ಭಾರತದ ಗಾಥೆ

ಭಾರತದ ಗಾಥೆ
ಹೇಳುವೆ ಕೇಳಿ ಜಗದಲಿ ಜ್ಞಾನದ ಬೀಡೆಂದು
ಹೆಸರಾದ ಭಾರತದ ಕಥೆಯನ್ನ
ಸಿಂಧೂ ನದಿ ದಡದಿ ನಾಗರಿಕತೆ ಕಟ್ಟಿ
ಬೆಳೆಯುತ ಹೆಸರಾದ ಮಣ್ಣಿನ ಕಥೆಯನ್ನ //
ಪರಕೀಯರ ಕೈಗೆ ಸಿಕ್ಕಿ ನರಳಿ ನೊಂದ
ಜನರ ಕಥೆಯನ್ನ
ಗುಂಡಿಗೆ ಎದೆಯೊಡ್ಡಿ ನಿಂತ ಶೂರ ಧೀರ
ಸ್ವಾಭಿಮಾನಿ ಭಾರತೀಯರ ಕಥೆಯನ್ನ//
ಮುತ್ತು ರತ್ನ ರಾಶಿ ರಾಶಿ ಗಿರಿ ಶಿಖರ
ಅಘನಾಶಿನಿ ನೋಡು ನನ್ನ ಭಾರತ
ಬಾನಿನೆತ್ತರ ಭಾರತದ ಕೀರುತಿ
ರಾಜ ಮಹಾರಾಜರ ಶೂರತ್ವದ ಆರತಿ/
ಕಂಡುಹಿಡಿದರಂದು ಭೂಪ್ರದೇಶಗಳ
ದಂಡಾಗಿ ಬಂದರಂದೇ ವ್ಯಾಪಾರಕ
ಸಂಪದ್ಭರಿತ ಮಸಾಲೆ ಪದಾರ್ಥಗಳ
ಬೆಳೆಯುವ ತಾಯ್ನಾಡಾದ ಭಾರತಕ//
ವಸಾಹತುಗಳ ಸ್ಥಾಪನೆ ವ್ಯಾಪಾರ
ಕೇಂದ್ರಗಳ ಕಟ್ಟಿ ನೆಲೆಯೂರಿದರು
ಹಣದ ಆಸೆ ತೋರಿಸುತ ಎಲ್ಲ
ಸಂಪತ್ತು ಕೊಳ್ಳೆ ಹೊಡೆದರು //
ದುಡ್ಡಿನ ಆಸೆಗೆ ಏರಿತು ನಶೆ
ತುಂಬಿದವು ದಲ್ಲಾಳಿಗಳಾ ಕಿಸೆ
ಹೆಚ್ಚಾಯಿತು ದುಷ್ಟರ ತೃಷೆ
ಅವರಿವರಿಗೆ ಭಾರತ ಆಯಿತು ಎಲ್ಲಾ ಹಿಸೆ//
ಅಲ್ಲಲ್ಲಿ ಒಳ ಜಗಳಗಳು ಬ್ರಿಟಿಷರ
ಪಿತೂರಿಗೆ ಜನ ಬಲಿಯು
ಅಲ್ಪಮತಿಗಳು ನಯವಂಚಕ ನರಿಗಳು
ಜೊಲ್ಲು ಸೋರಿಸುತ ಮೋಸ ಮಾಡಿದರು//
ಮರುಳ ಭಾರತೀಯರ ಕೊರಳ ಮೋಸದಿ
ಕೊಯ್ದರು ಕೂದಲೆಳೆಯಿಂದ
ಅವರಿವರಿಗೆ ಒಳ ಜಗಳಗಳ ಹಚ್ಚಿ
ಮೋಜ ನೋಡಿದರು ತಾವು ಹೆಚ್ಚಿ //
ಮಸೆದರು ಹಲ್ಲು ಬೀಸಿದರೂ ಕತ್ತಿ
ಆಯಿತು ಭಾರತ ಕೆಂಪು ಕೋತಿಗಳಿಗಾಹುತಿ
ನಮ್ಮ ನೆಲದಲೇ ನಮಗೆ ದಾಸ್ಯ
ಧರಿಸಿದರವರು ನಾನಾವಾವೇಶ //
ಎಲ್ಲೆಲ್ಲೂ ಅವರದೇ ಆಟಾಟೋಪ
ಗುಡಿ ಗುಂಡಾರಗಳೆಲ್ಲ ನಾಶ
ಮೊದಮೊದಲು ತಿಳಿಯಲಿಲ್ಲಿವರಿಗೆ
ಹೊಳೆಯಿತು ಸುಮ್ಮನಿದ್ದರೆ ಎಲ್ಲಾ ವಿನಾಶ //
ಬುದ್ಧಿಜೀವಿಗಳ ಮತಿಗೆ ಹೊಳೆಯಿತು
ಸುಮ್ಮನಿದ್ದರೆ ಎಲ್ಲಾ ವಿನಾಶ
ಗುಂಪು ಕಟ್ಟಿದರು ಕ್ರಾಂತಿ ಚಳುವಳಿ
ಸತ್ಯಾಗ್ರಹ ಗೈದರು ಭಾರತೀಯರು //
