ಕಲ್ಯಾಣ ಕರ್ನಾಟಕ ಭಾಗವನ್ನು ಶಿಕ್ಷಣ ಎಂಬ ದೀಪದಿಂದ ಬೆಳಗಿದ ಮಹಾನ್ ನಾಯಕ ಲಿಂ ಮಹಾದೇವಪ್ಪ ರಾಂಪೂರೆ ಐ ಕೆ ಪಾಟೀಲ್
ಕಲ್ಯಾಣ ಕರ್ನಾಟಕ ಭಾಗವನ್ನು ಶಿಕ್ಷಣ ಎಂಬ ದೀಪದಿಂದ ಬೆಳಗಿದ ಮಹಾನ್ ನಾಯಕ ಲಿಂ ಮಹಾದೇವಪ್ಪ ರಾಂಪೂರೆ ಐ ಕೆ ಪಾಟೀಲ್
ಶೈಕ್ಷಣಿಕ ಕ್ಷೇತ್ರದಲ್ಲಿ ಅಂಧಕಾರದಲ್ಲಿದ್ದ ಕಲ್ಯಾಣ ಕರ್ನಾಟಕವನ್ನು ಶಿಕ್ಷಣ ಎಂಬ ದೀಪದಿಂದ ಬೆಳಗಿದ ಮಹಾನ್ ಪುರುಷರು ದಿವಂಗತ ಶ್ರೀ ಮಹಾದೇವಪ್ಪ ರಾಂಪೂರೆಯವರು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಹಾಗೂ ಉಪನ್ಯಾಸಕ ಐ ಕೆ ಪಾಟೀಲ್ ಹೇಳಿದರು.
ಅವರು ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಲಿಂಗೈಕ್ಯ ಪರಮಪೂಜ್ಯ ಶ್ರೀ ಮಹಾದೇವಪ್ಪ ರಾಂಪೂರೆಯವರ 52 ನೇಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಲ್ಯಾಣ ಕರ್ನಾಟಕದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸದಿದ್ದರೆ ಈ ಭಾಗ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿಯೆ ಉಳಿಯುತ್ತಿತ್ತು. ಅಂದು ಅವರು ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಫಲವಾಗಿ ಇಂದು ಕಲಬುರ್ಗಿಯಲ್ಲಿ ಕೇಂದ್ರ ಸರ್ಕಾರದ ವಿಶ್ವವಿದ್ಯಾಲಯ, ರಾಜ್ಯ ಸರ್ಕಾರದ ವಿಶ್ವವಿದ್ಯಾಲಯ, ಖಾಸಗಿ ವಿಶ್ವವಿದ್ಯಾಲಯಗಳು, ಹಲವಾರು ವೈದ್ಯಕೀಯ ಮಹಾವಿದ್ಯಾಲಯಗಳು ಅನೇಕ ಉನ್ನತ ಶಿಕ್ಷಣ ಕೇಂದ್ರಗಳು ತಲೆ ಎತ್ತಲು ಅವರ ದೂರದೃಷ್ಟಿಯೆ ಕಾರಣ ಎಂದು ಹೇಳಿದರು.
ರಾಜ್ಯದ ಶ್ರೇಷ್ಠ ಶೈಕ್ಷಣಿಕ ಕೇಂದ್ರದಲ್ಲಿ ಇಂದು ಕಲಬುರ್ಗಿಯು ಸಹ ಒಂದಾಗಿದೆ ಇದಕ್ಕೆ ಮೂಲ ಕಾರಣ ರಾಂಪೂರೆಯವರೆ ಎಂದು ಹೇಳಬಹುದು.
1957 ರಲ್ಲಿ ಪ್ರಥಮಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ರಾಂಪೂರೆಯವರು ಸತತವಾಗಿ 3 ಭಾರಿ ಲೋಕಸಭಾ ಸದಸ್ಯರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಐತಿಹಾಸಿಕ ಸಾಧನೆಗೈದರು ಆದರೂ ಸಹ ಇವರನ್ನು ಇಲ್ಲಿಯವರೆಗೆ ನಮ್ಮ ಭಾಗದ ಜನತೆ ಗುರುತಿಸುವುದು ರಾಜಕಾರಣಿಯಾಗಿ ಅಲ್ಲ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿಯೆ ಇವರನ್ನು ಗುರುತಿಸುತ್ತಾರೆ. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಾವಿರಾರು ಕುಟುಂಬಗಳಿಗೆ ಅನ್ನ ನೀಡಿದ ಸಂಸ್ಥೆಯಾದರೆ ಕಲಬುರ್ಗಿಯಿಂದ ರಾಜಧಾನಿ ಬೆಂಗಳೂರುವರೆಗೂ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದೆ. ಅನೇಕ ವಿಶ್ವ ಪ್ರಸಿದ್ಧ ವೈದ್ಯರನ್ನು, ಎಂಜಿನಿಯರ್ ಗಳನ್ನು, ಕಾನೂನು ತಜ್ಞರನ್ನು, ಶ್ರೇಷ್ಠ ರಾಜಕಾರಣಿಗಳನ್ನು ಹಲವಾರು ಕ್ಷೇತ್ರಗಳಲ್ಲಿ ದೇಶವಿದೇಶಗಳಿಗೆ ತನ್ನದೆಯಾದ ಕೊಡುಗೆ ನೀಡಿದೆ ಎಂದು ಹೇಳಿದರು.
ಇಂತಹ ಮಹಾನ್ ನಾಯಕ 52 ನೇಯ ಸ್ಮರಣೋತ್ಸವ ದಿನ ಆ ಮಹಾನ್ ಪುರುಷರನ್ನು ನೆನೆಯುತ್ತಾ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ಅವರ ಹಲವಾರು ಕನಸುಗಳನ್ನು ನನಸು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಚಂದ್ರಶೇಖರ ಪಟ್ಟಣಕರ, ಕೃಷ್ಣವೇಣಿ ಪಾಟೀಲ್, ಆನಂದ ಕೊಪ್ಪದ ಸಂಗೀತಾ ಸಡಕೀನ್, ಅಶ್ವಿನಿ ಪಾಟೀಲ್, ಶ್ವೇತಾ ಶೆಟ್ಟಿ, ಭಾಗ್ಯಶ್ರೀ ಬೇನೂರ, ಮಧುಶ್ರೀ ಘಂಟಿ, ವಿಜಯಲಕ್ಷ್ಮಿ ಶಾಬಾದಿ, ಮಲಕಮ್ಮ ಪಾಟೀಲ್, ಬಿ ವಾಯ್ ಪಾಟೀಲ್ ಉಪಸ್ಥಿತರಿದ್ದರು.