ಸಮ್ಮೇಳನದಲ್ಲಿ ಆದರ್ಶ ಕನ್ನಡ ಬಳಗ ಗೌರವ ಸನ್ಮಾನಕ್ಕೆ ಸೋಮಶೇಖರ ಜಮಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ

ಸಮ್ಮೇಳನದಲ್ಲಿ ಆದರ್ಶ ಕನ್ನಡ ಬಳಗ ಗೌರವ ಸನ್ಮಾನಕ್ಕೆ  ಸೋಮಶೇಖರ ಜಮಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ

ಸಮ್ಮೇಳನದಲ್ಲಿ ಆದರ್ಶ ಕನ್ನಡ ಬಳಗ ಗೌರವ ಸನ್ಮಾನಕ್ಕೆ ಸೋಮಶೇಖರ ಜಮಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ 

ಸೊಲ್ಲಾಪುರ : ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಾರಾಷ್ಟ್ರದ 

ಕನ್ನಡಿಗರ ಗಟ್ಟಿ ಧ್ವನಿಯಾಗಿ ಸದಾ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಆದರ್ಶ ಕನ್ನಡ ಬಳಗ ಗೌರವ ಸನ್ಮಾನಕ್ಕೆ ಆಯ್ಕೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಗಡಿನಾಡು ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ತಿಳಿಸಿದರು. 

ಇದೇ ಡಿಸೆಂಬರ ೨೦, ೨೧ ಮತ್ತು ೨೨ ರಂದು ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಾರಾಷ್ಟ್ರ ದಿಂದ ಆದರ್ಶ ಕನ್ನಡ ಬಳಗ ಗೌರವ ಸನ್ಮಾನಕ್ಕೆ ಆಯ್ಕೆಯಾಗಿದ್ದು ಸಂತಸ ತಂದಿದೆ. ಆದರ್ಶ ಕನ್ನಡ ಬಳಗವು ಮಹಾರಾಷ್ಟ್ರದ ಮರಾಠಿ ಪರಿಸರದಲ್ಲಿ ಮೂರು ದಶಕಗಳಿಂದ ನಿರಂತರವಾಗಿ ರಾಜ್ಯೋತ್ಸವ, ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವ, ಮಕ್ಕಳ ಸಾಹಿತ್ಯ ಸಂಭ್ರಮ, ನುಡಿಸಿರಿ, ಗಡಿನಾಡೋತ್ಸವ, ಶರಣ ಸಾಹಿತ್ಯೋತ್ಸವ, ಅನುವಾದ ಕಮ್ಮಟ, ಕಥಾ ಕಮ್ಮಟ, ಕಾವ್ಯ ಕಮ್ಮಟ, ವಿವಿಧ ಕನ್ನಡ ಸಾಹಿತ್ಯ ಚಟುವಟಿಕೆಗಳು, ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಬಹು ಆಯಾಮದಲ್ಲಿ ಕಾರ್ಯ ನಿರ್ವಹಿಸಿದೆ. 

ಅಲ್ಲದೆ ಕನ್ನಡ-ಮರಾಠಿ ಭಾಷಾ ಸಾಮರಸ್ಯದೊಂದಿಗೆ ಎರಡು ಸಂಸ್ಕೃತಿಯ ಕೊಂಡಿಯಾಗಿ ಬಳಗವು ಕೆಲಸ ನಿರ್ವಹಿಸಿದೆ. ಒಳನಾಡು ಇರಲಿ, ಹೊರನಾಡು ಇರಲಿ ಕನ್ನಡದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಅಲ್ಲದೆ ಮಹಾರಾಷ್ಟ್ರದ ಕನ್ನಡಿಗರ ಗಟ್ಟಿ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಬಹು ಆಯಾಮಿ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ ಅವರಿಗೆ ಸನ್ಮಾನಿಸುತ್ತಿರುವುದು ಮಹಾ ಕನ್ನಡಿಗರಿಗೆ ಸಂತಸ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರದ ಗಡಿನಾಡು ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿಯವರು ತಿಳಿಸಿದರು. 

ಚೌಕಟ್ಟಿನಲ್ಲಿ : ಆದರ್ಶ ಕನ್ನಡ ಬಳಗದ ಮಹತ್ವದ ಕಾರ್ಯಗಳು :ಹೊರನಾಡ ಕನ್ನಡಿಗರಿಗೆ ಶಿಕ್ಷಣ, ಸರಕಾರಿ ನೇಮಕಾತಿಗಳಲ್ಲಿ ೫% ಸಮತಲ ಮೀಸಲಾತಿ ದೊರಕಿಸುವ ಯತ್ನದಲ್ಲಿಯೂ ಆದರ್ಶ ಕನ್ನಡ ಬಳಗದ ಪಾತ್ರ ಮಹತ್ವದ್ದಾಗಿದೆ.

