ಡಾ.ಚಿದಾನಂದ ಚಿಕ್ಕಮಠ

ಡಾ.ಚಿದಾನಂದ ಚಿಕ್ಕಮಠ
ಡಾ. ಚಿದಾನಂದ ಚಿಕ್ಕಮಠ ಅವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಶ್ರೀ ಗಂಗಾಧರಯ್ಯ ಚಿಕ್ಕಮಠ ಹಾಗೂ ಶ್ರೀಮತಿ ಸಂಗಮ್ಮ ಚಿಕ್ಕಮಠ ದಂಪತಿಗಳ ಜೇಷ್ಠ ಪುತ್ರರಾಗಿ ೧೯೮೮ರ ಅಕ್ಟೋಬರ್ ೧೧ ರಂದು ಜನಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನ ಕಿನ್ನರಿ ಬ್ರಹ್ಮಶ್ವರ ಶಾಲೆಯಲ್ಲಿ, ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಹುಮನಾಬಾದಿನಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಆಗ್ರಶ್ರೇಣಿ (Rank) ಯೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ. ವಿ. ಜಿ. ಪೂಜಾರ ಅವರ ಮಾರ್ಗದರ್ಶನದಲ್ಲಿ 'ಮೆರಿಟ್ ಸಂಶೋಧನ ವಿದ್ಯಾರ್ಥಿವೇತನ' ದೊಂದಿಗೆ 'ಶರಣ ಕಿನ್ನರಿ ಬ್ರಹ್ಮಯ್ಯ : ಒಂದು ಅಧ್ಯಯನ' ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ: ಮಹಾ ಪ್ರಬಂಧವನ್ನು ಸಲ್ಲಿಸಿ ಪಿಎಚ್. ಡಿ. ಪದವಿಯನ್ನು ಪಡೆದಿರುತ್ತಾರೆ. ಅಲ್ಲದೆ ನೆಟ್ ಹಾಗೂ ಕೆ- ಸೆಟ್ ನಂತಹ ಸ್ಪರ್ಧಾತ್ಮಕ ಅರ್ಹತಾ ಪರೀಕ್ಷೆಗಳಲ್ಲೂ ಯಶಸ್ಸು ಗಳಿಸಿರುವರು.
ಬೋಧನಾನುಭವ
ಶ್ರೀಯುತರು ಈ ಮೊದಲು ಬೀದರಿನ ಕರ್ನಾಟಕ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಭಾಲ್ಕಿಯ ಚನ್ನಬಸವೇಶ್ವರ ಗುರುಕುಲ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ. ೨೦೧೯ರಿಂದ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಸಂಶೋಧನ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಅಧ್ಯಯನ ವಿಭಾಗ ಮತ್ತು ವಿಶ್ವವಿದ್ಯಾಲಯದ ವಿವಿಧ ಅಧ್ಯಯನ ವಿಭಾಗಗಳ ಅಭ್ಯಾಸ ಮಂಡಳಿ (BOS) ಹಾಗೂ ಪರೀಕ್ಷಾ ಮಂಡಳಿ (BOE) ಗಳ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಂಶೋಧನ ಅನುಭವ
ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯಗಳ ಮೇಲೆ ಅಪಾರ ಒಲವು- ಆಸಕ್ತಿ ಹೊಂದಿರುವ ಇವರು ಅವುಗಳ ಆಳವಾದ ಅಧ್ಯಯನದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೧೨ನೇ ಶತಮಾನದ ವಚನಕಾರನಾದ ಕಿನ್ನರಿ ಬ್ರಹ್ಮಯ್ಯ ನಿರ್ಲಕ್ಷ್ಯಕ್ಕೆ ಒಳಗಾದ ಶರಣ. ಆತನ ವಿಶೇಷ ಅಧ್ಯಯನ ನಡೆಸಿ ಸಂಶೋಧನ ಪ್ರಬಂಧ/ಲೇಖನವನ್ನು ಸಿದ್ಧಪಡಿಸಿ ಪ್ರಸಿದ್ದ ವಿದ್ವತ್ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟಿಸಿ ಕನ್ನಡ ಸಾರಸ್ವತ ಲೋಕದ, ವಿವಿಧ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಾಹಿತ್ಯ ಸೇವೆ
ಶ್ರೀಯುತರು ಈವರೆಗೆ ಒಟ್ಟು ೭ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ೧. ಕಿನ್ನರಿ ಬ್ರಹ್ಮಯ್ಯ: ಕೆಲವು ಒಳನೋಟಗಳು ೨. ಕಿನ್ನರಿ ಬ್ರಹ್ಮಯ್ಯ ೩. ಕಿನ್ನರಿ ಬೊಮ್ಮಯ್ಯ (ಸಮಗ್ರ ಜೀವನ ದರ್ಶನ) ಇವು ಇವರ ರಚನೆಗಳಾದರೆ, ೪. ನಿರಂಜನ ಪ್ರಭೆ (ಸ್ಮರಣ ಸಂಪುಟ) ೫. ಭವ್ಯ ಮಾನವ ಸಂಗ್ರಹ ೬. ಕಿನ್ನರಿ ಬೊಮ್ಮಯ್ಯ ( ವಚನ, ಕಾಲಜ್ಞಾನ ವಚನ, ತ್ರಿಪದಿ ಹಾಗೂ ಸ್ವರವಚನ ಸಾಹಿತ್ಯ ಸಂಗ್ರಹ) ೭. ಕಲ್ಯಾಣ ಕರ್ನಾಟಕ ಶರಣ ಸಂಪದ ಇವುಗಳು ಇವರ ಸಂಪಾದನ ಕೃತಿಗಳಾಗಿವೆ. ಭವ್ಯ ಮಾನವ ಸಂಗ್ರಹವು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ದ್ವಿತೀಯ ಸೆಮಿಸ್ಟರ್‌ಗೆ ಪಠ್ಯಪುಸ್ತಕವಾಗಿದೆ. ೮. ಶ್ರೀ ಶರಣಬಸವ ಚರಿತಾಮೃತ ೯. ಮಹಾದಾಸೋಹ ಸೂತ್ರಗಳು ( ಗೀತ ವ್ಯಾಖ್ಯಾನ) ಮತ್ತು ಈ ೨ ಕೃತಿಗಳು ಇವರಿಂದಲೇ ಸಂಪಾದಿಸಲ್ಪಟ್ಟಿದ್ದು ಮುದ್ರಣದ ಹಂತದಲ್ಲಿವೆ. ಇದರ ಜೊತೆಗೆ ವಿವಿಧ ವಿಷಯಗಳ ಮೇಲೆ ಸುಮಾರು ಮೂವತ್ತಕ್ಕಿಂತ ಹೆಚ್ಚು ಸಂಶೋಧನ ಲೇಖನಗಳನ್ನು ಸಿದ್ಧಪಡಿಸಿ ವಿವಿಧ ಕಡೆಗಳಲ್ಲಿ ಪ್ರಕಟಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ತಾಲೂಕು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳು, ವಿವಿಧ ವಿಶೇಷ ಕವಿಗೋಷ್ಠಿಗಳು, ವಿಜಯದಶಮಿ ವಿಶೇಷ ಕವಿಗೋಷ್ಠಿ ಸೇರಿದಂತೆ ಹಲವೆಡೆ ಕವನ ವಾಚನ ಮಾಡಿದ್ದಾರೆ.
