ವೆಂಕಟರಾಜು ( ಪರಿಚಯ)
ವೆಂಕಟರಾಜು ( ಪರಿಚಯ)
ತಾನು ನಿಂತಲ್ಲೇ ವೇದಿಕೆ ಸೃಷ್ಟಿಸಿಕೊಂಡವರು ಕನ್ನಡ ರಂಗಭೂಮಿಯ ಪ್ರತಿಭಾನ್ವಿತ ಕಲಾವಿದ ಆರ್.ವೆಂಕಟರಾಜು, ಕವಿ ಕುವೆಂಪು ಅವರ "ನೇಗಿಲಯೋಗಿ" ಪದ್ಯದಲ್ಲಿ ರಾಜ್ಯಗಳು ಉರುಳಲಿ ರಾಜ್ಯಗಳು ಅಳಿಯಲಿ ಹಾರಲಿ ಗದ್ದುಗೆ ಮುಕುಟಗಳು ಮುತ್ತಿಗೆ ಹಾಕಲಿ ಸೈನಿಕರೆಲ್ಲಾ, ರೈತ ಉಳುವುದನ್ನು ಮಾತ್ರ ಬಿಡುವುದಿಲ್ಲ ಎಂಬ ಮಾತಿನಂತೆ ಕಲಾವಿದ ವೆಂಕಟರಾಜು ಸೃಜನ ಶೀಲತೆಗೆ ವಿರಾಮಕೊಡಲಿಲ್ಲ! ಕನ್ನಡದ ಮಹತ್ವದ ಕಥೆಗಾರರುಗಳಾದ ಬಿ.ಎನ್.ರಂಗನಾಥರಾವ್, ವೈಕುಂಠರಾಜು, ಶಾಂತರಸ, ಕುಂವೀರಭದ್ರಪ್ಪ, ಸಿ.ವೀರಣ್ಣ. ರಾಜಶೇಖರ ಹತಗುಂದಿ, ಚಂದ್ರಶೇಖರ ಪಾಟೀಲ, ಚಂದ್ರಶೇಖರ ಕಂಬಾರ, ನಿಡಸಾಲೆ ಪುಟ್ಟಸ್ವಾಮಯ್ಯ, ದ್ವಾರನಕುಂಟೆ ಪಾತಣ್ಣ, ಕೋಟಗಾನಹಳ್ಳಿ ರಾಮಯ್ಯ ಮೊದಲಾದವರ ಕಥೆಗಳ ಪಾತ್ರಗಳಿಗೆ ಧ್ವನಿಯಾಗಿ, ಸಾಹಿತ್ಯದ ವಿಚಾರ ಹೂರಣವನ್ನು ರಸಭರಿತವಾಗಿ ಶೂನ್ಯ ಯೂಟ್ಯೂಬ್ ವಾಹಿನಿಯ ಮುಖೇನ ಕೇಳುಗರ ಮನಕ್ಕೆ ಮುಟ್ಟಿಸಿದರು. ಸಹಸ್ರಾರು ಕೇಳುಗರ, ವಿಶೇಷವಾಗಿ ಯುವಕರ ಗಮನವನ್ನು ಕನ್ನಡ ಸಾಹಿತ್ಯದ ಕಡೆಗೆ ಸೆಳೆಯುವ ಮೊದಲ ಪ್ರಯತ್ನವಾಗಿ ಶೂನ್ಯ ಯೂಟ್ಯೂಬ್ ಚಾನಲ್‌ನಡೆಸಿದ ಪ್ರಯತ್ನಕ್ಕೆ ಯಶಸ್ವಿಯಾಗಿ ಕೈಜೋಡಿಸಿದರು. ಈ ಮೂಲಕ ತಮ್ಮ ಪ್ರತಿಭಾ ಸಾಮರ್ಥ್ಯವನ್ನು ಪ್ರಚುರಪಡಿಸುವಲ್ಲಿ ಯಶಸ್ವಿಯಾದರು
ರಂಗ ನಟನ ಸಾಂಪ್ರದಾಯಿಕ ಹಿನ್ನೆಲೆ
ನಟ ವೆಂಕಟರಾಜು ಅವರಿಗೆ ಸಾಂಪ್ರದಾಯಿಕ ಹಿನ್ನೆಲೆ ಇದೆ. ಕಲೆ ಇವರಿಗೆ ಪ್ರವೇಶಿಸಿದ ಇವರು ತಮ್ಮ ಅಭಿನಯದ "ಮೂಕಬಲಿ" ಮೊದಲ ನಾಟಕದಲ್ಲಿ ಚಿತ್ರನಟ ವಿಷ್ಣುವರ್ಧನ್ ಸಹೋದರರಾದ ಎನ್.ರವಿಕುಮಾರ ನಿರ್ದೇಶನದಲ್ಲಿ ಸರಣಿಯ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ರಾಜ್ಯಮಟ್ಟದ "ಯುವರಂಗ" ನಾಟಕ ಸ್ಪರ್ಧೆಯಲ್ಲಿ ಪಡೆದವರು.
