ಶಿವಾಜಿ ಜಯಂತಿ: ವಾರಣಾಸಿಯಲ್ಲಿ ಶಾಸಕ ಪ್ರಭು ಚವ್ಹಾಣ, ಶರಣು ಸಲಗರ ಪೂಜೆ
ಶಿವಾಜಿ ಜಯಂತಿ:ವಾರಣಾಸಿಯಲ್ಲಿ ಶಾಸಕ ಪ್ರಭು ಚವ್ಹಾಣ, ಶರಣು ಸಲಗರ ಪೂಜೆ
ಪ್ರಯಾಗರಾಜ್, ಕಾಶಿ, ವಾರಣಾಸಿ ಪ್ರವಾಸದಲ್ಲಿರುವ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಹಾಗೂ ಬಸವಕಲ್ಯಾಣ ಶಾಸಕರಾದ ಶರಣು ಸಲಗರ್ ಅವರು ಫೆ.19ರಂದು ವಾರಣಾಸಿಯ ಸೋಮನಾಥ ಮಹಾದೇವ ಮಂದಿರದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ, ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಿದರು.
ಈ ವೇಳೆ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮಾತನಾಡಿ, ಶಿವಾಜಿ ಮಹಾರಾಜರು ವೀರಯೋಧ, ಅಪ್ಪಟ ದೇಶಭಕ್ತ, ಶಿಸ್ತು, ಪ್ರಮಾಣಿಕತೆ, ನಾಗರಿಕ ಸ್ನೇಹಿ ಆಡಳಿತ ನೀಡಿದ ಸರ್ವ ಜನಾಂಗವನ್ನು ಗೌರವಿಸಿದ ದೇಶ ಕಂಡ ಶ್ರೇಷ್ಠ ನಾಯಕ ಎಂದರು.
ಶೌರ್ಯ, ಪರಾಕ್ರಮ, ಯುದ್ಧ ತಂತ್ರಗಳಿಗೆ ಹೆಸರುವಾಸಿಯಾಗಿದ್ದ ಅವರು, ಎಲ್ಲಾ ರೀತಿಯ ಯುದ್ದಕಲೆಗಳನ್ನು ಕರಗತ ಮಾಡಿಕೊಂಡಿದ್ದರು. ಭಾಷೆ, ಗಡಿ ಮೀರಿ ಸೈನಿಕರನ್ನು ಸಂಘಟಿಸಿದವರು. ಮೊಘಲರು ಮತ್ತು ಸುಲ್ತಾನರ ದಬ್ಬಾಳಿಕೆಯನ್ನು ದಿಟ್ಟತನದಿಂದ ಹಿಮ್ಮೆಟ್ಟಿಸಿ ಸ್ವತಂತ್ರ್ಯ ಸಾಮ್ರಾಜ್ಯವನ್ನು ಕಟ್ಟಿದರಲ್ಲದೇ ಸನಾತನ ಧರ್ಮವನ್ನು ರಕ್ಷಿಸಿದ ಧೀರ ಎಂದು ವರ್ಣಿಸಿದರು.
ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದ್ದರು. ದೇಶದ ಅನೇಕ ಕೋಟೆಗಳನ್ನು ಗೆದ್ದು ಸಾಮ್ರಾಜ್ಯವನ್ನು ವಿಸ್ತರಿಸಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತಹದ್ದು, ಅವರ ಶೌರ್ಯ, ಸಾಹಸ, ದೇಶಭಕ್ತಿ ಎಲ್ಲರಿಗೂ ಪ್ರೇರಣಾದಾಯಿ ಎಂದರು.
ಬಸವಕಲ್ಯಾಣ ಶಾಸಕರಾದ ಶರಣು ಸಲಗರ ಮಾತನಾಡಿ, ಅಪ್ರತಿಮ ದೇಶಭಕ್ತರಾಗಿದ್ದ ಶಿವಾಜಿ ಮಹಾರಾಜರು ಭಾರತದ ಇತಿಹಾಸದಲ್ಲಿ ಪ್ರಸಿದ್ಧ ಮರಾಠ ಸಾಮ್ರಾಜ್ಯ ಸ್ಥಾಪಿಸಿದವರು. ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನ ಬೆಳೆಸಿಕೊಂಡಿದ್ದರು. ತಾಯಿಯ ಮಾರ್ಗದರ್ಶನ ಪಾಲಿಸಿ ಶ್ರೇಷ್ಠ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದವರು. ಅವರ ಜೀವನ ಮತ್ತು ಸಾಧನೆಗಳು ಎಲ್ಲರೂ ಪ್ರೇರಣೆಯಾಗಿಸಿಕೊಳ್ಳಬೇಕು ಎಂದರು.
ಪ್ರತಿ ವರ್ಷ ಕ್ಷೇತ್ರದಲ್ಲಿ ಅದ್ದೂರಿಯಾಗಿ ಜಯಂತಿಯನ್ನು ಆಚರಿಸುತ್ತಿದ್ದೆ. ಈ ಬಾರಿ ಪ್ರಯಾಗರಾಜ್, ಕಾಶಿ, ವಾರಣಾಸಿ ಪ್ರವಾಸದಲ್ಲಿದ್ದು, ವಾರಣಾಸಿಯಲ್ಲಿಯೇ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಜ್ಣಾನೇಶ್ವರ ಮೂಳೆ, ದಯಾನಂದ ಕಾರಬಾರಿ, ಜೈಪಾಲ ರಾಠೋಡ, ಗುರುನಾಥ ಮೂಲಗೆ, ಶ್ರೀನಿವಾಸ ಪಾಟೀಲ, ಚಂದ್ರಕಾಂತ ಪಾಟೀಲ, ರಾಜಕುಮಾರ ಅಲಶೆಟ್ಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.