ನೀಡಿದ ಉಪನ್ಯಾಸಗಳು
ಡಾ. ಚಿದಾನಂದ ಚಿಕ್ಕಮಠ ಅವರು ಈವರೆಗೆ ನಾಡಿನ ವಿವಿಧ ಪ್ರಮುಖ ಮಠಮಾನ್ಯಗಳು, ಸಂಸ್ಥಾನಗಳು, ಧಾರ್ಮಿಕ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವೆಡೆ ವಿವಿಧ ವಿಷಯಗಳು ಮೇಲೆ ೧೫ಕ್ಕಿಂತ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಅವುಗಳಲ್ಲಿ ೧. ಶ್ರೀ ಚೆನ್ನಬಸವೇಶ್ವರ ದೇವಸ್ಥಾನ, ಉಳವಿ ೨. ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನ, ಕಲಬುರಗಿ ೩. ಹಿರೇಮಠ ಸಂಸ್ಥಾನ, ಭಾಲ್ಕಿ ೪. ಘನಲಿಂಗ ರುದ್ರಮುನಿ ಮಠ, ಬಸವಕಲ್ಯಾಣ ೫. ಶ್ರೀ ಶಿವಲಿಂಗೇಶ್ವರ ಸಂಸ್ಥಾನ ವಿರಕ್ತ ಮಠ, ಖೇಳಗಿ (ಬಿ) ೬. ಕಳ್ಳಿಮಠ ಮಹಾಸಂಸ್ಥಾನ, ಮಹಾಗಾಂದ ೬. ನವಕಲ್ಯಾಣ ಮಠ, ಜಿಡಗಾ ೮, ಹೈನು ವಿಜ್ಞಾನ ಮಹಾವಿದ್ಯಾಲಯ, ಮಹಾಗಾಂವ ಕ್ರಾಸ್ ೯. ಕಿನ್ನರಿ ಬ್ರಹೇಶ್ವರ ಶಿಕ್ಷಣ ಸಂಸ್ಥೆ, ಹಳ್ಳಿಖೇಡ (ಕೆ) ಪ್ರಮುಖವಾದವು.
ಇದರೊಂದಿಗೆ ಕೆಲವು ಆನ್‌ಲೈನ್ ಉಪನ್ಯಾಸಗಳನ್ನು ಕೂಡ ನೀಡಿದ್ದಾರೆ. ೧. ಬಸವ ಸಮಿತಿ, ಬೆಂಗಳೂರು ೨. ಶರಣ ಸಾಹಿತ್ಯ ಪರಿಷತ್ತು, ಮೈಸೂರು ೩. ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನ, ಕಲಬುರಗಿ ೪. ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು ಈ ಮುಂತಾದವು ಪ್ರಮುಖವಾದವುಗಳು.
ಇತರೆ ಚಟುವಟಿಕೆಗಳು
ಶ್ರೀಯುತರು ಇಲ್ಲೀವರೆಗೆ ಸುಮಾರು ೨೫ಕ್ಕಿಂತ ಹೆಚ್ಚು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿವಿಧ 2 (SEMINAR), (CONFERENCE)ಗಳಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ ಸ್ವತಃ ಆಯೋಜನೆ ಮಾಡಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಸಹ ಹೊಂದಿದ್ದಾರೆ. ಸುಮಾರು ೫೦ಕ್ಕಿಂತ ಹೆಚ್ಚು ಬಾರಿ ವಿವಿಧ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನ, ಸಮಾರಂಭ, ವಿಚಾರ ಸಂಕಿರಣ, ಸಮ್ಮೇಳನ (CONFERENCE) ಸಮಾರಂಭ, ಧರ್ಮಸಭೆ, ಜಾತ್ರಾ ಮಹೋತ್ಸವಗಳಲ್ಲಿ ಯಶಸ್ವಿ ನಿರೂಪಣೆ / ನಿರ್ವಹಣೆ ಮಾಡಿದ ಅನುಭವ ಕೂಡ ಹೊಂದಿದ್ದಾರೆ.
ಆಸಕ್ತಿಯ ಕ್ಷೇತ್ರಗಳು
ವಚನ ಸಾಹಿತ್ಯ, ಶರಣ (ಕಾವ್ಯ) ಸಾಹಿತ್ಯ, ಹಸ್ತಪ್ರತಿ ಶಾಸ್ತ್ರ, ಶಾಸನ ಶಾಸ್ತ್ರ, ಗ್ರಂಥ ಸಂಪಾದನೆ ಹಾಗೂ ಸಂಶೋಧನ ಶಾಸ್ತ್ರಗಳು ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.