ಅರಸಿ ಬಂದ ಪಾತ್ರಗಳು
ರಂಗಭೂಮಿಯಲ್ಲಿ ಒಬ್ಬ ಕಲಾವಿದನಿಗೆ ಒಂದು ಮುಖ್ಯ ಪಾತ್ರ ದೊರೆಯುವುದು ಎಂದರೆ ಅದು ಸುಲಭದ ಮಾತಲ್ಲಲ್ಲಿ ರಂಗದ ಮೇಲೆ ನಿಂತು ನಟ ಅಭಿನಯಿಸುವಾಗ, ಪ್ರೇಕ್ಷಕರೊಂದಿಗೆ ಸಂವಾದಿಸುತ್ತಾನೆ! ಭಾಷೆ ಬಳಕೆ, ಆಂಗಿಕಾಭಿನಯ, ತನ್ಮಯತೆ ಎಲ್ಲವೂ ಮುಖ್ಯವಾಗುತ್ತದೆ! ಈ ಹಿನ್ನೆಲೆಯಲ್ಲಿ ವೆಂಕಟರಾಜು ಅವರಿಗೆ ಸಾಲುಸಾಲು ಮುಖ್ಯ ಪಾತ್ರಗಳು ಅರಸಿಬಂದಿವೆ. ಆರ್.ನಾಗೇಶ್, ಸಿಜಿಕೆ, ಕೃಷ್ಣಮೂರ್ತಿ ಕವತ್ತಾರ್, ಸುರೇಶ ಆನಗಳ್ಳಿ, ಪ್ರಮೋದ್ ಶಿಗ್ಗಾಂವ್, ಗಂಗಾಧರಸ್ವಾಮಿ, ಹಾಲ್ಕುರಿಕೆ ಶಿವಶಂಕರ್, ಚಂಪಾಶೆಟ್ಟಿ, ಈಶ್ವರದಲ, ಕೃಷ್ಣಕುಮಾರ್ ಯಾದವ್, ಸಿ.ಲಕ್ಷ್ಮಣ, ನಾಟ್ಯ ಪ್ರಿಯ ಆಂಜನೇಯ ಇನ್ನು ಮುಂತಾದ ನಿರ್ದೇಶಕರು ಸೇರಿದಂತೆ ಹವ್ಯಾಸಿ, ನೀನಾಸಂ, ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ನಿರ್ದೇಶಕರು ತಮ್ಮ ನಿರ್ದೇಶನದ ನಾಟಕೆಗಳಲ್ಲಿ ವೆಂಕಟರಾಜು ಅವರನ್ನು ಮುಖ್ಯ ಪಾತ್ರದಲ್ಲಿ ದುಡಿಸಿಕೊಂಡಿದ್ದಾರೆ. ಪಂಪ, ಗಾಂಧಿ, ಏಕಲವ್ಯ, ಬುದ್ಧ, ಬಸವಣ್ಣ, ಭರತ ಚಕ್ರವರ್ತಿ, ಅಂಬೇಡ್ಕರ್, ಬೇಡರ ಕಣ್ಣಪ್ಪ ಸೇರಿದಂತೆ ಸಾಮಾಜಿಕ, ಪೌರಾಣಿಕ. ಹಾಸ್ಯ ಪಾತ್ರಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡ ಸವಾಲು ಸಾಮಾನ್ಯದ್ದಲ್ಲ.
