ಅಂತರರಾಷ್ಟ್ರೀಯ ಆಧ್ಯಾತ್ಮ ಚಿಂತಕಿ ಸಿಸ್ಟರ್ ಶಿವಾನಿ ಅಕ್ಕ ಹೇಳಿಕೆ: ಕರ್ಮ- ಸಂಸ್ಕಾರಗಳಿಂದ ಬದುಕಿನ ಭಾಗ್ಯ ನಿರ್ಧಾರ

ಅಂತರರಾಷ್ಟ್ರೀಯ ಆಧ್ಯಾತ್ಮ ಚಿಂತಕಿ ಸಿಸ್ಟರ್ ಶಿವಾನಿ ಅಕ್ಕ ಹೇಳಿಕೆ:   ಕರ್ಮ- ಸಂಸ್ಕಾರಗಳಿಂದ ಬದುಕಿನ ಭಾಗ್ಯ ನಿರ್ಧಾರ

ಅಂತರರಾಷ್ಟ್ರೀಯ ಆಧ್ಯಾತ್ಮ ಚಿಂತಕಿ ಸಿಸ್ಟರ್ ಶಿವಾನಿ ಅಕ್ಕ ಹೇಳಿಕೆ : ಕರ್ಮ- ಸಂಸ್ಕಾರಗಳಿಂದ ಬದುಕಿನ ಭಾಗ್ಯ ನಿರ್ಧಾರ

ಕಲಬುರಗಿ : ಜೀವನವು ವ್ಯಕ್ತಿಯ ಕರ್ಮ ಹಾಗೂ ಸಂಸ್ಕಾರದ ಮೇಲೆ ಅವಲಂಬಿತವಾಗಿದೆ ಹಾಗೂ ಅದುವೇ ಬದುಕಿನ ಭಾಗ್ಯವನ್ನು ಬದಲಿಸುತ್ತದೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಪ್ರೇರಣದಾಯಿ ಭಾಷಣಗಾರ್ತಿ ಮತ್ತು ಆಧ್ಯಾತ್ಮ ಚಿಂತಕಿ ಸಿಸ್ಟರ್ ಶಿವಾನಿ ಅಕ್ಕ ಹೇಳಿದರು. ಕಲಬುರಗಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಗೀತಾ ನಗರದ ಅಮೃತ ಸರೋವರ ಆವರಣದಲ್ಲಿ ಜನವರಿ 11 ಏರ್ಪಡಿಸಿದ "ಜೀವನ ಕರ್ಮದ ಲೆಕ್ಕಾಚಾರ"

(ಬ್ಯಾಲೆನ್ಸ್ ಶೀಟ್ ಆಫ್ ಲೈಫ್) ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು ನಿತ್ಯ ಜೀವನದಲ್ಲಿ ವ್ಯಕ್ತಿ ಮಾಡುವ ಕರ್ಮ ಹಾಗೂ ಸಂಸ್ಕಾರಗಳಿಂದ ಬದುಕಿನ ಭಾಗ್ಯ ಬದಲಾಗುತ್ತದೆ. ವ್ಯಕ್ತಿಯ ಕರ್ಮವು ಜೀವನದ ಗುರಿಯನ್ನು ರೂಪಿಸುತ್ತದೆ. ಜ್ಞಾನ ಮತ್ತು ಕರ್ಮಗಳ ಮೂಲಕ ಆತ್ಮಚೈತನ್ಯವನ್ನು ಉದ್ದೀಪನಗೊಳಿಸಿ ಇತರರಿಗೆ ಸುಖ- ಶಾಂತಿ ನೆಮ್ಮದಿಯನ್ನು ನೀಡುವ ಬದುಕಿನತ್ತ ಗಮನ ನೀಡಬೇಕು. ಸ್ವಚ್ಛ, ಶುದ್ಧ ಜೀವನದೊಂದಿಗೆ ಸನ್ನಡತೆಯೊಂದಿಗೆ ಬದುಕು ಮಾಡಿ ಬದುಕಿನ ಲೆಕ್ಕಾಚಾರವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಋಣಾತ್ಮಕ ಅಂಶಗಳನ್ನು ತೊಡೆದುಹಾಕಿ ಧನಾತ್ಮಕ ಕ್ರಿಯೆಗಳಿಂದ ಆತ್ಮವನ್ನು ಬೆಳಸಿಕೊಳ್ಳಬೇಕು. ಟೀಕೆ, ತುಲನೆ, ಅಹಂ ಬಿಟ್ಟು ಸ್ವಗೌರವದೊಂದಿಗೆ ಶ್ರೇಷ್ಠ ಜೀವನಯಾನವನ್ನು ಮಾಡಿ ಆನಂದ ಪಡಬೇಕು.