ಈ ಸಂಘವು ಅಕ್ಕಲಕೋಟೆಯ ಹೊರವಲಯದಲ್ಲಿ ಜಮೀನು ಖರೀದಿಸಿ ಸರಕಾರಕ್ಕೆ ದಾನವಾಗಿ ನೀಡಿದೆ. ಇಲ್ಲಿ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಭವ್ಯವಾದ ‘ಡಾ. ಜಯದೇವಿತಾಯಿ ಲಿಗಾಡೆ ಸ್ಮಾರಕ ಕನ್ನಡ ಭವನ’ ನಿರ್ಮಾಣ ಮಾಡುತ್ತಿದೆ.

ಮಹಾರಾಷ್ಟ್ರ ಕನ್ನಡಿಗರ ಸಮಸ್ಯೆಗಳ ಕುರಿತು ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡು ಸರಕಾರಗಳ ಜೊತೆಯಲ್ಲಿ ಹೋರಾಟ ಹಾಗೂ ಸಮಸ್ಯೆ ಬಗೆಹರಿಸಲು ಪ್ರಮುಖ ಪಾತ್ರ ನಿರ್ವಹಿಸಿದೆ.

ಮಹಾರಾಷ್ಟ್ರದಲ್ಲಿ ಮಹಾತ್ಮಾ ಬಸವೇಶ್ವರ ಪ್ರಾಧಿಕಾರ ಸ್ಥಾಪನೆಗೆ ಪ್ರಮುಖ ಪಾತ್ರ ನಿರ್ವಹಿಸಿದೆ.

ಬಳಗವು ಕನ್ನಡ ಸಾಹಿತ್ಯವನ್ನು ಮರಾಠಿಗರಿಗೆ ಪರಿಚಯಿಸಲು ಮರಾಠಿ ಸಾಹಿತ್ಯವನ್ನು ಕನ್ನಡಿಗರಿಗೆ ಪರಿಚಯಿಸಲು ಅನುವಾದ ಕಮ್ಮಟಗಳನ್ನು ಆಯೋಜಿಸಿ ಒಂದು ವಿಶ್ವವಿದ್ಯಾಲಯ ಮಾಡಬಹುದಾಗಿದ್ದ ಕೆಲಸವನ್ನು ಮಾಡಿದೆ.

ಮಹಾರಾಷ್ಟ್ರದಲ್ಲಿಯ ಕನ್ನಡ ಶಾಲೆಗಳ ಉಳಿವಿಗಾಗಿ ವಿಶೇಷ ಕಾರ್ಯ ನಿರ್ವಹಿಸುತ್ತಿದೆ.

ಚೌಕಟ್ಟಿನಲ್ಲಿ : 

87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆದರ್ಶ ಕನ್ನಡ ಬಳಗಕ್ಕೆ ಗೌರವಿಸುತ್ತಿರುವುದು ಸಂತಸ ತಂದಿದೆ. ಇದರಿಂದ ಬಳಗದ ಮೇಲೆ ಇನ್ನಷ್ಟೂ ಜವಾಬ್ದಾರಿ ಹೆಚ್ಚಿದೆ. ಬಳಗ ಮಹಾರಾಷ್ಟ್ರದಲ್ಲಿ ಇನ್ನಷ್ಟು ಕನ್ನಡದ ಕಂಪು ಪಸರಿಸುವ ಕೆಲಸ ಮಾಡಲಿ ಎಂದು ಶುಭ ಹಾರೈಸುವೆ.

  -ಡಾ. ಮಧುಮಾಲ ಲಿಗಾಡೆ ಹಿರಿಯ ಸಾಹಿತಿಗಳು, ಸೊಲ್ಲಾಪುರ

ಚೌಕಟ್ಟಿನಲ್ಲಿ : 

ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಬಳಗವನ್ನು ಗೌರವ ಸನ್ಮಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ ಮಹೇಶ್ ಜೋಷಿಯವರಿಗೆ ಹಾಗೂ ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸೋಮಶೇಖರ ಜಮಶೆಟ್ಟಿಯವರಿಗೆ ಧನ್ಯವಾದಗಳು. ಈ ಸನ್ಮಾನ ನಮಗೆ ಕನ್ನಡದ ಕೆಲಸ ಮಾಡಲು ಸ್ಫೂರ್ತಿ ತುಂಬಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಬೆಳವಣಿಗೆಗೆ ಇನ್ನೂ ಹೆಚ್ಚಿನ ಕಾರ್ಯಗಳನ್ನು ಹಮ್ಮಿಕೊಳ್ಳುತ್ತೇವೆ.

      -ಮಲಿಕಜಾನ ಶೇಖ

ಅಧ್ಯಕ್ಷರು, ಆದರ್ಶ ಕನ್ನಡ ಬಳಗ