ಜಾನಪದ ಉತ್ಸವದ ಸಂಭ್ರಮ: ಕಮಲಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲೆಗಳ ಮೆರಗು

ಜಾನಪದ ಉತ್ಸವದ ಸಂಭ್ರಮ: ಕಮಲಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲೆಗಳ ಮೆರಗು  

ಕಮಲಾಪೂರ: ಕಮಲಾಪೂರದ ಸರಕಾರಿ ಪ್ರಥಮ ದರ್ಜೆ ಕಾಲೇಜು 2024-25ನೇ ಶೈಕ್ಷಣಿಕ ಸಾಲಿನ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ *ಜಾನಪದ ಉತ್ಸವ*ವನ್ನು ವಿಜೃಂಭಣೆಯಿಂದ ಆಚರಿಸಿತು.  

ಉತ್ಸವದ ಪ್ರಮುಖ ಆಕರ್ಷಣೆ ಎಂದರೆ, ಪ್ರಾಚಾರ್ಯರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಜಾನಪದ ವೇಷಭೂಷಣಗಳಲ್ಲಿ ಹಲಿಗೆ ಬಾರಿಸುತ್ತಾ, ಕುಣಿಯುತ್ತಾ ಬಂಡಿಯಲ್ಲಿ ಅತಿಥಿಗಳನ್ನು ಕಾರ್ಯಕ್ರಮ ಭವನಕ್ಕೆ ಕರೆತಂದವು. ಕಾಲೇಜು ಆವರಣವನ್ನು ಬಾಳೆಗೊನೆ, ಕಬ್ಬು ತೋರಣಗಳಿಂದ ಅಲಂಕರಿಸಲಾಗಿತ್ತು. ಅಲ್ಲದೆ, ಜಾನಪದ ವಸ್ತುಪ್ರದರ್ಶನದ ಅಂಗವಾಗಿ ಅಡಕಲಗಡಗಿ, ಕುಟ್ಟುವ ಬೀಸುಗಳು, ದೀಪಾಲಂಕೃತ ಸಾಮಗ್ರಿಗಳು ನೆರೆದ ದರ್ಶನಾರ್ಥಿಗಳ ಮನಸೆಳೆದವು.  

ಜಾನಪದ ಪರಂಪರೆಯ ಮಹತ್ವ  

ಕಾರ್ಯಕ್ರಮ ಉದ್ಘಾಟನೆಯನ್ನು ಕರ್ನಾಟಕ ಜಾನಪದ ಪರಿಷತ್ತಿನ ಕಲಬುರಗಿ ಜಿಲ್ಲಾಧ್ಯಕ್ಷರಾದ ಶ್ರೀ ಸಿ.ಎಸ್. ಮಾಲಿಪಾಟೀಲ ದೀಪ ಬೆಳಗಿಸಿ ನೆರವೇರಿಸಿದರು. ವಿದ್ಯಾರ್ಥಿ ಹಂತದಲ್ಲಿ ಇಂತಹ ಜಾನಪದ ಉತ್ಸವಗಳನ್ನು ಆಯೋಜಿಸುವುದು ಶ್ಲಾಘನೀಯ ಮತ್ತು ಅದನ್ನು ಮುಂದುವರಿಸುವಂತೆ ಮಾಲಿಪಾಟೀಲ ಅವರು ಸಲಹೆ ನೀಡಿದರು.  

ಹಿರಿಯ ನಿವೃತ್ತ ಶಿಕ್ಷಕರಾದ ಶ್ರೀ ಗುರುಲಿಂಗಪ್ಪ ಚಿರಡಿ ಜಾನಪದ ಸಂಸ್ಕೃತಿಯ ಇತಿಹಾಸವನ್ನು ಮನಮುಟ್ಟುವಂತೆ ವಿವರಿಸಿದರು. "ಜನಪದವು ಜನರ ನಿತ್ಯಜೀವನದ ಭಾಗ. ಅದು ಜನವಾಣಿ ಬೇರು, ಕವಿವಾಣಿ ಹೂವಿನಂತೆ ವಿಕಸಿತವಾಗಿದೆ," ಎಂದೂ ಅವರು ಅಭಿಪ್ರಾಯಪಟ್ಟರು.  