  ಭವಿಷ್ಯದಲ್ಲಿ ಒತ್ತಡವೇ ಮಹಾ ರೋಗ

   ವಿಶ್ವ ಸಂಸ್ಥೆಯ ಅಂಕಿ ಅಂಶದ ಪ್ರಕಾರ ಜಗತ್ತಿನಲ್ಲಿ ಹಾಗೂ ಭಾರತದಲ್ಲಿ ಮುಂದಿನ ದಿನಗಳಲ್ಲಿ ಒತ್ತಡವೇ ಸಾಂಕ್ರಾಮಿಕ ಮಹಾರೋಗವಾಗಿ ಪರಿಣಮಿಸುವ ಅಪಾಯಕಾರಿ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ನಿತ್ಯ

ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ವಿಶ್ವದಲ್ಲಿ 14 ರಿಂದ 18 ರ ವಯೋಮಾನದ ಮಕ್ಕಳಲ್ಲಿ ಖಿನ್ನತೆಯು ಅತಿಯಾಗಿ ಕಾಡುತ್ತಿದ್ದು ಕೋವಿಡ್ ನಂತರ ಇದು ಅತ್ಯಂತ ಅಧಿಕವಾಗಿ ಬಿಟ್ಟಿದೆ. ಒತ್ತಡ, ಕೋಪವನ್ನು ಸಂತಸದ ಮೂಲಕವೇ ದೂರ ಮಾಡಬೇಕು. ಸ್ಪರ್ಧಾ ಮನೋಭಾವ ಬಿಟ್ಟು ಸ್ನೇಹಯುತ ಬಾಳು ನಡೆಸುವಂತಾ ಗಬೇಕು. ಆಶೀರ್ವಾದ ಹಾಗೂ ಕಾಳಜಿಯ ಮೂಲಕ ಚಿಂತೆಯನ್ನು ದೂರ ಮಾಡಿ ಕುಟುಂಬದ ಸ್ವಾಸ್ಥ್ಯ ಕಾಪಾಡಿ ಉತ್ತಮ ರೀತಿಯ ಪಾಲಕತ್ವದ ಮೂಲಕ ಮಕ್ಕಳಿಗೆ ಸಂಸ್ಕಾರ ನೀಡುವುದನ್ನು ಕಲಿಯಬೇಕಾಗಿದೆ. ಹಾಗಾದರೆ ಮಾತ್ರ ಯಶಸ್ವಿ ಜೀವನಕ್ಕೆ ರಹದಾರಿಯಾಗುತ್ತದೆ.ಕರ್ಮ ಉನ್ನತ ಸ್ಥಾನಕ್ಕೆ ಏರಿದರೆ ಮಾತ್ರ ಜೀವನ ಶಾಂತಿಯುತವಾಗಿ ಮುನ್ನಡೆಯುತ್ತದೆ. ಜೀವನದ ಗುರಿಯನ್ನು ಆಯಾ ವ್ಯಕ್ತಿಯೆ ನಿರ್ಧರಿಸಬೇಕಾಗಿದ್ದು ವ್ಯಕ್ತಿ ಉತ್ತಮಿಕೆಯ ಕಡೆ ಸಾಗಬೇಕು ಎಂದು ಹೇಳಿದರು. 

