ಗೋಳಾ(ಕೆ): ರೈತರಿಗೆ ಬಿತ್ತನೆ ಬೀಜ ವಿತರಣೆ :..

ಗೋಳಾ(ಕೆ): ರೈತರಿಗೆ ಬಿತ್ತನೆ ಬೀಜ ವಿತರಣೆ :..
ಶಹಾಬಾದ : - ತೊಗರಿ ಮತ್ತು ಇತರೆ ಬೀಜಗಳು ದಾಸ್ತಾನು ಮಾಡಿರುವ ಬೀಜ ವಿತರಣಾ ಕೇಂದ್ರಗಳ ಬಗ್ಗೆ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಾಹಿತಿ ನೀಡಿ ದಿನಾಂಕವಾರು ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುಷ್ಮಾ ಕಲಕೇರಿ ಹೇಳಿದರು.
ಅವರು ಗೋಳಾ(ಕೆ)ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಕಲಬುರಗಿ, ಸಹಾಯಕ ಕೃಷಿ ನಿರ್ದೇಶಕರು ಚಿತ್ತಾಪೂರ ಹಾಗೂ ರೈತ ಸಂಪರ್ಕ ಕೇಂದ್ರ ದಿಂದ ಎನ್ಎಫ್ಎಸ್ಎಮ್ ಯೋಜನೆ ಅಡಿ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರಿಗೆ ಬೀಜ ವಿತರಿಸಿ ಮಾತನಾಡಿದರು.
ರೈತರು ಗುಣಮಟ್ಟದ ಬಿತ್ತನೆ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಸರ್ಕಾರದಿಂದ ವಿತರಿಸುವ ಪ್ರಮಾಣೀಕೃತ ಮಾನ್ಯತೆ ಪಡೆದ ಉತ್ತಮ ಗುಣಮಟ್ಟದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ರೈತರಿಗೆ ಸಲಹೆ ನೀಡಿದರು.
ಕೃಷಿಕ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ರೈತರು ಖಾಸಗಿ ಮಳಿಗೆಯಲ್ಲಿ ಬಿತ್ತನೆ ಬೀಜ ಖರೀದಿಸಿದರೆ ಕಡ್ಡಾಯವಾಗಿ ರಶೀದಿಯನ್ನು ಪಡೆಯಬೇಕು, ಬಿತ್ತನೆ ಬೀಜಗಳನ್ನು ಬಿತ್ತುವ ಮುನ್ನ ಬೀಜೋಪಚಾರ ಮಾಡುವುದರಿಂದ ಮುಂದೆ ಸಂಭವಿಸಬಹುದಾದ ರೋಗ ಹಾಗೂ ಕೀಟಭಾದೆ ತಡೆಗಟ್ಟಬಹುದು ಎಂದರು.
ಕೃಷಿ ಅಧಿಕಾರಿ ಶಶಿಕಾಂತ ಭರಣಿ ಮಾತನಾಡಿ, ರೈತರು ಸಹಾಯ ಧನದಡಿ ಬಿತ್ತನೆ ಬೀಜ ಪಡೆಯಲು ತಮ್ಮ ಆಧಾರ್ ಪ್ರತಿ, ಪಹಣಿ ಹಾಗೂ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿಕರ, ಕೃಷಿಕ ಸಮಾಜದ ಹಣಮಂತರಾಯ ಜಿಡಗಿ, ಸಿದ್ದಲಿಂಗ ಶೆಟ್ಟಿ ಶಿರವಾಳ ಮತ್ತು ಕರವೇ ಯಲ್ಲಾಲಿಂಗ ಹೈಯಾಳಕರ, ರೈತ ಚನ್ನಪ್ಪ ಕೋಬಾಳ, ಮಲ್ಲಪ್ಪ ಯನಗುಂಟಿಕರ, ಸಿಬ್ಬಂದಿ ಪ್ರವೀಣ ಸೇರಿದಂತೆ ರೈತರು ಇದ್ದರು