ಕಾಲೇಜಿನ ಪ್ರಾಚಾರ್ಯರಾದ ಡಾ. ಅಮೃತಾ ಕಟ್ಟಕೆ ಅಧ್ಯಕ್ಷೀಯ ಭಾಷಣದಲ್ಲಿ, "ಜಾನಪದವು ನಮ್ಮ ಸಂಸ್ಕೃತಿಯ ನಿಜಸ್ವರೂಪ. ಇದನ್ನು ಮುಂದಿನ ಪೀಳಿಗೆಗೆ ತಲುಪಿಸಲು ವಿದ್ಯಾರ್ಥಿಗಳೇ ಸೇತುವೆಯಾಗಬೇಕು," ಎಂದು ಸಲಹೆ ನೀಡಿದರು.  

ಸಾಂಸ್ಕೃತಿಕ ವೈಭವ

ಜಾನಪದ ಉತ್ಸವದಲ್ಲಿ ವಿವಿಧ ನೃತ್ಯ, ಹಾಡು, ಆಟ, ಬಯಲಾಟ ಹಾಗೂ ನಾಟಕಗಳ ಪ್ರದರ್ಶನ ನೆರವೇರಿತು. ಕಾರ್ಯಕ್ರಮದಲ್ಲಿ ಡಾ. ಜಗದೇವಪ್ಪ ಧರಣಿ, ಡಾ. ಫಾತಿಮಾ ಹಸನ್ನತ್, ಡಾ. ಮಹಮ್ಮದ್ ಯೂಸುಫ್, ಡಾ. ಜ್ಯೋತಿ ಕಿರಣಗಿ, ಪ್ರೊ. ನೀತಾ ಭೋಸ್ಲೆ ,ಡಾ.ಶ್ರವಣಕುಮಾರಿ,ಸತ್ತೇಶ್ವರ ಚೌಧರಿ,ಡಾ.ಖಾಜಿ ಪರವೀನ,ಡಾ.ಶಾಮರಾವ,ಡಾ.ಮಹಾಂತೇಶ ಸಾವಳಸೂರ,ಡಾ.ಅವೀನಾಶ ಕಂಠಿಕರ,ಲಕ್ಷ್ಮಣ,ಮಾಣಿಕ ,ಇದರಲ್ಲಿ ಡಾ.ಗಿರೀಶ ಹಾಗೂ ಡಾ.ಅಂಬಣ್ಣ ಸೇರಿ ಅನೇಕ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಜಾನಪದ ವೇಷಭೂಷಣದಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ಪರಂಪರೆಯನ್ನು ಬದುಕಿಸಿದರು.  

ಜಾನಪದ ಸಂಸ್ಕೃತಿಯ ಉಳಿವಿಗೆ ಪ್ರೇರಣೆ

ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಜಾನಪದ ಕಲೆಗಳ ಪ್ರಾಮುಖ್ಯತೆಯನ್ನು ತಲುಪಿಸುವಲ್ಲಿ ಯಶಸ್ವಿಯಾಯಿತು. ಜಾನಪದ ಪರಂಪರೆಯ ಪಾಠಗಳನ್ನು ಪಾಲನೆ ಮಾಡುವ ಶಪಥವನ್ನು ವಿದ್ಯಾರ್ಥಿಗಳು ಕೈಗೊಂಡರು.  

- ಡಾ. ರವೀಂದ್ರ ಕುಂಬಾರ  

(ಪತ್ರಿಕಾ ಪ್ರಕಟಣೆ ತಿಳಿಸಿದರು)