ಜನ್ಮ ಕುಂಡಲಿಗೆ ಕರ್ಮವೇ ತಳಪಾಯ

  ವ್ಯಕ್ತಿ ಹುಟ್ಟುವಾಗ ಬರೆಯುವ ಜನ್ಮ ಕುಂಡಲಿ ಅದು ಜನ್ಮದ ಆತ್ಮ ಕುಂಡಲಿಯೇ ಹೊರತು ದೇಹದ ಕುಂಡಲಿಯಲ್ಲ. ವ್ಯಕ್ತಿಯ ಕರ್ಮದ ಲೆಕ್ಕದಲ್ಲಿ ಜೀವನದ ಕುಂಡಲಿ ರೂಪು ಪಡೆದು ಬದುಕಿನ ಭಾಗ್ಯ ಬದಲಾಗುತ್ತದೆ. ಅದಕ್ಕೆ ಸಂಸ್ಕಾರವೇ ಮುಖ್ಯವಾಗುತ್ತದೆ. ಉತ್ತಮ ಸಂಸ್ಕಾರದ ಮೂಲಕ ಕರ್ಮವನ್ನು ಮಾಡಿದರೆ ಬದುಕಿನ ಗುರಿಯನ್ನು ನಾವೇ ನಿರ್ಧಾರ ಮಾಡಲು ಸಾಧ್ಯವಾಗುತ್ತದೆ. ಜೀವನ ಉತ್ತಮಗೊಳಿಸಲು ಕ್ಷಮಾಗುಣ ಅತ್ಯಂತ ಮುಖ್ಯವಾಗಿದ್ದು ಶ್ರೇಷ್ಠ ಕರ್ಮದಿಂದ ಬದುಕು ಮೌಲ್ಯಯುತವಾಗುತ್ತದೆ. ಪ್ರೇಮ ಸ್ವರೂಪವಾದ ಆತ್ಮವನ್ನು ಉದ್ಧರಿಸಿದಂತಾಗುತ್ತದೆ ಎಂದು ಶಿವಾನಿ ಅಕ್ಕ ನುಡಿದರು.

  ಧನ್ - ಅನ್ - ಮನ್ ಪವಿತ್ರವಿರಲಿ

ಗಳಿಸುವ ಧನವು ಪ್ರಾರ್ಥನೆಯಿಂದ ಕೂಡಿದರೆ ಸುಖ ಶಾಂತಿ ಪ್ರಾಪ್ತವಾಗುತ್ತದೆ. ಹಾಗೆ ಉಣ್ಣುವ ಅನ್ನ ಸಾತ್ವಿಕತೆಯಿಂದ ಕೂಡಿದರೆ ಧನಾತ್ಮಕವಾಗಿ ದೇಹದಲ್ಲಿ ಆರೋಗ್ಯ ನೀಡುತ್ತದೆ.ಸ್ವಚ್ಛ ಮನಸ್ಸನ್ನು ರೂಡಿಸಿಕೊಂಡರೆ ಮಾತ್ರ ಅನುಭೂತಿಯ ದರ್ಶನವಾಗುತ್ತದೆ. ಗಳಿಸಿದ ಹಣ ಸತ್ಪಾತ್ರಕ್ಕೆ ಸಲ್ಲುತ್ತದೆ. ತಿಂದ ಅನ್ನ ಪ್ರಸಾದವಾಗುತ್ತದೆ. ಕುಡಿದ ನೀರು ಅಮೃತವಾಗುತ್ತದೆ. ಸದ್ವಿಚಾರಕ್ಕೆ ಮನಸ್ಸು ಮುಂದಾಗುತ್ತದೆ ಎಂದು ಹೇಳಿದರು. 

ಟಿವಿ - ಫೋನ್ ನಿಂದ ದೂರವಿರಿ

ಊಟದ ವೇಳೆಯಲ್ಲಿ ಮತ್ತು ನಿದ್ದೆ ಯ ವೇಳೆಯಲ್ಲಿ ಮೊಬೈಲ್ - ಟಿವಿಯಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಉತ್ತಮ. ಸಾತ್ವಿಕವಾಗಿ ನಿದ್ದೆಯನ್ನು ಮಾಡಿ ಆರೋಗ್ಯವಾಗಿ ಜೀವನ ಮಾಡಲು ಮೊಬೈಲ್, ಟಿವಿಯಿಂದ ದೂರವಿರಬೇಕು. ಏನು ನೋಡುತ್ತೇವೆ, ಏನು ಓದುತ್ತೇವೆ, ಏನು ಮಾಡುತ್ತೇವೆ ಅದು ನಮ್ಮ ಕರ್ಮವನ್ನು ನಿರ್ಧರಿಸುತ್ತದೆ .

ಧ್ಯಾನ ಜೀವನವು ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂದು ಹೇಳಿದರು. ಮಕ್ಕಳನ್ನು ಮೊಬೈಲ್ ಮೊಬೈಲ್ ಚಟದಿಂದ ದೂರವಿರಿಸಲು ಪಾಲಕರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆಸ್ಟ್ರೇಲಿಯಾದಲ್ಲಿ ಈಗಾಗಲೇ 14 ವರ್ಷದ ಕೆಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ವೀಕ್ಷಣೆಯನ್ನು ನಿಷೇಧಿಸಲಾಗಿದೆ ಎಂದರು