ಕನ್ನಡ ನುಡಿ ಸೇವೆ
೧. ಶರಣಬಸವ ವಿಶ್ವವಿದ್ಯಾಲಯದ 'ಕನ್ನಡ ಘಟಕ'ದ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
೨. ಹಳ್ಳಿಖೇಡ (ಕೆ) ವಲಯ (ಹುಮನಾಬಾದ ತಾಲೂಕು) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
೩. ತಮ್ಮ ತಾಯಿಯವರ ಸ್ಮರಣಾರ್ಥ ೨೦೧೯ ರಲ್ಲಿ 'ಶಿವ ಸಂಗಮ' ಪ್ರತಿಷ್ಠಾನವನ್ನು ಸ್ಥಾಪಿಸಿ, ಅದರ ಮೂಲಕ ಪ್ರತಿ ವರ್ಷ ಎಸ್.ಎಸ್.ಎಲ್.ಸಿ. ಬೋರ್ಡ್ ಪರೀಕ್ಷೆಯ ಕನ್ನಡ ವಿಷಯದಲ್ಲಿ ಪೂರ್ಣ ಅಂಕ ಪಡೆದ ತಮ್ಮ ಹುಟ್ಟೂರಿನ ಎಲ್ಲಾ ಶಾಲೆಗಳ ಮಕ್ಕಳಿಗೆ ಶರಣ ಕಿನ್ನರಿ ಬೊಮ್ಮಯ್ಯನವರ ಜಾತ್ರಾ ಮಹೋತ್ಸವದ ಉದ್ಘಾಟನ ಸಮಾರಂಭದ ಶುಭ ಸಂದರ್ಭದಲ್ಲಿ ಅದೇ ವೇದಿಕೆ ಮುಖಾಂತರ ಪೂಜ್ಯರ ಹಾಗೂ ಗಣ್ಯರ ಸಮ್ಮುಖದಲ್ಲಿ ನಗದು ಪುರಸ್ಕಾರ, ಪ್ರಮಾಣ ಪತ್ರ, ಸ್ಮರಣಿಕೆ, ಕನ್ನಡ ಪುಸ್ತಕ ಇತ್ಯಾದಿಗಳನ್ನು ನೀಡಿ ಗೌರವಿಸುವ ಮುಖಾಂತರ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಸಂದ ಪ್ರಶಸ್ತಿ / ಪುರಸ್ಕಾರಗಳು
೧. ಸಾಹಿತ್ಯ ಸೇವಾರತ್ನ ಪ್ರಶಸ್ತಿ - ೨೦೨೩
೨. ಶ್ರೀ ಗುರು ಸೇವಾರತ್ನ ಪ್ರಶಸ್ತಿ - ೨೦೨೩
೩. ಶ್ರೇಷ್ಠ ಶಿಕ್ಷಕ ಪ್ರಶಸ್ತಿ - ೨೦೨೩
೪. ಕನ್ನಡ ಸೇವಾರತ್ನ ಪ್ರಶಸ್ತಿ - ೨೦೨೩
೧೦. ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ :
ಶ್ರಿಯುತರ ಸಾಹಿತ್ಯ ಸೇವೆಯನ್ನು ಗುರುತಿಸಿ ಹುಮನಾಬಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಹಳ್ಳಿಖೇಡ (ಕೆ) ವಲಯ ಕನ್ನಡ ಸಾಹಿತ್ಯ ಪರಿಷತ್ತು ೨೦೧೯ರಲ್ಲಿ ಹಳ್ಳಿಖೇಡ (ಕೆ) 'ವಲಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ'ವನ್ನು ಆಯೋಜಿಸಿ ವಲಯ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿದೆ.
ಡಾ. ಶರಣಬಸಪ್ಪ ವಡ್ಡನಕೇರಿ