ಕಲಬುರಗಿಯ ಸಾಹಿತ್ಯ, ಸಂಸ್ಕೃತಿಕ,ಪತ್ರಿಕೋದ್ಯಮ ವಲಯದಲ್ಲಿ ಅಸಮಾಧಾನದ ಸಿಡಿಲು
 
                                ಕಲಬುರಗಿಯ ಸಾಹಿತ್ಯ, ಸಂಸ್ಕೃತಿಕ,ಪತ್ರಿಕೋದ್ಯಮ ವಲಯದಲ್ಲಿ ಅಸಮಾಧಾನದ ಸಿಡಿಲು
ಕಲಬುರಗಿಗೆ ನಿರುತ್ಸಾಹ ತಂದ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ
ಕಲಬುರಗಿ: ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಕಲಬುರಗಿಯ ಕಲಾ, ಸಾಹಿತ್ಯ ಹಾಗೂ ಪತ್ರಿಕೋದ್ಯಮ ವಲಯದಲ್ಲಿ ನಿರಾಶೆ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ವಿಭಾಗೀಯ ಕೇಂದ್ರ ಸ್ಥಾನ ಹೊಂದಿರುವ ಕಲಬುರಗಿಗೆ ಈ ಬಾರಿ ಕೇವಲ ಒಂದು ಪ್ರಶಸ್ತಿ ಮಾತ್ರ ಪ್ರಕಟವಾಗಿದ್ದು, ಅದು ಶಿಕ್ಷಣ ವಿಭಾಗದಲ್ಲಿಯೇ ಸೀಮಿತವಾಗಿದೆ.
ಕಳೆದ ವರ್ಷ ಪತ್ರಿಕೋದ್ಯಮ ಮತ್ತು ಸಾಹಿತ್ಯ ವಿಭಾಗದಲ್ಲಿ ಇಬ್ಬರಿಗೆ ಪ್ರಶಸ್ತಿ ದೊರೆತಿದ್ದರೆ, ಈ ಬಾರಿ ಕೇವಲ ಡಾ. ಎಸ್.ಬಿ. ಹೊಸಮನಿ ಅವರಿಗೆ ಮಾತ್ರ ಪ್ರಶಸ್ತಿ ಪ್ರಕಟವಾಗಿದೆ. ಆದರೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರಾಗಿದ್ದು, ಈ ಜಿಲ್ಲೆಯವರಲ್ಲ ಎಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಕಲಬುರಗಿಯ ವಿಳಾಸವನ್ನು ಉಲ್ಲೇಖಿಸಿರುವ ಆಧಾರದ ಮೇಲೆ ಅವರನ್ನು ಈ ಜಿಲ್ಲೆಯವರಂತೆ ಪರಿಗಣಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಈ ಬೆಳವಣಿಗೆಯ ಹಿನ್ನೆಲೆ, ಕಲಬುರಗಿಯ ಸಾಹಿತ್ಯ, ಸಾಂಸ್ಕೃತಿಕ, ಮತ್ತು ಪತ್ರಿಕೋದ್ಯಮ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಜಿಲ್ಲೆಯ ಹಲವು ಪ್ರತಿಭಾವಂತರ ಹೆಸರುಗಳು – ಪತ್ರಕರ್ತರಾದ ಶಿವರಾಯ ದೊಡ್ಡಮನಿ, ಎಸ್.ಬಿ. ಜೋಶಿ, ಸಾಹಿತಿ ಪ್ರೊ. ಕಲ್ಯಾಣರಾವ ಪಾಟೀಲ್, ಆರ್ ಕೆ ಹುಡುಗಿ, ಲಕ್ಷ್ಮಣ್ ದಸ್ತಿ, ಸಮಾಜಸೇವಕ ಶಿವಶರಣಪ್ಪ ಕೋಬಾಳ,ಡಿ . ಹೋರಾಟಗಾರ ಡಿ.ಜಿ.ಸಾಗರ್,ಕೆ .ನೀಲಾ,ಮತ್ತು ಡಾ. ವಿಶಾಲಾಕ್ಷಿ ಕರಡ್ಡಿ – ಪ್ರಶಸ್ತಿ ಪಟ್ಟಿ ಅಂತಿಮ ಹಂತದಲ್ಲಿ ಕಾಣದಿರುವುದು ನಿರಾಶೆ ತಂದಿದೆ.
“ಕಲಬುರಗಿಯು ರಾಜ್ಯದ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಮುಖ ಸ್ಥಾನದಲ್ಲಿದ್ದರೂ ಪ್ರಶಸ್ತಿಗಳ ಹಂಚಿಕೆಯಲ್ಲಿ ನಿರಂತರ ಅನ್ಯಾಯ ನಡೆಯುತ್ತಿದೆ. ಕನಿಷ್ಠ ಮೂರು ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಬೇಕಾಗಿತ್ತು,” ಎಂದು ಸ್ಥಳೀಯ ಸಾಂಸ್ಕೃತಿಕ ಮುಖಂಡರು ವಿಷಾದ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿಯೂ ಕಲಬುರಗಿ ಜಿಲ್ಲೆಗೆ ಪ್ರತಿನಿಧಿತ್ವ ದೊರಕದಿರುವುದು ಮತ್ತೊಂದು ಅಸಮಾಧಾನದ ವಿಷಯವಾಗಿದೆ. ಈ ಹಿಂದೆಯೂ ಬೆಳಗಾವಿ ಮೂಲದ ಸಾಧಕರಿಗೆ ಕಲಬುರಗಿ ಜಿಲ್ಲೆಯ ಹೆಸರಿನಲ್ಲಿ ಪ್ರಶಸ್ತಿಗಳು ದೊರೆತಿದ್ದವು ಎಂಬ ಉದಾಹರಣೆಗಳು ಉಲ್ಲೇಖಿಸಲ್ಪಟ್ಟಿವೆ.
