ಕೃಷಿಕ ಸಮಾಜದ ಪುನರಾಧ್ಯಕ್ಷರಾಗಿ ಗುರುಶರಣ ಪಾಟೀಲ ಆಯ್ಕೆ
ಕೃಷಿಕ ಸಮಾಜದ ಪುನರಾಧ್ಯಕ್ಷರಾಗಿ ಗುರುಶರಣ ಪಾಟೀಲ ಆಯ್ಕೆ
ಆಳಂದ: ತಾಲೂಕು ಕೃಷಿಕ ಸಮಾಜಕ್ಕೆ 2025-26ನೇ ಸಾಲಿನಿಂದ ಐದು ವರ್ಷದ ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ 15 ಜನ ನಿರ್ದೇಶಕರು ಸೇರಿ ಐವರು ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಚುನಾವಣಾಧಿಕಾರಿ ಆಗಿರುವ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಅವರು ಮಂಗಳವಾರ ಪ್ರಕಟಿಸಿದ್ದಾರೆ.
ಈ ಚುನಾವಣೆಯಲ್ಲಿ ಗುರುಶರಣ ಪಾಟೀಲ ಅವರು ಅವಿರೋಧವಾಗಿ 2ನೇ ಬಾರಿಗೆ ಅಧ್ಯಕ್ಷರನ್ನಾಗಿ ಆಯ್ಕೆಯಾದರು. ಬಳಿಕ ನಡೆದ ಸಭೆಯಲ್ಲಿ ನಿರ್ದೇಶಕರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕೃಷಿಕ ಸಮಾಜ ಆಯ್ಕೆ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರುಶರಣ ಪಾಟೀಲ ಅವರು, ಮಾಜಿ ಶಾಸಕರಾಗಿದ್ದ ತಮ್ಮ ತಾತ ದಿ. ಅಣ್ಣಾರಾವ್ ಪಾಟೀಲ್ ಕೊರಳ್ಳಿ ಅವರ ಸೇವೆಯನ್ನು ಸ್ಮರಿಸಿ, "ಅವರು ಖಾದಿ ಗ್ರಾಮೋದ್ಯೋಗ ಮತ್ತು ಕೃಷಿಕ ಸಮಾಜದಲ್ಲಿ ಮಹತ್ತರ ಸೇವೆ ಸಲ್ಲಿಸಿ ನಮಗೆ ಈ ಗೌರವದ ಸ್ಥಾನ ಬಂದಿದ್ದು, ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ" ಎಂದರು.
"ಇಂದಿನ ದಿನಗಳಲ್ಲಿ ರೈತರು ತೀವ್ರ ನಿರ್ಲಕ್ಷಕ್ಕೆ ಒಳಗಾಗುತ್ತಿದ್ದಾರೆ. ತೊಗರಿಯ ಬೆಲೆ ರೈತರ ನಿರೀಕ್ಷೆಗೂ ತಲುಪುತ್ತಿಲ್ಲ. ಬಂಡವಾಳ ಹೂಡಿದಷ್ಟು ಫಲಾನುಭವಕ್ಕೆ ರೈತರು ತಲುಪುತ್ತಿಲ್ಲ, ಇದರಿಂದ ಅವರು ಸಂಕಷ್ಟದಲ್ಲಿದ್ದಾರೆ" ಎಂದು ಹೇಳಿದರು.
