ಪ್ರವಾಹಪೀಡಿತ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಿ

ಪ್ರವಾಹಪೀಡಿತ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಿ :..
ಶಹಾಬಾದ : - ಕಳೆದ ಹಲವು ದಿನಗಳಿಂದ ಕಲಬುರಗಿ ಜಿಲ್ಲೆಯಾದ್ಯಾಂತ ಬಾರಿ ಮಳೆಯಾಗುತ್ತಿದ್ದು ಎಲ್ಲಾ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ, ಇದರ ಪರಿಣಾಮವಾಗಿ ಕಾಗಿಣ ಹಾಗೂ ಭೀಮಾ ನದಿಗಳು ತುಂಬಿ ಹರಿಯುತ್ತಿರುವ ಕಾರಣ ಹೊನಗುಂಟಾ ಗ್ರಾಮದ ಬಹುತೇಕ ಮನೆಗಳಲ್ಲಿ ಪ್ರವಾಹದ ನೀರು ನುಗ್ಗಿ ಜನರ ಬದುಕು ಅತಂತ್ರವಾಗಿದೆ ಎಂದು ಎಐಡಿವೈಒ ಕಾರ್ಯದರ್ಶಿ ರಮೇಶ ದೇವಕರ ತಿಳಿಸಿದ್ದಾರೆ
ಗ್ರಾಮದ ಮನೆಯಲ್ಲಿರುವ ದವಸ, ಧಾನ್ಯಗಳು ನೀರು ಪಾಲಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತದಿಂದ ಕೇವಲ ೨ ಗಂಜಿ ಕೇಂದ್ರವನ್ನು ಪ್ರಾರಂಭಿಸಿ ಪ್ರವಾಹ ಪೀಡಿತರಿಗೆ ಊಟದ ವ್ಯವಸ್ಥೆ ಹಾಗೂ ಒಂದು ಟ್ಯಾಂಕರ ನೀರಿಗಾಗಿ ವ್ಯವಸ್ಥೆ ಮಾಡಲಾಗಿದೆ.
ಗ್ರಾಮದ ಸುತ್ತಲೂ ಪ್ರವಾಹದ ನೀರು ಆವರಿಸಿಕೊಂಡಿರುವುದರಿಂದ ಸಾಕಷ್ಟು ಜನರು ಆಹಾರ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜಿಲ್ಲಾಡಳಿತದಿಂದ ಈಗ ಮಾಡಿರುವ ವ್ಯವಸ್ಥೆಯು ಸಾಕಾಗದೆ ಇರುವುದರಿಂದ ಇನ್ನೂ ಹೆಚ್ಚಿನ ಗಂಜಿ ಕೇಂದ್ರಗಳನ್ನು ತೆರೆಯಬೇಕು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೋಟಿನ ವ್ಯವಸ್ಥೆ ಮಾಡಬೇಕೆಂದು ಹೊನಗುಂಟಾ ನಾಗರಿಕ ಹೋರಾಟ ಸಮಿತಿ ವತಿಯಿಂದ ಒತ್ತಾಯ ಮಾಡಿದ್ದಾರೆ.
ಯುವಜನ ಸಂಘಟನೆಯಾದ ಎ.ಐ.ಡಿ.ವೈ.ಓ ನಾಯಕರಾದ ರಮೇಶ ದೇವಕರ್ ಹಾಗೂ ರೈತ ಕೃಷಿ ಕಾರ್ಮಿಕ ಸಂಘಟನೆಯ ನಾಯಕರಾದ ರಾಜೇಂದ್ರ ಆತೂರ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ, ಸೇಡಂ ಸಹಾಯಕ ಆಯುಕ್ತರು, ತಾಲೂಕ ಪಂಚಾಯತ್ ಕಾರ್ಯಾನಿರ್ವಾಹಕ ಅಧಿಕಾರಿ ಹಾಗೂ ಗ್ರೇಡ್ ೨ ತಹಶೀಲ್ದಾರ ಅವರೊಂದಿಗೆ ಮಾತನಾಡಿ ಆದಷ್ಟು ಬೇಗನೆ ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಬೇಕೆಂದು ಒತ್ತಾಯಿಸಿದ್ದಾರೆ.
ನಾಗರಿಕ ಹೋರಾಟ ಸಮಿತಿಯ ಸದಸ್ಯರಾದ ಶಿವು ಬುರ್ಲಿ, ಲಕ್ಷ್ಮಣ ಕೋಲೆ, ಚಂದ್ರು ಮರಗೋಳ, ದೀಪಣ್ಣ ಕೋಲೆ, ದೇವರಾಜ ರಾಜೋಳ್ ಮುಂತಾದವರು ಉಪಸ್ಥಿತರಿದ್ದರು.
ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