ಪ್ರಾಯೋಗಿಕ ಸಂವಾದಕ್ಕೆ ಸಾಕ್ಷಿಯಾದ ಉಪನ್ಯಾಸ

 ಸಿಸ್ಟರ್ ಶಿವಾನಿ ಯವರು "ಜೀವನ ಕರ್ಮದ ಲೆಕ್ಕಾಚಾರದ" ಕುರಿತ ವಿಶೇಷ ಉಪನ್ಯಾಸದ ನಡುವೆ ಸಭಿಕರೊಡನೆ ಸಂವಾದ ಮಾಡಿ ಎಡ ಮತ್ತು ಬಲಗೈಗಳ ಮೂಲಕ ಸೋದಾಹರಣವಾಗಿ ವಿವರಿಸಿ ಕಣ್ಣು ಮುಚ್ಚಿ ಧ್ಯಾನ ನಿರತರಾಗುವಂತೆ ಮಾಡಿ ಪ್ರಶ್ನೋತ್ತರದ ಮೂಲಕ ಪ್ರಾತ್ಯಕ್ಷಿಕೆ ನೀಡಿ ಸೇರಿದ ಸಾವಿರಾರು ಜನರಿಗೆ ಆಧ್ಯಾತ್ಮ ಸಂದೇಶವನ್ನು ನೀಡಿದರು. ಸುಮಾರು ಒಂದು ಗಂಟೆ 45 ನಿಮಿಷಗಳ ಪ್ರೇರಣಾದಾಯಿ ಅಧ್ಯಾತ್ಮ ಪ್ರವಚನವು ಜನರಲ್ಲಿ ಭಕ್ತಿಯ ಸಂಚಲನ ಮೂಡಿಸಿತು.

ಆಧ್ಯಾತ್ಮ ಪ್ರವಚನಕ್ಕೆ ವಿಐಪಿ ಗಳ ದಂಡು

ದೈವೀಕ ಪ್ರವಚನ ಕಾರ್ಯಕ್ರಮಕ್ಕೆ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್. ಡಿ, ಶಾಸಕರಾದಎಂ ವೈ ಪಾಟೀಲ್, ಬಸವರಾಜ್ ಮತ್ತಿಮೂಡು, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್, ಕೆಕೆಆರ್ ಡಿಬಿ ಕಾರ್ಯದರ್ಶಿ ಹೈಕೋರ್ಟ್ ನ್ಯಾಯಾಧೀಶ ನಟರಾಜ್ ಸುಂದರೇಶ್ ಬಾಬು, ಡಾ. ದಾಕ್ಷಾಯಿಣಿ ಅಪ್ಪ,ಶ್ರೀಮತಿ ರಾಧಾಬಾಯಿ ಮಲ್ಲಿಕಾರ್ಜುನ ಖರ್ಗೆ, ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಡಾ.ಶರಣಪ್ಪ ಹಲ್ಸೆ, ಡಾ. ವಿಕ್ರಮ್ ಸಿದ್ದಾರೆಡ್ಡಿ, ಬ್ರಹ್ಮಕುಮಾರಿ ಸ್ ನ ಕಲ್ಬುರ್ಗಿ ವಲಯದ ಮುಖ್ಯಸ್ಥೆ ಬಿ.ಕೆ ವಿಜಯ, ಸಂಯೋಜಕ ಬಿ.ಕೆ ಪ್ರೇಮಣ್ಣ, ಬಿಕೆ ಉಷಾ ಬಿಕೆ ರಾಗಿಣಿ ಬಿಕೆ ಮೀರಾ ಶರಣಬಸಪ್ಪ ಹೀರಾ ಮುಂತಾದ ಗಣ್ಯರು ಸಾಮೂಹಿಕವಾಗಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಿಂಗರಾಜಪ್ಪ ಅಪ್ಪ, ಕೆ ಕೆ ಸಿ ಸಿ ಐ ನ ಶಶಿಕಾಂತ್ ಪಾಟೀಲ್, ಶಿವಾನಂದ ಮಾನಕರ್, ಸಿಎಗಳು ವಕೀಲರು ಉದ್ಯಮಿಗಳು ವಿವಿಧ ಸಂಘ-ಸಂಸ್ಥೆಯ ಪ್ರಮುಖರು ಹೀಗೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಬಿಕೆ ವಿಜಯ ಸ್ವಾಗತಿಸಿದರು ಶಿವಲೀಲಾ ನಿರೂಪಣೆ ಮಾಡಿದರು ವೈಷ್ಣವಿ ನೃತ್ಯ ಪ್ರದರ್ಶನ ಮಾಡಿದರು.