"ಕೃಷಿಕ ಸಮಾಜವು ರೈತರ ಸಮಸ್ಯೆಗಳಿಗೆ ಸರಕಾರದ ಗಮನ ಸೆಳೆಯುವ ಕಾರ್ಯದಲ್ಲಿ ಮುಂದಾಗಬೇಕು. ಬೆಲೆ ಸ್ಥಿರತೆ, ಬೆಳೆ ವಿಮೆ, ನೀರಿನ ವಿತರಣೆಯಂತಹ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಸರ್ಕಾರ ಒದಗಿಸಲು ಕೃಷಿಕ ಸಮಾಜದಿಂದ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು. ಎಲ್ಲಾ ಸದಸ್ಯರ ಸಹಕಾರ, ಶ್ರಮ, ಮತ್ತು ರೈತರ ಹಿತಚಿಂತನದಿAದ ಮಾತ್ರ ಈ ಸಂಘಟನೆಯ ಉದ್ದೇಶ ಸಫಲಗೊಳ್ಳಬಹುದು ರೈತರಿಗೆ ಸಮರ್ಪಿತ ಸೇವೆ ನೀಡುವುದಕ್ಕಾಗಿ ಕೃಷಿಕ ಸಮಾಜದ ಯೋಜನೆಗಳನ್ನು ಸಕ್ರಿಯವಾಗಿ ಅಳವಡಿಸಲು ಮತ್ತು ನ್ಯಾಯಯುತ ಬೆಂಬಲ ಒದಗಿಸಲು ಶ್ರಮಿಸೋಣಾ ಎಂದು ಹೇಳಿದರು.
ಗುರುಶರಣ ಪಾಟೀಲ ಕೊರಳ್ಳಿ (ಅಧ್ಯಕ್ಷ), ರಾಜಶೇಖರ ಪಾಟೀಲ ಚಿತಲಿ (ಉಪಾಧ್ಯಕ್ಷ), ಬಸವರಾಜ ರಾಮಚಂದ್ರಪ್ಪ ಮಡಿವಾಳ (ಪ್ರಧಾನ ಕಾರ್ಯದರ್ಶಿ), ಕುಪೇಂದ್ರ ವಿಶ್ವನಾಥ ಪಾಟೀಲ (ಖಜಾಂಚಿ), ಶರಣಬಸಪ್ಪ ಗುರುಬಸಪ್ಪ ಕುಲಕರ್ಣಿ ಕೊಲಹಂಗರಗಾ (ಜಿಲ್ಲಾ ಪ್ರತಿನಿಧಿ), ನಿರ್ದೇಶಕರಾಗಿ ಮಹಾದೇವ ಹತ್ತಿ, ಸಿದ್ರಾಮಪ್ಪ ಎಂ. ಪಾಟೀಲ, ಈರಣ್ಣಾ ಮೈಲಪ್ಪ ನಾಗಶೆಟ್ಟಿ, ಗುರಯ್ಯಾ ಮಹಾಂತಯ್ಯ, ಮಲ್ಲಿಕಾರ್ಜುನ ಬಸವಣ್ಣಪ್ಪ ಧನ್ನಶ್ರೀ, ರಾಜಶೇಖರ ಮಾಣಿಕರಾವ ಪಾಟೀಲ, ಚಂದ್ರಶೇಖರ ಬಸವಂತರಾಯ, ನಂದು ಮಿಟ್ಟು ರಾಠೋಡ, ದೇವು ಸೋಮಲು ಚವ್ಹಾಣ, ವಿರಣ್ಣಾ ಗುರುಶಾಂತಪ್ಪ ಅವರು ಈ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ಪ್ರಯುಕ್ತ ಪದಾಧಿಕಾರಿಗಳನ್ನು ಚುನಾವಣಾಧಿಕಾರಿ ಆಗಿದ್ದ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಅವರು ಕಚೇರಿಯಲ್ಲಿ ಕರೆದ ಆಯ್ಕೆ ಸಭೆಯಲ್ಲಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಖಜೂರಿ ಆರ್‌ಎಸ್‌ಕೆ ಅಧಿಕಾರಿ ಬನಸಿದ್ಧಪ್ಪ ಬಿರಾದಾರ, ಆತ್ಮಾಧಿಕಾರಿ ಸಂಜಯ ಸವದಿ ಸೇರಿದಂತೆ ಕಚೇರಿಯ ಸಿಬ್ಬಂದಿಗಳು ಹಾಗೂ ರೈತರು ಉಪಸ್ಥಿತರಿದ್ದರು.
ವರದಿಗಾರರು ಡಾ ಅವಿನಾಶ o S ದೇವನೂರ