ಹಿರಿಮೆ ಎಲ್ಲರ ಕೈಗೂ ನಿಲುಕುವಂತದ್ದಲ್ಲ ಎಂಬುದನ್ನು ರಂಗಾಸಕ್ತರು ಈಗಲೂ ಗುರುತಿಸುತ್ತಾರೆ. ಅಂದಿನಿಂದ ಇಂದಿನವರೆಗೂ ಸುಮಾರು 30 ವರ್ಷಗಳಿಗೂ ಮಿಗಿಲಾಗಿ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಂಗಭೂಮಿ ಸಾಹಿತ್ಯವಲಯದ ನಿರ್ದೇಶಕರು ಸಿನಿಮಾ ನಿರ್ದೇಶನ ಮಾಡಿದಾಗ ಇವರಿಗೊಂದು ಪಾತ್ರ ಇದ್ದೇ ಇರುತ್ತದೆ. ಸಾಹಿತಿ ಬರಗೂರು ರಾಮಚಂದ್ರಪ್ಪನವರ ಶಬರಿ, ಭಾಗೀರತಿ, ಅಂಗುಲಿಮಾಲ ಚಿತ್ರಗಳಲ್ಲಿ ಅಭಿನಯಿಸಿದ್ದು, ಬಿಡುಗಡೆಯಾಗಲಿರುವ "ಮೂಕನಾಯಕ" ಚಿತ್ರದಲ್ಲಿ ಪಾತ್ರ ಮಾಡಿದ್ದಾರೆ.
ಕವಿ ಎಲ್.ಎನ್.ಮುಕುಂದರಾಜ ನಿರ್ದೇಶನದ "ಕಾಡ ಹಾದಿಯ ಹೂಗಳು" ಚಲನಚಿತ್ರದಲ್ಲಿ ನಾಯಕ ಪ್ರಧಾನ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ, ಪತ್ರಿಕಾ ವಿಮರ್ಶಕರ ಪ್ರಶಂಸೆಗೆ ಪಾತ್ರರಾದರು. ಕಿರುತೆರೆಯಲ್ಲಿ ಮೂಡಿಬಂದ "ನಿತ್ಯೋತ್ಸವ" ಧಾರಾವಾಹಿಯಲ್ಲಿ ಪ್ರಸಿದ್ದ ಕಲಾವಿದರಾದ ಅನಂತನಾಗ್ ಅವರ ಮಗನ ಪಾತ್ರದಲ್ಲಿ ಇವರ ಅಭಿನಯ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಅಣ್ಣ ಬಸವಣ್ಣ ಧಾರಾವಾಹಿ ಸೇರಿದಂತೆ ಪರಮಪದ, ವನಿತ, ಪಾಪ ಪಾಂಡು, ಸಿಲ್ಲಿಲಲ್ಲಿ ಸೇರಿದಂತೆ ಹಲವಾರು ಪ್ರಮುಖ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. "ಚಂದನ" ವಾಹಿನಿಯ ಜನಪ್ರಿಯ ಕಾರ್ಯಕ್ರಮ "ಫಟ್ ಅಂಥ ಹೇಳಿ" ರಸಪ್ರಶ್ನೆಯಲ್ಲಿ ಪಾಲ್ಗೊಂಡು ಪ್ರಥಮ ಬಹುಮಾನ ಪುರಸ್ಕೃತರಾದ ಹೆಗ್ಗಳಿಕೆ ಇವರದ್ದು.
