ಫೆಬ್ರವರಿ 1ರಂದು ಕಲಬುರಗಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವದ ರಂಗು
ಫೆಬ್ರವರಿ 1ರಂದು ಕಲಬುರಗಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವದ ರಂಗು
300 ಕಲಾವಿದ ರಿಂದ ಮನಮೋಹಕ ನೃತ್ಯ ವೈಭವದ ಚಿತ್ತಾರ
ಕಲಬುರಗಿ : ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಸಾದರಪಡಿಸುವ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಫೆಬ್ರವರಿ ಒಂದರಂದು ಶನಿವಾರ ಸಾಯಂಕಾಲ 6.30ಕ್ಕೆ ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯಲಿದೆ ಎಂದು ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಹೇಳಿದರು.
ಕಲಬುರಗಿಯ ಏಷಿಯನ್ ಮಾಲ್ ಡಾ. ಪೂರ್ಣಿಮಾ ಬಿರಾದಾರ್ ಸ್ಮಾರಕ ಡಯಾಲಿಸ್ ಕೇಂದ್ರದ ಸಭಾಭವನದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ 300 ವಿದ್ಯಾರ್ಥಿಗಳು ಸುಮಾರು ಮೂರು ಗಂಟೆಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾದರಪಡಿಸಲಿರುವರು ಈ ಕಾರ್ಯಕ್ರಮದ ಯಶಸ್ಸಿಗೆ ಕಲಬುರಗಿಯ ಜನತೆ ಪಾಲ್ಗೊಂಡು ನೆರವಾಗಬೇಕು ಎಂದು ಹೇಳಿದರು.
ಐದು ವರ್ಷಗಳ ಹಿಂದೆ ಕಲಬುರಗಿಯಲ್ಲಿ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದಾಗ ಜನ ಮೆಚ್ಚುಗೆ ಪಡೆಯಿತಲ್ಲದೆ ಮತ್ತೆ ಕಾರ್ಯಕ್ರಮ ಆಯೋಜನೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹಿರಿಯ ಉದ್ಯಮಿ ಹಾಗೂ ಸಂಸ್ಕೃತಿ ಪ್ರಿಯರಾದ ರವಿ ಮುಕ್ಕಾ ಹೇಳಿದರು . ದೇಶದ ಸಂಸ್ಕೃತಿಯನ್ನು ಸಾರುವ ಅಪೂರ್ವ ನಿತ್ಯ ಪ್ರಕಾರಗಳಾದ ಕಥಕ್, ಭರತನಾಟ್ಯ ಯಕ್ಷಗಾನ,ಡೊಳ್ಳು ಮೇಳ ಹಾಗೂ ಉತ್ತರ ಕರ್ನಾಟಕದ ಅಪೂರ್ವಕಲೆ ಮಲ್ಲಕಂಬದ ಪ್ರದರ್ಶನ ಮುಂತಾದವುಗಳುಪ್ರಮುಖ ಆಕರ್ಷಣೆಯಾಗಿರುತ್ತದೆ ಎಂದು ಉದ್ಯಮಿ ಶರಣು ಪಪ್ಪಾ ಹೇಳಿದರು. ಸಾಂಸ್ಕೃತಿಕ ರಸವೈಭವದ ಈ ಕಾರ್ಯಕ್ರಮ ಆಯೋಜನೆಗೆ ಅವಕಾಶ ಸಿಕ್ಕಿರುವುದು ಕಲಬುರಗಿಯ ಭಾಗ್ಯ ಎನ್ನಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ್ ತೇಗಲತಿಪ್ಪಿ ಹೇಳಿದರು. ವಿರಾಸತ್ ಮತ್ತು ನುಡಿಸಿರಿಯ ಮೂಲಕ ದೇಶ ವಿದೇಶದ ಜನರ ಮನಸೂರೆಗೈದ ಈ ಕಲಾತಂಡದ ಪ್ರದರ್ಶನವು ಯಶಸ್ವಿಯಾಗಲಿ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಹೇಳಿದರು. 300 ಕಲಾವಿದರು ಶರಣರು ನಾಡಿಗೆ ಆಗಮಿಸುತ್ತಿರುವುದರಿಂದ ಅವರಿಗೆ ಉತ್ತಮ ಆತಿಥ್ಯ ನೀಡಿ ಸಂಸ್ಕೃತಿ ಪ್ರಸಾರದ ಕಾರ್ಯಕ್ರಮಕ್ಕೆ ಬೆಂಬಲಿಸೋಣ ಎಂದು ಆಶ್ರಯ ಗ್ರೂಪ್ ಆಫ್ ಹೋಟೆಲ್ಸ್ ನ ಪ್ರವೀಣ್ ಜತ್ತನ್ ಹೇಳಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಘದ ಕಾರ್ಯದರ್ಶಿ ಪುರಂದರ ಭಟ್, ಸತೀಶ್ ಸಲಗರ್ ಮತ್ತು ಉದ್ಯಮಿ ರಾಜೇಶ್ ಡಿ. ಗುತ್ತೇದಾರ್ ಅವರು ಈ ಕಾರ್ಯಕ್ರಮವು ಸಂಸ್ಕೃತಿಯ ಭವ್ಯ ಅನಾವರಣವಾಗಿದ್ದು ಶಾಲಾ ಮಕ್ಕಳು ಹಾಗೂ ಯುವ ಜನರು ನೋಡಿ ಸಂಭ್ರಮಿಸಬೇಕಾಗಿದೆ. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡೋಣ ಎಂದರು.
ಸಭೆಯಲ್ಲಿ ಎಸ್ ಎಸ್ ಹಿರೇಮಠ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶಿವರಾಜ ಅಂಡಗಿ, ನ್ಯಾಯವಾದಿ ವಿನೋದ್ ಕುಮಾರ್ ಜನೆವರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕಲ್ಲನಗೌಡ ,ರಾಜು ತಿರುಮುಖೆ ಮತ್ತಿತರರು ಇದ್ದರು.