ಒಟ್ಟಾರೆ, ಕಲಬುರಗಿ ಜಿಲ್ಲೆಯ ಕಲಾವಿದರು, ಸಾಹಿತ್ಯಿಕರು, ಪತ್ರಕರ್ತರು ಮತ್ತು ಸಾಂಸ್ಕೃತಿಕ ವಲಯದವರು ಸರ್ಕಾರದಿಂದ ನ್ಯಾಯಸಮ್ಮತ ಗೌರವ ಹಾಗೂ ಗುರುತಿನ ನಿರೀಕ್ಷೆಯಲ್ಲಿದ್ದಾರೆ.
 .       ಸ್ವಾಮಿರಾವ್.ಕುಲಕಣಿ೯
.       ಸ್ವಾಮಿರಾವ್.ಕುಲಕಣಿ೯
ಸಾಮಾಜಿಕ ನ್ಯಾಯ ಎಲ್ಲಿದೆ?
ಮಾತೆತ್ತಿದರೆ ಸಾಮಾಜಿಕ ನ್ಯಾಯ ಎನ್ನಲಾಗುತ್ತದೆ. ರಾಜ್ಯೋತ್ಸವ ಸೇರಿ ಇತರೆ ಯಾವುದೇ ಪ್ರಶಸ್ತಿಗಳಲ್ಲಿ ಅನ್ಯಾಯಕ್ಕೆ ಒಳಗಾಗುವುದೇ ಕಲಬುರಗಿ.
ಅಕಾಡೆಮಿಗಳಲ್ಲೂ ಸ್ಥಾನವಿಲ್ಲ, 371 (ಜೆ) ವಿಧಿ ಜಾರಿಯಿದೆ ಎಂದರೆ ಸಾಕೇ ? ಕಲಬುರಗಿ ಸಾಹಿತ್ಯಕವಾಗಿ ಜತೆಗೆ ಸಾಂಸ್ಕೃತಿಕವಾಗಿ ಶ್ರೀಮಂತವಿದೆ. ಕಲಾವಿದರು ಸಹ ಸಾಕಷ್ಟು ಇದ್ದಾರೆ. ಹೀಗಿದ್ದ ಮೇಲೂ ಕನಿಷ್ಠ ಒಬ್ಬರಿಗಾದರೂ ರಾಜ್ಯೋತ್ಸವ ದೊರಕದಿರುವುದು ನಿಜಕ್ಕೂ ಅನ್ಯಾಯ, ಶೋಷಣೆಗೆ ಹಿಡಿದ ಕನ್ನಡಿ. ನಮ್ಮ ಭಾಗಕ್ಕೆನ್ಯಾಯ ದೊರಕುವುದು ಯಾವಾಗ?
-ಸ್ವಾಮಿರಾವ ಕುಲಕರ್ಣಿ, ಸಾಹಿತಿಗಳು ಕಲಬುರಗಿ
 . ಸುರೇಶ್ ಬಡಿಗೇರ
 . ಸುರೇಶ್ ಬಡಿಗೇರ 
ಪ್ರಶಸ್ತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪೂರ್ಣವಾಗಿ ಅನ್ಯಾಯವಾಗಿದೆ. ಕನಿಷ್ಠ ಪಕ್ಷ ಮೂರು ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಬೇಕಾಗಿತ್ತು. ಜಿಲ್ಲೆಯ ಸಾಹಿತಿಗಳಿಗೆ ಮತ್ತು ಸಾಂಸ್ಕೃತಿಕ ಚಿಂತಕರಿಗೆ ಅನ್ಯಾಯ ಮಾಡಿದೆ.
-ಸುರೇಶ ಬಡಿಗೇರ, ಕಲಬುರಗಿ ಮಾಜಿ ಸದಸ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
 

 kkeditor
                                    kkeditor                                 
                    
                 
                    
                 
                    
                 
                    
                 
                    
                 
                    
                 
                    
                 
    
             
    
             
    
             
    
             
    
             
    
             
    
 
    
 
    
 
    
 
    
 
    
                                        
                                     
    
 
    