ನಿರೂಪಣೆಯ ಧ್ವನಿ ಶ್ರೀಮಂತಿಕೆ
ಸಾಂಸ್ಕೃತಿಕ, ಚಲನಚಿತ್ರ, ಸಭೆ-ಸಮಾರಂಭಗಳಲ್ಲಿ ಇವರ ನಿರೂಪಣೆ ಕಳೆಗಟ್ಟುತ್ತದೆ. ರಂಗಭೂಮಿ, ಚಿತ್ರರಂಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ವೇದಿಕೆಯ ಕಾರ್ಯಕ್ರಮಗಳನ್ನು ನಿರೂಪಿಸುವ ಕಲಾವಿದ ವೆಂಕಟ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬ ಕಾರ್ಯಕ್ರಮ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಡಿ.ವಿ.ಸದಾನಂದಗೌಡ, ಹಾಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಭಾರತ್ ಸೈಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂದ್ಯ ಮೊದಲಾದ ರಾಜಕೀಯ ಧುರೀಣರ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ನೂರಾರು ಚಲನಚಿತ್ರಗಳಿಗೆ ಕಂಠದಾನ ಮಾಡಿದ್ದಾರೆ.
ಬರಹಗಾರನಾಗಿ
ರಾಜಕೀಯ ವಿಶ್ಲೇಷಣೆ. ರಂಗವಿಮರ್ಶೆ, ಸಕಾಲಿಕ ವಿದ್ಯಮಾನಗಳನ್ನು ಗುರುತಿಸುವ ರಂಗಭೂಮಿಗಾಗಿ ದುಡಿದು ಮಡಿದ, ನಿರಂತರವಾಗಿ ರಂಗ ಚಟುವಟಿಕೆ ನಡೆಸುತ್ತಿದ್ದರೂ ಗುರುತಿಸಿಕೊಳ್ಳಲು ಸಾಧ್ಯವಾಗದ ಅನೇಕ ಪ್ರತಿಭಾವಂತರ ವ್ಯಕ್ತಿ ಚಿತ್ರಣಗಳನ್ನು ಬರೆದು ದಾಖಲಿಸಿದ್ದಾರೆ. ಕನ್ನಡದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ಪ್ರಜಾಪ್ರಗತಿ, ನೇಪಥ್ಯ ರಂಗಮಾಸಿಕಗಳಲ್ಲಿ ಇವರ ಸಾಮಾಜಿಕ ವಿಶ್ಲೇಷಣೆ, ಲೇಖನ, ಪತ್ರ ಪ್ರತಿಕ್ರಿಯೆ ಸಾಕಷ್ಟು ಪ್ರಕಟಗೊಂಡಿದೆ. ಅನ್ನಿಸಿದ್ದನ್ನು ನೇರವಾಗಿ ವಸ್ತುನಿಷ್ಠ ದೃಷ್ಟಿಕೋನದಿಂದ ವಿಮರ್ಶಿಸುವ ನೋಟ ಇವರ ಬರಹ ಶಕ್ತಿಯಲ್ಲಿ ವ್ಯಕ್ತವಾಗುತ್ತದೆ.
ಸಾಂಸ್ಕೃತಿಕ ಕಳಕಳಿ
ಸಾಮಾಜಿಕ ಚಟುವಟಿಕೆಗಳಲ್ಲಿ ಇವರು ಹಿಂದೆ ಬಿದ್ದಿಲ್ಲ. ಕೊರೋನಾದ ಸಂಕಷ್ಟ ಕಾಲದಲ್ಲಿ ರಂಗಕಲಾವಿದರ ನೆರವಿಗೆ ಬರಲು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದರು. ನಮ್ಮ ನಾಡಪರಂಪರೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊರೋನಾದ ನೆಪಕ್ಕೆ ನಿಲ್ಲಿಸಬಾರದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಮುಖೇನ ಕೋರಿಕೆ ಸಲ್ಲಿಸಿ ಯಶಸ್ವಿಯಾದರು. ಕೇವಲ ನಟನೆಯಷ್ಟೇ ಕಲಾವಿದನ ಕಾಯಕವಾಗಬಾರದು, ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಆತನ ಗುರುತರ ಜವಾಬ್ದಾರಿ ಎಂಬ ಆಶಯ ಅವರದ್ದು. ಪ್ರಚಾರ ಬಯಸದ ಸಾಂಸ್ಕೃತಿಕ ಪರಿಚಾರಕ.
-ನವೀನ್ ಕೃಷ್ಣ ಪುತ್ತೂರು ,ಪತ್ರಕರ್ತ
ಚಿತ್ತಾರ ಪತ್ರಿಕೆ, ಬೆಂಗಳೂರು