ಬ್ರಿಟಿಷರ ಓಡಿಸುವುದೊಂದೆ ಗುರಿಯೆಂದು
ತೊಡೆತಟ್ಟಿ ನಿಂತರು ಅಂದು
ಹೋರಾಟಗಳು ಕ್ರಾಂತಿಗಳು ದೇಶದ
ತುಂಬೆಲ್ಲ ಹೆಡೆಯೆತ್ತಿದವು //
ಗುಂಡಿಗೆ ಹೆದರಲಿಲ್ಲ ಧೀರತ್ವ ಬಿಡಲಿಲ್ಲ
ಭಾರತಾಂಬೆಗೆ ಇಂದೇ ಸಾಯಲು ಸಿದ್ಧರಾದರೆಲ್ಲ
ಭಾರತ ನಮ್ಮದು ತೊಲಗಿರಿ ನಾವು ಬಿಡುವವರಲ್ಲ
ಹೆಮ್ಮೆಯ ಭಾರತ ಎಂದೆಂದಿಗೂ ನಮ್ಮದು //
ಎನ್ನುತ ಘೋಷಣೆ ಮೊಳಗಿಸಿದರು
ಬ್ರಿಟಿಷರನ್ನು ಹಾಗೆ ಅಲ್ಲಾಡಿಸಿದರು
ಮಧ್ಯರಾತ್ರಿಯಲಿ ಸತ್ಯ ತ್ಯಾಗ ಶಾಂತಿಗೆ ಮಣಿದ
ಬ್ರಿಟಿಷರು ಭಾರತ ಬಿಟ್ಟು ತೊಲಗಿದರು //
ಕೆಂಪುಕೋಟೆಯ ಮೇಲೆ ಭಾರತೀಯರು
ಕೇಸರಿ ಬಿಳಿ ಹಸಿರು ಧ್ವಜ ಹಾರಿಸಿದರು
ದೇಶದ ಮುನ್ನಡೆಗೆ ಚಿಂತಿಸಿದರು
ಅಂಬೇಡ್ಕರರ ನೇತೃತ್ವದಲ್ಲಿ ಸೂತ್ರ ಹೆಣೆದರು//
ಹರಿದು ಹಂಚಿ ಹೋದ ಪ್ರದೇಶಗಳ
ಭಾಷೆಯ ಆಧಾರದಿ ಒಟ್ಟುಗೂಡಿಸಿದರು
ಭಾಷಾವಾರು ಪ್ರಾಂತ್ಯಾಗಳು
ಆಡಳಿತದ ಅನುಕೂಲಕ್ಕೆ ಆದವು ರಾಜ್ಯಗಳು ,//
ಜನವರಿ ಇಪ್ಪತ್ತಾರರ ದಿನವು
ನಮ್ಮೆಲ್ಲರಿಗೆ ಸಂಭ್ರಮದ ದಿನವು
ಗಣರಾಜ್ಯದ ದಿನವು
ನಾವೆಲ್ಲ ಭಾರತೀಯರು ಒಂದೇ
ಒಂದೇ ತಾಯಿಯ ಮಕ್ಕಳು//
ಅರಳಲಿ ಸುಂದರ ಕುಸುಮಗಳು
ಬೀರಲಿ ಮನುಜ ಮತ ವಿಶ್ವಪಥ
ದೇಶಕ್ಕಾಗಿ ದುಡಿಯಲಿ ತನು
ಮಿಡಿಯಲಿ ಮನ ಸತ್ಯ ಶುದ್ಧತೆಗಾಗಿ //
ಸಂತಸದಿಂದಿರಲಿ ನನ್ನೆಲ್ಲ ಜನ
ನಲಿಯುತ ಹಸಿರಾಗಲಿ ಭಾರತದ ನಂದನ
ಸ್ವಾಭಿಮಾನದ ಸುಮವರಳಲಿ
ಒಗ್ಗಟ್ಟೇ ಮಂತ್ರವಾಗಲಿ //
ನಾವೆಲ್ಲ ಭಾರತೀಯರು ಒಂದೇ
ಜಗ ಗೆದ್ದು ನಿಲ್ಲುವೆವು
ಭ್ರಾತೃತ್ವ ಮೆರೆವೆವು ನಾವೆಲ್ಲ
ಒಂದೇ ಎನ್ನುವ ಪಣ ತೋಡುವೆವು
ವಂದೇ ಮಾತರಂ ಜಯಕಾರ ಹಾಕುವೆವು//
ಸಾಗಿರಿ ನಿಲ್ಲದೆ ಮುಂದೆ ಮುಂದೆ
ಮನುಜ ಮತ ವಿಶ್ವಪಥ ಇರಲಿ ನಮ್ಮೊಂದಿಗೆ
ಎಲ್ಲರೊಂದೇ ಎಂಬ ಮಂತ್ರ ಮೊಳಗಲಿಂದೆ
ದ್ವೇಷಾಸೂಯೆ ಮತ್ಸರ ಕೊಂದೆ //
ಡಾ ಅನ್ನಪೂರ್ಣ ಹಿರೇಮಠ