾಗಿದೆ. ಚುನಾವಣೆಯಲ್ಲಿ ಸೋತಿರಬಹುದು ಆದರೆ ಜನರ ಹೃದಯ ಗೆಲ್ಲಲು ಸಾಧ್ಯವಾಗಿದೆ ಎಂದು ಹೇಳಿದರು. ಕಳೆದ 8 ವರ್ಷಗಳಲ್ಲಿ ನವದೆಹಲಿಯಲ್ಲಿ ಸಂತ ಸೇವಾಲಾಲರ ಜಯಂತಿಯನ್ನು ಆಚರಿಸಿ ಬಂಜಾರಾ ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ಪ್ರಸಾರ ಮಾಡಲು ಸಾಧ್ಯವಾಗಿರುವುದು ಸಂತಸದ ಸಂಗತಿ. ಅಖಿಲ ಭಾರತ ಬಂಜಾರಾ ಸೇವಾ ಸಂಘದ ಮೂಲಕ ದೇಶದ ಬಂಜಾರಾ ಜನರನ್ನು ಒಗ್ಗೂಡಿಸಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಚಿಂತನೆ ಹಾಗು ಸಮಸ್ಯೆಗಳ ನಿವಾರಣೆಗೆ ಗಮನ ಹರಿಸಲಾಗಿದೆ. ಸಮುದಾಯದ ಜನರ ಕಲ್ಯಾಣಕ್ಕಾಗಿ ದೇಶಾದ್ಯಂತ ಸಂಘದ ಸಮಿತಿ ಸದಸ್ಯರು ಸಂಚಾರ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಓಂ ಬಿರ್ಲಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂತಾದವರು ಪೂರ್ಣ ಬೆಂಬಲ ನೀಡುತ್ತಿದ್ದಾರೆ. ಮಹಾರಾಷ್ಟ್ರದ ವಾಸಿಂ ಜಿಲ್ಲೆಯಲ್ಲಿರುವ ಪೌರಾದೇವಿಯಲ್ಲಿ ಬಂಜಾರಾ ಸಮುದಾಯದವರ ಆರಾಧ್ಯಕ್ಷೇತ್ರವಿದ್ದು ಸಂತ ಸೇವಾಲಾಲರ ಸಮಾಧಿ ಸ್ಥಳದಲ್ಲಿ 750 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿ ರಾಜ್ಯಗಳಲ್ಲಿರುವ ಬಂಜಾರಾ ಜನರ ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿಗಳು ಯೋಜನೆ ರೂಪಿಸುವಂತೆ ಈ ಬಾರಿ ಲೋಕಸಭಾ ಸದಸ್ಯರಾದ ಓಂ ಬಿರ್ಲಾ ಕರೆ ನೀಡಿ ಸಲಹೆ ಕೊಟ್ಟಿರುವುದು ಸಂತಸದ ಸಂಗತಿಯಾಗಿದೆ ಎಂದು ಡಾ. ಜಾಧವ್ ತಿಳಿಸಿದರು. 

   ಪತ್ರಿಕಾಗೋಷ್ಠಿಯಲ್ಲಿ ರಾಮಚಂದ್ರ ಜಾಧವ್, ಅರುಣ್ ಪವಾರ್, ಕಾಶಿನಾಥ್ ಬಿರಾದಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.